ಮಂಡ್ಯ ಜಿಲ್ಲೆಯ ಹಳ್ಳಿಗರಲ್ಲಿ ಮಹಾಭಾರತ ನಾಟಕ ಆಡುವಾಗ ದುರ್ಯೋಧನನ ಪಾತ್ರಕ್ಕೆ ಪಾತ್ರಧಾರಿ ಹುಡುಕುವುದು ಶ್ಯಾನೆ ಕಷ್ಟವಂತೆ. ಯಾಕೆಂದರೆ, ದುರ್ಯೋಧನನ ಪಾತ್ರ ಮಾಡಿದರೆ ಸಾಕು ಆ ಪಾತ್ರಧಾರಿ ನಿಜ ಜೀವನದಲ್ಲಿ ದುರಹಂಕಾರಿಯಾಗುತ್ತಾನೆ.
ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ, ನಿರ್ಮಾಪಕ ಉಮಾಪತಿ ಜೊತೆ ವಾಗ್ವಾದ, ಮಾಧ್ಯಮಗಳ ಜತೆ ತಿಕ್ಕಾಟ, ಪತಿ-ಪತ್ನಿ ಗದ್ದಲ. ರೇಣುಕಾಸ್ವಾಮಿ ಕೊಲೆ ಕೇಸ್, ಕೇಸ್ ಹಾಕಿಸಿಕೊಂಡು ಜೈಲಲ್ಲಿ ಕುಳಿತು ಸುಮ್ಮನೆ ತಮ್ಮ ಪಾಡಿಗೆ ತಾವು ಸಿಗರೇಟ್ ಸೇದಿದರೂ ವಿವಾದ. ಅಬ್ಬಬ್ಬ.. ಒಂದೇ ಎರಡೆ... ದರ್ಶನ್ ಈ ಪರಿ ಸಂಕಟಕಲಾವಲ್ಲಭ ಆಗಿರೋದು ಏಕೆ? ದರ್ಶನ್ ಜೈಲು ಸೇರಿದ ತಕ್ಷಣ ಇಂತಹದೊಂದು ಪ್ರಶ್ನೆ ಮುಂದಿಟ್ಟುಕೊಂಡ ನಮ್ಮ ಮಂಡ್ಯ ಜಿಲ್ಲೆಯ ಜಗಲಿಕಟ್ಟೆ ಪಂಡಿತರು ನಡೆಸಿದ ಸಂಶೋಧನೆಯಿಂದ ಕಡೆಗೂ ಉತ್ತರ ದೊರಕಿಬಿಟ್ಟಿದೆ. ಅದು - ದರ್ಶನ್ ಸಂಕಟ ಕಲಾವಲ್ಲಭನಾಗಲೂ ಕಾರಣ ಆತ ದುರ್ಯೋಧನ ಪಾತ್ರ ಮಾಡಿದ್ದು.
ಎತ್ತಲಿಂದೆತ್ತಣ ಸಂಬಂಧವಯ್ಯ ಎನ್ನಬೇಡಿ. ತುಸು ಈ ಸಂಶೋಧನೆಯತ್ತ ಗಮನಕೊಡಿ- ಮಂಡ್ಯ ಜಿಲ್ಲೆಯ ಹಳ್ಳಿಗರಲ್ಲಿ ಮಹಾಭಾರತ ನಾಟಕ ಆಡುವಾಗ ದುರ್ಯೋಧನನ ಪಾತ್ರಕ್ಕೆ ಪಾತ್ರಧಾರಿ ಹುಡುಕುವುದು ಶ್ಯಾನೆ ಕಷ್ಟವಂತೆ. ಯಾಕೆಂದರೆ, ದುರ್ಯೋಧನನ ಪಾತ್ರ ಮಾಡಿದರೆ ಸಾಕು ಆ ಪಾತ್ರಧಾರಿ ನಿಜ ಜೀವನದಲ್ಲಿ ದುರಹಂಕಾರಿಯಾಗುತ್ತಾನೆ. ಪಾಪಪ್ರಜ್ಞೆ ಎಂಬುದು ಆತನಿಗೆ ಕಾಡುವುದೇ ಇಲ್ಲ. ಇದೆಲ್ಲದರ ಫಲವಾಗಿ ಆತನ ಜೀವನದಲ್ಲಿ ಸಂಕಟಗಳ ಸರಮಾಲೆ ಶುರುವಾಗುತ್ತದೆ ಎಂಬ ನಂಬಿಕೆ ಬೇರುಬಿಟ್ಟಿದೆಯಂತೆ. ಈ ನಂಬಿಕೆ ಹುಟ್ಟಲು ಒಂದು ಕಾರಣವಿದೆ. ಅದು- ಬೇರೆ ಪಾತ್ರಗಳಿಗೆ ಭಕ್ತಿ ಸಂಕೇತವಾಗಿ ವಿಭೂತಿ ಹಾಕಿದರೆ ದುರ್ಯೋಧನ ಪಾತ್ರಧಾರಿಗೆ ಮಾತ್ರ ಸರ್ಪ ಲಾಂಛನವಿರುತ್ತದೆ.
