
ಮುಂಬೈ(ಜು.19) ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ವಿಪಕ್ಷಗಳು ಒಂದಾಗಿ ಮೈತ್ರಿ ರಂಗ ರಚನೆ ಮಾಡಿದೆ. ನಿನ್ನೆ ಬೆಂಗಳೂರಿಲ್ಲಿ ನಡೆದ 2ನೇ ಸಭೆಯಲ್ಲಿ ಮೈತ್ರಿಕೂಟಕ್ಕೆ I-N-D-I-A ಎಂದು ಹೆಸರಿಡಲಾಗಿದೆ. ಇಂಡಿಯಾ ಹೆಸರಿನಡಿ ವಿಪಕ್ಷಗಳು ಒಗ್ಗಟ್ಟಾಗಿ 2024ರ ಚುನಾವಣೆ ಎದುರಿಸಲಿದೆ. ಆದರೆ ಈ ಸಭೆ ಬಳಿಕ ವಿಪಕ್ಷ ಮೈತ್ರಿ ಕೂಟದಲ್ಲಿ ಅಪಸ್ವರಗಳು ಕೇಳಿಬರುತ್ತಿದೆ. ಈಗಾಗಲೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೆಸರು ಹಾಗೂ ಕಾಂಗ್ರೆಸ್ ನಡೆ ವಿರುದ್ದ ಅಸಮಾಧಾನ ಹೊರಹಾಕಿದ್ದರೆ. ಇದರ ಬೆನ್ನಲ್ಲೇ ವಿಪಕ್ಷ ಸಭೆಯಲ್ಲಿ ಹಾಜರಾಗಿದ್ದ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಇದೀಗ, ಬಿಜೆಪಿ ಮೈತ್ರಿ ಸರ್ಕಾರದ ಉಪಮುಖ್ಯಮಂತ್ರಿ, ಬಂಡಾಯ ಎನ್‌ಸಿಪಿ ನಾಯಕ ಅಜಿತ್ ಪವಾರ್ ಭೇಟಿಯಾಗಿದ್ದಾರೆ. ಈ ಭೇಟಿ ಹಲವು ಕುತೂಹಲಕ್ಕೆ ಕಾರಣವಾಗಿದೆ.
ಉದ್ಧವ್ ಠಾಕ್ರೆ, ಪುತ್ರ ಹಾಗೂ ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಸೇರಿದಂತೆ ಕೆಲ ಶಿವಸೇನೆ ನಾಯಕರು ಆಜಿತ್ ಪವಾರ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮುಂಬೈನ ವಿಧಾನ ಭವನದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ವಿಪಕ್ಷ ಮೈತ್ರಿ ಸಭೆ ಮರುದಿನವೇ ಉದ್ಧವ್ ಠಾಕ್ರೆ ಮುಂಬೈನಲ್ಲಿ ಎನ್‌ಡಿಎ ಸರ್ಕಾರದ ಉಪ ಮುಖ್ಯಮಂತ್ರಿಯನ್ನು ಭೇಟಿಯಾಗಿರುವುದು ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ವಿಪಕ್ಷಗಳ ಮೈತ್ರಿಗೆ INDIA ಹೆಸರು, ನಿತೀಶ್ ಕುಮಾರ್ ಅಪಸ್ವರ; ಇತ್ತ ಚುನಾವಣಾ ಆಯೋಗಕ್ಕೆ ದಾಖಲಾಯ್ತು ದೂರು!
