ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮೂವರ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ. ಶಶಿ ತರೂರ್ ಸ್ಪರ್ಧೆಗೆ ಸೋನಿಯಾ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ವರದಿಯಾಗಿದ್ದು, ಸೋನಿಯಾ ಬಣದಿಂದ ಅಶೋಕ್ ಗೆಹ್ಲೋಟ್ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ. ಹಾಗೆ, ಜಿ 23 ನಾಯಕರಿಂದಲೂ ಪ್ರತ್ಯೇಕ ಅಭ್ಯರ್ಥಿ ಸ್ಪರ್ಧೆ ಮಾಡಬಹುದು ಎಂದು ಹೇಳಲಾಗುತ್ತಿದೆ.
ನವದೆಹಲಿ: ಅಕ್ಟೋಬರ್ 17ರಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಶಶಿ ತರೂರ್ ಸೇರಿದಂತೆ ಕನಿಷ್ಠ ಮೂವರು ಅಭ್ಯರ್ಥಿಗಳು (Candidates) ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಅಲ್ಲದೆ ಸದ್ಯ ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಈ ಬಾರಿ ಗಾಂಧಿ ಕುಟುಂಬದಿಂದ ಯಾವುದೇ ಅಭ್ಯರ್ಥಿ ಕಣಕ್ಕೆ ಇಳಿಯುವ ಸಾಧ್ಯತೆ ಇಲ್ಲ ಎಂಬ ಸುಳಿವುಗಳನ್ನು ನೀಡಿವೆ. ಎಐಸಿಸಿ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಸಂಸದ (Member of Parliament) ಶಶಿ ತರೂರ್ ಸೋಮವಾರ ಹಾಲಿ ಎಐಸಿಸಿ ಅಧ್ಯಕ್ಷೆ (AICC President) ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ, ಚುನಾವಣೆಗೆ ಸ್ಪರ್ಧಿಸುವ ಕುರಿತ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸೋನಿಯಾ ಕೂಡಾ ಸಮ್ಮತಿ ವ್ಯಕ್ತಪಡಿಸಿದ್ದು, ಚುನಾವಣೆಯಲ್ಲಿ ತಾವು ತಟಸ್ಥವಾಗಿರುವ ಮತ್ತು ಪಕ್ಷದಿಂದ ಯಾವುದೇ ಅಧಿಕೃತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ವಿದೇಶದಿಂದ ವೈದ್ಯಕೀಯ ತಪಾಸಣೆ ಮುಗಿಸಿಕೊಂಡು ವಾಪಸಾದ ಬೆನ್ನಲ್ಲೇ ಸೋನಿಯಾರನ್ನು ಅವರ ನವದೆಹಲಿ ನಿವಾಸದಲ್ಲಿ ಶಶಿ ತರೂರ್ ಭೇಟಿ ಮಾಡಿದರು.
ಉದಯ್‌ಪುರ ಘೋಷಣೆ:
ಸೋನಿಯಾ ಭೇಟಿಗೂ ಮುನ್ನ ತರೂರ್ ಅವರು ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆ ತರುವ ಉದಯ್‌ಪುರ ಸಮಾವೇಶದ ನಿರ್ಣಯವನ್ನು ನೂತನ ಅಧ್ಯಕ್ಷರು 100 ದಿನದೊಳಗೆ ಜಾರಿಗೊಳಿಸಬೇಕು ಎಂಬ 650ಕ್ಕೂ ಹೆಚ್ಚು ಕಾಂಗ್ರೆಸಿಗರು ಸಹಿ ಮಾಡಿರುವ ಆಗ್ರಹ ಪತ್ರವನ್ನು ಟ್ವೀಟ್ ಮಾಡಿರುವುದು ಕೂಡ ಕುತೂಹಲ ಮೂಡಿಸಿದೆ. ಈ ಮನವಿಯನ್ನು ತಾವು ಸಂಪೂರ್ಣ ಬೆಂಬಲಿಸುವುದಾಗಿ ಶಶಿ ತರೂರ್ ಹೇಳಿದ್ದಾರೆ. ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ, 50 ವರ್ಷಕ್ಕಿಂತ ಕೆಳಗಿನವರಿಗೆ ಹೆಚ್ಚು ಪ್ರಾತಿನಿಧ್ಯ, ಕುಟುಂಬಕ್ಕೆ ಒಂದೇ ಟಿಕೆಟ್ ನೀಡಬೇಕು ಎಂಬಿತ್ಯಾದಿ ನಿರ್ಣಯಗಳನ್ನು ಉದಯ್‌ಪುರದಲ್ಲಿ ಕೈಗೊಳ್ಳಲಾಗಿತ್ತು.
