
ರಾಜ್ಯದಲ್ಲಿ ಬಿಜೆಪಿಗೆ ಟಾಂಗ್ ಕೊಡುವ ವಿಚಾರದಲ್ಲಿ ಟಾಪ್‌ನಲ್ಲಿರುವ ಸಚಿವರಲ್ಲಿ ಟಾಪ್ ಮೋಸ್ಟ್ ಸಚಿವ ಸಂತೋಷ್ ಲಾಡ್. ಅವಕಾಶ ಸಿಕ್ಕರೆ ಓಕೆ, ಸಿಗದಿದ್ದರೆ ತಾವೇ ಅವಕಾಶ ಮಾಡಿಕೊಂಡು ಬಿಜೆಪಿ ವಿರುದ್ಧ ಮುಗಿಬೀಳುವುದನ್ನು ಕರುನಾಡು ಕಂಡಿದೆ. ವಿಧಾನಮಂಡಲ ಅಧಿವೇಶನದ ವೇಳೆಯೂ ಇಂಥದ್ದೊಂದು ಅವಕಾಶ ಮಾಡಿಕೊಳ್ಳಲು ಹೆಣಗಾಡಿದರೂ ಸ್ಪೀಕರ್ ಖಾದರ್‌ರಿಂದಾಗಿ ಲಾಡ್ ಸಾಹೇಬ್ರು ಬೇಸ್ತು ಬಿದ್ದ ಪ್ರಸಂಗವಿದು. ಏನಾಯ್ತು ಅಂದ್ರೆ, ಬಜೆಟ್ ಮೇಲೆ ಭರ್ಜರಿ ಚರ್ಚೆ ನಡೆಯುತ್ತಿತ್ತು. ವಿರೋಧ ಪಕ್ಷದ ನಾಯಕ ಆರ್.ಅಶೋಕ್, ರಾಜ್ಯ ಬಜೆಟ್ ಸಾಲದಿಂದ ಕೂಡಿದೆ. ಇದು ಜನರ ಮೇಲೆ ಸಾಲದ ಹೊರೆ ಹೊರಿಸುವ ಬಜೆಟ್ ಎಂದು ವೀರಾವೇಶ ತೋರಿದರು.
ಇದರಿಂದ ಇಡೀ ಕಾಂಗ್ರೆಸ್ ಪಡೆ ರೊಚ್ಚಿಗೆದ್ದ ಕಾಂಗ್ರೆಸ್ ಪಡೆ ಸಾಮ್ರಾಟ್ ಅಶೋಕ್ ಮೇಲೆ ದಂಡೆತ್ತಿ ಹೋದರು. ಇದೇ ಅವಕಾಶ ಅಂತ ಲಾಡ್ ಸಾಹೇಬ್ರು ಕೂಡ ಅಶೋಕ್ ಗೆ ತನ್ಮೂಲಕ ಬಿಜೆಪಿಗೆ ತಮ್ಮ ಮಾತಿನ ಮೂಲಕ ಇಕ್ಕಿಟ್ಟಿನಲ್ಲಿ ಸಿಲುಕಿಸಿ, ಒದ್ದಾಡಿಸಿ ತಾವು ಸುಖ ಪಡಬೇಕು ಎಂದು ನಿರ್ಧರಿಸಿ ಎದ್ದು ನಿಂತರು. ಆಗ ಬಿಜೆಪಿಗೆ ಕೌಂಟರ್ ನೀಡುತ್ತಾ ನಿಂತಿದ್ದ ಮತ್ತೊಬ್ಬ ಸಚಿವ ಕೆ.ಜೆ.ಜಾರ್ಜ್ ಅವರನ್ನು, ‘ಒಂದ್ನಿಮಿಷ ಕೂತ್ಕೊಳ್ಳಿ ಸಾರ್. ನಾನು ಮಾತನಾಡಬೇಕು’ ಎಂದು ಲಾಡ್ ವಿನಂತಿಸಿದರು. ಆ ಮನವಿ ಪುರಸ್ಕರಿಸಿದ ಜಾರ್ಜ್ ಕೂತರು. ಇನ್ನೇನು ಲಾಡ್ ಸಾಹೇಬರು ಮಾತನಾಡೋಣ ಎಂದು ಎಡಕ್ಕೆ ನೋಡಿದರೆ ಅಲ್ಲಿದ್ದ ಸಚಿವ ಬೈರತಿ ಸುರೇಶ್, ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆ ಸುರಿಸತೊಡಗಿದರು. ಸುರೇಶಣ್ಣ ಒಂದು ನಿಮಿಷ ಕುಳಿತುಕೊಳ್ಳಿ ಎಂದು ಅವರಿಗೂ ಲಾಡ್ ಸಾಹೇಬರು ಮನವಿ ಮಾಡಿ ಅವರನ್ನು ಕೂರಿಸಿದರು.
