ಮಧ್ಯಪ್ರದೇಶ ಸರ್ಕಾರಕ್ಕೆ ಇಂದು 'ವಿಶ್ವಾಸ' ಪರೀಕ್ಷೆ!

By Kannadaprabha NewsFirst Published Mar 16, 2020, 8:42 AM IST
Highlights

ಮ.ಪ್ರ. ಸರ್ಕಾರಕ್ಕೆ ಇಂದು ವಿಶ್ವಾಸ ಪರೀಕ್ಷೆ| ಇಂದೇ ಬಹುಮತ ಸಾಬೀತಿಗೆ ಗೌರ್ನರ್‌ ಸೂಚನೆ| ಕಮಲ್‌ ಸರ್ಕಾರ ಇರುತ್ತಾ? ಉರುಳುತ್ತಾ?

ಭೋಪಾಲ್‌[ಮಾ.16]: 22 ಶಾಸಕರ ರಾಜೀನಾಮೆಯಿಂದಾಗಿ ಮಧ್ಯಪ್ರದೇಶ ಸರ್ಕಾರ ಸಂಕಷ್ಟಕ್ಕೆ ಸಿಲುಕಿರುವಾಗಲೇ ಮುಖ್ಯಮಂತ್ರಿ ಕಮಲ್‌ನಾಥ್‌ ಅವರಿಗೆ ಸೋಮವಾರ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ಲಾಲ್‌ಜಿ ಟಂಡನ್‌ ಸೂಚಿಸಿದ್ದಾರೆ. ಹೀಗಾಗಿ ಕಳೆದ 1 ವಾರದಿಂದ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹಗ್ಗಜಗ್ಗಾಟ ಸೋಮವಾರ ಒಂದು ಹಂತಕ್ಕೆ ಬಂದು ನಿಲ್ಲುವ ಸಾಧ್ಯತೆ ಇದೆ. ಕಮಲ್‌ ಬಹುಮತ ಸಾಬೀತು ಮಾಡುತ್ತಾರಾ ಅಥವಾ ಜ್ಯೋತಿರಾದಿತ್ಯ ಸಿಂಧಿಯಾ ನಿಷ್ಠ ಬಂಡುಕೋರ ಶಾಸಕರ ಕೈ ಮೇಲಾಗುತ್ತಾ ಎಂಬುದು ಕುತೂಹಲ ಕೆರಳಿಸಿದೆ.

ಕಾಂಗ್ರೆಸ್‌ನ 22 ಶಾಸಕರು ತಮ್ಮ ರಾಜೀನಾಮೆ ಪತ್ರದ ಪ್ರತಿಗಳನ್ನು ರಾಜ್ಯಪಾಲರಿಗೂ ಕಳಿಸಿದ್ದರು. ಇದರ ಬೆನ್ನಲ್ಲೇ ‘ಬಹುಮತ ಸಾಬೀತಿಗೆ ಸಿದ್ಧ’ ಎಂದು ಇತ್ತೀಚೆಗೆ ರಾಜ್ಯಪಾಲರಿಗೆ ಕಮಲ್‌ನಾಥ್‌ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲ ಲಾಲ್‌ಜಿ ಟಂಡನ್‌, ‘ನಿಮ್ಮ ಪತ್ರ ಹಾಗೂ ಶಾಸಕರ ಪತ್ರಗಳನ್ನು ಗಮನಿಸಿದ್ದೇನೆ. ಮೇಲ್ನೋಟಕ್ಕೆ ನಿಮಗೆ ಬಹುಮತ ಇಲ್ಲ ಎಂದು ನನಗೆ ಅನಿಸುತ್ತಿದೆ. ಹೀಗಾಗಿ ಸೋಮವಾರದಿಂದ ಆರಂಭವಾಗುವ ಬಜೆಟ್‌ ಅಧಿವೇಶನದ ಮೊದಲ ದಿನವೇ ನೀವು ಬಹುಮತ ಸಾಬೀತುಪಡಿಸಿ’ ಎಂದು ಕಮಲ್‌ನಾಥ್‌ಗೆ ಸೂಚಿಸಿದ್ದಾರೆ.

‘ಅಧಿವೇಶನದ ಆರಂಭದಲ್ಲಿ ನಾನು ಸದನ ಉದ್ದೇಶಿಸಿ ಮಾತನಾಡುತ್ತೇನೆ. ನಂತರ ವಿಶ್ವಾಸಮತ ಯಾಚನೆ ನಡೆಯಬೇಕು. ಯಾವುದೇ ಕಾರಣಕ್ಕೂ ವಿಶ್ವಾಸಮತ ಯಾಚನೆ ವಿಳಂಬ ಅಥವಾ ಮುಂದೂಡಿಕೆ ಆಗಕೂಡದು. 16ರಂದೇ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಮತ ವಿಭಜನೆ ಆಗುವ ಮೂಲಕ ಪ್ರಕ್ರಿಯೆ ಜರುಗಬೇಕು. ಇಡೀ ಕಾರ್ಯಕಲಾಪದ ವಿಡಿಯೋ ಚಿತ್ರೀಕರಣ ಆಗಬೇಕು’ ಎಂದು ನಿರ್ದೇಶಿಸಿದ್ದಾರೆ.