ನನ್ನ ಮೇಲೆ ಗ್ಯಾಂಗ್ ರೇಪ್ ಯತ್ನ ನಡೆದಿತ್ತು: ಕೇರಳ ನಟಿ ಚರ್ಮಿಳಾ ಗಂಭೀರ ಆರೋಪ
ಕಿರೀಟ ಹಾಗೂ ಹಣೆ ಮೇಲೆ ಸರ್ಪ ಲಾಂಛನ ರಾರಾಜಿಸುತ್ತಿರುತ್ತದೆ. ಹಾಗಾಗಿ ನಟನೆ ಬಳಿಕ ಪಾತ್ರಧಾರಿಗಳಲ್ಲಿ ತಾನಾಗಿಯೇ ದ್ವೇಷ ಹೆಚ್ಚಾಗಿ ಹುಚ್ಚಾಪಟ್ಟೆ ನಡವಳಿಕೆ ಮೈಗೂಡಿ ಸಂಕಟ ಆಹ್ವಾನಿಸಿಕೊಳ್ಳುತ್ತಾರಂತೆ. ಮೇರುನಟ ಅಣ್ಣಾವ್ರಿಗೆ ಈ ವಿಚಾರ ಗೊತ್ತಿದ್ದೇ ಅವರು ಯಾವುದೇ ಪೌರಾಣಿಕ ಚಿತ್ರದಲ್ಲಿ ದುರ್ಯೋಧನನ ಪಾತ್ರ ಮಾಡಲು ಒಪ್ಪಲಿಲ್ಲವಂತೆ. ಪಾಪ ದರ್ಶನ್ ಈ ವಿಚಾರ ಗೊತ್ತಿಲ್ಲದೆ ಈಗ ಜೈಲಿನಲ್ಲಿ ತೂಗಾಡುತ್ತಿದ್ದಾರೆ. ಹಾಗಾದರೆ, ಈ ಸಮಸ್ಯೆಯಿಂದ ದರ್ಶನ್‌ಗೆ ಮುಕ್ತಿಯಿಲ್ಲವೇ? ಜೀವನ ಪೂರ್ತಿ ಇದೆ ಸಮಸ್ಯೆ ಅನುಭವಿಸಬೇಕೆ? ಈ ಪ್ರಶ್ನೆಗಳಿಗೂ ನಮ್ಮ ಜಗಲಿಕಟ್ಟೆ ಪಂಡಿತರ ಬಳಿ ಉತ್ತರವಿದೆ. ಅದು- ದರ್ಶನ್ ಜಾಮೀನಿನ ಮೇಲೆ ಜೈಲಿನಿಂದ ಹೊರಬರುತ್ತಿದ್ದಂತೆ ಭಕ್ತ ಅಂಬರೀಷ ಪಾತ್ರದಲ್ಲಿ ನಟಿಸಿ ಕಂಟಕ ಕಳೆದುಕೊಳ್ಳಬಹುದಂತೆ!
ಶಾಸಕರ ಕೊಠಡಿ ಇಲ್ಲದೆ ಭೋಜೇಗೌಡರ ಗೋಳು!
