ನನ್ನ ರಾಜಕೀಯ ಪ್ರವೇಶಕ್ಕೆ ಈಶ್ವರಪ್ಪನವರೇ ಕಾರಣ. ಅವರು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಹಮ್ಮಿಲ್ಲದೆ ಪ್ರೀತಿಯಿಂದ ಮಾತನಾಡಿ, ಮಾರ್ಗದರ್ಶನ ಮಾಡುವುದು ಅವರ ದೊಡ್ಡತನ ಎಂದು ಚಿತ್ರನಟಿ ತಾರಾ ಅನುರಾಧ ಬಣ್ಣಿಸಿದರು.
ಶಿವಮೊಗ್ಗ (ಜೂ.11) ನನ್ನ ರಾಜಕೀಯ ಪ್ರವೇಶಕ್ಕೆ ಈಶ್ವರಪ್ಪನವರೇ ಕಾರಣ. ಅವರು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಹಮ್ಮಿಲ್ಲದೆ ಪ್ರೀತಿಯಿಂದ ಮಾತನಾಡಿ, ಮಾರ್ಗದರ್ಶನ ಮಾಡುವುದು ಅವರ ದೊಡ್ಡತನ ಎಂದು ಚಿತ್ರನಟಿ ತಾರಾ ಅನುರಾಧ ಬಣ್ಣಿಸಿದರು.
ಇಲ್ಲಿನ ನಗರದ ಕುವೆಂಪು ರಂಗಮಂದಿರದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರ 75ನೇ ಅಮೃತ ಸಂಭ್ರಮ ಪ್ರಯುಕ್ತ ಶ್ರೀ ಮಾರಿಕಾಂಬಾ ಮೈಕ್ರೋ ಫೈನಾನ್ಸ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಲದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
undefined
ನೂರಾರು ಸಂಘ ಸಂಸ್ಥೆಗಳಿಗೆ ಸಾಲ ನೀಡಿದರೂ ಕೂಡ ಒಂದೇ ಒಂದು ಎನ್‌ಪಿಎ ಇಲ್ಲದೆ ಸಾಲ ಮರುಪಾವತಿ ಮಾಡಿರುವುದು ಒಂದು ದೊಡ್ಡ ಸಾಧನೆ. ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿರುವುದು ಕೂಡ ಖುಷಿಪಡುವ ವಿಚಾರ. ಮಕ್ಕಳು ಸಾಧನೆ ಮಾಡಿದಾಗ ತಂದೆ-ತಾಯಿಗಳಿಗೆ ಮೊದಲು ಅತ್ಯಂತ ಖುಷಿಯಾಗುತ್ತದೆ. ಇಂದು ಪ್ರತಿಭಾ ಪುರಸ್ಕಾರ ಪಡೆದವರನ್ನು ನೋಡಿ ಇನ್ನೂ ಹೆಚ್ಚಿನ ಮಕ್ಕಳು ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.
ಬಿಜೆಪಿ ಈಶ್ವರಪ್ಪ ಕೈಬಿಡಲ್ಲ, ಮುಂದೆ ಉನ್ನತ ಹುದ್ದೆ ಸಿಗಲಿದೆ: ಕಾಶಿ ಪೀಠದ ಶ್ರೀಗಳು
ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಬೆಕ್ಕಿನಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಜಯಂತಿ ಆಚರಣೆ ಈಶ್ವರಪ್ಪನವರಿಗೆ ಕೇವಲ ನೆಪ ಮಾತ್ರ. ಆ ಸಂದರ್ಭವನ್ನಿಟ್ಟುಕೊಂಡು ಈಶ್ವರಪ್ಪನವರ ಕುಟುಂಬ ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಹಿಳೆಯರಿಗೆ ಆರ್ಥಿಕ ಸಹಕಾರ ನೀಡಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾರಿಕಾಂಬಾ ಮೈಕ್ರೋ ಫೈನಾನ್ಸ್ ಮಾಡುತ್ತಾ ಬಂದಿದ್ದು, ದೊಡ್ಡ ಸಾಧನೆಯಾಗಿದೆ. ಅಲ್ಲದೆ ವಸುದೈವ ಕುಟುಂಬಕಂ ಎನ್ನುವಂತೆ ಎಲ್ಲರೂ ತಮ್ಮ ಕುಟುಂಬದ ರೀತಿಯಲ್ಲಿ ಅವರು ಅನೇಕ ರೀತಿಯ ನೆರವು ನೀಡುತ್ತಾ, ಜನ್ಮದಿನದ ಸಂದರ್ಭದಲ್ಲಿ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ಕನ್ನಡಕ ವಿತರಣೆ, ಪುಣ್ಯಕ್ಷೇತ್ರಗಳಿಗೆ ಮಹಿಳೆಯರಿಗೆ ಪ್ರವಾಸ ಈ ರೀತಿಯಗಿ ಅನೇಕ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಎಲ್ಲರ ಕಣ್ಮಣಿಯಾಗಿದ್ದಾರೆ ಎಂದರು.
