ರಾಜ್ಯದಲ್ಲಿ ಹೈಕಮಾಂಡ್ ಹೇಳಿದರೆ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ. ಕೋಲಾರ, ಬಾದಾಮಿ, ವರುಣಾ ಎಲ್ಲಿ ಹೇಳ್ತಾರೋ ಅಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು (ಮಾ.18): ರಾಜ್ಯದಲ್ಲಿ ಹೈಕಮಾಂಡ್ ಹೇಳಿದರೆ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ. ಕೋಲಾರ, ಬಾದಾಮಿ, ವರುಣಾ ಎಲ್ಲಿ ಹೇಳ್ತಾರೋ ಅಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಒಲವು ತೋರಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಟಿಕೆಟ್ ಹಂಚಿಕೆಯ ಅರ್ಜಿಯಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮವೆಂದು ಹೇಳಲಾಗಿದೆ. ಹೀಗಾಗಿ, ಹೈಕಮಾಂಡ್ ತೀರ್ಮಾನವೇ ಕ್ಷೇತ್ರದ ಆಯ್ಕೆಯಲ್ಲಿ ಅಂತಿಮವಾಗಿದೆ. ಇನ್ನು ಕೋಲಾರದ ಯಾವ ಮುಖಂಡರೊಂದಿಗೆ ನಾನು ಸಭೆ ನಡಡಸಿಲ್ಲ. ಅಲ್ಲಿ ಮನೆಯನ್ನೂ ಮಾಡಿಲ್ಲ. ಮನೆ ನೋಡಿಕೊಂಡು ಬಂದಿರುವುದು ನಿಜ ಆದರೆ, ಮನೆ ಮಾಡಿಲ್ಲ. ಹೈಕಮಾಂಡ್ ಏನು ಹೇಳುತ್ತದೆಯೀ ಅದನ್ನು ತೀರ್ಮಾನ ಮಾಡುತ್ತೇನೆ. ಇನ್ನು ನಾಳೆ ಕೋಲಾರದಲ್ಲಿ ಪಕ್ಷದ ಮುಖಂಡರೊಂದಿಗೆ ಸಭೆ ಆಯೋಜನೆ ಆಗಿತ್ತು. ಆದರೆ, ಬೆಳಗಾವಿಗೆ ಹೋಗಬೇಕಿರುವ ಹಿನ್ನೆಲೆಯಲ್ಲಿ ದನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ವರುಣಾ ಬಿಟ್ಟು, ಪಾಕಿಸ್ತಾನ, ಅಪಘಾನಿಸ್ಥಾನಕ್ಕೆ ಹೋಗಿ ಸ್ಪರ್ಧಿಸಲಿ: ಆರ್. ಅಶೋಕ್
ಯಾವ ಕ್ಷೇತ್ರದಲ್ಲಾದರೂ ಸ್ಪರ್ಧಿಸಲು ಸಿದ್ಧ: ಯಾವ ಕ್ಷೇತ್ರದ ಬಗ್ಗೆ ಒಲವಿದೆ ಎಂದು ಹೇಳಲು ಆಗಲಲ್ಲ. ಹೈಕಮಾಂಡ್ ಹೇಳಿದ ಕ್ಷೇತ್ರವೇ ನನ್ನ ಒಲವಾಗಿದೆ. ಬಾದಾಮಿ, ವರುಣಾ ಅಥವಾ ಕೋಲಾರ ವಿಧಾನಸಭಾ ಕ್ಷೇತ್ರವನ್ನು ಸೂಚಿಸಿದರೂ ಅಲ್ಲಿ ನಿಲ್ಲುತ್ತೇನೆ. ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ನನಗೆ ಟೆನ್ಷನ್ ಇಲ್ಲ ಎಂದು ಹೇಳಿದ್ದಾರೆ. ಆದರೆ, ಈಗಾಗಲೇ ಫೆಬ್ರವರಿ 3ನೇ ವಾರದಲ್ಲಿ ಕೋಲಾರದಲ್ಲಿ ನಡೆಸಲಾದ ಸರ್ವೇಯಲ್ಲಿ ಸಿದ್ದರಾಮಯ್ಯ ಪರ ಒಲವು ಇಲ್ಲ ಎಂದು ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಕೂಡ ಅಲ್ಲಿ ಸ್ಪರ್ಧೆ ಬೇಡವೆಂದು ಹೇಳಿದ್ದಾರೆಂಬ ಮಾಹಿತಿ ತಿಳಿದುಬಂದಿದೆ. ಆದ್ದರಿಂದ, ಸಿದ್ದರಾಮಯ್ಯ ಚಿತ್ತ ಮತ್ತೆ ಬಾದಾಮಿತ್ತ ಎನ್ನುವ ಮಾತು ಕೇಳಿಬರುತ್ತಿದೆ.