ಇದರ ಬೆನ್ನಲ್ಲೇ, ಕೈ ಎತ್ತುವ ಮೂಲಕ ಬಹುಮತ ಸಾಬೀತುಪಡಿಸಲು ಸೂಚಿಸಬೇಕು ಎಂದು ರಾಜ್ಯಪಾಲರಿಗೆ ಬಿಜೆಪಿ ನಿಯೋಗ ಮನವಿ ಮಾಡಿದೆ. ಏತನ್ಮಧ್ಯೆ, ಕೊರೋನಾ ವೈರಸ್‌ ನೆಪ ಹೇಳಿ ವಿಶ್ವಾಸಮತ ಪರೀಕ್ಷೆಯನ್ನು ಕಾಂಗ್ರೆಸ್‌ ಮುಂದೂಡಲು ಪ್ರಯತ್ನಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

6 ಮಂದಿ ರಾಜೀನಾಮೆ ಅಂಗೀಕಾರ:

ರಾಜೀನಾಮೆ ನೀಡಿ ಬೆಂಗಳೂರಲ್ಲಿ ಬೀಡುಬಿಟ್ಟಿರುವ ಸಿಂಧಿಯಾ ನಿಷ್ಠ 22 ಬಂಡುಕೋರ ಶಾಸಕರಲ್ಲಿ 6 ಸಚಿವರೂ ಇದ್ದಾರೆ. ಈ 6 ಜನರನ್ನು 2 ದಿನದ ಹಿಂದೆಯೇ ಸಚಿವ ಸ್ಥಾನದಿಂದ ವಜಾ ಮಾಡಲಾಗಿತ್ತು. ಇದೇ ವೇಳೆ, ಈ ಎಲ್ಲ 6 ಸಚಿವರು ಶಾಸಕತ್ವಕ್ಕೆ ನೀಡಿದ ರಾಜೀನಾಮೆಯನ್ನೂ ಸ್ಪೀಕರ್‌ ಎನ್‌.ಪಿ. ಪ್ರಜಾಪತಿ ಅಂಗೀಕರಿಸಿದ್ದಾರೆ. ಆದರೆ ಉಳಿದ 16 ಶಾಸಕರ ರಾಜೀನಾಮೆ ಕುರಿತು ಈವರೆಗೂ ನಿರ್ಣಯ ಕೈಗೊಳ್ಳದೇ ಕುತೂಹಲ ಕೆರಳಿಸಿದ್ದಾರೆ.

ಕೊನೇ ಕ್ಷಣದಲ್ಲಿ ಈ 16 ಶಾಸಕರು ಮನಸ್ಸು ಬದಲಿಸಿ ಪುನಃ ಪಕ್ಷಕ್ಕೆ ಮರಳಿದರೆ ಕಾಂಗ್ರೆಸ್‌ ಸರ್ಕಾರ ಬಚಾವಾಗಲಿದೆ. ಕಮಲ್‌ನಾಥ್‌ ತಂತ್ರ ಕೂಡ ಇದೇ ಆಗಿದೆ ಎಂದು ಮೂಲಗಳು ಹೇಳಿವೆ.

ವಾಪಸ್‌:

ಜೈಪುರದಲ್ಲಿ ಬೀಡುಬಿಟ್ಟಕಾಂಗ್ರೆಸ್‌ ಶಾಸಕರು ಭಾನುವಾರ ಭೋಪಾಲ್‌ಗೆ ಮರಳಿ ಹೋಟೆಲ್‌ನಲ್ಲಿ ತಂಗಿದ್ದಾರೆ. ಆದರೆ ಗುಡಗಾಂವ್‌ನಲ್ಲಿ ಬೀಡುಬಿಟ್ಟಬಿಜೆಪಿ ಶಾಸಕರು ಹಾಗೂ ಬೆಂಗಳೂರಿನಲ್ಲಿರುವ ಬಂಡುಕೋರ ಕಾಂಗ್ರೆಸ್‌ ಶಾಸಕರು ಭಾನುವಾರ ತಡರಾತ್ರಿ ಅಥವಾ ಸೋಮವಾರ ಬೆಳಗ್ಗೆ ಭೋಪಾಲ್‌ಗೆ ಮರಳುವ ನಿರೀಕ್ಷೆಯಿದೆ.

