ಬಜರಂಗದಳದ ಮುಖಂಡನಿಂದ ಗಂಭೀರ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದ ಬೆಳ್ತಂಗಡಿಯ ದಲಿತ ಯುವಕ, ಕಾಂಗ್ರೆಸ್ ಕಾರ್ಯಕರ್ತ ದಿನೇಶ್ ಕನ್ಯಾಡಿ ನಿವಾಸಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು (ಮಾ.19): ಬಜರಂಗದಳದ (Bajrangdal) ಮುಖಂಡನಿಂದ ಗಂಭೀರ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದ ಬೆಳ್ತಂಗಡಿಯ ದಲಿತ ಯುವಕ, ಕಾಂಗ್ರೆಸ್ ಕಾರ್ಯಕರ್ತ ದಿನೇಶ್ ಕನ್ಯಾಡಿ ನಿವಾಸಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಭೇಟಿ ನೀಡಿದ್ದಾರೆ. ದಿನೇಶ್ ಮನೆಗೆ ಭೇಟಿ ನೀಡಿ ದಿನೇಶ್ ತಾಯಿ, ಪತ್ನಿ ಮತ್ತು ಮಕ್ಕಳಿಗೆ ಸಿದ್ದರಾಮಯ್ಯ ಸಾಂತ್ವಾನ ಹೇಳಿದ್ದಾರೆ. ಆ ಬಳಿಕ ಮೃತ ದಿನೇಶ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಸಿದ್ದರಾಮಯ್ಯ, ದಿನೇಶ್ ತಾಯಿಗೆ ವೈಯಕ್ತಿಕವಾಗಿ ಒಂದು ಲಕ್ಷ ರೂ. ನಗದು ರೂಪದಲ್ಲಿ ಧನ ಸಹಾಯ ಮಾಡಿದರು. ಅಲ್ಲದೇ ಮಗನ ಸಾವಿನ ನ್ಯಾಯಕ್ಕಾಗಿ ಧ್ವನಿ ಎತ್ತುವ ಭರವಸೆ ನೀಡಿದರು.
ಸಿದ್ದರಾಮಯ್ಯಗೆ ಮಾಜಿ ಶಾಸಕ ವಸಂತ ಬಂಗೇರಾ, ಮುಖಂಡರಾದ ಐವನ್ ಡಿಸೋಜ, ಎಂಎಲ್ ಸಿ ಹರೀಶ್ ಕುಮಾರ್ ಸಾಥ್ ನೀಡಿದರು. ಕಳೆದ ಫೆ.23ರಂದು ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಎಂಬಲ್ಲಿ ಕಾಂಗ್ರೆಸ್ ಕಾರ್ಯಕರ್ತ, ದಲಿತ ಯುವಕ ದಿನೇಶ್ ಮತ್ತು ಬಜರಂಗದಳದ ಮುಖಂಡ ಕೃಷ್ಣ ಎಂಬಾತನ ಮಧ್ಯೆ ಜಾಗದ ದಾಖಲೆ ವಿಚಾರದಲ್ಲಿ ಗಲಾಟೆ ನಡೆದಿತ್ತು. ಕಾಂಗ್ರೆಸ್ ಅವಧಿಯಲ್ಲಿ ಬೆಳ್ತಂಗಡಿ ಕ್ಷೇತ್ರದಲ್ಲಿ ವಸಂತ ಬಂಗೇರಾ ಶಾಸಕರಾಗಿದ್ದಾಗ ಬಜರಂಗದಳದ ಮುಖಂಡ ಕೃಷ್ಣನಿಗೆ ಈ ದಿನೇಶ್ ಜಾಗದ ದಾಖಲೆಯೊಂದನ್ನ ಮಾಡಿಕೊಟ್ಟಿದ್ದ ಎನ್ನಲಾಗಿದೆ.
ಬಜರಂಗದಳ ಮುಖಂಡನಿಂದ ಕೊಲೆ: ಮೃತನ ಮನೆಗೆ ಭೇಟಿ ನೀಡಲಿರುವ ಸಿದ್ದರಾಮಯ್ಯ
ಆದ್ರೆ ಇದೀಗ ಬಿಜೆಪಿ ಅವಧಿಯಲ್ಲೂ ದಿನೇಶ್ ಪದೇ ಪದೇ ಅದನ್ನೇ ಹೇಳಿಕೊಂಡು ತಿರುಗಾಡ್ತಿದಾನೆ ಅಂತ ಕೃಷ್ಣ ದಿನೇಶ್ ಮೇಲೆ ಯದ್ವಾತದ್ವಾ ಹಲ್ಲೆ ನಡೆಸಿದ್ದಾನೆ. ಈ ದೃಶ್ಯ ಸಿಸಿ ಟಿವಿಯಲ್ಲೂ ಸೆರೆಯಾಗಿದ್ದು, ಗಂಭೀರ ಹಲ್ಲೆಗೊಳಗಾಗಿದ್ದ ದಿನೇಶ್ ಮರುದಿನ ಸಾವನ್ನಪ್ಪಿದ್ದ. ಈ ಕೇಸ್ ನಲ್ಲಿ ಸದ್ಯ ಬಜರಂಗದಳದ ಮುಖಂಡ ದಿನೇಶ್ ಬಂಧನವಾಗಿದೆ. ಆದರೆ ಸಂಘಪರಿವಾರದ ಮುಖಂಡನಿಂದ ಕೊಲೆಯಾದ ದಿನೇಶ್ ಕಾಂಗ್ರೆಸ್ ಕಾರ್ಯಕರ್ತನಾಗಿರೋ ಕಾರಣ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರಾ ಹಾಗೂ ಕೈ ನಾಯಕರು ದಿನೇಶ್ ಸಾವಿನ ನ್ಯಾಯಕ್ಕಾಗಿ ಆಗ್ರಹಿಸಿದ್ದರು.
