ನವೆಂಬರ್‌ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಜನಾರ್ದನ ರೆಡ್ಡಿ ಭವಿಷ್ಯ

Kannadaprabha News, Govindaraj S |   | Kannada Prabha
Published : Jul 17, 2025, 05:02 AM ISTUpdated : Jul 17, 2025, 05:06 AM IST
Gali Janardhan Reddy

ಸಾರಾಂಶ

ಸಿದ್ದರಾಮಯ್ಯ ರಾಜೀನಾಮೆ ನೀಡದಿದ್ದಲ್ಲಿ ಡಿಕೆಶಿ, ಮುಖ್ಯಮಂತ್ರಿ ಕುರ್ಚಿಯನ್ನು ಬಲವಂತವಾಗಿ ಎಳೆದುಕೊಳ್ಳುತ್ತಾರೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಭವಿಷ್ಯ ನುಡಿದಿದ್ದಾರೆ.

ಪುತ್ತೂರು (ಜು.17): ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರಿಗಿಂತ ಒಂದು ದಿನವಾದರೂ ಹೆಚ್ಚು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಬೇಕು ಎಂಬ ಜಿದ್ದಿಗೆ ಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ನವಂಬರ್ ಒಳಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡದಿದ್ದಲ್ಲಿ ಡಿಕೆಶಿ, ಮುಖ್ಯಮಂತ್ರಿ ಕುರ್ಚಿಯನ್ನು ಬಲವಂತವಾಗಿ ಎಳೆದುಕೊಳ್ಳುತ್ತಾರೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಭವಿಷ್ಯ ನುಡಿದಿದ್ದಾರೆ. ಬುಧವಾರ ಕಡಬ ತಾಲೂಕಿನ ಸವಣೂರು ಗ್ರಾಮದ ಆರೆಲ್ತಡಿ ಉಳ್ಳಾಕ್ಲು, ಕೆಡೆಂಜೊಡಿತ್ತಾಯ ದೈವಸ್ಥಾನದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಸಭಾಭವನಕ್ಕೆ ಶಿಲಾನ್ಯಾಸ ನೆರವೇರಿಸಿ, ಬಳಿಕ ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್ ಅವರ ಪಾಲ್ತಾಡಿಯ ಕುಂಜಾಡಿಯಲ್ಲಿನ ಮನೆಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಡಿಕೆಶಿ ಮತ್ತು ಸಿದ್ದರಾಮಯ್ಯ ಅವರು ಅಧಿಕಾರ 50-50 ಅಧಿಕಾರ ಹಂಚಿಕೆ ಮಾಡಿಕೊಂಡಿದ್ದಾರೆ ಎಂದು ನಾನು ಸಂಡೂರಿನಲ್ಲಿ ನಡೆದ ಉಪಚುನಾವಣೆಯ ಸಂದರ್ಭದಲ್ಲಿಯೇ ಹೇಳಿದ್ದೆ. ಅದೀಗ ನಿಜವಾಗುತ್ತಿದೆ. ಡಿಕೆಶಿ ಈಗಾಗಲೇ ಸಿಎಂ ಕುರ್ಚಿಗೆ ಬುನಾದಿ ಹಾಕಲು ಶುರು ಮಾಡಿದ್ದಾರೆ. ನನಗೆ ತಿಳಿದ ಮಾಹಿತಿ ಪ್ರಕಾರ ಅಧಿಕಾರ ಪಡೆಯಲೇ ಬೇಕು ಎನ್ನುವ ಆತುರದಲ್ಲಿ ಡಿಕೆಶಿ ಇದ್ದಾರೆ. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುತ್ತಾರೆ ಎಂದರು. ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಸರ್ಕಾರದ ದುರಾಡಳಿತವನ್ನು ನೋಡಿರುವ ರಾಜ್ಯದ ಜನತೆ ಬಿಜೆಪಿಗೆ ಮತ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಹುಮತದೊಂದಿಗೆ ನಾವು ಅಧಿಕಾರಕ್ಕೆ ಬರುವುದು ನಿಶ್ಚಿತ. ಪಕ್ಷದ ನಿರ್ದೇಶನದಂತೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಪ್ರತಿ ಪಕ್ಷದಲ್ಲೂ ಬಣ ರಾಜಕೀಯವಿದೆ: ಬಣ ರಾಜಕೀಯ ಗೊಂದಲಗಳು ಪ್ರತಿಯೊಂದು ಪಕ್ಷದಲ್ಲೂ ಇದೆ. ಆದರೆ ಬಿಜೆಪಿ ಇನ್ನೂ ಶಿಸ್ತಿನ ಪಕ್ಷವಾಗಿ ಉಳಿದಿದೆ, ಶಿಸ್ತನ್ನು ಮೀರಿದವರ ಬಗ್ಗೆ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ವರಿಷ್ಠರು ತೆಗೆದುಕೊಳ್ಳುತ್ತಿದ್ದಾರೆ. ಪಕ್ಷದೊಳಗಿನ ಅಸಮಾಧಾನಗಳನ್ನು ಪಕ್ಷದ ವರಿಷ್ಠರು ಪರಿಹರಿಸುತ್ತಾರೆ. ಪಕ್ಷದ ಸಂಘಟನೆ ವಿಚಾರದಲ್ಲಿ ರಾಷ್ಟ್ರೀಯ ನಾಯಕರು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದಕ್ಕೆ ತಕ್ಕಂತೆ ನಾವೆಲ್ಲಾ ಕೆಲಸ ಮಾಡುತ್ತೇವೆ. ರಾಜ್ಯಾಧ್ಯಕ್ಷ ವಿಚಾರದಲ್ಲಿ ನಾನು ಏನೂ ಹೇಳುವುದಿಲ್ಲ ಎಂದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮತ್ತಿತರರು ಉಪಸ್ಥಿತರಿದ್ದರು.

