ತಮಗೆ ಜೀವ ಬೆದರಿಕೆ ಪತ್ರಗಳು ಬಂದಿರುವುದರಿಂದ Z+ ಭದ್ರತೆ ಮುಂದುವರಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.
ಬೆಂಗಳೂರು, (ಮಾ.16): ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಜೀವ ಬೆದರಿಕೆ ಇದೆಯಂತೆ. ಕೆಲವರು ಪತ್ರದ ಮೂಲಕ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸ್ವತಃ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ತಮಗೆ ಒದಗಿಸಲಾಗಿರೋ Z+ ಭದ್ರತೆಯನ್ನ ಮುಂದುವರೆಸುವಂತೆ ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.
ನಾಗರೀಕರು ಕೊರೋನಾ ವೈರಸ್ ಬಗ್ಗೆ ಜಾಗೃತವಾಗಿರಬೇಕು: ಸಿದ್ದರಾಮಯ್ಯ
ಸಿಎಂಗೆ ಸಿದ್ದು ಪತ್ರ
" ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿಯಾದ ನನಗೆ Z+ ಭದ್ರತೆ ಒದಗಿಸಲಾಗಿದೆ. ರಾಜ್ಯಾದ್ಯಂತ ನಿರಂತರ ಪ್ರವಾಸ ಕೈಗೊಳ್ಳುತ್ತೇನೆ. ಈ ಸಂದರ್ಭದಲ್ಲಿ ಅಸಂಖ್ಯಾತ ಜನರನ್ನು ಭೇಟಿಯಾಗಿರುತ್ತೇನೆ. ಅಲ್ಲದೇ ನನಗೆ ಕೆಲವು ಜೀವ ಬೆದರಿಕೆ ಪತ್ರಗಳು ಬಂದಿರುತ್ತವೆ. ಆದ್ದರಿಂದ ನನಗೆ ಪೊಲೀಸ್ ಮುಂಗಾವಲು ಮತ್ತು ಬೆಂಗಾವಲು ಪಡೆಯ ರಕ್ಷಣೆ ಅಗತ್ಯವಾಗಿ ಬೇಕಾಗಿರುತ್ತದೆ. ಆಗಾಗಿ ನನಗೆ ಒದಗಿಸಲಾಗಿರುವ Z+ ಭದ್ರತೆಯನ್ನ ಮುಂದುವರೆಸುವಂತೆ ಸಂಬಂಧಪಟ್ಟವರಿಗೆ ಸೂಚಿಸುವಂತೆ ಕೋರುತ್ತೇನೆ". ಹೀಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಸಿದ್ದು ಅಭಿಮಾನಗಳ ಆಕ್ರೋಶ
ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೀಡಲಾಗಿದ್ದ ಭದ್ರತೆಯನ್ನು ರಾಜ್ಯ ಗೃಹ ಇಲಾಖೆ ವಾಪಸ್ ಪಡೆದಿದೆ. ಇದರಿಂದ ಸಿದ್ದರಾಮಯ್ಯನವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸನ್ಮಾನ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭದ್ರತೆಯನ್ನು ಯಾವುದೇ ಕಾರಣವಿಲ್ಲದೆ, ಮಾಹಿತಿಯನ್ನೂ ಸಹ ತಿಳಿಸದೇ ಕೇವಲ ದ್ವೇಷದ ಭಾವದಿಂದ ಕಡಿತಗೊಳಿಸಿದ ರಾಜ್ಯ ಸರ್ಕಾರ ತನ್ನ ವಿಕೃತಿಯಲ್ಲಿ ರಾಜತಾಂತ್ರಿಕತೆ ಮರೆತು ಅಧಿಕಾರದ ಮದದಲ್ಲಿ ತೇಲುತ್ತಿದೆ.
ಭದ್ರತೆ ಕಡಿಮೆ ಮಾಡಬಹುದು, ಜನರ ಮನಸಿನಲ್ಲಿ ಸಿದ್ದರಾಮಯ್ಯರೊಡನೆ ಸುಭದ್ರವಾಗಿರುವ ಪ್ರೀತಿಯನ್ನು ಕಡಿಮೆ ಮಾಡಲು ಸಾಧ್ಯವೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಗೃಹ ಸಚಿವರ ಫೋಟೋ ಹಾಕಿ ಕಿಡಿಕಾರಿದ್ದಾರೆ.