1983ರಿಂದಲೂ ಬಸವರಾಜ ಹೊರಟ್ಟಿ, ನಾನು ದೋಸ್ತ್: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

Published : Dec 14, 2025, 08:23 AM IST
Siddaramaiah

ಸಾರಾಂಶ

ಕೆಲವರಿಗೆ ಅಧಿಕಾರ, ಹುದ್ದೆಗಳಿಂದ ವ್ಯಕ್ತಿತ್ವ ಬರುತ್ತದೆ. ಇನ್ನು ಹಲವರು ಯಾವ ಸ್ಥಾನ ಅಲಂಕರಿಸುತ್ತಾರೋ ಆ ಹುದ್ದೆಯ ಹಿರಿಮೆ ಹೆಚ್ಚಾಗುತ್ತದೆ. ಹುದ್ದೆಗೆ ಹಿರಿಮೆ ಹೆಚ್ಚಿಸುವವರು ಬಸವರಾಜ ಹೊರಟ್ಟಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

ಹುಬ್ಬಳ್ಳಿ (ಡಿ.14): ಕೆಲವರಿಗೆ ಅಧಿಕಾರ, ಹುದ್ದೆಗಳಿಂದ ವ್ಯಕ್ತಿತ್ವ ಬರುತ್ತದೆ. ಇನ್ನು ಹಲವರು ಯಾವ ಸ್ಥಾನ ಅಲಂಕರಿಸುತ್ತಾರೋ ಆ ಹುದ್ದೆಯ ಹಿರಿಮೆ ಹೆಚ್ಚಾಗುತ್ತದೆ. ಹುದ್ದೆಗೆ ಹಿರಿಮೆ ಹೆಚ್ಚಿಸುವವರು ಬಸವರಾಜ ಹೊರಟ್ಟಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದ್ದಾರೆ. ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್‌ ಸದಸ್ಯರಾಗಿ 45 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೊರಟ್ಟಿ ಅಭಿಮಾನಿಗಳ ಬಳಗ ನಗರದ ನೆಹರು ಮೈದಾನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕಿಕ್ಕಿರಿದು ತುಂಬಿದ್ದ ಮೈದಾನದಲ್ಲಿ ಬರೋಬ್ಬರಿ 25 ನಿಮಿಷಗಳ ಕಾಲ ಮಾತನಾಡಿದ ಸಿದ್ದರಾಮಯ್ಯ, ತಮ್ಮ ಭಾಷಣದುದ್ದಕ್ಕೂ ಹೊರಟ್ಟಿ ಹಾಗೂ ತಮ್ಮ ಸ್ನೇಹದ ಕ್ಷಣಗಳನ್ನು ಮೆಲುಕು ಹಾಕಿದರು.

ಹೊರಟ್ಟಿ ಅವರಿಗೆ ಪಕ್ಷಾತೀತವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಇಲ್ಲಿ ಎಲ್ಲ ಪಕ್ಷದವರು ಇದ್ದೇವೆ. ಹೀಗೆ ಎಲ್ಲರೂ ಸೇರಿ ಅಭಿನಂದನೆ ಸಲ್ಲಿಸಬೇಕೆಂದರೆ ಆ ವ್ಯಕ್ತಿ ಅಜಾತಶತ್ರು ಇರಬೇಕು. ಸ್ನೇಹಜೀವಿಯಾಗಿರಬೇಕು. ಎಲ್ಲರೊಂದಿಗೆ ಹೊಂದಿಕೊಂಡು ಹೋಗುವಂತಹ ಮನಸ್ಥಿತಿ ಇರಬೇಕು. ಅಂದಾಗ ಮಾತ್ರ ಎಲ್ಲರೂ ಸೇರುತ್ತೇವೆ, ಅಭಿನಂದನೆ ಸಲ್ಲಿಸುತ್ತೇವೆ. ಈ ಎಲ್ಲ ಗುಣಗಳು ಹೊರಟ್ಟಿ ಅವರಲ್ಲಿ ಉಂಟು. ಹೀಗಾಗಿ, ಎಲ್ಲರೂ ಸೇರಿ ಅಭಿನಂದಿಸುತ್ತಿದ್ದೇವೆ ಎಂದರು. ಎರಡು ತರಹದ ಮನುಷ್ಯರನ್ನು ಕಾಣುತ್ತೇವೆ. ಹುದ್ದೆ, ಅಧಿಕಾರದಿಂದ ವ್ಯಕ್ತಿತ್ವ ರೂಪಿಸಿಕೊಳ್ಳುವವರು ಒಂದು ಬಗೆಯಾದರೆ, ಇನ್ನೊಂದು ಬಗೆ, ಯಾರು ಯಾವ ಹುದ್ದೆ ಅಥವಾ ಸ್ಥಾನಕ್ಕೆ ಹೋಗುತ್ತಾರೋ ಆ ಹುದ್ದೆಯ ಹಿರಿಮೆ ಹೆಚ್ಚಿಸುತ್ತಾರೆ.

