ದುರಹಂಕಾರ, ಸ್ವಾರ್ಥ ರಾಜಕಾರಣ ಶಾಶ್ವತವಲ್ಲ: ಶಾಸಕ ರಮೇಶ ಜಾರಕಿಹೊಳಿ

By Kannadaprabha News  |  First Published Jun 21, 2024, 6:49 PM IST

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ದಬ್ಬಾಳಿಕೆ, ಭೂ ಕಬಳಿಕೆ ಅಂತಹ ಘಟನೆಗಳಿಂದ ಬಿಜೆಪಿಗೆ 50 ಸಾವಿರ ಲೀಡ್ ಸಿಕ್ಕಿದೆ. ದುರಹಂಕಾರ ಹಾಗೂ ಸ್ವಾರ್ಥ ರಾಜಕಾರಣ ಶಾಶ್ವತವಲ್ಲ. ಜನತೆ ಬುದ್ಧಿವಂತರಿದ್ದು ಸಮಯಕ್ಕೆ ಸರಿಯಾಗಿ ತಕ್ಕಪಾಠ ಕಲಿಸುತ್ತಾರೆ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಗುಡುಗಿದರು. 


ಗೋಕಾಕ (ಜೂ.21): ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ದಬ್ಬಾಳಿಕೆ, ಭೂ ಕಬಳಿಕೆ ಅಂತಹ ಘಟನೆಗಳಿಂದ ಬಿಜೆಪಿಗೆ 50 ಸಾವಿರ ಲೀಡ್ ಸಿಕ್ಕಿದೆ. ದುರಹಂಕಾರ ಹಾಗೂ ಸ್ವಾರ್ಥ ರಾಜಕಾರಣ ಶಾಶ್ವತವಲ್ಲ. ಜನತೆ ಬುದ್ಧಿವಂತರಿದ್ದು ಸಮಯಕ್ಕೆ ಸರಿಯಾಗಿ ತಕ್ಕಪಾಠ ಕಲಿಸುತ್ತಾರೆ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಗುಡುಗಿದರು. ನಗರದ ಶಾಸಕರ ಕಚೇರಿ ಎದುರು ಗುರುವಾರ ಬಿಜೆಪಿ ನಗರ ಮತ್ತು ಗ್ರಾಮೀಣ ಮಂಡಳ ವತಿಯಿಂದ ನೂತನ ಸಂಸದ ಜಗದೀಶ್ ಶೆಟ್ಟರ್ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ಬಡವರ ಕಾಳಜಿಯಿಂದ ಸತತವಾಗಿ ಆಯ್ಕೆಯಾಗಿ ಬರುತ್ತಿದ್ದೇವೆ.  ವಿಧಾನಸಭೆ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗಿದ್ದರಿಂದ ಸ್ವಲ್ಪ ನಾನು ನೊಂದಿದ್ದೆ. ಜನರು ನನ್ನ ಮೇಲಿಟ್ಟ ಪ್ರೀತಿ ಮತ್ತು ಅಭಿಮಾನದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದು, ನನಗೆ ಸಂತಸ ತಂದಿದೆ. 

ದೇಶದಲ್ಲಿ ಎಲ್ಲ ಸಮುದಾಯದವರು ಶಾಂತಿ ಸೌಹಾರ್ದತೆಯಿಂದ ಬದುಕಲು ನರೇಂದ್ರ ಮೋದಿಯಂತಹ ನಾಯಕತ್ವದಿಂದ ಮಾತ್ರ ಸಾಧ್ಯ. ನಾವೆಲ್ಲರೂ ಪಕ್ಷವನ್ನು ಬಲಿಷ್ಠಗೊಳಿಸಲು ಶ್ರಮಿಸೋಣ ಎಂದು ಕರೆ ನೀಡಿದರು. ಈ ಗೆಲುವು ಬೆಳಗಾವಿ ಲೋಕಸಭೆ ಮತಕ್ಷೇತ್ರದ ಕಾರ್ಯಕರ್ತರ ಹಾಗೂ ಜನರ ಗೆಲುವಾಗಿದೆ. ಈ ಲೋಕಸಭೆ ಚುನಾವಣೆಯಲ್ಲಿ ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಇದರಲ್ಲಿ ರಮೇಶ ಜಾರಕಿಹೊಳಿ ಪಾತ್ರ ಇಲ್ಲ. ಎಲ್ಲ ಕಾರ್ಯಕರ್ತರ ಸಹಕಾರವಿದೆ ಎಂದು ತಿಳಿಸಿದರು. ಸ್ನೇಹಿತರ ಬಳಿ ಚಾಲೆಂಜ್ ಮಾಡಿ ಜಗದೀಶ ಶೆಟ್ಟರ ಅವರು 1.50 ಲಕ್ಷಕ್ಕಿಂತ ಕಡಿಮೆ ಮತದಿಂದ ಗೆದ್ದರೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದೆ. ಆದರೆ, ಜನರು ಬಿಜೆಪಿಯನ್ನು ಗೆಲ್ಲಿಸಿ ನನಗೆ ಗೌರವ ನೀಡಿದ್ದಾರೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಪಕ್ಷಕ್ಕೆ ಹೆಚ್ಚಿಗೆ ಮತ ಬಂದಿದ್ದು ಸಂತೋಷವುಂಟಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

Tap to resize

Latest Videos

undefined

ಒಬ್ಬರ ಜೇಬಿನಿಂದ ಕದ್ದು ಇನ್ನೊಬ್ಬರಿಗೆ ಗ್ಯಾರಂಟಿ ಕೊಟ್ಟಿದ್ದೇ ರಾಜ್ಯ ಸರ್ಕಾರದ ಸಾಧನೆ: ಬೊಮ್ಮಾಯಿ

ನೀರಾವರಿ ಯೋಜನೆ ನಿಲ್ಲಿಸಲು ಮಹಾನಾಯಕ ಪ್ಲಾನ್: ನಗರದ ಯೋಗಿಕೊಳ್ಳ ಪ್ರದೇಶದಲ್ಲಿ 6 ಟಿಎಂಸಿ ನೀರು ನಿಲ್ಲಿಸಲು ಉದ್ದೇಶಿಸಿ ಮಾಡಲಾದ ಘಟ್ಟಿ ಬಸವಣ್ಣ ಡ್ಯಾಂ ನಿರ್ಮಾಣ ಯೋಜನೆಯನ್ನು ನಿಲ್ಲಿಸಲು ಮಹಾನಾಯಕ ಪ್ಲಾನ್ ಮಾಡಿ ಅಧಿಕಾರಿಗಳಿಂದ ಸತೀಶ ಜಾರಕಿಹೊಳಿ ಹೆಸರು ಹೇಳಿಸಿದ್ದ. ಆದರೆ, ನಾನು ಸತೀಶ ಜಾರಕಿಹೊಳಿ ಅವರೊಂದಿಗೆ ಮಾತನಾಡಿ ಇದರ ಬಗ್ಗೆ ಕೇಳಿದಾಗ ಆ ಯೋಜನೆ ನಿಲ್ಲಿಸುವ ಉದ್ದೇಶ ನನ್ನದಿಲ್ಲ ಎಂದಿದ್ದಾರೆ. ಮಹಾನಾಯಕ ಸುಳ್ಳು ಹೇಳಿ ಯೋಜನೆ ನಿಲ್ಲಿಸುವ ಹುನ್ನಾರ ನಡೆಸಿದ್ದ. ಆದರೆ, ಅದು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಅದನ್ನು ಅನುಷ್ಠಾನಗೊಳಿಸಿ ಈ ಭಾಗದ ರೈತ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು. ಸಿದ್ದರಾಮಯ್ಯ ಸಿಎಂ ಇರುವವರೆಗೆ ಕಾಂಗ್ರೆಸ್ ಸರ್ಕಾರ ಇರುತ್ತದೆ. ಸಿದ್ದರಾಮಯ್ಯ ಅವಧಿ ಮುಗಿದ ನಂತರ ಹೇಳಲಾಗಲ್ಲ ಎಂದು ಭವಿಷ್ಯ ನುಡಿದರು.

