
ಹೊನ್ನಾವರ (ಜೂ.11) ಸ್ವಾರ್ಥ ಇಲ್ಲದೇ ರಾಜಕಾರಣ ಮಾಡಬಹುದು ಎನ್ನುವುದಕ್ಕೆ ನಾಮಧಾರಿ ಸಮಾಜ ಉತ್ತಮ ಉದಾಹರಣೆ. ಈ ಸಮಾಜ ಮಾಡಿದ ಉಪಕಾರಕ್ಕೆ ಕೃತಜ್ಞತಾ ಪೂರ್ವಕವಾಗಿ ಸೇವೆ ಮಾಡುತ್ತೇನೆ ಎಂದು ರಾಜ್ಯ ಮೀನುಗಾರಿಕೆ ಬಂದರು, ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಭರವಸೆ ನೀಡಿದರು.
ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಮಂಕಿ ಬ್ಲಾಕ್ ಕಾಂಗ್ರೆಸ್ಸಿನ ನಾಮಧಾರಿ ಸಮಾಜ ಭಾಂದವರ ವತಿಯಿಂದ ಶನಿವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
Karnataka election 2023: ಜನತೆಯ ಮುಂದೆ ಬಿಜೆಪಿ ಅಸಲಿ ಬಣ್ಣ ಬಯಲು ಮಾಡುತ್ತೇವೆ: ಶಾಸಕ ಮಂಕಾಳ ವೈದ್ಯ
ನನ್ನ ಮೇಲೆ ಕೆಲವೊಂದು ಅಪಪ್ರಚಾರ ಆದಂತಹ ಸಂದರ್ಭದಲ್ಲಿ ಚುನಾವಣೆ ರಾಜಕಾರಣಕ್ಕೆ ಏಕೆ ಬಂದೆ ಅನಿಸಿತ್ತು? ಇದೇ ನನ್ನ ಕೊನೆಯ ಚುನಾವಣೆ ಆಗಲಿದೆ. ಮುಂದೆ ಈ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಆಪ್ತರಲ್ಲಿ ಹೇಳಿಕೊಂಡಿದ್ದೆ. ಅಷ್ಟರ ಮಟ್ಟಿಗೆ ಬೇಸರ ಅನಿಸಿತ್ತು. ನನ್ನಿಂದ ನಾಮಧಾರಿ ಸಮಾಜಕ್ಕೆ ಅನ್ಯಾಯ ಆಗಿದೆ ಎಂದು ಬಿಂಬಿಸಿದ್ದರು. ಆದರೆ ಈ ಸಮಾಜದ ಮುಖಂಡರು ನನ್ನಿಂದ ನಾಮಧಾರಿ ಸಮಾಜಕ್ಕೆ ಅನ್ಯಾಯ ಆಗಿಲ್ಲ ಎಂದು ಬಹಿರಂಗವಾಗಿ ಬೆಂಬಲ ಸೂಚಿಸಿದರು. ರಾಜಕೀಯಕ್ಕಾಗಿ ನಾಮಧಾರಿ ಸಮಾಜ ಇಲ್ಲ, ತಮ್ಮ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಬೇಕೆನ್ನುವುದಕ್ಕೋಸ್ಕರ ಇದ್ದಂತಹದು ಎಂದು ತೋರಿಸಿಕೊಟ್ಟರು ಎಂದು ಸಮಾಜದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ನಾಮಧಾರಿ ಸಮಾಜದವರು ಚುನಾವಣಾ ಪೂರ್ವ ಸಂಘಟಿತರಾಗಿ ನೀಡಿದ ಭರವಸೆಯಂತೆ ಚುನಾವಣೆಯಲ್ಲಿ ಮತದಾನ ಮಾಡಿ ಗೆಲುವಿನ ರೂವಾರಿಗಳಲ್ಲಿ ಓರ್ವರಾಗಿದ್ದೇವೆ. ಚುನಾವಣೆಗೆ ಮಾತ್ರ ಸಿಮೀತವಾಗದೇ ಚುನಾವಣಾ ನಂತರವು ಸಂಘಟಿತವಾಗಿ ಇಂದು ಸಚಿವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ ಎಂದರು.
