ಡಿಕೆಶಿ ಉದಾಹರಿಸಿ ಸಚಿವರ ವಜಾ ಬಿಲ್‌ ಬಗ್ಗೆ ಸಿಬಲ್‌ ಟೀಕೆ

Kannadaprabha News   | Kannada Prabha
Published : Aug 27, 2025, 03:27 AM IST
dk shivakumar

ಸಾರಾಂಶ

30 ದಿನಕ್ಕಿಂತ ಹೆಚ್ಚಿನ ಅವಧಿಗೆ ತನಿಖಾ ಸಂಸ್ಥೆಗಳ ವಶದಲ್ಲಿರುವ ಪಿಎಂ, ಸಿಎಂ ಸಚಿವರ ವಜಾಗೊಳಿಸುವ ಕೇಂದ್ರದ ಮಸೂದೆಯನ್ನು ಕೇಂದ್ರದ ಮಾಜಿ ಸಚಿವ, ಸಂಸದ ಕಪಿಲ್‌ ಸಿಬಲ್‌ ಕಟುವಾಗಿ ಟೀಕಿಸಿದ್ದಾರೆ.

ನವದೆಹಲಿ: 30 ದಿನಕ್ಕಿಂತ ಹೆಚ್ಚಿನ ಅವಧಿಗೆ ತನಿಖಾ ಸಂಸ್ಥೆಗಳ ವಶದಲ್ಲಿರುವ ಪಿಎಂ, ಸಿಎಂ ಸಚಿವರ ವಜಾಗೊಳಿಸುವ ಕೇಂದ್ರದ ಮಸೂದೆಯನ್ನು ಕೇಂದ್ರದ ಮಾಜಿ ಸಚಿವ, ಸಂಸದ ಕಪಿಲ್‌ ಸಿಬಲ್‌ ಕಟುವಾಗಿ ಟೀಕಿಸಿದ್ದಾರೆ.

ತನಿಖಾ ಸಂಸ್ಥೆಗಳು ಇದುವರೆಗೂ ಒಬ್ಬನೇ ಒಬ್ಬ ಬಿಜೆಪಿಯ ಸಚಿವರ ಬಂಧಿಸಿಲ್ಲ. ಆದರೆ ಕರ್ನಾಟಕದ ಹಾಲಿ ಡಿಸಿಎಂ ಡಿ.ಕೆ.ಶಿವಕುಮಾರ್‌, ಕೇಜ್ರಿವಾಲ್‌, ಚಿದಂಬರಂ, ಸಿಸೋಡಿಯಾ, ಸತ್ಯೇಂದ್ರ ಜೈನ್‌ ಮೊದಲಾದವರಿಗೆ 50 ದಿನಗಳಿಗೂ ಹೆಚ್ಚಿನ ದಿನದ ಬಳಿಕ ಜಾಮೀನು ಸಿಕ್ಕಿತ್ತು. ಇದನ್ನೆಲ್ಲಾ ನೋಡಿದರೆ ವಿಪಕ್ಷಗಳನ್ನು ಗುರಿಯಾಗಿಸಿಯೇ ಮಸೂದೆ ರೂಪಿಸಿದಂತಿದೆ ಎಂದಿದ್ದಾರೆ.

ಮೌಂಟ್‌ ಫುಜಿ ಏರಿದ 102 ವರ್ಷದ ವೃದ್ಧ: ಹೊಸ ದಾಖಲೆ

ಟೋಕಿಯೋ: ಮನಸ್ಸಿದ್ದರೆ ಮಾರ್ಗ ಎಂಬುದನ್ನು ಜಪಾನ್‌ನ 102ರ ವೃದ್ಧರೊಬ್ಬರು, ಯುವಕರನ್ನೂ ನಾಚಿಸುವ ರೀತಿಯಲ್ಲಿ ಸಾಬೀತುಪಡಿಸಿದ್ದಾರೆ. ಹೃದ್ರೋಗದ ಹೊರತಾಗಿಯೂ ಕೊಕಿಚಿ ಅಕುಝವಾ ಎಂಬುವವರು ಇಲ್ಲಿನ ಮೌಂಟ್‌ ಫುಜಿ ಪರ್ವತವನ್ನು ಏರಿದ್ದಾರೆ. ಈ ಮೂಲಕ ಜಪಾನ್‌ನ ಅತಿ ಎತ್ತರದ (3,776 ಮೀ.) ಪರ್ವತ ಶಿಖರವನ್ನು ಏರಿದ ಅತಿ ಹಿರಿಯ ಎನಿಸಿಕೊಂಡಿದ್ದು, ಗಿನ್ನೆಸ್‌ ದಾಖಲೆ ನಿರ್ಮಿಸಿದ್ದಾರೆ.

