ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ ಎಂಬುದು ಕಳೆದ ಲೋಕಸಭಾ ಚುನಾವಣೆಯಲ್ಲಿಯೇ ಮುಗಿದ ಆಧ್ಯಾಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ನಾಗಮಂಗಲ (ಮಾ.09): ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ ಎಂಬುದು ಕಳೆದ ಲೋಕಸಭಾ ಚುನಾವಣೆಯಲ್ಲಿಯೇ ಮುಗಿದ ಆಧ್ಯಾಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವು ಭಾಗಗಳೂ ಸೇರಿದಂತೆ ಜಿಲ್ಲೆಯ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಶೀಘ್ರದಲ್ಲೆ ಬಿಜೆಪಿ ಸೇರಲಿದ್ದಾರೆ. ಜೆಡಿಎಸ್ ಪಕ್ಷದ ಕೆಲ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಇನ್ನೂ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಹೊಂದಾಣಿಕೆಯಿಲ್ಲದ ಕಾರಣದಿಂದ ಬೇಸತ್ತ ಆ ಪಕ್ಷದ ಪ್ರಮುಖರು ನಮ್ಮ ಪಕ್ಷ ಸೇರುವ ತವಕದಲ್ಲಿದ್ದಾರೆ.
ಆದರೆ, ಯಾರನ್ನ ಸೇರಿಸಿಕೊಳ್ಳಬೇಕು ಅಥವಾ ಯಾರನ್ನ ಸೇರಿಸಿಕೊಳ್ಳಬಾರದೆಂಬ ಯೋಚನೆ ಮಾಡುತ್ತಿದ್ದೇವೆ ಎಂದರು. ಸಭೆ ಸಮಾರಂಭಗಳಲ್ಲಿ ಸೇರಿಸುವ ಜನ ಸಂಖ್ಯೆಯ ಆಧಾರದಲ್ಲಿ ಪಕ್ಷದ ಟಿಕೆಟ್ ಕೊಡುವ ಸಂಸ್ಕೃತಿ ಬಿಜೆಪಿ ಪಕ್ಷದಲ್ಲಿಲ್ಲ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿಯೂ ಈಗಾಗಲೇ 2 ಬಾರಿ ಸಮಿಕ್ಷೆ ನಡೆಸಲಾಗಿದೆ. ಈಗ 3ನೇ ಸಮಿಕ್ಷೆ ನಡೆಯುತ್ತಿದೆ. ನಮ್ಮದು ರಾಷ್ಟ್ರೀಯ ಪಕ್ಷ, ಹಾಗಾಗಿ ಯಾರ ಒತ್ತಡಕ್ಕೂ ಮಣಿದು ಟಿಕೆಟ್ ಕೊಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಶಾಸಕ ಮಾಡಾಳ್ ಮೆರವಣಿಗೆ ಮುಜುಗರ ತಂದಿದೆ: ನಳಿನ್ ಕುಮಾರ್ ಕಟೀಲ್
ಸುಮಲತಾ ಯಾವುದೇ ಬೇಡಿಕೆ ಇಟ್ಟಿಲ್ಲ: ಸುಮಲತಾ ಅಂಬರಿಷ್ ಮಂಡ್ಯ ಜಿಲ್ಲೆಯ ಪಕ್ಷೇತರ ಸಂಸದರು. ಯಾವುದೇ ಪಕ್ಷ ಸೇರುವುದು ಅವರ ವೈಯಕ್ತಿಕ ವಿಚಾರ. ಬಿಜೆಪಿ ಸೇರುತ್ತಾರೆ ಎಂದು ಬೇರೆ ಪಕ್ಷಗಳಿಗೆ ಒತ್ತಡ ಹೇರುವ ತಂತ್ರಕ್ಕೆ ಮಣಿಯುವ ಇರಾದೆ ನಮಗಿಲ್ಲ. ಮೊದಲು ಸಂಸದರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿ. ಕ್ಷೇತ್ರ ಯಾವುದು ಅಂತ ಆನಂತರ ನೋಡೋಣ. ಆದರೆ, ಈ ವಿಷಯದಲ್ಲಿ ಸುಮಲತಾರವರು ನಮ್ಮಲ್ಲಿ ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಸುಮಲತಾ ಅಂಬರಿಷ್ ಬಿಜೆಪಿ ಸೇರುವ ಬಗ್ಗೆ ಸುಳಿವು ನೀಡಿದರು.