ವರುಣಾ ಕ್ಷೇತ್ರ ಯತೀಂದ್ರನಿಗೆ ಸೀಮಿತ: ಇನ್ನು ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ವರುಣಾದಲ್ಲಿ ಸಿಇಸಿಯಲ್ಲಿ ಯತೀಂದ್ರ ಇದ್ದಾನಲ್ಲಪ್ಪಾ ಅವರ ಒಂದೇ ಹೆಸರಿರುವುದು. ಅದು ಕ್ಲಿಯರ್ ಆಗಬೇಕಲ್ಲವಾ? ಎಂದು ಹೇಳುವ ಮೂಲಕ ಕ್ಷೇತ್ರವನ್ನು ಮಗನಿಗೆ ಸೀಮಿತಗೊಳಿಸಿದ್ದಾರೆ. ಇನ್ನು ರಾಜ್ಯದಲ್ಲಿ ಈಗಾಗಲೇ ಒಂದು ಹೆಸರು ಇರುವುದನ್ನು ಬಿಟ್ಟು ಉಳಿದ ಕ್ಷೇತ್ರದತ್ತ ಟಿಕೆಟ್ ಹಂಚಿಕೆ ಬಗ್ಗೆ ಗಮನ ಹರಿಸಲಾಗಿದೆ. ನೀವು ಎಷ್ಟೇ ಹೇಳಿದರೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎನ್ನುವ ನನ್ನ ಮಾತು ಸ್ಪಷ್ಟವಾಗಿದೆ ಎಂದು ಹೇಳಿದರು.
ಕೋಲಾರ ಅಭ್ಯರ್ಥಿ ಬಗ್ಗೆ ಬಾಯಿಬಿಡದ ಡಿಕೆಶಿ: ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಹಾಲಿ ಶಾಸಕರಿಗೆ ಯಾವುದೇ ಸಮಸ್ಯೆ ಇಲ್ಲ. ಇಬ್ಬರು ಶಾಸಕರು ಅವರೇ ಸ್ವಯಂಪ್ರೇರಿತ ವಾಗಿ ನಿಲ್ಲೊದಿಲ್ಲ ಎಂದು ಬೇರೆಯವರನ್ನು ಸೂಚಿಸಿದ್ದಾರೆ. ರಾಹುಲ್ ಗಾಂಧಿ ಅವರು ಬೆಳಗಾವಿಯ ಯುವ ಕ್ರಾಂತಿಯ ಕಾರ್ಯಕ್ರಮಕ್ಕೆ ಬಂದ ಬಳಿಕ ಪಟ್ಟಿ ಬಿಡುಗಡೆ ಮಾಡಲಾಗುವುದು. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಬೇಡ ಎಂಬ ವಿಚಾರದ ಬಗ್ಗೆ ನೀವು ಸಿದ್ದರಾಮಯ್ಯ ಅವರನ್ನೆ ಕೇಳಬೇಕು ಎಂದು ಹೇಳಿದರು.
Big Breaking: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಕ್ಯಾನ್ಸಲ್?
ಟಿಕೆಟ್ ಆಕಾಂಕ್ಷಿಗಳೊಂದಿಗೆ ಡಿಕೆಶಿ ಚರ್ಚೆ: ದೆಹಲಿಯಿಂದ ಬಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ದೇವನಹಳ್ಳಿ ಮತ್ತು ಬಸವಕಲ್ಯಾಣ ಕ್ಷೇತ್ರದ ಆಕಾಂಕ್ಷಿಗಳ ಜೊತೆ ಮಾತುಕತೆ ನಡೆಸಿದರು. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪ್ರಸನ್ನ ಮತ್ತು ಆಕಾಂಕ್ಷಿ ಶಾಂತಕುಮಾರ್ ಜೊತೆ ಮಾತುಕತೆ ಮಾಡಿದರು. ಕೆಲ ನಿಮಿಷಗಳ ಕಾಲ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಅಲ್ಲಿಂದ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬೆಂಗಳೂರು ನಗರದ ಕಡೆಗೆ ಪ್ರಯಾಣ ಬೆಳೆಸಿದರು.