ಅಲ್ಲದೇ ಆತನ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ನೆರವು ನೀಡಿ ಸಾಂತ್ವನ ಹೇಳಿದ್ದರು. ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿ ದಿನೇಶ್ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಕಿಡಿ ಕಾರಿದ್ದರು. ಅಲ್ಲದೇ ಕಾಂಗ್ರೆಸ್ ದಿನೇಶ್ ಕುಟುಂಬಿಕರ ಮೂಲಕ ದ.ಕ ಕಾಂಗ್ರೆಸ್ ಕಚೇರಿಯಲ್ಲಿ ಕುಟುಂಬದ ಜೊತೆ ಸುದ್ದಿ ಗೋಷ್ಠಿ ಕೂಡ ನಡೆಸಿತ್ತು. ಅದರ ಭಾಗವಾಗಿ ಇಂದು ಸಿದ್ದರಾಮಯ್ಯ ಬೆಳ್ತಂಗಡಿಯ ದಿನೇಶ್ ಮನೆಗೆ ಭೇಟಿ ನೀಡಿ ಮೃತ ದಿನೇಶ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.
ಅಭಿವೃದ್ಧಿ, ಹಿಂದುತ್ವ, ಯುವ ನಾಯಕತ್ವವೇ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಮಂತ್ರ
ಯಾವ ಕೊಲೆಗಳನ್ನೂ ಪ್ರೋತ್ಸಾಹಿಸಬಾರದು, ಖಂಡಿಸಬೇಕು: ದಲಿತ ಯುವಕ ದಿನೇಶ್ ಮನೆಗೆ ಭೇಟಿ ನೀಡಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.ಶಿವಮೊಗ್ಗದ ಹರ್ಷಾ ಕುಟುಂಬಕ್ಕೆ ಸರ್ಕಾರ 25 ಲಕ್ಷ ನೆರವು ಕೊಟ್ಟಿದೆ. ಆದರೆ ಇವನು ದಲಿತ ಸಮುದಾಯಕ್ಕೆ ಸೇರಿದ ಯುವಕ, ಇವನಿಗೆ 25 ಲಕ್ಷ ಕೊಡಬೇಕಿತ್ತು. ನರಗುಂದಲ್ಲೂ ಒಬ್ಬ ಮುಸ್ಲಿಂ ಹುಡುಗನ ಕೊಲೆ ಆಗಿತ್ತು. ಇಲ್ಲಿ ಕೊಲೆ ಮಾಡಿದ್ದು ಬಜರಂಗದಳದವನು, ಅಲ್ಲಿ ಮಾಡಿದ್ದು ರಾಮ ಸೇನೆಯವರು. ಈ ವಿಚಾರದಲ್ಲಿ ಸರ್ಕಾರ ತಾರತಮ್ಯ ಮಾಡಿದೆ.
ಹೀಗಾಗಿ ನಾನು ದಿನೇಶ್ ಕುಟುಂಬಕ್ಕೆ 25 ಲಕ್ಷ ಕೊಡಲು ಅಸೆಂಬ್ಲಿಯಲ್ಲಿ ಒತ್ತಾಯಿಸ್ತೇನೆ. ನರಗುಂದದ ಸಮೀರ್ ಗೂ 25 ಲಕ್ಷ ಪರಿಹಾರ ಕೊಡಬೇಕು. ಜೊತೆಗೆ ದಿನೇಶ್ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ಆಗಬೇಕು. ಇದೆಲ್ಲಾ ಆಗೋಕೆ ಸರ್ಕಾರ ಬಿಗು ಕ್ರಮ ತೆಗೋತಿಲ್ಲ. ಮುಖ್ಯಮಂತ್ರಿ ಕ್ರಿಯೆಗೆ ಪ್ರತಿಕ್ರಿಯೆ ಅಂತಾರೆ, ಹೋಂ ಮಿನಿಸ್ಟರ್ ಇನ್ನೊಂದು ರೀತಿ. ಅತ್ತ ಈಶ್ವರಪ್ಪ ಇನ್ನೊಂದು ಹೇಳೋದ್ರಿಂದ ಜನ ಕಾನೂನು ಕೈಗೆ ತೆಗೋತಾರೆ. ಯಾವ ಕೊಲೆಗಳನ್ನೂ ಪ್ರೋತ್ಸಾಹಿಸಬಾರದು, ಖಂಡಿಸಬೇಕು ಎಂದರು.