ನೂತನ ಸಂಸದ ಜಗದೀಶ್ ಶೆಟ್ಟರ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಜನ ಜಾತಿ, ಮತ, ಪಂಥ ನೋಡಿ ಮತಹಾಕಿಲ್ಲ. ಬದಲಾಗಿ ಅಭಿವೃದ್ಧಿ ಬಲ ಗೆದ್ದಿದೆ. ಹಣವನ್ನು ಧಿಕ್ಕರಿಸಿ ಪ್ರಾಮಾಣಿಕತೆಗೆ ಜಯ ಸಿಕ್ಕಿದೆ. ಇದು ಜನರ, ಕಾರ್ಯಕರ್ತರ ವಿಜಯವಾಗಿದೆ. ನಾನು ಚುನಾವಣೆ ಗೆಲ್ಲಲಿಕ್ಕೆ ರಮೇಶ ಜಾರಕಿಹೊಳಿ ಅವಿರತ ಪರಿಶ್ರಮ ಪಟ್ಟಿದ್ದಾರೆ. ಜನರು ತೀರ್ಮಾನ ಮಾಡಿ 1.70 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸಿದ್ದಾರೆ. ನನಗೆ ಜನರ ಸಮಸ್ಯೆ ಆಲಿಸುವುದು ಮುಖ್ಯ. ಹಾಗಾಗಿ ಸನ್ಮಾನ, ಅಭಿನಂದನೆ ಬಿಟ್ಟು ಬರುವ ದಿನಗಳಲ್ಲಿ ಜನಪರವಾದ ಸೇವೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬಸವ ತತ್ವವೇ ಶಾಶ್ವತ: ಸ್ವಾಮೀಜಿಗಳ ಸಮೂಹಕ್ಕೆ ಧನ್ಯವಾದ ಅರ್ಪಿಸಿದ ಸಿಎಂ ಸಿದ್ದರಾಮಯ್ಯ

ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶ ಸುರಕ್ಷಿತವಾಗಿದೆ. ಪ್ರಧಾನಿಯಾದ ಮರುದಿನವೇ ತಮ್ಮ ಕೆಲಸ ಪ್ರಾರಂಭ ಮಾಡಿರುವ ಅವರು ದೇಶ ಅಭಿವೃದ್ಧಿ ಪಥದತ್ತ ಸಾಗಲು ಮುನ್ನುಡಿ ಬರೆದಿದ್ದಾರೆ. ಇದನ್ನು ಕಾಂಗ್ರೆಸ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಗ್ಯಾರಂಟಿ ಯೋಜನೆಗಳನ್ನು ಜನ ಮೆಚ್ಚಿಲ್ಲ, ಕಾಂಗ್ರೆಸ್‌ನ ಶಾಸಕರು ಸಹ ಗ್ಯಾರಂಟಿ ವಿರುದ್ಧ ಬಂಡಾಯ ಎದ್ದಿದ್ದಾರೆ. ಮುಂದೆ ಗ್ಯಾರಂಟಿ ಬಂದ್ ಮಾಡಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಗ್ಯಾರಂಟಿಯಂತಹ ಯೋಜನೆಗಳು ತಾತ್ಕಾಲಿಕವಾಗಿವೆ. ಗ್ಯಾರಂಟಿಯಿಂದ ಖಜಾನೆ ಖಾಲಿಯಾದ ಪರಿಣಾಮ ತೈಲ ಬೆಲೆ ಏರಿಸಿದ್ದಾರೆ. ಒಂದು ಕಡೆ ಕೊಟ್ಟು, ಇನ್ನೊಂದು ಕಡೆ ಜಗ್ಗುವ ಕಾರ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಮಾಜಿ ಶಾಸಕ ಎಂ.ಎಲ್.ಮುತ್ತೆನ್ನವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಮುಖಂಡರಾದ ಕಿರಣ ಜಾಧವ, ಲಕ್ಷ್ಮಣ್ ತಪಸಿ, ಅಶೋಕ ಪಾಟೀಲ ಉಪಸ್ಥಿತರಿದ್ದರು.

click me!