
ಬೆಂಗಳೂರು / ಮೈಸೂರು (ಆ.26): ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ 'ಚಾಮುಂಡಿ ಬೆಟ್ಟಮ ಚಾಮುಂಡಿ ದೇವರು ಹಿಂದೂಗಳ ಆಸ್ತಿಯಲ್ಲ' ಎಂದು ಹೇಳಿದ್ದಾರೆ. ಆದರೆ, ಶಕ್ತಿಪೀಠ ಚಾಮುಂಡಿ ಬೆಟ್ಟ ಹಿಂದೆಯೂ ಹಿಂದೂಗಳದ್ದೇ ಆಗಿತ್ತು. ಈಗಲೂ ಹಿಂದೂಗಳದ್ದೇ ಆಗಿದೆ, ಮುಂದೆಯೂ ಹಿಂದೂಗಳದ್ದೇ ಆಗಿರುತ್ತದೆ ಎಂದು ಸಂಸದ ಹಾಗೂ ಮೈಸೂರು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಡಿಸಿಎಂ ಡಿಕೆಶಿಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಅವರು, 'ಗೌರಿ ಹಬ್ಬದ ದಿನವೇ ಡಿಸಿಎಂ ಡಿ.ಕೆ. ಶಿವಕುಮಾರ್ 'ಚಾಮುಂಡಿ ಬೆಟ್ಟ, ಚಾಮುಂಡಿ ದೇವರು ಹಿಂದೂಗಳ ಆಸ್ತಿ ಅಲ್ಲ' ಎಂದಿರುವುದು ಅತ್ಯಂತ ದುಃಖಕರ ಮತ್ತು ನಿಂದನೀಯ. ಚಾಮುಂಡಿ ಬೆಟ್ಟ ಶಕ್ತಿಪೀಠ - ಶಾಸ್ತ್ರ ಸಮ್ಮತವಾಗಿ ಪವಿತ್ರಗೊಂಡು ಕೋಟ್ಯಾಂತರ ಹಿಂದೂಗಳಿಂದ ಆರಾಧಿತವಾಗಿದೆ. ಈ ದೇವಾಲಯ ಹಿಂದೂಗಳದ್ದೇ ಆಗಿತ್ತು, ಇದೆ ಮತ್ತು ಎಂದೆಂದಿಗೂ ಇರುತ್ತದೆ.
ಕಾಂಗ್ರೆಸ್ ಯಾವಾಗಲೂ ಹಿಂದೂ ಭಾವನೆಗಳಿಗೆ ಧಕ್ಕೆ ತಂದು ತನ್ನ ನಕಲಿ ಸೆಕ್ಯುಲರಿಸಂ ಪ್ರದರ್ಶನ ಮಾಡುತ್ತಿದೆ. ಕರ್ನಾಟಕದ ಜನರು ಎಲ್ಲ ಧರ್ಮಗಳನ್ನೂ ಗೌರವಿಸುತ್ತಾರೆ. ಆದರೆ ಹಿಂದೂ ಹಬ್ಬಗಳು, ಸಂಪ್ರದಾಯಗಳು ಮತ್ತು ದೇವಾಲಯಗಳ ಮೇಲೆ ನಡೆಯುತ್ತಿರುವ ನಿರಂತರ ದಾಳಿಯನ್ನು ಯಾವತ್ತೂ ಸಹಿಸುವುದಿಲ್ಲ' ಎಂದು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದಾರೆ.
ಬಾನು ಮುಷ್ತಾಕ್ ಬಗ್ಗೆ ಸ್ಪಷ್ಟನೆ ಕೊಡುವಾಗ ವಿವಾದ ಸೃಷ್ಟಿ:
ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್ ಅವರಿಗೆ ಆಹ್ವಾನ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್, 'ಚಾಮುಂಡಿ ಬೆಟ್ಟ, ಹಿಂದೂ ಧರ್ಮದ ಆಸ್ತಿಯಲ್ಲ' ಎಂದು ವಿವಾದಿತ ಹೇಳಿಕೆ ನೀಡಿದ್ದರು. ಅವರ ನಂಬಿಕೆ ಅದು. ನಾವು ಮಸೀದಿ, ಜೈನ್ ಟೆಂಪಲ್, ಗುರುದ್ವಾರಕ್ಕೆ ಹೋಗುತ್ತೇವೆ. ನಮ್ಮನ್ನು ಹೋಗಬೇಡಿ ಅಂತ ಯಾರಾದರೂ ಹೇಳಿದ್ದಾರಾ? ಮುಸ್ಲಿಂಮರು ಹಿಂದೂಗಳಾಗಿಲ್ವ? ಹಿಂದೂಗಳು ಮುಸ್ಲಿಂ ಆಗಿಲ್ವ? ಅಯೋಧ್ಯೆ ರಾಮನಿಗೆ ಯಾಕೆ ಹಿಂದೂಗಳು ಮಾತ್ರ ಬರಬೇಕು ಅಂತ ಮಾಡಿಲ್ಲ? ಎಂದು ಪ್ರಶ್ನೆ ಮಾಡಿದ್ದರು.
ನಮ್ಮ ದೇಶದಲ್ಲಿ ಹಿಂದೂ ದೇವಸ್ಥಾನಗಳಿಗೆ ಸಾಕಷ್ಟು ಜನ ಮುಸ್ಲಿಮರು ಬರುತ್ತಾರೆ. ಎಲ್ಲ ಧರ್ಮದ ಜನ ಕೂಡ ಹಿಂದೂ ದೇವಸ್ಥಾನಗಳಿಗೆ ಹೋಗುತ್ತಾರೆ. ಇದು ಸಂವಿಧಾನದ ಮೇಲೆ ನಂಬಿಕೆ ಇರುವ ರಾಷ್ಟ್ರವಾಗಿದೆ. ಇಲ್ಲಿ ಹಿಂದೂ ಹುಡುಗ-ಮುಸ್ಲಿಂ ಮಹಿಳೆ ಇದ್ದರೆ, ಅವರ ಮಗು ಯಾವ ಧರ್ಮ ಬೇಕೋ ಅದನ್ನು ಆಚರಣೆ ಮಾಡುತ್ತದೆ. ಬಾನು ಮುಸ್ತಾಕ್, ಕನ್ನಡದಲ್ಲಿ ಬರೆದಾಗ ಯಾರು ಯಾಕೆ ಬರೆದೆ ಅಂತ ಕೇಳಲಿಲ್ಲ ಎಂದು ಹೇಳಿದ್ದಾರೆ. ನಾವು ಧರ್ಮದಲ್ಲಿ ರಾಜಕಾರಣ ಮಾಡಲ್ಲ. ಸಂವಿಧಾನ ಮತ್ತು ಜಾತ್ಯಾತೀತ ತತ್ವದಲ್ಲಿ ಇರುವ ರಾಷ್ಟ್ರ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.