ವಿಧಾನ ಪರಿಷತ್ ಸದಸ್ಯ ಭೋಜೇಗೌಡರು ಮಂಗಳೂರಿಗೆ ಭೇಟಿ ನೀಡಿದರೆ ಸಭೆ ನಡೆಸಲು, ಅಧಿಕಾರಿಗಳನ್ನು ಕರೆಸಿ ಮಾತನಾಡಿಸಲು, ಅಹವಾಲು ಸ್ವೀಕರಿಸಲು ಶಾಲಾ ಕಾಲೇಜುಗಳ ಕೊಠಡಿಗಳನ್ನು ಗೊತ್ತು ಮಾಡುತ್ತಾರೆ!. ಅರೆ.. ಇದ್ಯಾಕೆ ಹೀಗೆ ಅಂದರೆ ಗೌಡರಿಗೆ ಮಂಗಳೂರಲ್ಲಿ ಶಾಸಕರ ಕಚೇರಿ ಸಿಕ್ಕಿಲ್ಲ. ನೈಋತ್ಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಗೆ ದಕ್ಷಿಣ ಕನ್ನಡ ಜಿಲ್ಲೆ ಕೂಡ ಒಳಪಡುವುದರಿಂದ ಭೋಜೇಗೌಡರು ಆಗಾಗ ಮಂಗಳೂರಿಗೆ ಆಗಮಿಸುತ್ತಿರುತ್ತಾರೆ. ಆದರೆ ಸ್ವಂತ ಕಚೇರಿ ಇಲ್ಲದ ಕಾರಣ ಅವರಿವರನ್ನು ಕಾಡಿ ಬೇಡಿ ಹೊರಗೆ ಕೊಠಡಿ ಗೊತ್ತು ಮಾಡಿ ಸಭೆ ನಡೆಸುತ್ತಾರೆ.
ತಮ್ಮ ಈ ನೋವನ್ನು ಮೊನ್ನೆ ನಡೆದ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಸ್ವತಃ ಭೋಜೇಗೌಡರು ಬೇಸರದಿಂದ ತೋಡಿಕೊಂಡರು. ‘ನನಗೆ ಮಹಾನಗರ ಪಾಲಿಕೆಯಲ್ಲಿ ಕೊಠಡಿ ನೀಡಿ ಎಂದು ಕೇಳಿದ್ದೇನೆ. ಆದರೆ ಇದುವರೆಗೆ ಆಯುಕ್ತರು ಸ್ಪಂದಿಸಿಲ್ಲ. ಏಕೆ ಎಂದು ಪ್ರಶ್ನಿಸಿದರೆ, ಕೊಠಡಿ ನೀಡುವ ಕಾರ್ಯ ಪ್ರಗತಿಯಲ್ಲಿದೆ ಎಂದಷ್ಟೇ ಉತ್ತರಿಸುತ್ತಾರೆ. ಇನ್ನೂ ಎಷ್ಟು ಸಮಯ ಬೇಕು ಎಂದು ಗೌಡರು ಸಭೆಯಲ್ಲಿ ಕೇಳಿದರು. ಇದಕ್ಕೆ ಉತ್ತರಿಸಿದ ಆಯುಕ್ತರು, ನವೀಕರಣಗೊಳಿಸಲು ಟೆಂಡರ್ ಕರೆಯಬೇಕು, ಕನಿಷ್ಠ 3 ತಿಂಗಳು ಬೇಕು ಎಂದಾಗ ಗೌಡರು ತಬ್ಬಿದ್ದು! ಕೊನೆಗೂ ಭೋಜೇಗೌಡರ ಗಲಾಟೆಗೆ ಬೆದರಿದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ತಾತ್ಕಾಲಿಕ ಕಚೇರಿಯನ್ನಾದರೂ ಕೊಡಿರಪ್ಪ ಎಂದು ಆಯುಕ್ತರಿಗೆ ಸೂಚಿಸಬೇಕಾಯಿತು.
ಪರಮೇಶ್ವರ್ ಮೇಲಿಂದ ಇಳಿದು ಬಂದ್ರಾ!