ಹೊರಟ್ಟಿ ಅವರದು ಎರಡನೆಯ ಬಗೆಯ ವ್ಯಕ್ತಿತ್ವ. ಯಾವ ಹುದ್ದೆಯನ್ನು ಹೊರಟ್ಟಿ ಅವರು ಅಲಂಕರಿಸಿದ್ದಾರೋ ಆ ಹುದ್ದೆಯ ಹಿರಿಮೆಯನ್ನು ಅವರು ಹೆಚ್ಚಿಸಿದವರು ಎಂದು ಬಣ್ಣಿಸಿದರು. 1980ರಲ್ಲಿ ಹೊರಟ್ಟಿಯವರು ಆಯ್ಕೆಯಾದರೆ, ನಾನು 1983ರಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದೆ. ಆಗಿನಿಂದಲೂ ಹೊರಟ್ಟಿ ಅವರೊಂದಿಗೆ ಸ್ನೇಹ ಇದೆ. ಪಕ್ಷಗಳು ಬೇರೆ, ಬೇರೆಯಾದರೂ ನಮ್ಮ ಸ್ನೇಹಕ್ಕೆ ಯಾವುದೇ ಬಗೆಯ ಧಕ್ಕೆ ಉಂಟಾಗಿಲ್ಲ. ಹಿಂದೆ ಹೇಗಿತ್ತೋ ಈಗಲೂ ಹಾಗೆ ಇದೆ ಎಂದು ಕೆಲ ಕ್ಷಣಗಳನ್ನು ಮೆಲುಕು ಹಾಕಿದರು. ಹಿಂದೆ ಜನತಾ ಪರಿವಾರ ಇಬ್ಭಾಗವಾದಾಗ ಸಂಯುಕ್ತ ಜನತಾದಳ ಹಾಗೂ ಜಾತ್ಯತೀತ ಜನತಾದಳಗಳನ್ನು ಒಂದು ಮಾಡಲು ಹೊರಟ್ಟಿ ಬಹಳಷ್ಟು ಶ್ರಮಿಸಿದ್ದರು.

8 ಬಾರಿ ಆಯ್ಕೆಯಾಗುವುದು ಅಷ್ಟೊಂದು ಸುಲಭವಲ್ಲ

ಅವರ ತೋಟದಲ್ಲೇ ಈ ಬಗ್ಗೆ ಎಲ್ಲರೂ ಒಪ್ಪಿಕೊಂಡಿದ್ದೇವು. ಆದರೆ, ಬೆಂಗಳೂರಿಗೆ ಹೋದ ಬಳಿಕ ಒಮ್ಮತ ಬರಲಿಲ್ಲ. ಹೊರಟ್ಟಿ ಶ್ರಮ ಫಲಕಾರಿಯಾಗಲಿಲ್ಲ ಎಂದು ನೆನಪಿಸಿಕೊಂಡರು. ಶಿಕ್ಷಕರ ಕ್ಷೇತ್ರವೆಂದರೆ ಪ್ರಜ್ಞಾವಂತ ಮತದಾರರೇ ಇರುತ್ತಾರೆ. ಅಂಥ ಕ್ಷೇತ್ರದಲ್ಲಿ ಬರೋಬ್ಬರಿ 8 ಬಾರಿ ಆಯ್ಕೆಯಾಗುವುದು ಅಷ್ಟೊಂದು ಸುಲಭವಲ್ಲ. ಆದರೆ, ಹೊರಟ್ಟಿ ಅವರ ಸ್ನೇಹತನ, ಶಿಕ್ಷಕರ ಕಷ್ಟಗಳಿಗೆ ಸ್ಪಂದಿಸುವ ಬಗೆಯಿಂದಾಗಿ ಇದು ಸಾಧ್ಯವಾಗಿದೆ. ಹೋರಾಟದ ಹೊರಟ್ಟಿ ಎಂದೇ ಕರೆಯುತ್ತೇವೆ. ಅವರು ಇದೀಗ 8ನೇ ಬಾರಿ ಗೆದ್ದಿದ್ದಾರೆ. ಮುಂದೆ 9 ಹಾಗೂ 10ನೇ ಬಾರಿಯೂ ಆ ಕ್ಷೇತ್ರದಿಂದ ಅವರೇ ಗೆದ್ದು ಬರಲಿ. ಯಾರೂ ಮುರಿಯದಂತಹ ದಾಖಲೆ ನಿರ್ಮಿಸಲಿ ಎಂದು ಆಶಿಸಿದರು. ಇದಕ್ಕೂ ಮೊದಲು ಲ್ಯಾಮಿಂಗ್ಟನ್‌ ಸ್ಕೂಲ್‌ನಿಂದ ತೆರೆದ ವಾಹನದಲ್ಲಿ ಬಸವರಾಜ ಹೊರಟ್ಟಿ ಅವರನ್ನು ಮೆರವಣಿಗೆ ಮೂಲಕ ನೆಹರು ಮೈದಾನದ ವೇದಿಕೆಗೆ ಕರೆತರಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಬದುಕಿದೆಯೋ ಸತ್ತಿದೆಯೋ ಗೊತ್ತಿಲ್ಲ: ಬಿ.ವೈ.ವಿಜಯೇಂದ್ರ ವಾಗ್ದಾಳಿ
ದುಡಿಯುವ ಮಹಿಳೆಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು