ಸೊರಬ ಬಿಜೆಪಿಯಲ್ಲಿ ಪುನಃ ಭಿನ್ನಮತ ಸ್ಫೋಟಗೊಂಡಿದೆ. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಕುಮಾರ್ ಬಂಗಾರಪ್ಪ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ.
ಶಿವಮೊಗ್ಗ, (ಸೆಪ್ಟೆಂಬರ್.29): ಸೊರಬ ಬಿಜೆಪಿ ಪಾಳೇಯದಲ್ಲಿ ಮನೆಮಾಡಿರುವ ಮೂಲ ಹಾಗೂ ವಲಸಿಗ ಭಿನ್ನಮತ ಮತ್ತೆ ಭುಗಿಲೆದಿದ್ದಿದೆ. ಬಿಜೆಪಿ ಪಕ್ಷದ ಮೂಲ ಕಾರ್ಯಕರ್ತರು ಇದೀಗ ಪ್ರತ್ಯೇಕ ವೇದಿಕೆ ರಚಿಸಿಕೊಂಡು, ಶಾಸಕ ಕುಮಾರ್ ಬಂಗಾರಪ್ಪ ವಿರುದ್ದ ಬಂಡಾಯದ ಕಹಳೆ ಮೊಳಗಿಸಿದ್ದಾರೆ.
ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಸೊರಬ ಬಿಜೆಪಿಯಲ್ಲಿ ಪುನಃ ಭಿನ್ನಮತ ಸ್ಫೋಟಗೊಂಡಿರುವುದು ಕುಮಾರ್ ಬಂಗಾರಪ್ಪಗೆ ದೊಡ್ಡ ಆಘಾತವಾದಂತಾಗಿದೆ. ಕುಮಾರ್ ಬಂಗಾರಪ್ಪ ಆಯ್ಕೆ ಆದಾಗಿನಿಂದಲೂ ಮೂಲ ಬಿಜೆಪಿಗರಿಗೆ ಅಸಮಾಧಾನ ಇತ್ತು. ಆದ್ರೆ, ಇದೀಗ ಅದು ಮತ್ತಷ್ಟು ದೊಡ್ಡದಾಗಿದ್ದು, ಈಗ ಎರಡು ಬಣಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ.
undefined
ಹೌದು... ನಮೋ ವೇದಿಕೆ ವಿಚಾರವಾಗಿ ತಾವೇ ಮೂಲ ಬಿಜೆಪಿಗರು ಎಂದು ಕುಮಾರ್ ಬಂಗಾರಪ್ಪ ಬೆಂಬಲಿಗರು ಬಿಂಬಿಸಿಕೊಂಡಿದ್ದರು.ಈ ಬೆಳವಣಿಗೆ ನಂತರ ಶಾಸಕ ಕುಮಾರ್ ಬಂಗಾರಪ್ಪ ಬೆಂಬಲಿಗರ ವಿರುದ್ಧ ಮೂಲ ಬಿಜೆಪಿಗರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಸಮಾಧಾನ ಇರುವುದರಿಂದಲೇ ಸದನಕ್ಕೆ ಹೋಗುತ್ತಿಲ್ಲ: ಮಂತ್ರಿಗಿರಿಗಾಗಿ ಮತ್ತೆ ಸಿಡಿದೆದ್ದ ಈಶ್ವರಪ್ಪ
ಕುಮಾರ್ ಬಂಗಾರಪ್ಪ ವಿರುದ್ಧ ಆಕ್ರೋಶ
ಕಳೆದ ಹಲವು ವರ್ಷಗಳಿಂದ ಸೊರಬ ಬಿಜೆಪ ಪಾಳೇಯದಲ್ಲಿ ಮೂಲ ಮತ್ತು ವಲಸಿಗ ಗೊಂದಲವಿದೆ. ಕುಮಾರ್ ಬಂಗಾರಪ್ಪರವರು ವಿವಿಧ ಸಮಿತಿಗಳ ನೇಮಕ ಸೇರಿದಂತೆ, ನಾನಾ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ತಮ್ಮ ಬೆಂಬಲಿಗರಿಗೆ ಮಣೆ ಹಾಕುತ್ತಿದ್ದಾರೆ ಎಂಬುವುದು ಬಿಜೆಪಿ ಪಕ್ಷದ ಮೂಲ ಕಾರ್ಯಕರ್ತರ ಆರೋಪವಾಗಿದೆ. ಈ ಸಂಬಂಧ ಎರಡ್ಮೂರು ಬಾರಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿಯೇ ಸಂಧಾನ ಸಭೆಗಳು ನಡೆದಿದ್ದವು. ಆದಾಗ್ಯೂ ಮೂಲ – ವಲಸಿಗ ಭಿನ್ನಾಭಿಪ್ರಾಯ ಪರಿಹಾರವಾಗಿರಲಿಲ್ಲ. ಕುಮಾರ್ ಬಂಗಾರಪ್ಪ ವಿರುದ್ದ ಮೂಲ ಬಿಜೆಪಿ ಮುಖಂಡರು, ಕಾರ್ಯಕರ್ತರು ಅಂತರ ಕಾಯ್ದುಕೊಂಡೇ ಬಂದಿದ್ದರು.
