ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಚಾಮರಾಜಪೇಟೆ ಕ್ಷೇತ್ರದ ಅಳಿಯ. ಮಗನನ್ನು ಇಷ್ಟಪಡುವ ರೀತಿಯಲ್ಲಿಯೇ ಅಳಿಯನನ್ನು ಇಷ್ಟಪಡುತ್ತಾರೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಬೆಂಗಳೂರು (ಡಿ.06): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಚಾಮರಾಜಪೇಟೆ ಕ್ಷೇತ್ರದ ಅಳಿಯ. ಮಗನನ್ನು ಇಷ್ಟಪಡುವ ರೀತಿಯಲ್ಲಿಯೇ ಅಳಿಯನನ್ನು ಇಷ್ಟಪಡುತ್ತಾರೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಚಾಮರಾಜಪೇಟೆ ಕ್ಷೇತ್ರದಲ್ಲಿ ಯಾವ ಪಕ್ಷದವರು ಯಾರನ್ನಾದರೂ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲಿ.
ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಚಾಮರಾಜಪೇಟೆಯಲ್ಲಿ ಜಮೀರ್ ಅಹ್ಮದ್ ಮನೆ ಮಗ. ಮನೆ ಮಗನನ್ನು ಯಾರಾದರೂ ಬಿಟ್ಟುಕೊಡಲು ಸಾಧ್ಯವೇ? ಅಂತೆಯೇ ಸಿದ್ದರಾಮಯ್ಯ ಅವರು ಕ್ಷೇತ್ರದ ಅಳಿಯ. ಮಗನನ್ನು ಇಷ್ಟಪಡುವ ರೀತಿಯಲ್ಲಿ ಅಳಿಯನನ್ನು ಇಷ್ಟಪಡಲಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರಿಗೆ ಚಾಮರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಆಹ್ವಾನ ನೀಡಿದ್ದೆ. ಈಗಲೂ ಅಲ್ಲಿಂದಲೇ ಸ್ಪರ್ಧಿಸಬಹುದು. ಸ್ಪರ್ಧೆಗೆ ನಾನು ಆಹ್ವಾನ ನೀಡುತ್ತಿದ್ದೇನೆ ಎಂದು ತಿಳಿಸಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಬೇಕು ಎಂಬ ವಿಚಾರದಲ್ಲಿ ನನ್ನ ಅಭಿಪ್ರಾಯದಲ್ಲಿ ಯಾವುದೇ ಬದಲಾವಣೆ ಇಲ್ಲ.
Belagavi: ಪೊಲೀಸರು ವರ್ತನೆ ಬದಲಿಸಿಕೊಳ್ಳಬೇಕು: ಸತೀಶ ಜಾರಕಿಹೊಳಿ
ಈಗಲೂ ಅದೇ ಇದೆ. ಆದರೆ, ಹೈಕಮಾಂಡ್‌ಗೆ ಬಿಟ್ಟವಿಚಾರ. ನಮ್ಮದು ಹೈಕಮಾಂಡ್ ಪಕ್ಷವಾಗಿದ್ದು, ಹೈಕಮಾಂಡ್ ಹಾಕಿದ ಗೆರೆ ದಾಟಲ್ಲ ಎಂದು ಹೇಳಿದರು. ಸಿದ್ದರಾಮಯ್ಯ ಅವರನ್ನು ಸಿದ್ದರಾಮುಲ್ಲಾ ಖಾನ್ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಗೆ ಸಿದ್ದರಾಮಯ್ಯ ಜನಪ್ರಿಯತೆ ಸಹಿಸಲಾಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಎಲ್ಲರಿಗೂ ಸಿದ್ದರಾಮಯ್ಯ ಮೇಲೆ ಕಣ್ಣು. ಇದರಿಂದ ಅವರ ಜನಪ್ರಿಯತೆ ಎಷ್ಟುಎಂಬುದು ಗೊತ್ತಾಗುತ್ತದೆ ಎಂದರು.
