ಪರೋಕ್ಷವಾಗಿ ಕೊಪ್ಪಳ ಲೋಕಸಭಾ ಚುನಾವಣೆ ಅಭ್ಯರ್ಥಿ ಘೋಷಣೆ ಮಾಡಿದ ಸಿದ್ದರಾಮಯ್ಯ! ಘೋಷಣೆಯೊಂದಿಗೆ ತನ್ನ ಆಪ್ತರಿಗೆ ಗುನ್ನಾ ಕೊಟ್ಟ ಸಿದ್ದರಾಮಯ್ಯ! ಹಾಗಾದ್ರೆ ಯಾರು ಆ ಅಭ್ಯರ್ಥಿ?
ಕೊಪ್ಪಳ, [ಜ.20]: 2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಚುನಾವಣಾ ಕಣಗಳೂ ರಂಗೇರುತ್ತಿವೆ. ಅದರಲ್ಲೂ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾವ ಅಭ್ಯರ್ಥಿಗಳು ಕಣಕ್ಕಿಳಿಯುತ್ತಾರೆ ಎಂಬುದು ಕ್ಷೇತ್ರದ ಜನರಲ್ಲಿ ಕುತೂಹಲ ಮೂಡಿಸಿದೆ.
ಈ ನಡುವೆ ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರು ಇಂದು [ಭಾನುವಾರ] ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಮಾತನಾಡಿ, ಪರೋಕ್ಷವಾಗಿ ಕೊಪ್ಪಳ ಲೋಕಸಭಾ ಅಭ್ಯರ್ಥಿಯನ್ನು ಘೋಷಿಸಿದ್ದಾರೆ.
‘ಮಾಂಸ ತಿಂದೇ ಹೋಗಿದ್ದೇ ಅಂದುಕೊಳ್ಳಿ ಏನಿವಾಗ?’
ವಿಧಾನಸಭಾ ಚುನಾವಣೆಯಲ್ಲಿ ಅನ್ಸಾರಿಗೆ ಅನ್ಯಾಯವಾಗಿದ್ದು, ಅದನ್ನು ನೀವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅದನ್ನು ಸರಿ ಮಾಡಬೇಕು. ಹೀಗಾಗಿ ಇಕ್ಬಾಲ್ ಅನ್ಸಾರಿಯನ್ನ ಗೆಲ್ಲಿಸಬೇಕೆಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಮುಂಬರುವ ಲೋಕಸಭಾ ಚುನಾವಣೆಯ ಅಭ್ಯರ್ಥಿ ಎಂದು ಹೇಳಿದಂತಿದೆ.
ಸಿದ್ದು ಈ ಹೇಳಿಕೆ ನೀಡುವ ಮೂಲಕ ಇತರೆ ಕೊಪ್ಪಳ ಲೋಕಸಭಾ ಟಿಕೆಟ್ ಆಕಾಂಕ್ಷಿಗಳಿಗೆ ಶಾಕ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಪರಮಾಪ್ತ ಮಾಜಿ ಸಂಸದ ಕೆ. ವಿರುಪಾಕ್ಷಪ್ಪ ಅವರು ಕೊಪ್ಪಳ ಲೋಕಸಭಾ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಅಷ್ಟೇ ಅಲ್ಲದೇ ರಾಜ್ಯ ಕಾಂಗ್ರೆಸ್ ಯುವ ಘಟಕ ರಾಜ್ಯಾದ್ಯಕ್ಷ ಬಸವನಗೌಡ ಬಾದರ್ಲಿ ಕೂಡ ಕೊಪ್ಫಳ ಲೋಕಸಭಾ ಟಿಕೆಟ್ ಗೆ ಕಸರತ್ತು ನಡೆಸಿದ್ದು, ಇವರಿಬ್ಬರಲ್ಲಿ ಯಾರಿಗೆ ಟಿಕೆಟ್ ಸಿಗುತ್ತೆ ಎನ್ನುವುದು ಕ್ಷೇತ್ರದಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಆದ್ರೆ ಇಂದು ಸಿದ್ದು ಅನ್ಸಾರಿ ಪರ ಬ್ಯಾಟಿಂಗ್ ಮಾಡಿದ್ದು, ಬಸವನಗೌಡ ಬಾದರ್ಲಿ ಹಾಗೂ ವಿರುಪಾಕ್ಷಪ್ಪಗೆ ಗುನ್ನ ಕೊಟ್ಟಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಸಂಸದರಾಗಿದ್ದ ವಿರುಪಾಕ್ಷಪ್ಪ ಅವರು ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿಗೆ ಸೇರಿದ್ದು, ಕರಡಿ ಸಂಗಣ್ಣ ಗೆಲುವಿನಲ್ಲಿ ದೊಡ್ಡ ಪಾತ್ರವಹಿಸಿದ್ದರು. ಆದ್ರೆ 2018ರ ಸಿಂಧನೂರು ವಿಧಾನಸಭಾ ಟಿಕೆಟ್ ದೊರೆಯದ ಕಾರಣ ಬಿಜೆಪಿಗೆ ಬೈ ಹೇಳಿ ಮರಳಿ ಮಾತೃ ಪಕ್ಷಕ್ಕೆ ಜಿಗಿದಿದ್ದರು.
ಒಟ್ಟಿನಲ್ಲಿ ಈ ಒಂದು ಹೇಳಿಕೆ ಟಿಕೆಟ್ ರೇಸ್ ನಲ್ಲಿದ್ದವರಿಗೆ ಶಾಕ್ ಆಗಿದ್ದಂತೂ ನಿಜ. ಆದ್ರೆ ಕೊನೆಯಲ್ಲಿ ಸಿದ್ದರಾಮಯ್ಯ ಅವರ ಮಾತು ಬದಲಾದರೂ ಆಶ್ಚರ್ಯ ಪಡಬೇಕಿಲ್ಲ.