ಈ ಕಾರಣದಿಂದ ಸೊರಬ ತಾಲೂಕು ಘಟಕದಲ್ಲಿ ಎರಡು ಬಿಜೆಪಿ ಕಚೇರಿಗಳು ಸ್ಥಾಪನೆಯಾಗುವಂತಾಗಿತ್ತು. ಈ ನಡುವೆ ಕಳೆದ ಎರಡು ದಿನಗಳ ಹಿಂದೆ ನರೇಂದ್ರ ಮೋದಿ ಹುಟ್ಟುಹಬ್ಬದ ಸಂದರ್ಭದಲ್ಲಿ ಮೂಲ ಬಿಜೆಪಿ ಕಾರ್ಯಕರ್ತರು ನಮೋ ಬ್ರಿಗೇಡ್ ರಚಿಸಿಕೊಂಡು ಕಾರ್ಯಕ್ರಮ ಮಾಡಿದ್ದರು.
ಪಕ್ಷದ ಹಿರಿಯ ಮುಖಂಡ ಪದ್ಮನಾಭ ಭಟ್ ಅವರು ಸಮಾರಂಭದಲ್ಲಿ ಮಾತನಾಡುವ ವೇಳೆ, ಕುಮಾರ್ ಬಂಗಾರಪ್ಪ ವಿರುದ್ದ ಏಕವಚನದಲ್ಲಿಯೇ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದರು. ಆರೋಪಗಳ ಸುರಿಮಳೆಗೈದಿದ್ದರು. ಮುಂಬರುವ ಚುನಾವಣೆಯಲ್ಲಿ ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರಿಗೆ ಒತ್ತಾಯಿಸಿದ್ದರು.
ಗೊಂದಲದಲ್ಲಿ ನಾಯಕರು
ಸದ್ಯ ಸೊರಬ ಬಿಜೆಪಿ ಪಾಳೇಯದಲ್ಲಿ ಕುಮಾರ್ ಪರ ಹಾಗೂ ವಿರೋಧ ಬಣಗಳ ನಡುವಿನ ಸಮರ ತಾರಕಕ್ಕೇರಿದ್ದು,
ಆರೋಪ-ಪ್ರತ್ಯಾರೋಪಗಳು ಬಿರುಸುಗೊಂಡಿವೆ. ವಿಧಾನಸಭೆ ಚುನಾವಣೆಗೆ ಇನ್ನೂ ಆರೇಳು ತಿಂಗಳು ಬಾಕಿಯಿರುವ ಸಂದರ್ಭದಲ್ಲಿ ಭುಗಿಲೆದ್ದಿರುವ ಭಿನ್ನಮತವು, ಸ್ಥಳೀಯ ಬಿಜೆಪಿ ಪಾಳೇಯದಲ್ಲಿ ಗೊಂದಲ ಸೃಷ್ಟಿಯಾಗುವಂತೆ ಮಾಡಿದೆ.
ಅಲ್ಲದೇ ಬಿಜೆಪಿ ವರಿಷ್ಠರಿಗೂ ಸಹ ದೊಡ್ಡ ತಲೆನೋವಾಗಿದ್ದು, ಮುಂದಿನ ಚುನಾವಣೆ ಟಕೆಟ್ ನೀಡಬೇಕೋ ಬೇಡ್ವೋ ಎನ್ನುವ ಗೊಂದಲಕ್ಕೀಡಾಗಿದ್ದಾರೆ. ಒಂದು ವೇಳೆ ವಿರೋಧದ ನಡುವೆಯೂ ಹಾಲಿ ಶಾಸಕ ಕುಮಾರ್ ಬಂಗಾರಪ್ಪ ಅವರಿಗೆ ಟಿಕೆಟ್ ನೀಡಿದ್ರೆ ಮೂಲ ಕಾರ್ಯಕರ್ತರು ಬಿಜೆಪಿ ವಿರುದ್ಧ ಸಿಡಿದೇಳುವ ಸಾಧ್ಯತೆಗಳಿವೆ. ಇನ್ನೊಂದೆಡೆ ಕುಮಾರ್ ಬಂಗಾರಪ್ಪ ಬಿಟ್ರೆ ಪರ್ಯಾಯ ಅಭ್ಯರ್ಥಿ ಯಾರು ಎನ್ನುವುದು ಪ್ರಶ್ನೆಯಾಗಿದೆ. ಇದರಿಂದ ಏನು ಮಾಡ್ಬೇಕು ಎನ್ನುವುದು ನಾಯಕರಿಗೆ ದಿಕ್ಕುತೋಚದಂತಾಗಿದೆ.
ಒಟ್ಟಿನಲ್ಲಿ ಇನ್ನೇನು ವಿಧಾನಸಭೆ ಚುನಾವಣೆಗೆ ಸಮೀಪಿಸುತ್ತಿದ್ದಂತೆಯೇ ಅಸಮಾಧಾನ ಸ್ಫೋಟಗೊಂಡಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಮಟ್ಟಕ್ಕೆ ಹೋಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.