
ಬೆಂಗಳೂರು(ನ.17): ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಗೈರುಹಾಜರಾಗಿದ್ದ ಮಾಜಿ ಸಚಿವ ಜಮೀರ್ ಅಹಮದ್ ಖಾನ್(Zameer Ahmed Khan) ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಅವರ ಬೆಂಬಲಿಗರು ನಿರಂತರ ಘೋಷಣೆ ಕೂಗುತ್ತಾ ಅಶಿಸ್ತು ತೋರಿದ್ದಾರೆ. ಇದರಿಂದ ಬೇಸರಗೊಂಡ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ(siddaramaiah) ಅವರು ತಮ್ಮ ಭಾಷಣವನ್ನು ಮೊಟಕುಗೊಳಿಸಿ ತೆರಳಿದ ಘಟನೆ ಮಂಗಳವಾರ ನಡೆಯಿತು.
ಅಲ್ಲದೆ, ಜಮೀರ್ ಬೆಂಬಲಿಗರ ಅಶಿಸ್ತಿನ ವರ್ತನೆಗೆ ಕೆಂಡಾಮಂಡಲರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮರ್(DK Shivakumar), ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾಷಣ ಮಾಡಲೂ ಬಿಡದೆ ನೀವು ತೋರುತ್ತಿರುವ ಅಶಿಸ್ತನ್ನು ಸಹಿಸಲಾಗದು. ಘೋಷಣೆ ನಿಲ್ಲಸದಿದ್ದರೆ ನಿಮ್ಮನ್ನೆಲ್ಲಾ ಪಕ್ಷದಿಂದ ಉಚ್ಚಾಟಿಸಬೇಕಾಗುತ್ತದೆ. ನೀವೆಲ್ಲಾ ಕಾಂಗ್ರೆಸ್(Congress) ದ್ರೋಹಿಗಳು, ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡುವುದನ್ನು ಕಲಿಯಿರಿ ಎಂದು ಕಟುವಾಗಿಯೇ ಎಚ್ಚರಿಸಿದರು.
ಟ್ರಾಫಿಕ್ ಜಾಮ್ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಕೊಂಚ ತಡವಾಗಿ ಬಂದರು. ಅವರು ಬರುತ್ತಿದ್ದಂತೆ ಕಾರ್ಯಕರ್ತರಿಂದ ಜೋರು ಚಪ್ಪಾಳೆ, ಶಿಳ್ಳೆ ಕೇಳಿಬಂತು. ಇದರ ನಡುವೆಯೇ ಜಮೀರ್ ಅಹಮದ್ ಖಾನ್ ಬೆಂಬಲಿಗರ ಗುಂಪೊಂದು ಜಮೀರ್ ಪರ ಘೋಷಣೆ ಕೂಗುತ್ತಾ ಕಾರ್ಯಕ್ರಮಕ್ಕೆ ಜಮೀರ್ ಬರಬೇಕೆಂದು ಆಗ್ರಹಿಸತೊಡಗಿತ್ತು.
ಇದರ ನಡುವೆ ಸಿದ್ದರಾಮಯ್ಯ ಅವರು ಭಾಷಣ ಆರಂಭಿಸಿದರೂ ಜಮೀರ್ ಬೆಂಬಲಿಗರು ಘೋಷಣೆ ನಿಲ್ಲಿಸಲಿಲ್ಲ. ಆಗ ಸಿದ್ದರಾಮಯ್ಯ ಅವರು ಘೋಷಣೆ ಕೂಗಿ ಅಶಿಸ್ತು ತೋರಿದವರನ್ನು ಸುಮ್ಮನೆ ಕುಳಿತುಕೊಳ್ಳಿ ಎಂದು ಗದರಿದರು. ಡಿ.ಕೆ.ಶಿವಕುಮಾರ್ ಮಾತನಾಡಿ ನೀವೆಲ್ಲಾ ಈಗ ಸುಮ್ಮನಿರುತ್ತೀರೋ ಇಲ್ಲದಿದ್ದರೆ ಪಕ್ಷದಿಂದ ಉಚ್ಛಾಟಿಸುವುದಾಗಿ ಎಚ್ಚರಿಸಿದರು. ಆದರೂ ಅವರು ಸುಮ್ಮನಾಗಲಿಲ್ಲ. ಇದರಿಂದ ಸಿದ್ದು ಬೇಸರಗೊಂಡು ತಮ್ಮ ಭಾಷಣವನ್ನೇ ಮೊಟಕುಗೊಳಿಸಿ ಅಲ್ಲಿಂದ ಹೊರಟುಬಿಟ್ಟರು. ಬಳಿಕ ಜಮೀರ್ ಬೆಂಬಲಿಗರು ಘೋಷಣೆ ನಿಲ್ಲಿಸಿದರು. ಈ ವೇಳೆ ಸಿಟ್ಟುಗೊಂಡು ಮಾತನಾಡಿದ ಡಿ.ಕೆ.ಶಿವಕುಮಾರ್, ನೀವೆಲ್ಲಾ ಕಾಂಗ್ರೆಸ್ ದ್ರೋಹಿಗಳು ಎಂದು ಹೇಳಿದರು.