ತಿರುಗಿ ನೋಡದ ನಾರಾಯಣಗೌಡ: ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಪಟ್ಟಣದ ಮುಖ್ಯ ರಸ್ತೆಯ ಮೂಲಕ ಟಿ.ಬಿ.ಬಡಾವಣೆ ತಲುಪಿ ಪ್ರವಾಸಿ ಮಂದಿರದ ಎದುರು ಕಾರ್ಯಕರ್ತರನ್ನು ಕುರಿತು ಸಚಿವ ಶ್ರೀನಿವಾಸ ಪೂಜಾರಿ ಮಾತನಾಡುತ್ತಿದ್ದರು. ಈ ವೇಳೆ ಬೆಂಗಳೂರಿನಿಂದ ನಾಗಮಂಗಲ ಮಾರ್ಗವಾಗಿ ಕೆ.ಆರ್.ಪೇಟೆ ಕಡೆಗೆ ತೆರಳಿದ ಸಚಿವ ಕೆ.ಸಿ.ನಾರಾಯಣಗೌಡರು ಕಾರ್ಯಕರ್ತರು ಕೈಬೀಸಿದರೂ ತಿರುಗಿ ನೋಡದಂತೆ ಕಾರಿನಲ್ಲಿ ತೆರಳಿದರು.
ಬೆಂಗಳೂರಿಗೆ ನಡ್ಡಾ: ಬಿಜೆಪಿಯ ‘ವಿಜಯ ಸಂಕಲ್ಪ ಯಾತ್ರೆ’ಗುರುವಾರ ನಗರದ ಕೆ.ಆರ್.ಪುರದಲ್ಲಿ ನಡೆಯಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾಗವಹಿಸಲಿದ್ದಾರೆ. ಗುರುವಾರ ಸಂಜೆ ಐದು ಗಂಟೆಗೆ ಕೆ.ಆರ್.ಪುರದ ಬಿಬಿಎಂಪಿ ಕಚೇರಿಯಿಂದ ರೋಡ್ ಶೋ ನಡೆಯಲಿದೆ. ಬಳಿಕ ಕೆ.ಆರ್.ಪುರ ಸರ್ಕಾರದ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.
ಯಾತ್ರೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ತೋಟಗಾರಿಕೆ ಸಚಿವ ಮುನಿರತ್ನ, ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಬಿ.ನಾರಾಯಣಗೌಡ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ಕಾಂಗ್ರೆಸ್‌ನ ‘ಗ್ಯಾರಂಟಿ ಕಾರ್ಡ್’ ಭರವಸೆಗಳಿಗೆ ಮರುಳಾಗಬೇಡಿ: ಸಿಎಂ ಬೊಮ್ಮಾಯಿ
ಗುರುವಾರ ಸಂಜೆ ಜರುಗುವ ಯಾತ್ರೆಯಲ್ಲಿ ಜೆ.ಪಿ.ನಡ್ಡಾ ಅವರು ಭಾಗವಹಿಸಲು ಸಂಜೆ 5.20ಕ್ಕೆ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 5.35ಕ್ಕೆ ಕೆ.ಆರ್.ಪುರದ ಗಣಪತಿ ದೇವಾಲಯದ ಬಳಿಕ ಮಹಿಳಾ ಕಾರ್ಯಕರ್ತೆಯರು ಪೂರ್ಣಕುಂಭ ಸ್ವಾಗತ ಕೋರಲಿದ್ದಾರೆ. ಬಳಿಕ ರೋಡ್ ಶೋ ಮೂಲಕ ಸಾರ್ವಜನಿಕ ಸಭೆ ನಡೆಯುವ ಸರ್ಕಾರಿ ಕಾಲೇಜು ಮೈದಾನಕ್ಕೆ ತೆರಳಲಿದ್ದಾರೆ. ಅಲ್ಲಿ ಜರುಗುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ತಿಳಿಸಿದ್ದಾರೆ.