ಕೆಲಸದಿಂದ ನಿವೃತ್ತಿ? ಸಚಿವ ಗಡ್ಕರಿ ಹೇಳಿದ್ದೇ ಒಂದು, ವೈರಲ್​ ಆಗ್ತಿರೋದೇ ಇನ್ನೊಂದು! ಏನಿದರ ಅಸಲಿಯತ್ತು

Published : Aug 25, 2026, 06:58 PM IST
Nitin Gadkari

ಸಾರಾಂಶ

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ನಿವೃತ್ತಿಯ ಕುರಿತು ನೀಡಿದರೆನ್ನಲಾದ ಹೇಳಿಕೆಯು ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆದರೆ, ಗಡ್ಕರಿ ಅವರು ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆಯೇ ಅಥವಾ ಅವರ ಹೇಳಿಕೆಯ ಹಿಂದಿನ ಅಸಲಿಯತ್ತು ಬೇರೆಯೇ ಎನ್ನುವುದನ್ನು ಈ ಲೇಖನವು ಸ್ಪಷ್ಟಪಡಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದ ಅತ್ಯಂತ ಬಲಶಾಲಿ, ಮೋದಿ ಅವರಂತೆಯೇ ಹಗಲಿರುಳೂ ದುಡಿಯುತ್ತಿರುವ ಸಚಿವರಲ್ಲಿ ಒಬ್ಬರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ. ಇವರ ಅವಧಿಯಲ್ಲಿ ದೇಶದಲ್ಲಿ ಆಗಿರುವ ಸುಧಾರಣೆಗಳ ಪಟ್ಟಿ ಮಾಡುತ್ತಾ ಹೋದರೆ ಬಹು ದೊಡ್ಡದಾಗಿ ಬಿಡುತ್ತದೆ. ಇಂತಿಪ್ಪ ಸಚಿವರು, ಕಾರ್ಯಕ್ರಮವೊಂದರಲ್ಲಿ ನಿವೃತ್ತಿಯ ಬಗ್ಗೆ ಮಾತನಾಡಿ, ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿಸಿಬಿಟ್ಟಿದ್ದಾರೆ. ಇವರ ಮಾತಿನ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದ್ದು, ಇಂಥದ್ದನ್ನೇ ಕಾಯುತ್ತಿದ್ದವರು, ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಡಿಕ್ಷನರಿಯಲ್ಲಿ ಇರುವ ಪದಗಳನ್ನು ಹೆಕ್ಕಿ ಹೆಕ್ಕಿ ಕಮೆಂಟ್ಸ್​ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಸಂಪುಟದ ಸಂಭಾವ್ಯ ವಿಸ್ತರಣೆ ಮತ್ತು ಸಚಿವರ ಜವಾಬ್ದಾರಿಗಳಲ್ಲಿ ಬದಲಾವಣೆಗಳ ಕುರಿತು ಊಹಾಪೋಹಗಳು ನಡೆಯುತ್ತಿರುವ ಸಮಯದಲ್ಲೇ ಈ ಹೇಳಿಕೆಗಳು ಹೊರಬಂದಿದೆ ಎಂದು ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಸಚಿವರು ಏನ್​ ಹೇಳಿದ್ರು?

ಅಷ್ಟಕ್ಕೂ ಗಡ್ಕರಿ ಅವರು, ನಾಗಪುರದ ಕಟೋಲ್‌ನಲ್ಲಿ ನಡೆದ 'ಏಕಲವ್ಯ ಏಕಲ್ ವಿದ್ಯಾಲಯ ಶಿಕ್ಷಕ-ಮೇಲ್ವಿಚಾರಕ ತರಬೇತಿ ತರಗತಿ'ಯಲ್ಲಿ ಪಾಲ್ಗೊಂಡಿದ್ದಾಗ ಮಾತನಾಡುತ್ತಾ, '30 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಇನ್ನು ಸಾಧ್ಯವಿಲ್ಲ. ಮುಂದಿನ ಯುವ ಪೀಳಿಗೆಗೆ ಜವಾಬ್ದಾರಿ ವಹಿಸಿಕೊಳ್ಳುವ ಅವಕಾಶ ಸಿಗಬೇಕು ಎಂದಿದ್ದರು. ಸಾರ್ವಜನಿಕ ಜೀವನದಲ್ಲಿ ಸುಮಾರು 30 ವರ್ಷಗಳನ್ನು ಕಳೆದಿದ್ದು, ತಮ್ಮ ವೃತ್ತಿಜೀವನದಲ್ಲಿ ಯಶಸ್ಸು ಮತ್ತು ಹಿನ್ನಡೆಗಳೆರಡನ್ನೂ ಕಂಡಿರುವುದಾಗಿ ಅವರು ಹೇಳಿದರು. ನಾನು ಕಳೆದ 30 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ಅನೇಕ ಏಳುಬೀಳುಗಳನ್ನು ಕಂಡಿದ್ದು, ಅನೇಕ ಪ್ರಶಸ್ತಿಗಳನ್ನು ಪಡೆದಿದ್ದೇನೆ. ಆದರೆ ಈಗ ನನಗೆ ಹೆಚ್ಚು ಕೆಲಸ ಮಾಡಲು ಸಾಧ್ಯವಿಲ್ಲ; ಹೊಸ ಪೀಳಿಗೆಗೆ ಕೆಲಸ ಮಾಡುವ ಅವಕಾಶವನ್ನು ನೀಡಬೇಕು ಎಂದರು.