ಮಹಿಳೆಯರಿಂದಲೇ ಅತ್ಯುತ್ತಮವಾಗಿ ಕುಟುಂಬ ನಿರ್ವಹಣೆ ಸಾಧ್ಯ. ಮನೆಯೊಡತಿ ಇದ್ದಾಗ ಮಾತ್ರ ಮನೆಗೆ ಲಕ್ಷಣ. ಒಂದು ಮನೆಯನ್ನು ಒಳಗಿರುವ ವಸ್ತುಗಳ ಮೇಲೆ ಅಳೆಯುವುದಲ್ಲ. ಆ ಮನೆಯ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ನೋಡಿ ಅಳೆಯಬೇಕು. ಎಲ್ಲವನ್ನೂ ಒಳಗೊಳ್ಳುವ ಶಕ್ತಿ ಇರುವುದು ಮಾತೆಗೆ ಮಾತ್ರ. ಅನೇಕ ಕುಟುಂಬಗಳು ಇತ್ತೀಚಿನ ದಿನಗಳಲ್ಲಿ ಮನೆಯೊಡತಿ ಇಲ್ಲದೆ ಅನಾಥವಾಗಿವೆ. ಕುಟುಂಬವನ್ನು ಸಂಸ್ಕಾರ ಸಂಸ್ಕೃತಿಯಿಂದ ಮುನ್ನಡೆಸುವ ಜವಾಬ್ದಾರಿ ತಾಯಂದಿರದ್ದು. ಅನೇಕ ಪುರುಷರು ದುಶ್ಚಟ ಮತ್ತು ಅವ್ಯವಹಾರಗಳಿಗೆ ಬಲಿಯಾಗಿ ಕುಟುಂಬಕ್ಕೆ ಮಾರಕವಾಗುತ್ತಾರೆ. ಈ ಸಂದರ್ಭದಲ್ಲಿ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಹೆಣ್ಣು ಮಕ್ಕಳು ಅಚ್ಚುಕಟ್ಟಾಗಿ ರೂಪಿಸುತ್ತಾರೆ. ಅವರಿಗೆ ನೀಡುವ ಆರ್ಥಿಕ ಸಹಾಯ ವ್ಯರ್ಥವಾಗುವುದಿಲ್ಲ ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೆ.ಎಸ್. ಈಶ್ವರಪ್ಪ, ನಿಮ್ಮೆಲ್ಲರ ಪ್ರೀತಿ-ಆಶೀರ್ವಾದ ಪಡೆದಿರುವುದು ನನ್ನ ಸೌಭಾಗ್ಯ. ನನ್ನ ಇಡೀ ಜೀವನ ನನ್ನ ಧರ್ಮ ಮತ್ತು ನನ್ನ ದೇಶಕ್ಕಾಗಿ ಮುಡಿಪಾಗಿಡುತ್ತೇನೆ. ಪ್ರತಿಯೊಂದು ಮನೆಯಲ್ಲಿ ಕೂಡ ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ದೇಶದ ಬಗ್ಗೆ ಒಲವು ಬೆಳೆಸಬೇಕು. ನಮ್ಮ ದೇಶದಲ್ಲಿ ಚಾರಿತ್ರ್ಯಕ್ಕೆ ಬಹಳ ಮಹತ್ವ ಇದೆ. ಸಮಾಜ ಸುಧಾರಣೆ ಆಗಬೇಕಾದರೆ ತಂದೆ-ತಾಯಿ ಗುರುಗಳನ್ನು ಗೌರವಿಸಬೇಕು. ನಮ್ಮ ಶ್ರದ್ಧಾ ಕೇಂದ್ರ ಮತ್ತು ಗೋಮಾತೆಗೆ ಗೌರವ ಕೊಡಬೇಕು. ನಿಮ್ಮ ಅಭಿಮಾನಕ್ಕೆ ನಾನು ಚಿರಋುಣಿ ಎಂದರು.
ಕೆ.ಎಸ್. ಈಶ್ವರಪ್ಪಗೆ ಜೂನ್ 30 ನಿರ್ಣಯಕ ದಿನ: ಸಂತೋಷ್ ಆತ್ಮಹತ್ಯೆ ಬಿ ರಿಪೋರ್ಟ್ ರದ್ದಾಗುವ ಭೀತಿ
ಪ್ರಾಸ್ತಾವಿಕವಾಗಿ ಮಾತನಾಡಿದ ಕೆ.ಈ. ಕಾಂತೇಶ್, ಮಾರಿಕಾಂಬಾ ಮೈಕ್ರೋ ಫೈನಾನ್ಸ್ ಕೇವಲ ವ್ಯಾವಹಾರಿಕ ಸಂಸ್ಥೆಯಲ್ಲ. ಸಂಸ್ಥೆಯ ಲಾಭದ ಅರ್ಧದಷ್ಟುಮಹಿಳೆಯರ ಮತ್ತ ಸದಸ್ಯರ ಮಕ್ಕಳಿಗಾಗಿ ವಿನಿಯೋಗಿಸುತ್ತಿದ್ದೇವೆ. ಸುಮಾರು 70 ಕೋಟಿಯಷ್ಟುಸಾಲವನ್ನು 1200 ಮಹಿಳಾ ಸಂಘಗಳಿಗೆ ವಿತರಿಸಿದ್ದೇವೆ. 500ಕ್ಕೂ ಹೆಚ್ಚು ಅಂಕ ಪಡೆದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ 103 ವಿದ್ಯಾರ್ಥಿಗಳಿಗೆ ಈ ಬಾರಿ ಸ್ಕಾಲರ್‌ಶಿಪ್ ನೀಡಿದ್ದೇವೆ. ಕಳೆದ ಬಾರಿ ಸುಮಾರು 9ಸಾವಿರ ಹೆಣ್ಣುಮಕ್ಕಳಿಗೆ ಸೀರೆ ಮತ್ತು ಬಾಗಿನವನ್ನು ನೀಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಶಂಕರ್ ಗನ್ನಿ, ಮಹಾನಗರ ಪಾಲಿಕೆ ಮೇಯರ್ ಎಸ್.ಶಿವಕುಮಾರ್, ಉಪಮೇಯರ್ ಲಕ್ಷ್ಮಿ ಶಂಕರ ನಾಯಕ್, ವಿಜಯ್‌ದೇವ್ ಮತ್ತಿತರರಿದ್ದರು.