ಸಾಕುಪ್ರಾಣಿಗಳನ್ನು ಮೇಯಿಸುವ ಕಾಯಕ ಮಾಡಿಕೊಂಡಿದ್ದ ಕೊಕಿಚಿ, ಪ್ರಸ್ತುತ ವೃದ್ಧರ ಆರೈಕೆ ಕೇಂದ್ರದಲ್ಲಿ ಸ್ವಯಂಸೇವಕರಾಗಿ ಚಿತ್ರಕಲೆ ಕಲಿಸುತ್ತಿದ್ದಾರೆ. ಇವರು ಫುಜಿ ಪರ್ವತ ಏರಿದ್ದು ಇದೇ ಮೊದಲಲ್ಲ.

ಮೊಮ್ಮಗಳೊಂದಿಗೆ ಸಾಹಸ:

ಕೊಕಿಚಿ ಪ್ರತಿನಿತ್ಯ 1 ತಾಸು ನಡಿಗೆ, ವಾರಕ್ಕೊಮ್ಮೆ ಪರ್ವತಾರೋಹಣವನ್ನು ಮಾಡುತ್ತಿದ್ದರು. ವೃದ್ಧಾಪ್ಯದ ಕಾರಣ ಸಂಗಡಿಗರೊಂದಿಗೆ ಪರ್ವತ ಏರಿದ ಇವರಿಗೆ, ನರ್ಸ್‌ ಆಗಿರುವ ಮೊಮ್ಮಗಳೂ ಸಾಥ್‌ ನೀಡಿದ್ದರು. 3 ದಿನಗಳಲ್ಲಿ ಮೌಂಟ್ ಫುಜಿ ಏರಿದ ಇವರು, ಅಲ್ಲೇ ಗುಡಿಸಲು ಹಾಕಿಕೊಂಡು 2 ರಾತ್ರಿ ತಂಗಿದ್ದರು.

ಗೋಹತ್ಯೆಯಿಂದ ಸಾರ್ವಜನಿಕ

ಶಾಂತಿಗೆ ಧಕ್ಕೆ: ಪಂಜಾಬ್‌ ಹೈ

ಚಂಡೀಗಢ: ಭಾರತೀಯ ಸಮಾಜದಲ್ಲಿ ಗೋವಿಗೆ ವಿಶಿಷ್ಟ ಸ್ಥಾನಮಾನವಿದೆ. ಗೋವು ಭಾವನಾತ್ಮಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನೂ ಹೊಂದಿದೆ. ಕೆಲವು ಕೃತ್ಯಗಳು ಬಹುಸಂಖ್ಯಾತರ ನಂಬಿಕೆಗಳನ್ನು ಕೆರಳಿಸಿದಾಗ ಶಾಂತಿಯ ಮೇಲೆ ತೀವ್ರ ಪರಿಣಾಮ ಉಂಟಾಗುತ್ತದೆ ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ವಧೆಗಾಗಿ ರಾಜಸ್ಥಾನಕ್ಕೆ ಗೋವುಗಳನ್ನು ಸಾಗಿಸಿದ ಆರೋಪದ ಮೇಲೆ ನೂಹ್ ನಿವಾಸಿ ಆಸಿಫ್‌ ಹಾಗೂ ಇತರ ಇಬ್ಬರ ಮೇಲೆ ಪ್ರಕರಣ ದಾಖಲಾಗಿತ್ತು. ಅವರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ವಜಾಗೊಳಿಸಿದ ಪೀಠ ಈ ರೀತಿ ಅಭಿಪ್ರಾಯಪಟ್ಟಿದೆ.