ದೈವದ ನುಡಿ, ಜೈಲಿನಿಂದ ಬಿಡುಗಡೆ: ಅರೆಲ್ತಡಿ ಇರ್ವೆರ್ ಉಳ್ಳಾಕ್ಲು, ಕೆಡೆಂಜೋಡಿತ್ತಾಯಿ ಹಾಗೂ ಪರಿವಾರ ದೈವಸ್ಥಾನದ ಬ್ರಹ್ಮಕಲಶೋತ್ಸವ ಕಳೆದ ಮೇ 13ರಂದು ನಡೆದಿತ್ತು. ಈ ಬ್ರಹ್ಮಕಲಶೋತ್ಸವಕ್ಕೆ ಗಾಲಿ ಜನಾರ್ದನ ರೆಡ್ಡಿ ಆಗಮಿಸಬೇಕಿತ್ತು. ಆದರೆ ಆಂಧ್ರಪ್ರದೇಶದ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೇ 6ರಂದು ಅವರು ಮತ್ತೊಮ್ಮೆ ಜೈಲುಪಾಲಾಗಿದ್ದರು. ಕಾನೂನಿನ ಸಮಸ್ಯೆಗೆ ಸಿಲುಕಿದ್ದ ಪರಿಣಾಮ ದೈವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಅವರಿಗೆ ಆಗಮಿಸಲು ಸಾಧ್ಯವಾಗಿರಲಿಲ್ಲ.

ಮೇ 13ರಂದು ದೈವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ಜನಾರ್ದನ ರೆಡ್ಡಿ ಆಪ್ತರು ಅವರಿಗೆ ಜೈಲಿನಿಂದ ಬಿಡುಗಡೆಗೆ ಆಗುವಂತೆ ಗ್ರಾಮದ ದೈವ ಕೆಡೆಂಜೋಡಿತ್ತಾಯ ದೈವದ ಬಳಿ ಬೇಡಿ ಕೊಂಡಿದ್ದರು. ಈ ಸಂದರ್ಭ ದೈವವು ಅಭಯ ನೀಡಿ ಇಂದಿನಿಂದ ಒಂದು ತಿಂಗಳ ಒಳಗಾಗಿ ಅವರು ಜೈಲಿನಿಂದ ಬಿಡುಗಡೆ ಆಗುತ್ತಾರೆ ಎಂದು ನುಡಿ ಕೊಟ್ಟಿತ್ತು. ದೈವದ ಅಭಯದಂತೆ ಒಂದು ತಿಂಗಳ ಒಳಗೆ ಗಾಲಿ ಜನಾರ್ದನ ರೆಡ್ಡಿ ಅವರು ಬಿಡುಗಡೆಯಾಗಿದ್ದರು. ಹಾಗಾಗಿ ಜನಾರ್ದನ ರೆಡ್ಡಿ ಅವರು ಸಂಕ್ರಮಣದ ವಿಶೇಷ ದಿನವಾದ ಬುಧವಾರ ಸವಣೂರಿಗೆ ಆಗಮಿಸಿ ಇಲ್ಲಿನ ಇರುವೆರ್ ಉಳ್ಳಾಕುಲು ಮತ್ತು ಕೆಡೆಂಜೋಡಿತ್ತಾಯಿ ಆರೇಲ್ತಡಿ ದೈವಸ್ಥಾನಕ್ಕೆ ಭೇಟಿ ನೀಡಿ ತಂಬಿಲ ಸೇವೆ ನೀಡಿ ಪ್ರಾರ್ಥಿನೆ ಸಲ್ಲಿಸಿದರು.

