KPSC Scam: ಪಶು ವೈದ್ಯರ ನೇಮಕದಲ್ಲಿ 400 ಕೋಟಿ ಲಂಚ: ಬಿವೈ ವಿಜಯೇಂದ್ರ ಗಂಭೀರ ಆರೋಪ

Ravi Janekal   | Kannada Prabha
Published : Jul 29, 2026, 05:52 AM IST
Rs400 crore bribe in veterinary doctor recruitment scam by Vijayendra makes serious allegation.

ಸಾರಾಂಶ

ಕೆಪಿಎಸ್‌ಸಿ(KPSC) ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕದಲ್ಲಿ ಸುಮಾರು ₹400 ಕೋಟಿಗಳಷ್ಟು ಲಂಚದ ವಹಿವಾಟು ನಡೆದಿದೆ ಎಂದು ಆಪಾದಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇದರಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪಾಲು ಎಷ್ಟಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರು (ಜು.29): ಕೆಪಿಎಸ್‌ಸಿ(KPSC) ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕದಲ್ಲಿ ಸುಮಾರು ₹400 ಕೋಟಿಗಳಷ್ಟು ಲಂಚದ ವಹಿವಾಟು ನಡೆದಿದೆ ಎಂದು ಆಪಾದಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(BY Vijayendra), ಇದರಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪಾಲು ಎಷ್ಟಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಂಗಳವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಉದ್ಯೋಗಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಪಿಎಸ್ಸಿ ಮೂಲಕ ನಡೆದ ಎಲ್ಲಾ ನೇಮಕಾತಿ ಅಕ್ರಮಗಳನ್ನು ಸಿಬಿಐ ತನಿಖೆಗೆ ವಹಿಸಬೇಕು. ಸರ್ಕಾರವನ್ನು ಎಚ್ಚರಿಸಲು ವಿದ್ಯಾರ್ಥಿಗಳು ಈ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದ ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿ, ವಿದ್ಯಾರ್ಥಿ ಹಾಗೂ ಅರ್ಹ ಅಭ್ಯರ್ಥಿಯ ಧ್ವನಿಯಾಗಿ ಭಾರತೀಯ ಜನತಾ ಪಕ್ಷದ ಎಲ್ಲಾ ಶಾಸಕರು ಮತ್ತು ನಾಯಕರು ಒಗ್ಗಟ್ಟಿನಿಂದ ಹೋರಾಟ ಮುಂದುವರಿಸಲಿದ್ದಾರೆ. ಯುವಕರಿಗೆ ನ್ಯಾಯ ದೊರೆಯುವವರೆಗೆ ಬಿಜೆಪಿ ತನ್ನ ಹೋರಾಟವನ್ನು ನಿಲ್ಲಿಸುವುದಿಲ್ಲ. ಸದನದ ಹೊರಗೆ ಮತ್ತು ಒಳಗೆ ವಿದ್ಯಾರ್ಥಿಗಳಿಗೆ ಬೆಂಬಲ ನೀಡಲಿದೆ ಎಂದು ತಿಳಿಸಿದರು.

ಕಳೆದ ಹಲವು ವರ್ಷಗಳಿಂದ ಕೆಪಿಎಸ್‌ಸಿಯ ವಿವಿಧ ನೇಮಕಾತಿ ಪ್ರಕ್ರಿಯೆಗಳಲ್ಲಿ ವ್ಯಾಪಕ ಅವ್ಯವಹಾರಗಳು ನಡೆಯುತ್ತಿವೆ. ಪರೀಕ್ಷೆಗಳಲ್ಲಿ ಹಣ ಪಡೆದು ಅನರ್ಹ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗ ಕಲ್ಪಿಸುವ ವ್ಯವಸ್ಥೆ ರೂಪುಗೊಂಡಿದ್ದು, ಅರ್ಹ ಅಭ್ಯರ್ಥಿಗಳ ಭವಿಷ್ಯವನ್ನು ಕಸಿದುಕೊಳ್ಳುವ ಕೆಲಸ ನಡೆಯುತ್ತಿದೆ. ಈ ಮೂಲಕ ಸರ್ಕಾರಿ ನೇಮಕಾತಿ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವೇ ಕುಸಿಯುವಂತಾಗಿದೆ ಎಂದರು.

