ಸಿಂದಗಿ, ಹಾನಗಲ್ ಬೈ ಎಲೆಕ್ಷನ್ ರಿಸಲ್ಟ್: ಬೊಮ್ಮಾಯಿ ಹನಿಮೂನ್ ಅವಧಿ ಕೊನೆಗೊಂಡಿದೆ ಎಂದ ಸಿದ್ದು

By Suvarna NewsFirst Published Nov 2, 2021, 5:54 PM IST
Highlights

* ಹಾನಗಲ್, ಸಿಂದಗಿ ಬೈ ಎಲೆಕ್ಷನ್ ರಿಸಲ್ಟ್ ಪ್ರಕಟ
* ತಲಾ ಒಂದು ಕ್ಷೇತ್ರದಲ್ಲಿ ಗೆದ್ದ ಕಾಂಗ್ರೆಸ್ ಬಿಜೆಪಿ
* ಎರಡೂ ಕಡೆ ಜೆಡಿಎಸ್‌ಗೆ ಹೀನಾಯ ಸೋಲು
* ಫಲಿತಾಂಶದ ಬಗ್ಗೆ ಸಿದ್ದರಾಮಯ್ಯ ಹೇಳಿಕೆ

ಬೆಂಗಳೂರು, (ನ.02): ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ(By Election Result) ಫಲಿತಾಂಶ ಪ್ರಕಟವಾಗಿದ್ದು. ಸಿಂದಗಿಯಲ್ಲಿ ಬಿಜೆಪಿ ಅಭೂತ ಪೂರ್ವ ವಿಜಯದಾಖಲಿಸಿದ್ರೆ, ಹಾನಗಲ್‌ನಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಇನ್ನು ಜೆಡಿಎಸ್‌ಗೆ ಎರಡೂ ಕಡೆ ಹೀನಾಯ ಸೋಲಾಗಿದೆ.

ಇನ್ನು ಫಲಿತಾಂಶದ ಬಗ್ಗೆ ಬಿಜೆಪಿ (BJP), ಕಾಂಗ್ರೆಸ್ (Congress) ಹಾಗೂ ಜೆಡಿಎಸ್ (JDS) ನಾಯಕರು ವಿವಿಧ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಇನ್ನು ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಸಾಮಾಜಿಕ ಜಾಲತಾಣಗಳಲ್ಲಿ(Social Media) ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದು ಈ ಕೆಳಗಿನಂತಿದೆ.

Karnataka Byelection: ಫಲಿತಾಂಶ ಜೆಡಿಎಸ್, ಬಿಜೆಪಿ ಬಿ ಟೀಂ ಆರೋಪಕ್ಕೆ ಉತ್ತರ: ಎಚ್‌ಡಿಕೆ

ಸಿಎಂ ತವರು ಜಿಲ್ಲೆಯಲ್ಲೇ ಬಿಜೆಪಿ ಸೋತಿದೆ
ಹಾನಗಲ್ ಕ್ಷೇತ್ರದಲ್ಲಿ ನಮ್ಮದು ಪರಿಪೂರ್ಣ ಗೆಲುವು, ಸಿಂದಗಿ ಕ್ಷೇತ್ರದಲ್ಲಿ ನಾವು ಸೋತು ಗೆದ್ದಿದ್ದೇವೆ. ನಮ್ಮ ಪಕ್ಷದ ನೀತಿ, ಕಾರ್ಯಕ್ರಮ ಮತ್ತು ಅಭ್ಯರ್ಥಿಗಳ ಮೇಲೆ ವಿಶ್ವಾಸ ಇಟ್ಟು ಮತ ನೀಡಿದ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ.  ಆಡಳಿತ ವಿರೋಧಿ ಅಲೆ ಎದ್ದಿದೆ, ಮುಂದಿನ ದಿನಗಳಲ್ಲಿ ಇದು ಸುನಾಮಿ ಆಗಲಿದೆ. ಹಾನಗಲ್ ಚುನಾವಣೆಯಲ್ಲಿ ಬಿಜೆಪಿಯ ನಿಜವಾದ ಅಭ್ಯರ್ಥಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಆಗಿದ್ದರು. ಅವರ ತವರು ಜಿಲ್ಲೆಯಲ್ಲೇ ಬಿಜೆಪಿ ಸೋತಿದೆ. ನಾನು ಈ ಮಣ್ಣಿನ ಮಗ, ಇಲ್ಲಿಯೇ ಮಣ್ಣಾಗುತ್ತೇನೆ, ಅಕ್ಕಿಆಲೂರಿನ ಅಳಿಯ ಎಂದೆಲ್ಲಾ ಭಾವನಾತ್ಮಕವಾಗಿ ಮಾತನಾಡಿದರೂ ಜನ ತಿರಸ್ಕರಿಸಿದ್ದಾರೆ ಎನ್ನವುದು ಸತ್ಯ.

