
ಬೆಂಗಳೂರು (ಜ.19): ಲಂಬಾಣಿ ತಾಂಡಗಳನ್ನು ಕಂದಾಯ ಗ್ರಾಮಗಳಾಗಿ ಕೇವಲ ಘೋಷಣೆ ಮಾಡದೇ ಅವರ ಕೈಗೆ ಪ್ರಧಾನಿ ಮೋದಿಯವರ ಸಮ್ಮುಖದಲ್ಲೇ 52,072 ತಾಂಡದಲ್ಲಿ ವಾಸಿಸುವ ಕುಟುಂಬಕ್ಕೆ ಹಕ್ಕುಪತ್ರ ನೀಡಲಾಗಿದೆ. ಆದರೆ, ಈ ಯೋಜನೆಯ ಬಗ್ಗೆ ನಾವು ಮೊದಲೇ ಯೋಚನೆ ಮಾಡಿದ್ದೆವು, ನಾವು ಮಾಡಿದ ಅಡುಗೆಯನ್ನು ಬಿಜೆಪಿ ಅವರು ಊಟ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಸಿದ್ದರಾಮಯ್ಯ ಖಾಲಿ ಡಬ್ಬ, ಇಟ್ಟುಕೊಂಡು ಬೇರೆ ಮನೆಯ ಪರಿಮಳವನ್ನು ತಮ್ಮ ಮನೆಯದ್ದು ಎಂದು ಹೇಳುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.
ನಾಮಕರಣ ಮಾಡುವ ಸಿದ್ದರಾಮಯ್ಯ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇತ್ತಿಚೆಗೆ ನಾಮಕರಣ ಮಾಡಿಸುವ ಅಥವಾ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ ಅನಿಸುತ್ತದೆ. ನಮ್ಮ ಸರ್ಕಾರ ಯಾವುದೇ ಜನಪರ ಕಾರ್ಯಕ್ರಮ ಮಾಡಲಿ ಅದು ನಾನು ಅಧಿಕಾರದಲ್ಲಿ ಇದ್ದಾಗಲೇ ಯೋಚನೆ ಮಾಡಿದ್ದೆ. ಅದನ್ನು ಈ ಬಿಜೆಪಿ ಸರ್ಕಾರ ಕಾರ್ಯರೂಪಕ್ಕೆ ತಂದಿದೆ ಅಷ್ಟೇ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾರೆ. ಸಿದ್ದರಾಮಯ್ಯ ಎಲ್ಲ ಯೋಜನೆಗಳನ್ನು ನಾನು ಯೋಚನೆ ಮಾಡಿದ್ದೆ, ಜಾರಿಗೆ ತಯಾರಿ ನಡೆಸಿದ್ದೆವು ಎಂದು ಹೇಳುತ್ತಾರೆ. ಆದರೆ, ನಿಮ್ಮ ಸರ್ಕಾರ ಇದ್ದಾಗ ಯೋಚನೆ ಮಾಡಿದ್ದು ಸರಿ, ಆದರೆ ಯಾಕೆ ಕಾಯ್ದೆ ಜಾರಿಗೆ ತಂದಿಲ್ಲ ಎಂದು ಪತ್ರಕರ್ತರು, ಜನಸಾಮಾನ್ಯರು ಕೇಳಿದರೆ, ಏ... ಸುಮ್ನಿರಪ್ಪ ನಾನು ಹೇಳೊದಷ್ಟೇ ಕೇಳು ಎಂದು ಬಾಯಿ ಮುಚ್ಚಿಸುತ್ತಾರೆ. ಸಿದ್ದರಾಮಯ್ಯ ಖಾಲಿ ಡಬ್ಬ ಅಲ್ಲಾಡಿಸಿ, ಪಕ್ಕದ ಮನೆಯಿಂದ ಹೊರಬರುವ ಅಡುಗೆ ಪರಿಮಳ ನಮ್ಮ ಮನೆಯದ್ದೆ ಎನ್ನುತ್ತಿದ್ದಾರೆ. ಇಂದು ಕೂಡ ಸಿದ್ದರಾಮಯ್ಯನವರು ಅದೇ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದರು.
ನ್ಯಾಯ ಬೇಕು ಮೋದಿ, 12 ಪ್ರಶ್ನೆಗಳನ್ನು ಪ್ರಧಾನಿ ಮುಂದಿಟ್ಟ ಸಿದ್ದರಾಮಯ್ಯ
ಕಾಂಗ್ರೆಸ್‌ನದ್ದು ಜನರ ದಿಕ್ಕು ತಪ್ಪಿಸುವ ಹೇಳಿಕೆ: ಲಂಬಾಣಿ ತಾಂಡಗಳನ್ನು ಕಂದಾಯ ಗ್ರಾಮಗಳಾಗಿ ಕೇವಲ ಘೋಷಣೆ ಮಾಡದೇ ಅವರ ಕೈಗೆ ಪ್ರಧಾನಿ ಮೋದಿಯವರ ಸಮ್ಮುಖದಲ್ಲೇ 52,072 ತಾಂಡದಲ್ಲಿ ವಾಸಿಸುವ ಕುಟುಂಬಕ್ಕೆ ಹಕ್ಕುಪತ್ರ ನೀಡುವ ಮೂಲಕ ಐತಿಹಾಸಿಕ ಕ್ರಮಕ್ಕೆ ಇಡೀ ಕಲ್ಯಾಣ ಕರ್ನಾಟಕ ಜಿಲ್ಲೆಯ ಜನ ಸಾಕ್ಷಿ ಆಗಿದ್ದಾರೆ. ಆದರೆ ಎಂದಿನಂತೆ ಮಾನ್ಯ ಸಿದ್ದರಾಮಯ್ಯನವರು ತಾಂಡಾಗಳನ್ನು ಕಂದಾಯ ಗ್ರಾಮ ಮಾಡುವ ಯೋಚನೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಈಗ ಬಿಜೆಪಿ ಸರ್ಕಾರ ನಾವು ಮಾಡಿದ ಅಡುಗೆಯಲ್ಲಿ ಊಟ ಮಾಡುತ್ತಿದೆ ಎಂದು ಹೇಳಿ ಜನರ ದಾರಿತಪ್ಪಿಸುವ ಹೇಳಿಕೆ ನೀಡಿದ್ದಾರೆ.
