
ಬೆಂಗಳೂರು[ಮಾ.16]: ‘ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮೇಲೆ ಪ್ರಮಾಣ ಮಾಡಿ ಹೇಳುತ್ತಿದ್ದೇನೆ. ನಾನು ಯಾರ ವಿರುದ್ಧವೂ ಯಾವುದೇ ಅನಾಮಧೇಯ ಪತ್ರ ಬರೆದಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಮೀಪದ ಸಂಬಂಧಿಯೂ ಆಗಿರುವ ಮಾಜಿ ಆಪ್ತ ಸಹಾಯಕ ಎನ್.ಆರ್.ಸಂತೋಷ್ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಯಡಿಯೂರಪ್ಪ ಮತ್ತವರ ಕುಟುಂಬದ ಸದಸ್ಯರ ವಿರುದ್ಧ ಎರಡು ಅನಾಮಧೇಯ ಪತ್ರಗಳು ಮಾಧ್ಯಮ ಸಂಸ್ಥೆಗಳಿಗೆ ತಲುಪಿದ್ದಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿದ್ದವು. ಇದರ ಹಿಂದೆ ಸಂತೋಷ್ ಇದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಂತೋಷ್ ಅವರು ಭಾನುವಾರ ಲಿಖಿತ ಸ್ಪಷ್ಟೀಕರಣ ನೀಡಿದ್ದಾರೆ. ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮೇಲೆ ಪ್ರಮಾಣ ಮಾಡಿ ಹೇಳುತ್ತಿದ್ದೇನೆ. ನಾನು ಯಾವುದೇ ಪತ್ರವನ್ನು ಬರೆದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ. ಸುಳ್ಳು ಆಪಾದನೆಗಳು, ಅಪಪ್ರಚಾರಗಳು, ಅರ್ಥಹೀನ ಎಂದಿದ್ದಾರೆ.
ಕಳೆದ ಕೆಲವು ದಿನಗಳಿಂದ ನಾನು ಹೊರಗೆ ಕಾಣಿಸಿಕೊಳ್ಳದೆ ಅಂತರ್ಮುಖಿಯಾಗಿದ್ದೇನೆ. ಕಳೆದ 8-9 ವರ್ಷಗಳಲ್ಲಿ ಯಾವುದೇ ವಿಶ್ವವಿದ್ಯಾಲಯಗಳಲ್ಲಿಯೂ ಕಲಿಸದ ಪಾಠವನ್ನು ನನ್ನ ಗುರು ಬಿ.ಎಸ್.ಯಡಿಯೂರಪ್ಪ ಕಲಿಸಿದ್ದಾರೆ. ಕಲಿತಿದ್ದೇನೆ. ರಾಜ್ಯವನ್ನು ಅವರ ಜೊತೆ ನೆರಳಿನಂತೆ ಸಾಕಷ್ಟುಬಾರಿ ಸುತ್ತಿದ್ದೇನೆ. ನನ್ನದು ಗುರು ಲಿಂಗ ಜಂಗಮದ ಪದ್ಧತಿ, ಅಣ್ಣ ಬಸವಣ್ಣನವರ ಆಶೀರ್ವಚನದಂತೆ ಕಾಯಕ ಮಾಡುವುದೇ ನಮಗೆ ಕೈಲಾಸದ ಸಮಾನ. ನಾಡಿನ ಕೋಟ್ಯಂತರ ಜನರಂತೆ ನಾನು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ನಿರಾತಂಕವಾಗಿ ಅವಧಿ ಪೂರೈಸಬೇಕು ಎಂದು ಆಶಿಸುತ್ತಿರುವವನು. ನನ್ನ ಮೇಲೆ ಯಾರದೋ ಪ್ರಲೋಭನೆಯಿಂದ ಚಿತಾವಣೆಯಿಂದ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ. ಅದು ಮಾಧ್ಯಮಗಳಲ್ಲಿಯೂ ವರದಿಯಾಗಿದೆ. ನಾನು ಯಾರಿಗೂ ಬಹಿರಂಗವಾಗಿ ಯಾವುದೇ ಅನಾಮಧೇಯ ಪತ್ರವನ್ನು ಬರೆದಿಲ್ಲ. ದೂರು ಹೇಳುವುದಕ್ಕಾಗಿ ದೆಹಲಿಗೆ ಹೋಗಿಲ್ಲ ಎಂದಿದ್ದಾರೆ.
ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮೇಲೆ ಪ್ರಮಾಣ ಮಾಡಿ ಹೇಳುತ್ತಿದ್ದೇನೆ. ನಾನು ಯಾವುದೇ ಪತ್ರವನ್ನು ಬರೆದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ. ಸುಳ್ಳು ಆಪಾದನೆಗಳು, ಅಪಪ್ರಚಾರಗಳು, ಅರ್ಥಹೀನ. ನನಗೆ ವೈಯಕ್ತಿಕವಾಗಿ ನೋವಾಗಿದೆ, ಆಘಾತವಾಗಿದೆ. ಇದನ್ನು ನಮ್ಮ ಹಿರಿಯರ ಗಮನಕ್ಕೆ ತಂದಿದ್ದೇನೆ. ಅವರು ಮಾರ್ಗದರ್ಶನ ಮಾಡಿದಂತೆ ನಡೆದುಕೊಳ್ಳುತ್ತೇನೆ. ನನಗೆ ತಿಳಿದಂತೆ ಗುರು ದೋಷಣೆ ಮಾಡಬಾರದು. ಗುರುವಿನಿಂದ ದೂರ ಉಳಿದಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.