ಕಾಂಗ್ರೆಸ್ 100 ಕಚೇರಿಗಳ ಶಂಕು ಸ್ಥಾಪನೆ ಬಳಿಕ ಜವಾಬ್ದಾರಿಯಿಂದ ಮುಕ್ತನಾಗುತ್ತೇನೆ: ಡಿಕೆಶಿ
ಆಗ ಹಿಂದೆ ನೋಡಿದರೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ, ಬಲಕ್ಕೆ ನೋಡಿದರೆ ಬಿ.ಕೆ.ಸಂಗಮೇಶ್ವರ್ ಅವರೂ ಎದ್ದು ನಿಂತು ಮಾತನಾಡುತ್ತಿದ್ದಾರೆ. ಇಬ್ಬರಿಗೂ ದುಂಬಾಲು ಬಿದ್ದ ಲಾಡ್ ಡಬಲ್ ಮನವಿ ಮಾಡಿ ಕೂರಿಸಿದರು. ಎಲ್ಲರೂ ಕೂತ ಬಳಿಕ ಇನ್ನು ನನಗಿನ್ನು ಯಾರ ಅಡ್ಡಿಯೂ ಇಲ್ಲ ಎಂದು ಅಂದುಕೊಂಡು ಲಾಡ್ ಅವರು ವಾಗ್ಬಾಣ ಬಿಡಬೇಕು ಎನ್ನುವಷ್ಟರಲ್ಲಿ, ಸ್ಪೀಕರ್ ಯು.ಟಿ. ಖಾದರ್, ‘ಸಂತೋಷ್ ಲಾಡ್ ಕುಳಿತುಕೊಳ್ಳಿ. ವಿರೋಧ ಪಕ್ಷದ ನಾಯಕರು ಮಾತನಾಡುತ್ತಿದ್ದಾರೆ. ಅವರು ಮಾತು ಮುಂದುವರಿಸಲಿ’ ಎಂದು ರೂಲಿಂಗ್ ನೀಡಿಬಿಟ್ಟರು. ಪಾಪ.. ಲಾಡ್ ಸಾಹೇಬರು ಪೆಚ್ಚಾದರು.
ದೊಡ್ಡ ರಾಜಕಾರಣಿಯ ಪುಟ್ಟ ಹೆಂಡ್ತಿ ಬಂದ್ರು ದಾರಿ ಬಿಡಿ...