ಮಹಾನ್ ಆರ್ಥಿಕತಜ್ಞ ಸಿದ್ದರಾಮಯ್ಯನವರು Bitcoin ಬಗ್ಗೆ ವಿವರಿಸಲಿ : ಪ್ರತಾಪ್ ಸಿಂಹ!
ಅರಮನೆ ಮೈದಾನದ ನಲಪಾಡ್ ಪೆವಿಲಿಯನ್‌ನಲ್ಲಿ ಮಂಗಳವಾರ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಅವರ ಪದಗ್ರಹಣ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ನಾಯಕರಷ್ಟೇ ಅಲ್ಲದೆ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಅಖಿಲ ಭಾರತ ಅಲ್ಪಸಂಖ್ಯಾತ ಕಾಂಗ್ರೆಸ್ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಇಮ್ರಾನ್ ಪ್ರತಾಪ್ ಗಡಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಆದರೆ, ಜಮೀರ್ ಅಹ್ಮದ್ ಅವರು ಈ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು.
ಸಿದ್ದರಾಮಯ್ಯ ಹಾಗೂ ಜಮೀರ್ ಅಹಮ್ಮದ್ ಖಾನ್ ಆತ್ಮೀಯರಾಗಿದ್ದಾರೆ. ಸಿದ್ದು ಮುಂದಿನ ಚುನಾವಣೆಯಲ್ಲಿ ಜಮೀರ್ ಕ್ಷೇತ್ರವಾದ ಚಾಮರಾಜಪೇಟೆಯಿಂದ ಸ್ಪರ್ಧಿಸಲಿದ್ದಾರೆ ಅನ್ನೋ ಮಾತುಗಳ ಬಲವಾಗಿ ಕೇಳಿಬರುತ್ತಿದೆ. ಇತ್ತ ಈ ಕರಿತು ಬಹಿರಂಗವಾಗಿ ಸಿದ್ದುಗೆ ಆಹ್ವಾನ ನೀಡಿದ್ದಾರೆ. ಮುಂದಿನ ಚುನಾವಣೆ ಸ್ಪರ್ಧೆ ಎಲ್ಲಿಂದ ಅನ್ನೋ ಕುರಿತು ಮುಂದಿನ ದಿನಗಳಲ್ಲಿ ನಿರ್ಧರಿಸುವುದಾಗಿ ಹೇಳಿದ್ದರು. ಸಿದ್ದರಾಮಯ್ಯಗಾಗಿ ಜಮೀರ್ ಅಹಮ್ಮದ್ ಖಾನ್ ಚಾಮರಾಜಪೇಟೆ ತೊರೆಯಲು ಸಿದ್ಧರಾಗಿದ್ದಾರೆ. ಇದೇ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ ಅನ್ನೋದ ರಾಜಕೀಯ ತಜ್ಞರ ಮಾತು. ಇತ್ತ ಚಾಮರಾಜಪೇಟೆಯಲ್ಲಿ ಆಯೋಜಿಸಿದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದಾರೆ. ಇದೀಗ ಜಮೀರ್ ಬೆಂಬಲಿಗರ ವರ್ತನೆ ಸಿದ್ದು ಆಕ್ರೋಶಕ್ಕೆ ಕಾರಣಾಗಿದೆ.
ಜಮೀರ್ ಅಹಮ್ಮದ್ ಖಾನ್ ಬೆಂಬಲಿಗರ ವಿರುದ್ಧ ಸಿಡಿಮಿಡಿಗೊಂಡಿರುವ ಡಿಕೆ ಶಿವಕುಮಾರ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಈ ರೀತಿಯ ವರ್ತನೆ ಮರುಕಳಿಸಬಾರದು. ಪಕ್ಷದ ಕಾರ್ಯಕರ್ತರಲ್ಲಿ ಶಿಸ್ತು ಅಗತ್ಯ ಎಂದಿದ್ದಾರೆ. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.