
ಬೆಳಗಾವಿ (ಡಿ.15): ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವರೂ ಆಗಿದ್ದ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನ ಹಿನ್ನೆಲೆಯಲ್ಲಿ ಸೋಮವಾರ ಸಂತಾಪ ಸೂಚನೆ ಬಳಿಕ ಕಲಾಪವನ್ನು ಮಂಗಳವಾರಕ್ಕೆ ಮುಂದೂಡುವ ಸಾಧ್ಯತೆಯಿದೆ. ಸದನದ ಹಾಲಿ ಸದಸ್ಯರಾಗಿದ್ದ ಕಾರಣ ವಿಧಾನಸಭೆಯಲ್ಲಿ ಮೊದಲಿಗೆ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ಸಂತಾಪ ಸೂಚನಾ ನಿರ್ಣಯ ಮಂಡಿಸಲಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರು ಶಿಕ್ಷಣ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಹಿರಿಯ ವ್ಯಕ್ತಿ. ಹೀಗಾಗಿ ಸದನದ ಬಹುತೇಕ ಸದಸ್ಯರು ಸಂತಾಪ ನಿರ್ಣಯ ಮೇಲೆ ಮಾತನಾಡಿ ಸಂತಾಪ ಸೂಚಿಸಲಿದ್ದಾರೆ. ಬಳಿಕ ಮೌನಾಚರಣೆ ಸಲ್ಲಿಸಿ ಸದನ ಮುಂದೂಡಲಿದ್ದಾರೆ. ಈ ವೇಳೆ ಮಧ್ಯ ಕರ್ನಾಟಕ ಭಾಗದ ಶಾಸಕರು, ಲಿಂಗಾಯತ ಸಮುದಾಯದ ಶಾಸಕರು ಸೇರಿ ಬಹುತೇಕರು ಶಾಮನೂರು ಅವರ ಅಂತಿಮ ದರ್ಶನಕ್ಕೆ ತೆರಳುವ ಸಾಧ್ಯತೆ ಹಿನ್ನೆಲೆ ಸದನದಲ್ಲಿ ಕೆಲ ಸದಸ್ಯರು ಗೈರಾಗಬಹುದು.
ವಿಧಾನಪರಿಷತ್ತಿನಲ್ಲಿ ಸಂತಾಪ: ವಿಧಾನ ಪರಿಷತ್ತಿನಲ್ಲೂ ನಿಯಮಗಳ ಪ್ರಕಾರ ಸೋಮವಾರ ಬೆಳಗ್ಗೆ ಸಂತಾಪ ಸೂಚನೆ ನಿರ್ಣಯ ಮಂಡನೆಯಾಗಲಿದೆ. ಪರಿಷತ್ ಸದಸ್ಯರಲ್ಲದ ಕಾರಣ ಸಂತಾಪ ಸೂಚನೆ ಬಳಿಕ ಕೆಲ ನಿಮಿಷಗಳ ಕಾಲ ಸದನ ಮುಂದೂಡಿ ಮತ್ತೆ ಕಲಾಪ ನಡೆಸಬಹುದು. ಆದರೆ ಸರ್ಕಾರ ಅಧಿಕೃತ ಸರ್ಕಾರಿ ರಜೆ ಘೋಷಣೆ ಮಾಡಿದರೆ ಮಾತ್ರ ಸಂತಾಪದ ಬಳಿಕ ವಿಧಾನಪರಿಷತ್ ಕಲಾಪವನ್ನೂ ಮಂಗಳವಾರಕ್ಕೆ ಮುಂದೂಡಲು ಅವಕಾಶವಿದೆ ಎಂದು ಪರಿಷತ್ ಮೂಲಗಳು ತಿಳಿಸಿವೆ.
ಆದರೆ ಶಾಮನೂರು ಅವರ ನಿಧನದಿಂದ ಸಂತಾಪ ಬಳಿಕ ಸದಸ್ಯರು ಪರಿಷತ್ ಕಲಾಪದಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ. ಹೀಗಾಗಿ ಕೋರಂ ಕೊರತೆ ಇದ್ದರೆ ಸರ್ಕಾರ ರಜೆ ಘೋಷಿಸದಿದ್ದರೂ ಪರಿಷತ್ತಿನ ಕಲಾಪವನ್ನೂ ಸಂತಾಪದ ಬಳಿಕ ಮಂಗಳವಾರಕ್ಕೆ ಮಂದೂಡುವ ಸಾಧ್ಯತೆಯಿದೆ.
ಬೆಳಗಾವಿ ಅಧಿವೇಶನವನ್ನು ಒಟ್ಟು 10 ದಿನ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಇತ್ತೀಚೆಗೆ ಹಾಲಿ ಶಾಸಕ ಎಚ್.ವೈ.ಮೇಟಿ ಅವರ ನಿಧನದ ಹಿನ್ನೆಲೆಯಲ್ಲಿ ಡಿ.8 ರಂದು ಮೊದಲ ದಿನ ಸಂತಾಪ ಸೂಚನೆ ನಂತರ ಕಲಾಪವನ್ನು ಮರು ದಿನಕ್ಕೆ ಮುಂದೂಡಲಾಗಿತ್ತು. ಇದೀಗ ಎರಡನೇ ದಿನ ಮುಂದೂಡಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.