 ಹೊಂದಾಣಿಕೆ ಸಮಸ್ಯೆಯಿಂದಾಗಿ ಸಿಂದಗಿಯಲ್ಲಿ ಸೋಲು
ಸಿಂದಗಿಯಲ್ಲಿ ಸೋತು ಗೆದ್ದಿದ್ದೇವೆ. ಮೂರನೇ ಸ್ಥಾನದಲ್ಲಿದ್ದ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ಬಂದಿದೆ. ನಮ್ಮ ಪಕ್ಷದ  ಅಭ್ಯರ್ಥಿ ಕಳೆದ ಬಾರಿಗಿಂತ 40 ಸಾವಿರಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದಾರೆ. ಜೆಡಿಎಸ್ ನಿಂದ ಬಂದ ಮತ್ತು ಕಾಂಗ್ರೆಸ್  ಕಾರ್ಯಕರ್ತರ ನಡುವಿನ ಹೊಂದಾಣಿಕೆ ಸಮಸ್ಯೆಯಿಂದಾಗಿ ಸ್ವಲ್ಪ ಹಿನ್ನಡೆಯಾಗಿದೆ. 

ಸಿಂದಗಿ ಅಭ್ಯರ್ಥಿ ಜೆಡಿಎಸ್ ನಿಂದ ಬಂದವರಾಗಿದ್ದ ಕಾರಣಕ್ಕೆ ನಮಗೆ ಹಿನ್ನಡೆಯಾಯಿತು ಎನ್ನುವ ಅಭಿಪ್ರಾಯ ಸರಿ ಅಲ್ಲ. ಜೆಡಿಎಸ್ ನಿಂದ ಬಂದ ಜಮೀರ್ ಅಹ್ಮದ್, ಅಖಂಡಾ ಶ್ರೀನಿವಾಸಮೂರ್ತಿ, ಭೀಮಾ ನಾಯಕ್ ಗೆದ್ದಿಲ್ಲವೇ? ನಾನು ಕೂಡ ಜೆಡಿಎಸ್ ನಿಂದ ಕಾಂಗ್ರೆಸ್ ಸೇರಿ ಗೆದ್ದಿದ್ದೇನೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಹಣದ ಹೊಳೆ ಹರಿಸಿದೆ, ಅಧಿಕಾರದ ದುರುಪಯೋಗ ಮಾಡಿದೆ. ಜಾತಿ ಕಾರ್ಡ್ ಬಳಸಿದೆ. ಮುಖ್ಯಮಂತ್ರಿಯಾದಿಯಾಗಿ ಸಂಪುಟ ಸಚಿವರು ವಾರಗಟ್ಟಲೆ ಬೀಡುಬಿಟ್ಟು ಪ್ರಚಾರ ನಡೆಸಿದ್ದಾರೆ. ಹೀಗಿದ್ದೂ ಹಾನಗಲ್ ಉಪಚುನಾವಣೆಯಲ್ಲಿ ಗೆದ್ದಿದ್ದೇವೆ, ಸಿಂದಗಿಯಲ್ಲಿ ಸೋತು ಗೆದ್ದಿದ್ದೇವೆ.