ಕಟೀಲು ಕ್ಷೇತ್ರಕ್ಕೆ ಗಾಲಿ ಜನಾರ್ದನ ರೆಡ್ಡಿ, ಪುತ್ರ ಭೇಟಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬುಧವಾರ ಬೆಳಗ್ಗೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಪುತ್ರ ಗಾಲಿ ಕಿರೀಟಿ ರೆಡ್ಡಿ ಮತ್ತು ನಟಿ ಶ್ರೀಲೀಲಾ ಅವರೊಂದಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.ಜನಾರ್ದನ ರೆಡ್ಡಿ ಅವರ ಪುತ್ರ ಗಾಲಿ ಕಿರೀಟಿ ರೆಡ್ಡಿ, ನಟಿ ಶ್ರೀಲೀಲಾ ‘ಜೂನಿಯರ್’ ಎಂಬ ಸಿನಿಮಾದಲ್ಲಿ ನಟಿಸಿದ್ದು, ಜುಲೈ 18ರಂದು ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಾರ್ಥಿಸಲು ಕಟೀಲು ದೇವಳಕ್ಕೆ ಭೇಟಿ ನೀಡಿದ್ದಾರೆ. ದೇವಳದ ವತಿಯಿಂದ ಅರ್ಚಕರಾದ ಅನಂತ ಆಸ್ರಣ್ಣ ಹಾಗೂ ಶ್ರೀಹರಿ ಆಸ್ರಣ್ಣರು ಗೌರವಿಸಿ, ಪ್ರಸಾದ ನೀಡಿ ಹರಸಿದರು. ರಾಜ್ಯ ಸಚಿವರಾಗಿದ್ದಾಗ ನೀಡಿದ ಅನುದಾನದಲ್ಲಿ ಕಟೀಲಿನಲ್ಲಿ ಯಾತ್ರಿ ನಿವಾಸ ಆಗಿರುವುದನ್ನು ನೆನಪಿಸಿಕೊಂಡ ರೆಡ್ಡಿ, ಇಲ್ಲಿ ಚಂಡಿಕಾ ಹೋಮ ಮೊದಲಾದ ಸೇವೆ ಸಲ್ಲಿಸಿರುವುದನ್ನು ಸ್ಮರಿಸಿದರು. ಸುತ್ತಲೂ ನಂದಿನಿ ನದಿ ಹರಿಯುತ್ತಿರುವ ಈ ಕ್ಷೇತ್ರ ಮನಸ್ಸಿಗೆ ನೆಮ್ಮದಿ ಕೊಡುತ್ತದೆ ಎಂದರು. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ ಜೊತೆಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಂಡ್ಯ ಜಿಲ್ಲೆಯಲ್ಲಿ ಸಿದ್ಧಪಡಿಸಿದ ಕೈಗಾರಿಕಾ ಭೂಮಿ ಇಲ್ಲ: ಸಚಿವ ಎಂ.ಬಿ.ಪಾಟೀಲ್
ಗಾಂಧೀಜಿ ಕೊಡುಗೆ ಬಗ್ಗೆ ಬಿಜೆಪಿಯವರಿಗೆ ಜ್ಞಾನ ಇಲ್ಲ: ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