‘ಗೋವು ಕೇವಲ ಧಾರ್ಮಿಕ ಪ್ರಾಣಿಯಲ್ಲ, ಬದಲಾಗಿ ಭಾರತದ ಕೃಷಿ ಆರ್ಥಿಕತೆಯ ಅವಿಭಾಜ್ಯ ಅಂಗವಾಗಿದೆ. ಭಾರತೀಯ ಸಮಾಜದಲ್ಲಿ ಹಸುವಿಗೆ ಇರುವ ವಿಶಿಷ್ಟ ಸ್ಥಾನಮಾನವನ್ನು ಗಮನಿಸಿದರೆ, ಪ್ರಸ್ತುತ ಅಪರಾಧವು ಅದರ ಕಾನೂನು ಪರಿಣಾಮಗಳ ಜೊತೆಗೆ, ಭಾವನಾತ್ಮಕ ಮತ್ತು ಸಾಂಸ್ಕೃತಿಕ ಅಂಶಗಳನ್ನೂ ಹೊಂದಿದೆ. ನಮ್ಮಂತಹ ಬಹುತ್ವ ಸಮಾಜದಲ್ಲಿ, ಕೆಲವು ಕೃತ್ಯಗಳು ಖಾಸಗಿಯಾಗಿದ್ದರೂ, ಗಮನಾರ್ಹ ಜನಸಂಖ್ಯೆಯುಳ್ಳ ಸಮಾಜದ ಆಳವಾದ ನಂಬಿಕೆಗಳನ್ನು ಕೆರಳಿಸಿದಾಗ ಸಾರ್ವಜನಿಕ ಶಾಂತಿಯ ಮೇಲೆ ತೀವ್ರ ಪರಿಣಾಮಗಳನ್ನು ಬೀರಬಹುದು. ಸಂವಿಧಾನವು ಕೇವಲ ಅಮೂರ್ತ ಹಕ್ಕುಗಳನ್ನು ರಕ್ಷಿಸುವುದಿಲ್ಲ, ಬದಲಾಗಿ ನ್ಯಾಯಯುತ, ಸಹಾನುಭೂತಿಯುಳ್ಳ ಮತ್ತು ಒಗ್ಗಟ್ಟಿನ ಸಮಾಜವನ್ನು ನಿರ್ಮಿಸಲು ಪ್ರಯತ್ನಿಸುತ್ತದೆ’ ಎಂದು ಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಮರ ನಿಲ್ಲಿಸುವಲ್ಲಿ ಭಾರತದ ನೆರವಿನ ನಿರೀಕ್ಷೆ: ಜೆಲೆನ್ಸ್‌ಕಿ

ಕೀವ್‌: ‘ಇದು ಯುದ್ಧದ ಯುಗವಲ್ಲ’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಪಾದನೆಯನ್ನು ಮತ್ತೊಮ್ಮೆ ಸ್ಮರಿಸಿರುವ ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್ಸ್‌ಕಿ, ‘ರಷ್ಯಾದೊಂದಿಗಿನ ಯುದ್ಧವನ್ನು ಕೊನೆಗೊಳಿಸುವಲ್ಲಿ ಭಾರತದ ಕೊಡುಗೆಯನ್ನು ಉಕ್ರೇನ್‌ ನಿರೀಕ್ಷಿಸುತ್ತಿದೆ’ ಎಂದು ಹೇಳಿದ್ದಾರೆ.ಉಕ್ರೇನ್‌ ಸ್ವಾತಂತ್ರ್ಯೋತ್ಸವಕ್ಕೆ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರತಿಕ್ರಿಯಿಸಿದ ಜೆಲೆನ್ಸ್‌ಕಿ, ‘ಈ ಯುದ್ಧವನ್ನು ಘನತೆಯಿಂದ ಕೊನೆಗಾಣಿಸಿ ಶಾಂತಿ ಸ್ಥಾಪಿಸಲು ವಿಶ್ವವೇ ಬಯಸುತ್ತಿದೆ. ಈ ನಿಟ್ಟಿನಲ್ಲಿ ನಾವು ಭಾರತದ ಕೊಡುಗೆಯನ್ನು ಅಪೇಕ್ಷಿಸುತ್ತಿದ್ದೇವೆ. ರಾಜತಾಂತ್ರಿಕತೆಯನ್ನು ಬಲಪಡಿಸುವ ಪ್ರತಿಯೊಂದು ನಿರ್ಧಾರವೂ ಯುರೋಪ್‌ನಲ್ಲಿ ಮಾತ್ರವಲ್ಲ, ಇಂಡೋ-ಪೆಸಿಫಿಕ್ ಮತ್ತು ಅದರಾಚೆಗೂ ಉತ್ತಮ ಭದ್ರತೆಯನ್ನು ಖಚಿತಪಡಿಸುತ್ತದೆ’ ಎಂದರು.

ಈ ಮೂಲಕ ಜೆಲೆನ್ಸ್‌ಕಿ, ಸಮರವನ್ನು ನಿಲ್ಲಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಬಹುದು ಎನ್ನುವುದರ ಜತೆಗೆ, ಯುದ್ಧದಲ್ಲಿ ರಷ್ಯಾವನ್ನು ಬೆಂಬಲಿಸದಿರಿ ಎಂದೂ ಪರೋಕ್ಷವಾಗಿ ಮನವಿ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!