ರಾಜ್ಯದಲ್ಲಿ ಕೇಂದ್ರದ ಯುಪಿಎಸ್‌ಸಿ ಮಾದರಿಯ ಪಾರದರ್ಶಕ, ತಂತ್ರಜ್ಞಾನ ಆಧಾರಿತ ಹಾಗೂ ಭ್ರಷ್ಟಾಚಾರ ಮುಕ್ತ ನೇಮಕಾತಿ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಪರೀಕ್ಷಾ ಪ್ರಕ್ರಿಯೆಯಿಂದ ಫಲಿತಾಂಶದವರೆಗೆ ಸಂಪೂರ್ಣ ಪಾರದರ್ಶಕತೆ ಖಚಿತಪಡಿಸುವ ಸುಧಾರಣಾ ಕ್ರಮಗಳನ್ನು ಸರ್ಕಾರ ತಕ್ಷಣ ಕೈಗೊಳ್ಳಬೇಕು ಎಂದು ವಿಜಯೇಂದ್ರ ಪ್ರತಿಪಾದಿಸಿದರು.

ಲಂಚಪ್ರಿಯ ಸರ್ಕಾರ: ಛಲವಾದಿ

ಇದು ಲಂಚಪ್ರಿಯ ಮತ್ತು ಭೂಮಿಪ್ರಿಯ ರಾಜ್ಯ ಸರ್ಕಾರ. ಮೊದಲು ವಿದ್ಯೆಯ ಮಾರಾಟ ಆಗುತ್ತಿತ್ತು. ಈಗ ಅದರ ಜೊತೆ ಹುದ್ದೆಗಳ ಮಾರಾಟ ಆಗುತ್ತಿದೆ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಪಾದಿಸಿದ್ದಾರೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಪಿಎಸ್‌ಸಿ ಉದ್ಯೋಗಾಕಾಂಕ್ಷಿಗಳ ಹೋರಾಟದಲ್ಲಿ ಬಿಜೆಪಿ ಸದಾ ಪಾಲ್ಗೊಂಡಿದೆ. ಇನ್ನು ಮುಂದೆಯೂ ಹೋರಾಟಕ್ಕೆ ಬೆಂಬಲ ನೀಡಲಿದ್ದೇವೆ. ಆರ್.ಅಶೋಕ್ ಮತ್ತು ನಾನು ಕೆಪಿಎಸ್‌ಸಿ ಲಂಚಾವತಾರದ ಸಂಬಂಧ ಪ್ರಮುಖ ಅಧಿಕಾರಿಗಳನ್ನು ಭೇಟಿ ಮಾಡಿದ್ದೇವೆ. ತಕ್ಷಣ ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕೆಂದು ಒತ್ತಾಯಿಸಿದ್ದೇವೆ ಎಂದರು.

ಸದಾ ಉದ್ಯೋಗಾಂಕ್ಷಿಗಳ ಜೊತೆ ನಾವಿದ್ದೇವೆ. ಭ್ರಷ್ಟಾಚಾರವನ್ನು ಬೇರುಸಮೇತ ಕಿತ್ತು ಹಾಕಬೇಕಿದೆ. ಲೋಕಸೇವಾ ಆಯೋಗದಲ್ಲಿ ಸೇವೆ ಎಂಬುದೇ ಇಲ್ಲ ಎಂದು ಆರೋಪಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Bhagirath Choudhary: ಸೌತೆಕಾಯಿಗೆ ₹99 ಲಕ್ಷ ಸಬ್ಸಿಡಿ ಪಡೆದ ಸಚಿವನಿಂದ ಹಣ ವಾಪಸ್‌!
CJP ಮುಂದಿನ ಟಾಸ್ಕ್​ ರಾಹುಲ್​ ಗಾಂಧಿ ಮದ್ವೆ: ಖುದ್ದು ಅಕ್ಕ ಪ್ರಿಯಾಂಕಾ ಜಿರಳೆಗಳಿಗೆ ಹೀಗೊಂದು ಮನವಿ