ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೋವಿಡ್ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪದ ಬಗ್ಗೆ ವಿಚಾರಣೆಗೆ ನೇಮಿಸಿರುವ ಆಯೋಗದ ಮೇಲೆ ಒತ್ತಡ ಹಾಕಿ ಸರ್ಕಾರ ಮಧ್ಯಂತರ ವರದಿ ಪಡೆದಿದೆ.
ಬೆಂಗಳೂರು (ಸೆ.02): ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೋವಿಡ್ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪದ ಬಗ್ಗೆ ವಿಚಾರಣೆಗೆ ನೇಮಿಸಿರುವ ಆಯೋಗದ ಮೇಲೆ ಒತ್ತಡ ಹಾಕಿ ಸರ್ಕಾರ ಮಧ್ಯಂತರ ವರದಿ ಪಡೆದಿದೆ. ಇದನ್ನು ಕಾನೂನಾತ್ಮಕವಾಗಿ ಎದುರಿಸುತ್ತೇನೆ ಎಂದು ಮಾಜಿ ಆರೋಗ್ಯ ಸಚಿವ ಹಾಗೂ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ಭವಿಷ್ಯದ ಕುರಿತು ಹೈಕೋಟ್ ೯ನಲ್ಲಿ ವಿಚಾರಣೆ ನಡೆಯುತ್ತಿದೆ. ಅಲ್ಲದೇ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿಯಿಂದ ಉಗ್ರ ಹೋರಾಟ ನಡೆಯುತ್ತಿದೆ. ತಾವು ಒತ್ತಡದಲ್ಲಿರುವಾಗ ಬಿಜೆಪಿ ವಿರುದ್ಧ ಹೋರಾಡಲು ಅಸ್ತ್ರ ಕೊಡಿ ಎಂದು ನಿವೃತ್ತ ನ್ಯಾಯಾಧೀಶರ ಮೇಲೆ ಒತ್ತಡ ಹಾಕಿ ರಾತ್ರಿ 8 ಗಂಟೆಗೆ ವರದಿ ಪಡೆದಿದ್ದಾರೆ. ವರದಿ ಪಡೆದಿರುವ ಸಮಯ, ಸಂದರ್ಭದ ಬಗ್ಗೆ ಜನರಿಗೆ ಚೆನ್ನಾಗಿ ಅರ್ಥವಾಗುತ್ತದೆ' ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಈಗ ಕೋವಿಡ್ ಹಗರಣ ತನಿಖೆ ಮಾಡ್ತೀವಂದ್ರೆ ಏನರ್ಥ?: ಬಿ.ಸಿ.ಪಾಟೀಲ್ ಕಿಡಿ
ಅಂತಃಕರಣದಿಂದ ಕೆಲಸ: 'ನಾನು ಆತ್ಮವಂಚನೆ ಮಾಡಿಕೊಳ್ಳದೇ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಚಿವನಾಗಿ ಅಂತಃಕರಣದೊಂದಿಗೆ ಕೆಲಸ ಮಾಡಿದ್ದೇನೆ. ಇವರು ಕೋವಿಡ್ ವೇಳೆ ಮನೆಯೊಳಗೆ ಸೇರಿದ್ದರು. ಸಂಕಷ್ಟದ ವೇಳೆ ಜನರ ಜೀವ ಉಳಿಸಲು, ನನ್ನ ಪ್ರಾಣ ಒತ್ತೆ ಇಟ್ಟು, ಊಟ ನಿದ್ದೆ ಮಾಡದೆ ಶ್ರಮ ಪಟ್ಟಿದ್ದೇನೆ. ಕೋವಿಡ್ ತುರ್ತು ಸಂದರ್ಭದಲ್ಲಿ ಆರೋಗ್ಯ ವ್ಯವಸ್ಥೆ ಸಜ್ಜುಗೊಳಿಸಲು ಸಮಾರೋಪಾದಿಯಲ್ಲಿ ಹಿಂದಿನ ಸರ್ಕಾರ ಕೆಲಸ ಮಾಡಿದೆ. ಇದರಿಂದಾಗಿ ಆಸ್ಪತ್ರೆಗಳು ಹೇಗೆ ಬದಲಾಗಿವೆ ಎಂಬುದು ರೋಗಿಗಳಿಗೆ ಗೊತ್ತಿದೆ. ನಾನು ಕಾನೂನು ಬಾಹಿರವಾಗಿ ನಡೆದುಕೊಂಡಿಲ್ಲ' ಎಂದು ಹೇಳಿದರು.