ವರ್ಷಾಂತ್ಯಕ್ಕೆ ಬಿಜೆಪಿ ಶಾಸಕರಿಂದ ಪಕ್ಷಾಂತರ: ವರ್ಷಾಂತ್ಯದೊಳಗೆ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಿದಂತೆ ಅನ್ಯ ಪಕ್ಷಗಳಿಗೆ ವಲಸೆ ಹೋಗುತ್ತಾರೆಂದು ಶಾಸಕ ಜಮೀರ್ ಅಹ್ಮದ್ ಭವಿಷ್ಯ ನುಡಿದಿದ್ದಾರೆ. ರಮೇಶ ಜಾರಕಿಹೊಳಿ ಕಾಂಗ್ರೆಸ್ಸಿಗೆ ಬರುತ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನವೆಂಬರ್ ವರೆಗೂ ಕಾಯ್ದು ನೋಡಿ. ಬಿಜೆಪಿಯಲ್ಲಿ ಬೇಸತ್ತಿರುವ ಅನೇಕ ಶಾಸಕರು ಈ ವರ್ಷದ ಅಂತ್ಯಕ್ಕೆ ಬೇರೆ ಪಕ್ಷಗಳಿಗೆ ಬರಲಿದ್ದು ಆ ಸಮಯದಲ್ಲಿ ರಾಜಕೀಯದಲ್ಲಿ ಬಿರುಗಾಳಿಯೇ ಎಳಲಿದೆ ಎಂದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಅಲ್ಪಸಂಖ್ಯಾತರ ಮತಗಳು ಸಿಗುತ್ತವೆ ಎಂದು ಹೇಳಿಕೆ ನೀಡಿರುವ ಸಿ.ಎಂ. ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇಬ್ರಾಹಿಂ ಅಲ್ಪಸಂಖ್ಯಾತರ ವಿರೋಧಿ. ಹೀಗಾಗಿ ಜೆಡಿಎಸ್‌ಗೆ ಏತಕ್ಕೆ ಮತ ನೀಡಬೇಕು. ಈ ವಿಚಾರವನ್ನು ಜನರು ತೀರ್ಮಾಣ ಮಾಡುತ್ತಾರೆ ಎಂದರು. ಸಿದ್ದರಾಮಯ್ಯನವರು ಜೆಡಿಎಸ್‌ನಲ್ಲಿದ್ದಾಗ ಕುಮಾರಸ್ವಾಮಿಗೆ 57 ಸ್ಥಾನ ಬಂದಿದ್ದವು. 2013ರಲ್ಲಿ 40 ಹಾಗೂ 2018ರಲ್ಲಿ ಅದು 37ಕ್ಕೆ ಇಳಿದಿದೆ. ಹೀಗಾಗಿ ಕುಮಾರಸ್ವಾಮಿ 59 ಸ್ಥಾನ ಪಡೆಯಲಿ ನೋಡೋಣ ಎಂದು ಜಮೀರ್ ಅಹ್ಮದ್ ಸವಾಲು ಹಾಕಿದರು.
ಬಾದಾಮಿ ದೂರವಾದರೆ ಸಿದ್ದುಗೆ ಜನ ಕಾಪ್ಟರ್ ಕೊಡಿಸ್ತಾರಂತೆ: ಜಮೀರ್
ನಿರೀಕ್ಷೆ ಮೀರಿ ಭಾರತ ಜೋಡೋ ಯಾತ್ರೆಗೆ ಸ್ಪಂದನೆ ಸಿಕ್ಕಿದೆ. ನಿತ್ಯ 25 ಕಿಮೀ ಪಾದಯಾತ್ರೆಯಲ್ಲಿ ಜನರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಇದರಿಂದ ಬಿಜೆಪಿಗೆ ಭಯ ಶುರುವಾಗಿದ್ದು ಜನಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ. ಅಲ್ಲದೇ, ಡಿ.ಕೆ. ಶಿವಕುಮಾರ ಹಾಗೂ ಸಿದ್ದರಾಮಯ್ಯ ಬಗ್ಗೆ ಇಲ್ಲಸಲ್ಲದ ಮಾತು ಹೇಳಿದ್ದು ಅವರಿಬ್ಬರೂ ಯಾವತ್ತೋ ಒಂದಾಗಿದ್ದಾರೆ. ಇದು ಮಾಧ್ಯಮ ಸೃಷ್ಟಿ ಎಂದರು.