ಕೆಂಪುಕಲ್ಲು ಗಣಿಗಾರಿಕೆಗೆ ಪರಿಷ್ಕೃತ ನಿಯಮಾವಳಿ ಸಿದ್ಧ: ಯು.ಟಿ.ಖಾದರ್‌

Published : Aug 29, 2025, 10:14 PM IST
UT Khader

ಸಾರಾಂಶ

ಕೆಂಪುಕಲ್ಲು ಗಣಿಗಾರಿಕೆಗೆ ಬಗ್ಗೆ ಸರ್ಕಾರ ಪರಿಷ್ಕೃತ ನಿಯಮಾವಳಿಗಳನ್ನು ರೂಪಿಸಿದೆ. ಸೆ.4ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗಲಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ತಿಳಿಸಿದ್ದಾರೆ.

ಮಂಗಳೂರು (ಆ.29): ಕೆಂಪುಕಲ್ಲು ಗಣಿಗಾರಿಕೆಗೆ ಬಗ್ಗೆ ಸರ್ಕಾರ ಪರಿಷ್ಕೃತ ನಿಯಮಾವಳಿಗಳನ್ನು ರೂಪಿಸಿದೆ. ಸೆ.4ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗಲಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ತಿಳಿಸಿದ್ದಾರೆ. ನಗರದ ಸರ್ಕ್ಯೂಟ್‌ ಹೌಸ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮೂರು ಬಾರಿ ಸಚಿವರು, ಅಧಿಕಾರಿಗಳೊಂದಿಗೆ ಈ ಕುರಿತು ಸಭೆ ನಡೆಸಲಾಗಿದೆ. ಕೆಂಪುಕಲ್ಲು ಗಣಿಗಾರಿಕೆ ಪರವಾನಗಿಗೆ ಸಂಬಂಧಿಸಿದಂತೆ ರಾಜಸ್ವವನ್ನು ಇಳಿಕೆ ಮಾಡುವುದು ಹಾಗೂ ಪರವಾನಗಿ ನೀಡುವ ವಿಧಾನವನ್ನು ಸರಳೀಕರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಇನ್ನು ಮುಂದೆ ಕಂದಾಯ ಅಧಿಕಾರಿ ಹಾಗೂ ಗಣಿ ಇಲಾಖೆ ಅಧಿಕಾರಿಗಳು ಅರ್ಜಿ ಸಲ್ಲಿಸಿ ವಾರದೊಳಗೆ ಸ್ಥಳಕ್ಕೆ ಭೇಟಿ ನೀಡಿ ಒಂದು ತಿಂಗಳಲ್ಲಿ ಪರವಾನಗಿ ನೀಡಬೇಕಾಗುತ್ತದೆ. ಜಿಲ್ಲೆಯಲ್ಲಿ ಎಲ್ಲರೂ ಮನೆ, ಕಟ್ಟಡ ನಿರ್ಮಾಣಕ್ಕೆ ಕೆಂಪುಕಲ್ಲನ್ನೇ ಅವಲಂಬಿಸಿರುವುದರಿಂದ ಇದೊಂದು ಅತ್ಯಗತ್ಯ ಸಾಮಗ್ರಿಯಾಗಿದೆ. ಇದರಲ್ಲಿ ಅಡೆತಡೆ ಇಲ್ಲದಂತೆ ಪೂರೈಕೆಯಾಗಬೇಕಾಗುತ್ತದೆ. ಆದರೆ ರಾಜಸ್ವ ಇಳಿಕೆಯಾಗುವ ವಿಚಾರ ಇರುವ ಕಾರಣ ಹಣಕಾಸು ಇಲಾಖೆಯ ಅನುಮೋದನೆ ಪಡೆಯುವುದು ಬಾಕಿ ಇದೆ, ಅನುಮೋದನೆ ಪಡೆದು ಸಚಿವ ಸಂಪುಟ ಸಭೆಯಲ್ಲಿ ಅಂತಿಮವಾಗಿ ಇದಕ್ಕೆ ಒಪ್ಪಿಗೆ ಸಿಗಲಿದೆ ಎಂದರು.