ವೈರಲ್​ ಆಗಿದ್ದೇನು, ಅಸಲಿಯತ್ತೇನು?

ಆದರೆ, ಅಸಲಿಯತ್ತೇ ಬೇರೆ. ಅಷ್ಟಕ್ಕೂ ನಿತಿನ್​ ಗಡ್ಕರಿ ಅವರು ಈ ಮಾತುಗಳನ್ನು ಹೇಳಿದ್ದು ನಿಜವೇ. ಆದರೆ, ಅವರು ಹೇಳಿದ್ದು ತಮ್ಮ ರಾಜಕೀಯದ ಜೀವನದ ಬಗ್ಗೆ ಅಲ್ಲ. ಈ ಭಾಷಣದ ಸಂಪೂರ್ಣ ವಿಡಿಯೋ ನೋಡಿದರೆ, ಅವರು ಮಾತನಾಡುತ್ತಿರುವುದು ತಮ್ಮ ರಾಜಕೀಯ ಜೀವನದ ಬಗ್ಗೆ ಅಲ್ಲ, ಅದರಿಂದ ನಿವೃತ್ತಿ ಘೋಷಿಸುತ್ತಿರುವ ಬಗ್ಗೆಯೂ ಅಲ್ಲ. ಬದಲಿಗೆ, ಗಡ್ಕರಿ ಅವರು ಪ್ರಮುಖವಾಗಿ ‘ಲಕ್ಷ್ಮಣರಾವ್ ಮಾಂಕರ್ ಟ್ರಸ್ಟ್‌’ನ ಕಾರ್ಯಚಟುವಟಿಕೆಗಳ ಕುರಿತು ಮಾತನಾಡುತ್ತಿದ್ದರು. ಗಡ್ಕರಿ ಅವರ ಮಾತುಗಳು ಸಂಪೂರ್ಣವಾಗಿ ಟ್ರಸ್ಟ್‌ನ ಕಾರ್ಯನಿರ್ವಹಣೆ ಮತ್ತು ಅದರ ಮುಂದಿನ ನಾಯಕತ್ವಕ್ಕೆ ಸಂಬಂಧಿಸಿದ್ದಾಗಿವೆ. ಈ ಭಾಷಣದ ಸಮಯದಲ್ಲಿ ಅವರು, ತಮಗೆ ಮೊದಲಿನಷ್ಟು ಕೆಲಸದ ಒತ್ತಡ ನಿಭಾಯಿಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ, ಟ್ರಸ್ಟ್‌ನ ಹೆಚ್ಚಿನ ಜವಾಬ್ದಾರಿಯನ್ನು ಹೊರಲು ಯುವ ಪೀಳಿಗೆಗೆ ಅವಕಾಶ ನೀಡಬೇಕು ಎಂದು ಹೇಳಿದ್ದು ಟ್ರಸ್ಟ್​ ಕುರಿತಾಗಿಯೇ ವಿನಾ, ರಾಜಕೀಯದ ಜೀವನದ ಬಗ್ಗೆ ಅಲ್ಲ.

ಆದರೆ, ಈ ಬಗ್ಗೆ ಅರ್ಧಂಬರ್ಧ ಕೇಳಿಸಿಕೊಂಡ ಕೆಲ ಮಾಧ್ಯಮಗಳು, ಬ್ರೇಕಿಂಗ್​ ನ್ಯೂಸ್​ ಸಿಕ್ಕಿತೆಂದು ಗಡ್ಕರಿ ಅವರು ರಾಜಕೀಯದಿಂದ ನಿವೃತ್ತಿ ಎಂದು ಸುದ್ದಿ ಬಿತ್ತರಿಸಿದವು. ಅದನ್ನೇ ನಂಬಿ ಹಲವರು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡರು, ಪ್ರಾದೇಶಿಕ ಚಾನೆಲ್​ಗಳಲ್ಲಿಯೂ ಈ ಸುದ್ದಿ ದೊಡ್ಡದಾಗಿ ಬಿತ್ತರವಾಯಿತು. ಈ ಬಗ್ಗೆ ಇದೀಗ ಖುದ್ದು ಗಡ್ಕರಿ ಅವರ ಕಚೇರಿಯಿಂದ ಸ್ಪಷ್ಟನೆ ಬಂದಿದೆ. ಫುಲ್​ ವಿಡಿಯೋ ನೋಡಿ ಎಂದು ಹೇಳಿದೆ. ಆದರೆ ಸ್ಪಷ್ಟನೆ ಬರುವ ಮೊದಲೇ ಕೆಲವರು ಗಡ್ಕರಿ ಅವರಿಗೆ ರಾಜೀನಾಮೆ ಕೊಡಿಸಿಯೂ ಆಗಿಬಿಟ್ಟಿದೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಸಕ ಪ್ರದೀಪ್ ಈಶ್ವರ್‌ ವಿರುದ್ಧ ಜಾಮೀನು ರಹಿತ ವಾರೆಂಟ್ (NBW) ಜಾರಿ ಮಾಡಿದ ಕೋರ್ಟ್!
Palakkad mangalore train row: ಮೈಸೂರು ವಿಭಾಗಕ್ಕೆ ಮಂಗಳೂರು ರೈಲು ಸೇರಿದ್ರೆ ಕಾಂಗ್ರೆಸ್‌ಗೇನು ಕಷ್ಟ?: ಆರ್‌ಸಿ