ಹಂಪಿ ಉತ್ಸವದಲ್ಲಿ ಲಕ್ಷಾಂತರ ಜನ ಸೇರಿದ್ದರು. ಗಣ್ಯಾತಿಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸ್ಯಾಂಡಲ್‌ವುಡ್‌ನ ಪ್ರಮುಖ ಕಲಾವಿದರೂ ಉತ್ಸವಕ್ಕೆ ಆಗಮಿಸಿದ್ದರು. ವಿಜಯನಗರ ಜಿಲ್ಲಾ ಪೊಲೀಸರಿಗೆ ಟೆನ್ಷನ್ನೋ, ಟೆನ್ಷನ್... ಅತ್ತ ವೇದಿಕೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯುತ್ತಿದ್ದರೆ, ಇತ್ತ ವೇದಿಕೆ ಮುಂಭಾಗದ ಆಸನಗಳತ್ತ ತೆರಳಲು ವಿವಿಐಪಿ ಪಾಸ್ ಹಿಡಿದುಕೊಂಡು ರಾಜಕಾರಣಿಗಳ ಕುಟುಂಬದವರು, ಅಧಿಕಾರಿಗಳ ಕುಟುಂಬ ಸದಸ್ಯರು ಆಗಮಿಸಿದ್ದರು. ಆದರೆ, ವಿವಿಐಪಿ ವಿಂಗ್‌ನಲ್ಲಿ ಕುರ್ಚಿಗಳು ಖಾಲಿ ಇಲ್ಲ. ಸೋ, ವಿವಿಐಪಿ ಪಾಸ್ ಇದ್ದವರನ್ನೆಲ್ಲ ಅಲ್ಲಿಗೆ ಬಿಟ್ಟರೆ ಒಬ್ಬರ ಮೇಲೆ ಒಬ್ಬರು ಕೂರಬೇಕಾಗುತ್ತಿತ್ತು.
ಸೋ, ಪೊಲೀಸರು ಪಾಸ್ ಇದ್ದವರಿಗೂ ತಡೆಹಾಕಿದರು. ಆಗ ಅಲ್ಲಿಗೆ ಬಂದವರು ದೊಡ್ಡ ರಾಜಕಾರಣಿಯೊಬ್ಬರ ಪುಟ್ಟ ಹೆಂಡತಿ. ಬಂದವರೇ, ‘ನಾನೂ ಪ್ರಮುಖ ರಾಜಕಾರಣಿ ಅವರ ಹೆಂಡ್ತಿ, ಒಳಗೆ ಬಿಡಿ. ನನ್ನ ಬಳಿ ವಿವಿಐಪಿ ಪಾಸ್ ಇದೆ’ ಎಂದರು. ಆದರೆ ಪೊಲೀಸರು ಜಗ್ಗಲಿಲ್ಲ. ಪುಟ್ಟೆಂಡ್ತಿ ಗೋಗರೆದರು. ಇದಕ್ಕೆ ಪೊಲೀಸಪ್ಪ ‘ನಾನವರ ಹೆಂಡ್ತಿ, ಇವರ ಹೆಂಡ್ತಿ ಅಂತ ಬಂದೋರಿಗೆಲ್ಲ ಬಿಡಕ್ಕೆ ಆಗಲ್ಲಮ್ಮ’ ಎಂದರು. ಸಿಟ್ಟಾದ ಪುಟ್ಟೆಂಡ್ತಿ ತಮ್ಮ ಮೊಬೈಲ್ ತೆಗೆದು ಪತಿದೇವರೊಂದಿಗೆ ಇದ್ದ ಫೋಟೋ ತೋರಿಸಿ ನಾನೇ ಅವರ ಹೆಂಡ್ತಿ ಕಣ್ ರೀ.. ಎಂದು ಅಬ್ಬರಿಸಿ ‘ನಿಮಗ್ ಮ್ಯಾರೇಜ್ ಸರ್ಟಿಫಿಕೇಟ್ ಕೊಡಬೇಕಾ?’ ಎಂದು ಪೊಲೀಸರಿಗೆ ಜೋರು ಮಾಡಿದರು. ಆಗ ಪೊಲೀಸಪ್ಪನ ಬಳಿ ಪುಟ್ಟೆಂಡ್ತಿಯನ್ನು ಒಳಬಿಡದೆ ಬೇರೆ ದಾರಿಯಿರಲಿಲ್ಲ.
ಹುದ್ದೆಗೆ ಯೋಗ್ಯತೆ ಅಲ್ಲ, ಯೋಗ ಬೇಕು!