ಇದನ್ನು ಓದಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಶಶಿ ತರೂರ್ ಪ್ಲಾನ್..!
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸ್ಪರ್ಧೆ ಸಂಭವ
ಗಾಂಧಿ ಕುಟುಂಬಕ್ಕೆ ಅತ್ಯಂತ ಆಪ್ತರಾಗಿರುವ ಮತ್ತು ಹಲವು ಬಾರಿ ಸ್ವತಃ ಮತ್ತು ಸೋನಿಯಾರಿಂದ ಆಹ್ವಾನ ಪಡೆದಿರುವ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನಲಾಗಿದೆ. ಒಂದು ವೇಳೆ ಹಲವು ಅಭ್ಯರ್ಥಿಗಳು ಕಣಕ್ಕೆ ಇಳಿದರೆ, ಅಧ್ಯಕ್ಷ ಸ್ಥಾನ ಬಂಡಾಯ ಬಣದ ಅಭ್ಯರ್ಥಿಗಳ ಪಾಲಾಗುವುದನ್ನು ತಪ್ಪಿಸಲು ಅಶೋಕ್ ಗೆಹ್ಲೋಟ್ ಅವರನ್ನು ಕಣಕ್ಕೆ ಇಳಿಸಲಾಗುತ್ತಿದೆ ಎನ್ನಲಾಗಿದೆ.
ಜಿ 23 ಬಣದಿಂದಲೂ ಪ್ರತ್ಯೇಕ ಅಭ್ಯರ್ಥಿ
ಕಾಂಗ್ರೆಸ್ ಪಕ್ಷದಲ್ಲಿ ಪಾರದರ್ಶಕತೆ, ಗಾಂಧಿ ಕುಟುಂಬ ಹೊರತಾದ ಬೇರೊಬ್ಬರಿಗೆ ಅಧ್ಯಕ್ಷ ಸ್ಥಾನ, ಮುಕ್ತ ಚುನಾವಣೆ ಪರ ಧ್ವನಿ ಎತ್ತಿ ಈ ಹಿಂದೆ ಸೋನಿಯಾ ಗಾಂಧಿಗೆ ಬಹಿರಂಗ ಪತ್ರ ಬರೆದಿದ್ದ ಜಿ23 ನಾಯಕರು ಕೂಡಾ ತಮ್ಮದೇ ಪ್ರತ್ಯೇಕ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆನಂದ್ ಶರ್ಮಾ, ಮನೀಶ್ ತಿವಾರಿ, ಮುಕುಲ್ ವಾಸ್ನಿಕ್ ಮೊದಲಾದವರು ಈ ತಂಡದಲ್ಲಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಮುಂದಿನ ಅಧ್ಯಕ್ಷರಾಗ್ತಾರಾ ಅಶೋಕ್ ಗೆಹ್ಲೋಟ್..? ಕೈ ಪಕ್ಷದಲ್ಲಿ ಗುಸುಗುಸು..!
ರಾಹುಲ್ ಪರ ಮತ್ತಷ್ಟು ಬ್ಯಾಟಿಂಗ್
ರಾಹುಲ್ ಗಾಂಧಿ ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂದು ರಾಜಸ್ಥಾನ, ಛತ್ತೀಸ್‌ಗಢ, ಗುಜರಾತ್ ಬಳಿಕ ತಮಿಳುನಾಡು, ಮಹಾರಾಷ್ಟ್ರ, ಬಿಹಾರ, ಕಾಶ್ಮೀರ ಕಾಂಗ್ರೆಸ್ ಘಟಕಗಳು ಗೊತ್ತುವಳಿ ಅಂಗೀಕರಿಸಿವೆ.