ಭೇಟಿ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಉದ್ಧವ್ ಠಾಕ್ರೆ, ಅಜಿತ್ ಪವಾರ್‌ಗೆ ಶುಭಹಾರೈಸಿದ್ದೇನೆ. ಶಾಸಕರ ಅನುದಾನ ವಿತರಣೆ ಸೇರಿದಂತೆ ಕೆಲ ವಿಚಾರಗಳ ಕುರಿತು ಚರ್ಚೆ ನಡೆಸಿದ್ದೇವೆ ಎಂದಿದ್ದಾರೆ. ಆದರೆ ಈ ಭೇಟಿ ಹಿಂದೆ ಲೋಕಸಭಾ ಚುನಾವಣಾ ರಣತಂತ್ರ ಅಡಿಗಿದೆಯಾ ಅನ್ನೋ ಪ್ರಶ್ನೆಗಗಳು ಮೂಡಿದೆ.ವಿಪಕ್ಷಗಳ ಮೈತ್ರಿಯಲ್ಲಿ ಪ್ರಮುಖ ಪಕ್ಷವಾಗಿರುವ ಶಿವಸೇನೆ ದಿಢೀರ್ ನಡೆ ಇದೀಗ ಮೈತ್ರಿಕೂಟ ಪಕ್ಷಗಳ ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಆಯೋಜಿಸಿದ ವಿಪಕ್ಷ ಸಭೆಗೆ ನಿತೀಶ್ ಕುಮಾರ್ ಗೈರಾಗಿದ್ದರು. ಈ ಸಭೆ ಬಳಿಕ ನಿತೀಶ್ ಕುಮಾರ್ ತಮ್ಮ ಆಪ್ತರ ಜೊತೆ ವಿಪಕ್ಷ ಮೈತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಕಾಂಗ್ರೆಸ್ ಏಕಪಕ್ಷೀಯವಾಗಿ ವಿಪಕ್ಷ ಮೈತ್ರಿ ಹೆಸರನ್ನು ಇಂಡಿಯಾ ಎಂದು ಬದಲಾಯಿಸಿದೆ. ಇದು ಹೇಗೆ ಸಾಧ್ಯ? ಎಂದು ನಿತೀಶ್ ಕುಮಾರ್ ಪ್ರಶ್ನಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ವಿಪಕ್ಷ ಮೈತ್ರಿಗೆ ಮುನ್ನುಡಿ ಬರೆದು ಮೊದಲ ಸಭೆ ಆಯೋಜಿಸಿದ ನಿತೀಶ್ ಕುಮಾರ್ ಇದೀಗ ವಿಪಕ್ಷ ಮೈತ್ರಿಯಿಂದ ದೂರ ಉಳಿಯವ ರೀತಿ ಕಾಣಿಸುತ್ತಿದೆ. ಸಂಪೂರ್ಣ ಮೈತ್ರಿ ಪ್ರಯತ್ನವನ್ನ ಕಾಂಗ್ರೆಸ್ ಹೈಜಾಕ್ ಮಾಡಿದೆ ಅನ್ನೋ ಆರೋಪಗಳು ಕೇಳಿಬಂದಿದೆ.
ಯುಪಿಎ ಹೆಸರು ಇನ್ನು INDIA: 26 ಪ್ರತಿಪಕ್ಷ ನಾಯಕರ ಘೋಷಣೆ
ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮಹಾ ಮೈತ್ರಿಕೂಟಕ್ಕೆ ‘ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟಲ್ ಇನ್‌ಕ್ಲ್ಯೂಸಿವ್ ಅಲಯನ್ಸ್’ (ಐಎನ್‌ಡಿಐಎ-ಇಂಡಿಯಾ) ಎಂಬ ಹೆಸರನ್ನು ಅಂತಿಮಗೊಳಿಸಿತ್ತು. ಇದರ ಕೇಂದ್ರ ಕಚೇರಿ ದೆಹಲಿಯಲ್ಲಿ ಇರಲಿದೆ. ಈ ಮೈತ್ರಿಕೂಟದ ನಾಯಕತ್ವ ಯಾರು ವಹಿಸಬೇಕು, ಮೈತ್ರಿ ಕೂಟದ ನಿಲುವು, ರೂಪರೇಷೆ ಮುಂತಾದವುಗಳ ಬಗ್ಗೆ 11 ಮಂದಿ ಸದಸ್ಯರ ಸಮನ್ವಯ ಸಮಿತಿ ನಿರ್ಧರಿಸಲಿದೆ. ಮುಂಬೈನಲ್ಲಿ ನಡೆಯಲಿರುವ ಮೈತ್ರಿಕೂಟದ ಮುಂದಿನ ಸಭೆಯಲ್ಲಿ ಮೇಲ್ಕಂಡ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ನಾಯಕರು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.