ರಾಜ್ಯಸಭೆ ನಾಮಪತ್ರ ಸಲ್ಲಿಕೆ ಕಾರಣ ದಿಲ್ಲಿಗೆ ತೆರಳಿದ್ದ ಸಿಂಧಿಯಾ ಕೂಡ ಸೋಮವಾರ ಬೆಳಗ್ಗೆ ಭೋಪಾಲ್‌ಗೆ ಮರಳಿ ತಮ್ಮ ನಿಷ್ಠ ಬಂಡುಕೋರ ಶಾಸಕರ ಜತೆ ಸಭೆ ನಡೆಸುವ ಸಾಧ್ಯತೆ ಇದೆ.

ಅಧಿವೇಶನದಲ್ಲಿ ಪಾಲ್ಗೊಳ್ಳಲು ತಮಗೆ ಕೇಂದ್ರೀಯ ಪಡೆಗಳ ಭದ್ರತೆ ಬೇಕು ಎಂದು ಬಂಡುಕೋರ ಶಾಸಕರು ಬೆಂಗಳೂರಿನಿಂದಲೇ ವಿಡಿಯೋ ಸಂದೇಶ ಬಿಡುಗಡೆ ಮಾಡಿ ಆಗ್ರಹಿಸಿದ್ದಾರೆ. ತಮ್ಮ ಎಲ್ಲ ಶಾಸಕರಿಗೂ ಕಾಂಗ್ರೆಸ್‌ ಹಾಗೂ ಬಿಜೆಪಿ ವಿಪ್‌ ಜಾರಿ ಮಾಡಿವೆ.

ಮಧ್ಯಪ್ರದೇಶ ಬಲಾಬಲ

ಒಟ್ಟು 230

ಖಾಲಿ 8

ಬಹುಮತಕ್ಕೆ 112

ಕಾಂಗ್ರೆಸ್‌ 108

ಬಿಎಸ್‌ಪಿ 2

ಎಸ್‌ಪಿ 1

ಪಕ್ಷೇತರರು 4

ಬಿಜೆಪಿ 107

ಸಂಖ್ಯಾಬಲ ಕುತೂಹಲ

ಮಧ್ಯಪ್ರದೇಶ ವಿಧಾನಸಭೆ ಬಲ 230. ಬಿಜೆಪಿ ಹಾಗೂ ಕಾಂಗ್ರೆಸ್‌ನ ಇಬ್ಬರು ನಿಧನ ಹೊಂದಿದ ಕಾರಣ 2 ಸ್ಥಾನ ಖಾಲಿ ಇವೆ. ಶಾಸಕತ್ವಕ್ಕೆ ರಾಜೀನಾಮೆ ನೀಡಿದ 22 ಜನರ ಪೈಕಿ 6 ಶಾಸಕರ ತ್ಯಾಗಪತ್ರ ಅಂಗೀಕಾರವಾಗಿದೆ. ಹೀಗಾಗಿ ಸದನದ ಹಾಲಿ ಬಲ 222. ಈ ಸಂದರ್ಭದಲ್ಲಿ ಬಹುಮತಕ್ಕೆ 112 ಬಲ ಸಾಕು. ಕಾಂಗ್ರೆಸ್‌ನ ಇನ್ನೂ 16 ಶಾಸಕರ ರಾಜೀನಾಮೆ ಅಂಗೀಕಾರ ಬಾಕಿ ಇದೆ. ರಾಜೀನಾಮೆ ಅಂಗೀಕಾರವಾದರೆ ಅಥವಾ ಅವರು ವಿಶ್ವಾಸಮತ ವೇಳೆ ಗೈರಾದರೆ ಸದನದ ಬಲ 206ಕ್ಕೆ ಇಳಿಯುತ್ತದೆ ಹಾಗೂ ಬಹುಮತಕ್ಕೆ 104 ಸ್ಥಾನ ಸಾಕು. ಆಗ ಕಾಂಗ್ರೆಸ್‌ ಬಲ 92ಕ್ಕೆ ಕುಸಿಯಲಿದೆ. ಬಿಎಸ್‌ಪಿ, ಎಸ್‌ಪಿ ಹಾಗೂ ಪಕ್ಷೇತರರು ಬೆಂಬಲಿಸಿದರೂ ಅದರ ಬಲ 99 ಆಗುತ್ತದೆ. ಆದರೆ ಬಿಜೆಪಿ 107 ಶಾಸಕರನ್ನು ಹೊಂದಿದೆ. ಒಂದು ವೇಳೆ ರಾಜೀನಾಮೆ ನೀಡಿದ 16 ಶಾಸಕರು ಉಲ್ಟಾಹೊಡೆದರೆ ಕಾಂಗ್ರೆಸ್‌ ಹಾಗೂ ಮಿತ್ರರು 115 ಸ್ಥಾನ ಗಳಿಸಿ ಬಹುಮತ ಗಳಿಸಲಿದ್ದಾರೆ.

click me!