ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಕಾಮಗಾರಿಗಳಿಗೆ ನಿರ್ವಹಣಾ ವೆಚ್ಚವನ್ನೂ ಭರಿಸಲು ರಾಜ್ಯ ಸರ್ಕಾರ ಒದ್ದಾಡುತ್ತಿದೆ. ಅಷ್ಟಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿರ್ವಹಿಸಲು ಡೀಸೆಲ್, ಪೆಟ್ರೋಲ್ ಬೆಲೆಗಳನ್ನು ಹೆಚ್ಚಿಸಿ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂದು ಆರೋಪಿಸಿದರು.
ಬ್ಯಾಡಗಿ (ಜೂ.21): ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ ಎಂದು ಸುಳ್ಳು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸಕ್ತ ವರ್ಷ ರು.1.05 ಲಕ್ಷ ಕೋಟಿ ಸಾಲ ಮಾಡಿದ್ದು, 25 ಸಾವಿರ ಎಕರೆ ಸರ್ಕಾರದ ಭೂಮಿ ಮಾರಾಟಕ್ಕಿಟ್ಟಿದೆ, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಒಬ್ಬರ ಜೇಬಿನಿಂದ ಕದ್ದು ಇನ್ನೊಬ್ಬರಿಗೆ ಕೊಟ್ಟಿದ್ದೇ ಪ್ರಸ್ತುತ ರಾಜ್ಯ ಸರ್ಕಾರದ ಈವರೆಗಿನ ಸಾಧನೆ ಎಂದು ನೂತನ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು. ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದ ಸಭಾಭವನದಲ್ಲಿ ಗುರುವಾರ ತಾಲೂಕು ಬಿಜೆಪಿ ಘಟಕ ನೂತನ ಸಂಸದರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಕಾಮಗಾರಿಗಳಿಗೆ ನಿರ್ವಹಣಾ ವೆಚ್ಚವನ್ನೂ ಭರಿಸಲು ರಾಜ್ಯ ಸರ್ಕಾರ ಒದ್ದಾಡುತ್ತಿದೆ. ಅಷ್ಟಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿರ್ವಹಿಸಲು ಡೀಸೆಲ್, ಪೆಟ್ರೋಲ್ ಬೆಲೆಗಳನ್ನು ಹೆಚ್ಚಿಸಿ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂದು ಆರೋಪಿಸಿದರು. ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಗ್ಯಾರಂಟಿ ಯೋಜನೆಗಳನ್ನು ನೀಡಿತ್ತು. ಬಿಎಸ್‌ವೈ ಮುಖ್ಯಮಂತ್ರಿಯಾಗಿದ್ದಾಗ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿದ್ದೇವೆ. ಇನ್ನೂ ನಾನು ಮುಖ್ಯಮಂತ್ರಿಯಾಗಿದ್ದಾಗ ಎಸ್ಸಿ-ಎಸ್ಟಿ ಸಮುದಾಯಕ್ಕೆ 75 ಯೂನಿಟ್ ಉಚಿತ ವಿದ್ಯುತ್ ನೀಡಿದ್ದೆ. 2013-18ರಲ್ಲಿ ಕಾಂಗ್ರೆಸ್ ಮಾಡಿದ 13 ಸಾವಿರ ಕೋಟಿ ಸಾಲವನ್ನು ತೀರಿಸಿಯೂ ಸರಪ್ಲಸ್ ಬಜೆಟ್ ಮಂಡಿಸಿದ್ದೇನೆ ಎಂದರು.
ಬಸವ ತತ್ವವೇ ಶಾಶ್ವತ: ಸ್ವಾಮೀಜಿಗಳ ಸಮೂಹಕ್ಕೆ ಧನ್ಯವಾದ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಮುಂದಿನ ಪೀಳಿಗೆಗೆ ಚಿಪ್ಪು ಕೊಡುವ ಸರ್ಕಾರ: ಹಾವೇರಿ ಲೋಕಸಭಾ ಕ್ಷೇತ್ರ ವಿಭಿನ್ನವಾಗಿದೆ. ಫಲವತ್ತಾದ ಕೃಷಿ ಭೂಮಿ ಇದ್ದು, ನೈಸರ್ಗಿಕ ಮತ್ತು ಮಾನವ ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳಬೇಕು. ಸಮಸ್ಯೆಗಳ ಜೊತೆಗೆ ಜೀವನ ಮಾಡುವ ಜನರ ಬಳಿಯೇ ಪರಿಹಾರವಿದೆ. ಜನರಿದ್ದಲ್ಲಿ ಅಭಿವೃದ್ಧಿ ಮಾಡೋಣ ಅದಕ್ಕಾಗಿಯೇ ಮುಖ್ಯಮಂತ್ರಿಯಾಗಿದ್ದ ವೇಳೆ ಗ್ರಾಮ-1 ಅನುಷ್ಠಾನಗೊಳಿಸಿದ್ದೆ, ಪ್ರಸ್ತುತ ಸರ್ಕಾರದ ಆಡಳಿತ ವೈಖರಿಯಿಂದ ರಾಜ್ಯ ಸರ್ಕಾರ 10 ವರ್ಷ ಹಿಂದಕ್ಕೆ ಹೋಗಿದ್ದು ಮುಂದಿನ ಪೀಳಿಗೆಗೆ ಚಿಪ್ಪು ಕೊಡುವ ಸರ್ಕಾರ ಇದಾಗಿದೆ ಎಂದರು.