ಯಾವುದೇ ಉನ್ನತ ಹುದ್ದೆ ಸಿಗುವುದು ಹೇಗೆ ಎಂದರೆ, ಅದಕ್ಕೆ ಯೋಗ ಮಾತ್ರ ಅಲ್ಲ ಯೋಗ್ಯತೆಯೂ ಬೇಕು ಎಂಬುದು ಪ್ರಚಲಿತದಲ್ಲಿ ಇರುವ ಮಾತು. ಎಲ್ಲರೂ ಒಪ್ಪುವ ಈ ಮಾತನ್ನು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಒಪ್ಪುವುದಿಲ್ಲ. ಅವರ ಪ್ರಕಾರ ಯೋಗ್ಯತೆ ಅಲ್ಲ ಯೋಗ ಇದ್ದರೆ ಸಾಕಂತೆ. ನಾನು ಯೋಗ್ಯತೆ ಇದ್ದು ಶಾಸಕನಾಗಿದ್ದು ಅಲ್ಲ, ಯೋಗದಿಂದ ಎಂದು ಮನದಾಳದ ಮಾತು ಹೇಳಿದ್ದಾರೆ. ಮಂಗಳೂರಿನಲ್ಲಿ ಇತ್ತೀಚೆಗೆ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕರು ಈ ಅಣಿಮುತ್ತು ಉದುರಿಸಿದ್ದಾರೆ.
ಮುಸ್ಲಿಂ ಮನಸ್ಥಿತಿಯ ಹಿಂದೂಗಳಿಂದ ದೇಶಕ್ಕೆ ಅಪಾಯ: ಛಲವಾದಿ ನಾರಾಯಣಸ್ವಾಮಿ
ಈ ಹಿಂದೆ ಇದೇ ಅಕಾಡೆಮಿಯ ಅಧ್ಯಕ್ಷನಾಗಿದ್ದಾಗಿನ ತನ್ನ ಸಾಧನೆ ಮೆಲುಕು ಹಾಕಿದ ಉಮಾನಾಥರು, ತಾವು ಶಾಸಕನಾದ ಬಗೆಯನ್ನು ಸಂತಸದ ಬದಲು ವಿಷಾದದ ಧಾಟಿಯಲ್ಲಿ ಹೇಳತೊಡಗಿದರು. ನಾನು ಶಾಸಕನಾಗಿ ಆಯ್ಕೆಯಾದಾಗ ನನಗೆ ರಾತ್ರಿ ನಿದ್ರೆಯೇ ಸರಿ ಬರಲಿಲ್ಲ. ನಾನು ಶಾಸಕ ಅಲ್ಲ, ಸೇವಕ ಎಂಬುದು ತಲೆಯಲ್ಲಿ ತಿರುಗುತ್ತಿತ್ತು. ಹಾಗಾಗಿ ನನ್ನ ಕಚೇರಿಗೆ ‘ಸೇವಕ’ ಎಂದೇ ಹೆಸರು ಇರಿಸಲು ತೀರ್ಮಾನಿಸಿದೆ. ನನಗೆ ಯೋಗ್ಯತೆ ಇಲ್ಲದಿದ್ದರೂ ಜನತೆ ನನ್ನನ್ನು ಗೆಲ್ಲಿಸಿದ್ದಾರೆ. ಜನರೊಟ್ಟಿಗೆ ಇದ್ದರೆ ಅಂಥವರಿಗೆ ವರ್ಚಸ್ಸು ಬರುತ್ತದೆ. ಆದರೂ ನನಗೆ ದೊಡ್ಡ ಯೋಗ್ಯತೆ ಇಲ್ಲ ಎಂದು ಮತ್ತೆ ಮತ್ತೆ ಪ್ರಸ್ತಾಪಿಸಿದರು. ಇಷ್ಟಕ್ಕೂ ಯೋಗ-ಯೋಗ್ಯತೆ ಬಗ್ಗೆ ಶಾಸಕರು ಈಗ ಯಾಕೆ ಹೇಳುತ್ತಿದ್ದಾರೆ ಎಂಬುದು ಕೊನೆವರೆಗೂ ಯಾರಿಗೂ ಅರ್ಥವಾಗಲೇ ಇಲ್ಲ.
-ಗಿರೀಶ್ ಗರಗ
-ಕೃಷ್ಣ ಲಮಾಣಿ ಹೊಸಪೇಟೆ
-ಆತ್ಮಭೂಷಣ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.