ಒಂದು ಕಾಲದಲ್ಲಿ ನಾಮಧಾರಿ ಸಮಾಜ ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ನಾಮಧಾರಿ ಸಮಾಜ ಎನ್ನುವಂತ ವಾತಾವರಣವಿತ್ತು. ಬದಲಾದ ಕಾಲಘಟ್ಟದಲ್ಲಿ ಕೊಂಚ ವ್ಯತ್ಯಾಸವಾಯಿತು. ಆದರೂ ನಾವು ನಮ್ಮ ಸಮಾಜದ ಬೃಹತ್ ಸಮಾವೇಶದ ಮೂಲಕ ಈ ಬಾರಿ ಕಾಂಗ್ರೆಸ್ಸಿನ ಮಂಕಾಳ ವೈದ್ಯರಿಗೆ ಬೆಂಬಲ ಸೂಚಿಸಿ ಗೆಲ್ಲಿಸಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.
ವಕೀಲರಾದ ಎಂ.ಎನ್. ಸುಬ್ರಹ್ಮಣ್ಯ ಮಾತನಾಡಿ, ಇಂದು ಮಂಕಾಳ ವೈದ್ಯರು ಬಹುಸಂಖ್ಯಾತ ನಾಮಧಾರಿ ಸಮಾಜದ ಪ್ರೀತಿಗೆ ಪಾತ್ರರಾಗಿದ್ದಾರೆ. ನಾಮಧಾರಿಗಳು ಸ್ವಾಭಿಮಾನಿಗಳು, ಜಾತಿವಾದಿಗಳಲ್ಲ ಎನ್ನುವುದು ನಿಮ್ಮನ್ನು ಗೆಲ್ಲಿಸುವುದರ ಮೂಲಕ ತೋರಿಸಿಕೊಟ್ಟಿದ್ದಾರೆ. ವೈದ್ಯರು ಎಲ್ಲ ಸಮಾಜದ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.
ನಾಮಧಾರಿ ಸಮಾಜದ ತಾಲೂಕಾಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿ, ಮಂಕಾಳ ವೈದ್ಯರು ಮಾಜಿ ಆಗಿರಲಿ, ಹಾಲಿ ಆಗಿರಲಿ ಸದಾ ಜನರೊಂದಿಗೆ ಬೆರೆತಿರುವವರು. ಸೋಲಿನಿಂದ ಧೃತಿಗೆಡದೇ ಕ್ಷೇತ್ರದ ಜನರ ಸಂಕಷ್ಟಆಲಿಸಿದರು. ತಮ್ಮ ಕೈಲಾದ ಸಹಾಯ ನೀಡಿದವರು. ಅದಕ್ಕಾಗಿ ಜನತೆ ಇಂದು ಅವರ ಕೈ ಹಿಡಿದು ಬೆಂಬಲಿಸಿ ಗೆಲ್ಲಿಸಿದ್ದಾರೆ ಎಂದು ಗುಣಗಾನ ಮಾಡಿದರು.
ನಾಮಧಾರಿ ಸಮಾಜದಿಂದ ಸಚಿವ ಮಂಕಾಳ ವೈದ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ರಾಯಚೂರು: ವಿರೋಧದ ನಡುವೆಯೂ ಇಂದು ನಗರಕ್ಕೆ ಉಸ್ತುವಾರಿ ಸಚಿವ ಪಾಟೀಲರು!
ವೇದಿಕೆಯಲ್ಲಿ ನಾಮಧಾರಿ ಸಂಘದ ತಾಲೂಕ ಉಪಾಧ್ಯಕ್ಷ ವಿ.ಜಿ. ನಾಯ್ಕ, ಭಟ್ಕಳ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ವೆಂಕಟೇಶ ನಾಯ್ಕ, ಮಾಜಿ ಜಿಪಂ ಸದಸ್ಯೆ ಪುಷ್ಪಾ ನಾಯ್ಕ, ಮಾಜಿ ಸೈನಿಕರಾದ ವಾಮನ ನಾಯ್ಕ ಉಪಸ್ಥಿತರಿದ್ದರು.
ಮಾಜಿ ತಾಪಂ ಸದಸ್ಯ ಲೊಕೇಶ ನಾಯ್ಕ ಸ್ವಾಗತಿಸಿದರು. ಮಧುರಾ, ಮಂದಾರ ನಾಯ್ಕ ಪ್ರಾರ್ಥಿಸಿದರು. ಮಾದೇವ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಐ.ವಿ. ನಾಯ್ಕ ವಂದಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.