ಲೋಕಸಭೆ ಚುನಾವಣೆ ವೇಳೆ 4 ಸಾವಿರ ರು. ಹಣ ಹಾಕಿದ ರಾಜ್ಯ ಸರ್ಕಾರ ನೀತಿ ಸಂಹಿತೆ ಉಲ್ಲಂಘನೆ ಮಾಡಿತ್ತು. ಆದರೆ ಇದನ್ನು ಚುನಾವಣೆ ಆಯೋಗ ಪ್ರಶ್ನಿಸಲಿಲ್ಲ, ಕಾಂಗ್ರೆಸ್ ಭಾಷಣದಿಂದ ಭಯ ಹುಟ್ಟಿತ್ತು. ಆದರೆ ಪ್ರಜ್ಞಾವಂತ ರಾಜಕಾರಣಿ ನರೇಂದ್ರ ಮೋದಿ ಚುನಾವಣೆ ಮುಗಿದ ಬಳಿಕ ರೈತರ ಖಾತೆಗಳಿಗೆ ಹಣ ನೀಡಿದ್ದಾರೆ. ನಾನು ವಿಭಿನ್ನವಾದ ಸಂಸದನಾಗಿದ್ದು ಜನರ ಪರವಾದ ಮಾತುಗಳನ್ನು ದೆಹಲಿಯಲ್ಲಿರುವ ಪ್ರಧಾನಮಂತ್ರಿಗಳಿಗೆ ತಲುಪಿಸುತ್ತೇನೆ, ಅಭೂತಪೂರ್ವ ಜಯತಂದು ಕೊಟ್ಟಿದ್ದಕ್ಕೆ ಅಭಿನಂದಿಸುತ್ತೇನೆ ಎಂದರು.
ಖಜಾನೆ ಖಾಲಿ ಆಗಿ ಸರ್ಕಾರಿ ಜಮೀನನ್ನು ರಾಜ್ಯ ಸರ್ಕಾರ ಮಾರುತ್ತಿದೆ: ಸಂಸದ ಬೊಮ್ಮಾಯಿ ಆರೋಪ
ಬಿಟ್ಟಿ ಭಾಗ್ಯಗಳ ನಡುವೆ ತೂರಿದ ಮುನ್ನಡೆ: ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಫಲಿತಾಂಶ ಬಂದ ಬಳಿಕ ಮತದಾರರ ಮೇಲೆ ನಂಬಿಕೆ ಹುಸಿಯಾಗಲಿಲ್ಲ, ಆದರೆ ನಿರೀಕ್ಷಿತ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ರೈತರ ಶಾಪ ತಟ್ಟಿದೆ. ಬಿಜೆಪಿ ಜವಾಬ್ದಾರಿ ಪಕ್ಷವಾಗಿದ್ದು, ಬ್ಯಾಡಗಿ ಮತಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನ, ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ, ಮಾಜಿ ಅಧ್ಯಕ್ಷ ಹಾಲೇಶ ಜಾಧವ, ಮುಖಂಡರಾದ ಮುರಿಗೆಪ್ಪ ಶೆಟ್ಟರ, ಶಿವಬಸಪ್ಪ ಕುಳೇನೂರ, ವಿರೂಪಾಕ್ಷಪ್ಪ ಕಡ್ಲಿ, ಬಸವರಾಜ ಛತ್ರದ, ವೀರಭದ್ರಪ್ಪ ಗೊಡಚಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಶಂಕ್ರಣ್ಣ ಮಾತನವರ, ಸುರೇಶ ಅಸಾದಿ, ರಾಮಣ್ಣ ಕೋಡಿಹಳ್ಳಿ, ರಾಜು ಹೊಸಕೇರಿ, ಸರೋಜಾ ಉಳ್ಳಾಗಡ್ಡಿ, ವಿದ್ಯಾಶೆಟ್ಟಿ ಹಾಗೂ ಇನ್ನಿತರರಿದ್ದರು.