
ಶಿವಮೊಗ್ಗ (ಡಿ.14): ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಕುರ್ಚಿ ಕಿತ್ತಾಟದಿಂದಾಗಿ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಇಚ್ಛಾಸಕ್ತಿಯ ಕೊರತೆಯಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಈ ಸರ್ಕಾರ ಬದುಕಿದೆಯೋ, ಸತ್ತಿದೆಯೋ ಎನ್ನುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದೆಡೆ ಕಾಂಗ್ರೆಸ್‌ನ ಹೈಕಮಾಂಡ್ ಸಿದ್ದರಾಮಯ್ಯನವರೇ ಇರಬಹುದೇ ಎಂಬ ಸಂದೇಹ ಮೂಡುತ್ತಿದೆ. ಇನ್ನೊಂದೆಡೆ, ಯತೀಂದ್ರ ಅವರೇ ಹೈಕಮಾಂಡ್ ಎಂದು ಕಾಂಗ್ರೆಸ್ ಪಕ್ಷದವರೇ ಕೆಲವರು ಕಾಲೆಳೆಯುತ್ತಿದ್ದಾರೆ ಎಂದು ಟೀಕಿಸಿದರು.
ಇದೀಗ ದ್ವೇಷ ಭಾಷಣದ ಶಾಸನ ತಂದು ವಿರೋಧ ಪಕ್ಷದವರನ್ನು ಕಟ್ಟಿಹಾಕುವ ಷಡ್ಯಂತ್ರಕ್ಕೆ ಸರ್ಕಾರ ಕೈ ಹಾಕಿದೆ. ತುರ್ತು ಪರಿಸ್ಥಿತಿ ತಂದಾಗಲೇ ಕಾಂಗ್ರೆಸ್‌ನಿಂದ ಏನೂ ಮಾಡಲಾಗಲಿಲ್ಲ. ಈಗ ವಿರೋಧ ಪಕ್ಷವನ್ನು ಹಣಿಯುವ ಕೆಲಸಕ್ಕೆ ಹೊರಟಿದೆ. ಅದು ಸಾಧ್ಯವಾ ಎಂದು ಅವರು ಪ್ರಶ್ನಿಸಿದರು. ರಾಜ್ಯದ ಹಿತದೃಷ್ಟಿಯಿಂದ ಪಕ್ಷಭೇದ ಮರೆತು ಸಮಗ್ರವಾಗಿ ಚರ್ಚೆ ಮಾಡುವುದಾದರೆ ಮಾತ್ರ ಈ ಅಧಿವೇಶನ ಕರೆಯಿರಿ ಎಂದಿದ್ದೆ. ನಾಯಕತ್ವಕ್ಕಾಗಿ ಪೈಪೋಟಿ ಮಾಡುವುದರಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದ್ದು, ನಿಮ್ಮ ನಾಯಕತ್ವ ಸಮಸ್ಯೆ ಬಗೆಹರಿಯುವ ತನಕ ಅಧಿವೇಶನ ಮುಂದೂಡಿ ಎಂದು ಮುಖ್ಯಮಂತ್ರಿಗೆ ವಿನಂತಿ ಮಾಡಿಕೊಳ್ಳುತ್ತೇನೆ ಎಂದರು.
ಅಧಿವೇಶನ ಪ್ರಾರಂಭವಾಗಿ ಒಂದು ವಾರವಾದರೂ ಕೂಡ ವಿರೋಧಪಕ್ಷದ ನಾಯಕರು ಮತ್ತು ಸದಸ್ಯರ ಸಮಸ್ಯೆಗಳಿಗೆ ಸ್ಪಂದನೆ ಮಾಡುವ ವ್ಯವದಾನ ಆಡಳಿತ ಪಕ್ಷಕ್ಕೆ ಇಲ್ಲದೇ ಇರುವುದು ಈ ಸರ್ಕಾರದ ದುರ್ದೈವವಾಗಿದೆ. ಸಿಎಂ, ಡಿಸಿಎಂ ಕಳೆದೆರೆಡು ವರ್ಷಗಳಿಂದ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದವರು ಈಗ ಒಬ್ಬರ ಮೇಲೊಬ್ಬರು ಕತ್ತಿ ಮಸೆಯುತ್ತಿದ್ದಾರೆ. ಇದು ರೈತರು, ಕೂಲಿ ಕಾರ್ಮಿಕರು, ಜನಸಾಮಾನ್ಯರ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗಿದೆ. ಪ್ರಣಾಳಿಕೆಯಲ್ಲಿ ನೀರಾವರಿಗೆ ಪ್ರತಿ ವರ್ಷ 35 ಲಕ್ಷ ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆ ಹಣ ಇನ್ನೂ ಬಂದಿಲ್ಲ. ಆದರೆ, ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ₹5 ಸಾವಿರ ಕೋಟಿ ನೀಡಿಲ್ಲವೆಂದು ಬೊಟ್ಟು ತೋರಿಸುತ್ತಾರೆ. ನುಡಿದಂತೆ ನಡೆಯದ, ಕೊಟ್ಟ ಭರವಸೆಯನ್ನು ಈಡೇರಿಸದ ಈ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಕೇಂದ್ರ ನೀಡುವ ಅನುದಾನವನ್ನೇ ನಂಬಿ ಕುಳಿತಂತಿದೆ. ಎಲ್ಲದ್ದಕ್ಕೂ ಕೇಂದ್ರವೇ ಕಾರಣವೆಂದು ಆರೋಪ ಮಾಡುತ್ತಿದೆ ಎಂದು ಆರೋಪಿಸಿದರು.
ಯತ್ನಾಳ್ ನನ್ನ ವಿರುದ್ದ ಪದೇ ಪದೇ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅವರಿಗೆ ನನ್ನ ಬಗ್ಗೆ ಮಾತನಾಡದಿದ್ದರೆ ಊಟ ಸೇರಲ್ಲ. ನನ್ನ ತಾಳ್ಮೆಗೂ ಮಿತಿ ಇದೆ. ಅವರ ಮೇಲೆ ಒಂದು ರು. ಅಥವಾ ಒಂದು ಕೋಟಿ ರು. ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸುತ್ತಿದ್ದೇನೆ.
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.