ಜನಪರ ಕಾರ್ಯಗಳು ಮುಂದುವರೆಯುತ್ತವೆ: ಸಿದ್ದರಾಮಯ್ಯನವರೇ ನೀವು ಅಡುಗೆ ಮಾಡುವ ಮುನ್ನವೇ ನಿಮ್ಮ ಅಡುಗೆ ಮನೆ ಖಾಲಿ ಆಗಿತ್ತು. ಈಗ ನಮ್ಮ ಮುಖ್ಯಮಂತ್ರಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕಂದಾಯ ಸಚಿವನಾಗಿ ನಾನು ಮುಂದೆ ನಿಂತು ಸಮೀಕ್ಷೆ ನಡೆಸಿ, ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆ ಹೊರಡಿಸಿ ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದೇವೆ . ಇಂದು ಕಲ್ಯಾಣ ಕರ್ನಾಟಕ ಜಿಲ್ಲೆಯ ಎಲ್ಲಾ ತಾಂಡಾಗಳನ್ನು ಗ್ರಾಮ ಎಂದು ಘೋಷಣೆ ಮಾಡಿ ಹಕ್ಕುಪತ್ರ ನೀಡಿದ್ದೇವೆ. ಮುಂದೆಯೂ ನಮ್ಮ ಜನಪರ, ಅಭಿವೃದ್ಧಿ ಪರ ಮಾನವೀಯ ಕೆಲಸಗಳು ಮುಂದುವರಿಯಲಿದೆ.
ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕರೆ ಬಿಜೆಪಿ ಹಗರಣ ತನಿಖೆ: ಸಿದ್ದರಾಮಯ್ಯ
ದಾವಣಗೆರೆಯಲ್ಲೂ ಕಂದಾಯ ಗ್ರಾಮಗಳ ಘೋಷಣೆ: ಕಲಬುರಗಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದ ಮಾದರಿಯಲ್ಲಿಯೇ ದಾವಣಗೆರೆಯಲ್ಲೂ ಮಾಡುತ್ತೇವೆ. ಈ ಮೂಲಕ ಅಲ್ಲಿನ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಹಕ್ಕು ಪತ್ರ ನೀಡುತ್ತೇವೆ. ಸಿದ್ದರಾಮಯ್ಯನವರೇ ಆಗ ಮತ್ತೆ ಯಾವ ರೀತಿಯಲ್ಲಿ ಹೇಳಿಕೆ ನೀಡಬೇಕು ಎಂದು ಈಗಲೇ ಯೋಚಿಸಿ ಸಿದ್ಧರಾಗಿ. ಯಾಕೆಂದರೆ ನಿಮ್ಮದು ಬರಿ ಯೋಚನೆ, ನಮ್ಮ ಸರ್ಕಾರದ್ದು ಯೋಜನೆ ಮತ್ತು ಜನಪರ ಕಾರ್ಯಾಚರಣೆ ಎಂದು ಟೀಕೆ ಮಾಡಿದ್ದಾರೆ.
ಸುಳ್ಳು ಹೇಳುವುದನ್ನು ನಿಲ್ಲಿಸಿ: 75 ವರ್ಷಗಳ ಕಾಲ ಹಿಂದುಳಿದವರ ಕಲ್ಯಾಣದ ಹೆಸರಲ್ಲಿ ನಿಮ್ಮ ಪಕ್ಷ ಮತ ಪಡೆಯಿತು. ಬಳಿಕ ನೀವು ಕಾಂಗ್ರೆಸ್ ಸೇರಿದ ಮೇಲೆ ಏಕಾಏಕಿ ಹಿಂದುಳಿದ ಸಮುದಾಯದ ಸ್ವಯಂ ಘೋಷಿತ ಚಾಂಪಿಯನ್ ಎಂದು ಕರೆದುಕೊಂಡಿದ್ದೀರಿ. ನಿಮ್ಮದು ಮತ ಬ್ಯಾಂಕ್ ರಾಜಕೀಯ. ನಮ್ಮದು ಅಭಿವೃದ್ಧಿ ಪಥದ ರಾಜಕೀಯ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್ ತತ್ವದಡಿ ನಾವು ಮುಂದೆ ಸಾಗುತ್ತೇವೆ. ಇಷ್ಟಾಗಿಯೂ ನೀವು ಮತ್ತು ನಿಮ್ಮ ಪಕ್ಷ ಹೀಗೆ ಖಾಲಿ ಡಬ್ಬ ಬಡಿಯುತ್ತಾ, ಯಾರೊ ಮಾಡಿದ ಕೆಲಸಕ್ಕೆ ನಾಮಕರಣ ಮಾಡುತ್ತಾ ಸಾಗುತ್ತಿರೊ ಅಥವಾ ಸುಳ್ಳು ಹೇಳುವದನ್ನು ನಿಲ್ಲಿಸಿ ಅಭಿವೃದ್ಧಿಗೆ ಬೆಂಬಲಿಸುತ್ತೀರೊ ಸರಿಯಾಗಿ ಯೋಚಿಸಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.