‘ಮಿನಿಸ್ಟರ್ ಪರಮೇಶ್ವರ್ ಏನು ಮೇಲಿಂದ ಇಳಿದು ಬಂದಿದ್ದಾರೇನ್ರಿ? ಅವರು ಒಬ್ಬ ಮಿನಿಸ್ಟರ್ ಅಷ್ಟೇ. ನನಗಷ್ಟೇ ಅಲ್ಲ ಜನಸಾಮಾನ್ಯರಿಗೂ ಅವರು ಸಿಗಬೇಕು.’- ಹೀಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಎದುರು ರಸ್ತೆಯಲ್ಲಿ ನಿಂತು ಆಕ್ರೋಶ ಹೊರ ಹಾಕಿದವರ ಹೆಸರು ಬಿ.ಟಿ. ಲಲಿತಾ ನಾಯಕ್. ಕಡತವೊಂದನ್ನು ಕೈಯಲ್ಲಿ ಹಿಡಿದು ಸಚಿವರ ನಿವಾಸಕ್ಕೆ ಬಂದಿದ್ದ ಮಾಜಿ ಸಚಿವೆ ಲಲಿತಾ ನಾಯಕ್ ಅವರ ಪರಿಚಯ ಇಲ್ಲದ ಭದ್ರತಾ ಸಿಬ್ಬಂದಿ ಒಳಗೆ ಬಿಟ್ಟಿಲ್ಲ. ಇದರಿಂದ ಕೂಗಾಡಿದ ಲಲಿತಾ ನಾಯಕ್, ‘ಗಂಟೆಯಿಂದ ರಸ್ತೆಯಲ್ಲಿ ನಿಂತಿದ್ದೀನಿ ಒಳಗೆ ಬಿಡದೆ ಅವಮಾನ ಮಾಡ್ತೀರಾ? ವಯಸ್ಸಾದ ಹೆಂಗಸು ಎಂಬುದೂ ಬೇಡವೇ? ಪರಮೇಶ್ವರ್ ಏನು ಮೇಲಿಂದ ಇಳಿದು ಬಂದಿದ್ದಾರೇನ್ರಿ?’ ಎಂದು ತರಾಟೆಗೆ ತೆಗೆದುಕೊಂಡರು.
ಕೇರಳ ಕಾಂಗ್ರೆಸ್ಸಲ್ಲೂ ಚಿತ್ರರಂಗ ರೀತಿ ಸೆಕ್ಸ್ ದಂಧೆ: 'ಕೈ' ನಾಯಕಿ ಸಿಮಿ ರೋಸ್
ಆಗಲೂ ಒಳಗೆ ಬಿಡದ ಸಿಬ್ಬಂದಿ ‘ಇದು ಸರ್ಕಾರಿ ನಿವಾಸವಲ್ಲ ಅವರ ಖಾಸಗಿ ನಿವಾಸ’ ಎಂದು ಸತಾಯಿಸಿದರು. ಮತ್ತಷ್ಟು ಕುಪಿತರಾದ ಲಲಿತಾ ನಾಯಕ್, ‘ಯಾವ ಮನೆಯಾದರೂ ಅವರು ಗೃಹ ಸಚಿವರು. ಅವರೇನು ಮೇಲಿಂದ ಇಳಿದು ಬಂದಿದ್ದಾರಾ. ನನ್ನ ಒಳಗೆ ಬಿಡಿ ಇಲ್ಲ ಅವರನ್ನು ಹೊರಗೆ ಕರೆಯಿರಿ’ ಎಂದು ಕಿಡಿ ಕಾರಿದರು. ತಕ್ಷಣ ಹೊರಗೆ ಬಂದ ಪರಮೇಶ್ವರ್, ಮಾಜಿ ಸಚಿವರ ಕ್ಷಮೆ ಕೋರಿ ಭದ್ರತಾ ಸಿಬ್ಬಂದಿಗೆ ಬುದ್ಧಿವಾದ ಹೇಳಿದರು. 80 ವರ್ಷ ವಯಸ್ಸಾದರೂ ಸತಾಯಿಸ್ತಾರೆ ಸರ್ ಎಂದ ಲಲಿತಾ ನಾಯಕ್ ಅವರಿಗೆ, ‘ನಮಗಿಂತ ನೀವೇ ಗಟ್ಟಿಯಾಗಿದ್ದೀರಿ ಬಿಡಿ’ ಎಂದು ಪರಮೇಶ್ವರ್ ಎಂದು ತೇಪೆ ಹಾಕಿದರು.
- ಮಂಡ್ಯ ಮಂಜುನಾಥ, ಮಂಡ್ಯ
- ಆತ್ಮಭೂಷಣ್, ಮಂಗಳೂರು
- ಶ್ರೀಕಾಂತ್ ಎನ್. ಗೌಡಸಂದ್ರ, ಬೆಂಗಳೂರು