
ಬೆಂಗಳೂರು: ಮತಗಳ್ಳತನ ಆರೋಪ ಮಾಡಿರುವ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಹಿನ್ನೆಲೆ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ, ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮೂಲಕ ರಾಹುಲ್ ಗಾಂಧಿ ಅವರಿಗೆ ಸ್ವಾಗತಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವ ಗಂಭೀರ ಆರೋಪ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಬೆಳಗ್ಗೆ 11.30ಕ್ಕೆ ಪ್ರತಿಭಟನೆ ಆರಂಭವಾಗಲಿದೆ. 'ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ'ದ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ. ಗುರುವಾರ ದೆಹಲಿಯ ಸುದ್ದಿಗೋಷ್ಠಿಯಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮದ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದರು. ಇಂದು ಪ್ರತಿಭಟನೆ ನಡೆಸಿ ಮುಖ್ಯ ಚುನಾವಣಾಧಿಕಾರಿಗಳಿಗೆ ರಾಹುಲ್ ಗಾಂಧಿ ದೂರು ಸಲ್ಲಿಕೆ ಮಾಡಲಿದ್ದಾರೆ.
ಶ್ರೀ ರಾಹುಲ್ ಗಾಂಧಿ ಅವರೇ, ನಮ್ಮ ಕರ್ನಾಟಕಕ್ಕೆ ಸ್ವಾಗತ. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
ತಾಯಿ ಮಹಾಲಕ್ಷ್ಮಿಯು ಹಣಕಾಸು ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರಕ್ಕೆ ಸರ್ವಐಶ್ವರ್ಯ ಪ್ರಾಪ್ತಿಸಲಿ ಎಂದು ಪ್ರಾರ್ಥನೆ ಮಾಡೋಣ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡುವ ಮೂಲಕ ಸ್ವಾಗತಿಸಿದ್ದಾರೆ.
ಇಂದು ನಡೆಯುವ ಪ್ರತಿಭಟನೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಉಸ್ತುವಾರಿ ಸುರ್ಜೇವಾಲಾ, ಎಐಸಿಸಿ ಸಹ ಉಸ್ತುವಾರಿಗಳು, ಸಚಿವರು, ಶಾಸಕರು, ಕೆಪಿಸಿಸಿ ಪದಾಧಿಕಾರಿಗಳು ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.
ದೆಹಲಿಯಲ್ಲಿ ಎಐಸಿಸಿ ಇಂದಿರಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ‘ನಮ್ಮ ಆಂತರಿಕ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ನಾವು 16 ಲೋಕಸಭಾ ಕ್ಷೇತ್ರ ಗೆಲ್ಲಬೇಕಿತ್ತು. ಆದರೆ ಗೆದ್ದಿದ್ದು 8ರಲ್ಲಿ ಮಾತ್ರ. ಹೀಗಾಗಿ ಅನಿರೀಕ್ಷಿತವಾಗಿ ಸೋತ 7 ಕ್ಷೇತ್ರಗಳ ಬಗ್ಗೆ ನಾವು ಗಮನ ಹರಿಸಿ, ಈ ಪೈಕಿ ಮಹಾದೇವಪುರ ವಿಧಾನಸಭಾ ಕ್ಷೇತ್ರದ ಅಂಕಿ ಅಂಶಗಳನ್ನು ಪರಿಶೀಲಿಸಲು ನಿರ್ಧರಿಸಿದೆವು. ಪರಿಶೀಲನೆ ವೇಳೆ ಅಲ್ಲಿ 5 ಮಾದರಿಯ ಅಕ್ರಮಗಳ ಮೂಲಕ 1 ಲಕ್ಷಕ್ಕೂ ಹೆಚ್ಚು ಮತಗಳ್ಳತನ ನಡೆದಿರುವುದು ಕಂಡುಬಂತು’ ಎಂದು ರಾಹುಲ್ ಆರೋಪಿಸಿದರು. ಜೊತೆಗೆ, ಇಂತಹ ಅಕ್ರಮ ದೇಶಾದ್ಯಂತ ನಡೆಯುತ್ತಿರುವ ಶಂಕೆ ವ್ಯಕ್ತಪಡಿಸಿದ ಅವರು, ‘ಇದು ದೇಶದ ಸಂವಿಧಾನ ಮತ್ತು ಧ್ವಜಕ್ಕೆ ಮಾಡಿದ ಅವಮಾನ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.