ಇದು ದರೋಡೆಕೋರರ ಸರ್ಕಾರ: 'ಶುದ್ಧ ಚಾರಿತ್ರ್ಯದವರೆಂದು ಹೇಳಿಕೊಳ್ಳುವ ಮುಖ್ಯ ಮಂತ್ರಿ ಸಿದ್ದರಾಮಯ್ಯನವರೇ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ. ರಾಜ್ಯದಲ್ಲಿರುವುದು ಪರ್ಸೆಂಟೇಜ್ ಸರ್ಕಾರ ಅಲ್ಲ. ದರೋಡೆಕೋರರ ಯೋಜನೆಗಳಲ್ಲಿ ಪಾಲುದಾರಿಕೆ ಫಿಕ್ಸ್ ಮಾಡಿಕೊಂಡು ದರೋಡೆ ಮಾಡಲಾಗುತ್ತಿದೆ. ಶಾಶ್ವತವಾಗಿ ತಾವೇ ಅಧಿಕಾರದಲ್ಲಿರುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ದಿನಗಳನ್ನು ಎಣಿಸುತ್ತಿದೆ' ಎಂದು ಸುಧಾಕರ್ ಕಿಡಿಕಾರಿದರು.
'ಇದೇನು ಸತ್ಯ ಹರಿಶ್ಚಂದ್ರರ ಸರ್ಕಾರವಾ? ಜಸ್ಟೀಸ್ ಕೆಂಪಣ್ಣ ಆಯೋಗದ ವರದಿಯ ಭಾಗ-2ರಲ್ಲಿ ಏನಿದೆ ಎಂಬುದು ನಮಗೆ ಗೊತ್ತಿಲ್ಲವೇ ? ಇವರಂತೆ ನಾವು ಅಧಿಕಾರದಲ್ಲಿ ದ್ದಾಗ ರಾಜಕೀಯ ದ್ವೇಷ ಸಾಧಿಸಿದ್ದರೆ ಅರ್ಧ ಜನ ಜೈಲು ಸೇರಿರುತ್ತಿದ್ದರು. ಕಾಂಗ್ರೆಸಿಗರು ರಾಜಕೀಯದ್ವೇಷದಪರಂಪರೆ ಆರಂಭಿಸಿದ್ದಾರೆ. ಅದನ್ನು ಎದುರಿಸುತ್ತೇವೆ' ಎಂದರು.
ಕಾಂಗ್ರೆಸ್ ತಮ್ಮ ಹುಳುಕು ಮುಚ್ಚಿಕೊಳ್ಳಲು ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಆರೋಪ: ಸಂಸದ ಬೊಮ್ಮಾಯಿ
ಇವರು ಕೋವಿಡ್ ವೇಳೆ ಮನೆಯೊಳಗೆ ಸೇರಿಕೊಂಡಿದ್ದರು. ಆದರೆ ಸಂಕಷ್ಟದ ವೇಳೆ ಜನರ ಜೀವ ಉಳಿಸಲು, ನನ್ನ ಪ್ರಾಣ ಒತ್ತೆ ಇಟ್ಟು ಕೆಲಸ ಮಾಡಿದ್ದೇನೆ, ಊಟ, ನಿದ್ದೆ ಮಾಡದೆ ಶ್ರಮ ಪಟ್ಟಿದ್ದೇನೆ. ಇದರಿಂದಾಗಿ ಆಸ್ಪತ್ರೆಗಳು ಹೇಗೆ ಬದಲಾಗಿವೆ ಎಂಬುದು ರೋಗಿಗಳಿಗೆ ಗೊತ್ತಿದೆ.
-ಡಾ.ಕೆ.ಸುಧಾಕರ್ ಮಾಜಿ ಆರೋಗ್ಯ ಸಚಿವ, ಹಾಲಿ ಬಿಜೆಪಿ ಸಂಸದ