ಕೋಟೆಪುರ ಪ್ರವಾಸೋದ್ಯಮ: ಕೋಟೆಪುರ ಹಾಗೂ ಬೋಳಾರ ನಡುವೆ 200 ಕೋ.ರು. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸುವ ಸೇತುವೆಯೊಂದಿಗೆ ಪ್ರವಾಸೋದ್ಯಮ ಅಭಿವೃದ್ಧಿಯ ಅಂಶಗಳನ್ನೂ ಸೇರಿಸಿಕೊಳ್ಳಲಾಗುವುದು. ಈ ಸೇತುವೆಯನ್ನು ಪ್ರವಾಸಿಗರಿಗೆ ಆಕರ್ಷಣೀಯವನ್ನಾಗಿ ಮಾಡಲಾಗುವುದು ಎಂದು ಸ್ಪೀಕರ್‌ ಖಾದರ್‌ ತಿಳಿಸಿದರು. ಸೇತುವೆ ಜೊತೆ 33 ಕೋಟಿ ರು. ವೆಚ್ಚದಲ್ಲಿ ಮೂರು ಪ್ರವಾಸಿಗರ ವೀಕ್ಷಣಾ ಡೆಕ್‌ಗಳನ್ನು ನಿರ್ಮಿಸಲಾಗುವುದು. ಅಲ್ಲಿರುವ ದ್ವೀಪಕ್ಕೂ ಸಂಪರ್ಕ ಕಲ್ಪಿಸುವ ಯೋಜನೆಯಿದೆ. ಮುಂದೆ ಭಾನುವಾರ ರಾತ್ರಿ ಕೆಲವು ಗಂಟೆಗಳ ಕಾಲ ಸೇತುವೆ ಮೇಲೆ ವಾಹನ ಸಂಚಾರ ಸ್ಥಗಿತಗೊಳಿಸಿ, ಜನರು ಕುಟುಂಬದೊಂದಿಗೆ ಬಂದು ವೀಕ್ಷಣೆ ಮಾಡುವ ರೀತಿ ಇದನ್ನು ಅಭಿವೃದ್ಧಿ ಪಡಿಸಲಾಗುವುದು. ಸದ್ಯ ಸೇತುವೆಯ ತಾಂತ್ರಿಕ ವರದಿಯನ್ನು ಅನುಮೋದನೆಗಾಗಿ ನಬಾರ್ಡ್‌ಗೆ ಕಳುಹಿಸಲಾಗಿದೆ. ಅನುಮೋದನೆ ಸಿಕ್ಕಿದ ಬಳಿಕ ಟೆಂಡರ್‌ ಕರೆಯಲಾಗುವುದು ಎಂದು ಅವರು ಹೇಳಿದರು.

ಉಳ್ಳಾಲಕ್ಕೆ ಎಐ ಆಧಾರಿತ ಭದ್ರತೆ: ಉಳ್ಳಾಲ ಪಟ್ಟಣಕ್ಕೆ ಕೃತಕ ಬುದ್ಧಿ ಮತ್ತೆ-ಎಐ ಆಧಾರಿತ ಭದ್ರತಾ ವ್ಯವಸ್ಥೆಯನ್ನು ರೂಪಿಸಲಾಗುವುದು. ಇದಕ್ಕೆ ಬೇಕಾದ ನೆರವನ್ನು ಇನ್ಫೋಸಿಸ್‌ನಿಂದ ಪಡೆದುಕೊಳ್ಳಲಾಗುವುದು. ಸುಮಾರು 60 ಕೋಟಿ ರು. ವೆಚ್ಚದ ಈ ನೂತನ ವ್ಯವಸ್ಥೆ ಇತರ ಕಡೆಗಳಿಗಿಂತ ವಿಶಿಷ್ಟವಾಗಿರಲಿದೆ ಎಂದು ಯು.ಟಿ. ಖಾದರ್‌ ತಿಳಿಸಿದರು.

ಸೆ.11ರಿಂದ ಬೆಂಗಳೂರಲ್ಲಿ ಕಾಮನ್‌ವೆಲ್ತ್‌ ಪ್ರಾದೇಶಿಕ ಸಮ್ಮೇಳನ: ಕಾಮನ್‌ವೆಲ್ತ್‌ ಪಾರ್ಲಿಮೆಂಟರಿ ಅಸೋಸಿಯೇಶನ್‌ (ಸಿಪಿಎ)ಯ ಭಾರತೀಯ ಪ್ರಾದೇಶಿಕ ಸಮ್ಮೇಳನ ಈ ಬಾರಿ ಬೆಂಗಳೂರಿನಲ್ಲಿ ಸೆ. 11ರಿಂದ 14ರವರೆಗೆ ನಡೆಯಲಿದೆ. ಕಾಮನ್‌ವೆಲ್ತ್‌ನ 9 ದೇಶಗಳ ಸ್ಪೀಕರ್‌ಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಮೂರು ದಿನಗಳ ಸಮ್ಮೇಳನದ ಬಳಿಕ ಸೆ. 14ರಂದು ಚಾಮುಂಡಿ ಹಿಲ್ಸ್‌, ಮೈಸೂರು ಅರಮನೆ ಮತ್ತು ಬೃಂದಾವನ ಗಾರ್ಡನ್‌ಗೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರ ಮೇಲುಸ್ತುವಾರಿಯಲ್ಲಿ ಈ ಸಮ್ಮೇಳನ ನಡೆಯಲಿದೆ ಎಂದು ಖಾದರ್‌ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ - ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