ಬದಲಾವಣೆಯ ಕಡೆ ಒಲವು
ಯಡಿಯೂರಪ್ಪ ಮತ್ತು ಅವರ ಮಗ ಎರಡೂ ಕಡೆಗಳಲ್ಲಿ ಪ್ರಚಾರ ಮಾಡಿದರು. ಮುಖ್ಯಮಂತ್ರಿಗಳು, ಸಚಿವರು ಚುನಾವಣೆ ನಡೆಯುವ ಕ್ಷೇತ್ರದಲ್ಲೇ ಬೀಡುಬಿಟ್ಟಿದ್ದರು, ಇಷ್ಟೆಲ್ಲದರ ಹೊರತಾಗಿಯೂ ಜನ ಬಿಜೆಪಿಗೆ ಮತ ನೀಡದೆ, ಕಾಂಗ್ರೆಸ್ ಗೆ ಮತ ನೀಡುವ ಮೂಲಕ ಬದಲಾವಣೆಯ ಕಡೆ ಒಲವು ತೋರಿದ್ದಾರೆ ಎಂದು ತಿಳಿಸಿದ್ದಾರೆ.

ಅಲ್ಪಸಂಖ್ಯಾತರು ಜೆಡಿಎಸ್  ಪಕ್ಷವನ್ನು ನಂಬಿಲ್ಲ
ಹಾನಗಲ್ ಸಿಂದಗಿ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡು ಹೀನಾಯ ಸೋಲು ಅನುಭವಿಸಿದ್ದಾರೆ. ದೇವೇಗೌಡರು ಹತ್ತು ದಿನ ಬಂದು ಪ್ರಚಾರ ಮಾಡಿದ್ದರೂ ಹೀನಾಯ ಸೋಲು ಕಂಡಿದೆ. ಅವರ ಪಕ್ಷದ ಸ್ಥಾನ ಏನೆಂಬುದನ್ನು ಎರಡೂ ಕ್ಷೇತ್ರಗಳ ಮತದಾರರೇ ತೋರಿಸಿದ್ದಾರೆ, ನಾನು ಟಿಪ್ಪಣಿ ಮಾಡುವುದಿಲ್ಲ.ಅಲ್ಪಸಂಖ್ಯಾತ ಬಂಧುಗಳು ಹಿಂದೆಯೂ ಜೆಡಿಎಸ್  ಪಕ್ಷವನ್ನು ನಂಬಿಲ್ಲ, ಮುಂದೆಯೂ ನಂಬಲ್ಲ. ಜೆಡಿಎಸ್ ಒಂದು ಅವಕಾಶವಾದಿ ಪಕ್ಷ ಎಂಬುದು ಅವರಿಗೆ ಗೊತ್ತಿದೆ. ಹೀಗಾಗಿಯೇ ಬಹುತೇಕ ಅಲ್ಪಸಂಖ್ಯಾತ ಮತದಾರರು ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕಿದ್ದಾರೆ ಎಂದರು.

ಈ ಉಪಚುನಾವಣೆ  ಸೆಮಿಫೈನಲ್
ಹಾನಗಲ್ ಮತ್ತು ಸಿಂದಗಿ ಉಪಚುನಾವಣಾ ಫಲಿತಾಂಶ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ನಾನು ಹೇಳುವುದಿಲ್ಲ. ಆದರೆ ಬಸವರಾಜ ಬೊಮ್ಮಾಯಿ ಅವರ ಹನಿಮೂನ್ ಅವಧಿ ಕೊನೆಗೊಂಡಿದೆ. ಈ ಉಪಚುನಾವಣೆ  ಸೆಮಿಫೈನಲ್, 2023ರ ವಿಧಾನಸಭಾ ಚುನಾವಣೆ ಫೈನಲ್, ಅದರಲ್ಲಿಯೂ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

click me!