ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಕುರಿತು ಕೇಂದ್ರ ಚುನಾವಣಾ ಆಯೋಗವು ಮಹತ್ವದ ಸಭೆ ಆಯೋಜಿಸಿದೆ. ಮುಖ್ಯ ಚುನಾವಣಾ ಆಯುಕ್ತರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಗೃಹ ಇಲಾಖೆ ಕಾರ್ಯದರ್ಶಿ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಲಿದ್ದಾರೆ.
ನವದೆಹಲಿ: ಮತದಾರರ ಪಟ್ಟಿ ತಯಾರಿಸುವಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್ ಸೇರಿದತೆ ವಿಪಕ್ಷಗಳ ಟೀಕೆಯ ನಡುವೆಯೇ, ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಕುರಿತು ಚರ್ಚಿಸುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗವು ಮಂಗಳವಾರ ಮಹತ್ವದ ಸಭೆ ಆಯೋಜಿಸಿದೆ. ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಗೃಹ ಇಲಾಖೆ ಕಾರ್ಯದರ್ಶಿ ಗೋವಿಂದ್ ಮೋಹನ್, ಶಾಸಕಾಂಗ ಇಲಾಖೆಯ ಕಾರ್ಯದರ್ಶಿ ರಾಜೀವ್ ಮಣಿ ಮತ್ತು ಯುಐಡಿಎಐ ಸಿಇಒ ಭುವನೇಶ್ ಕುಮಾರ್ ಮೊದಲಾದವರು ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚುನಾವಣಾ ನಾಮಪತ್ರದಲ್ಲಿನ ಲೋಪ ಪ್ರಶ್ನಿಸುವ ಹಕ್ಕು ಖಾಸಗಿಯವರಿಗಿಲ್ಲ: ಹೈಕೋರ್ಟ್ ಸ್ಪಷ್ಟನೆ
ಸೆಪ್ಟೆಂಬರ್ 2023ರಲ್ಲಿ, ಮತದಾರರ ನೋಂದಣಿ (ತಿದ್ದುಪಡಿ) ನಿಯಮಗಳು-2022ರ ನಿಯಮ 26-ಬಿ ಅಡಿಯಲ್ಲಿ ಆಧಾರ್ ಸಂಖ್ಯೆಯನ್ನು ಸಲ್ಲಿಸುವುದು ಕಡ್ಡಾಯವಲ್ಲ ಎಂದು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. 2022ರಲ್ಲಿ, ಕೇಂದ್ರ ಕಾನೂನು ಸಚಿವರಾಗಿದ್ದ ಕಿರಣ್ ರಿಜಿಜು ಆಧಾರ್ ಅನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಲಿಂಕ್ ಮಾಡುವುದು ಸ್ವಯಂಪ್ರೇರಿತವಾಗಿದೆ. ಆಧಾರ್ ಸಂಖ್ಯೆ ಇಲ್ಲದೆ ಮತದಾರರನ್ನು ಸೇರಿಸುವುದರಿಂದ ಫಾರ್ಮ್ 6ಬಿನಲ್ಲಿ ಒದಗಿಸಲಾದ ಇತರ ಐಚ್ಛಿಕ ದಾಖಲೆಗಳನ್ನು ಒದಗಿಸಬಹುದು ಎಂದು ಹೇಳಿದ್ದರು. ಆದರೆ ಈಗ ಆಧಾರ್ ಮತ್ತು ಗುರುತಿನ ಚೀಟಿ ಲಿಂಕ್ ಕುರಿತು ಆಯೋಗ ಚಿಂತನೆ ನಡೆಸುತ್ತಿರುವುದು ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ.
ಟಿಎಂಸಿ ಟೀಕೆ:
ಹಲವು ರಾಜ್ಯಗಳ ಮತದಾರರ ಗುರುತಿನ ಚೀಟಿಯಲ್ಲಿ ಒಂದೇ ಎಪಿಕ್ ಸಂಖ್ಯೆ ಕಂಡುಬಂದ ಹಿನ್ನೆಲೆ, ಚುನಾವಣಾ ಆಯೋಗ ಅಕ್ರಮವೆಸಗಿದೆ ಎಂದು ಟಿಎಂಸಿ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಆಕ್ಷೇಪ ಎತ್ತಿದ್ದವು. ಅದರ ಬೆನ್ನಲ್ಲೆ ಸಿಇಸಿ ಸಭೆ ಕರೆದಿರುವುದನ್ನು ಟಿಎಂಸಿ ಟೀಕಿಸಿದೆ.
‘ತದ್ರೂಪ ಎಪಿಕ್ ಸಂಖ್ಯೆಗಳ ಕುರಿತು ಚುನಾವಣಾ ಆಯೋಗ ಈ ಹಿಂದೆ ಬೇರೆಯೇ ಹೇಳಿಕೆ ನೀಡಿತ್ತು. ಈಗ ಸಭೆ ಕರೆದಿದೆ. ಇದು ಮುಖ ಉಳಿಸಿಕೊಳ್ಳುವ ಯತ್ನ. ರಾಜ್ಯದ ಮುಂದಿನ ಚುನಾವಣೆಗಳವರೆಗೆ ಟಿಎಂಸಿ ಕಟ್ಟುನಿಟ್ಟಿನ ಕಾವಲು ಕಾಯಲಿದೆ’ ಎಂದು ಟಿಎಂಸಿ ಸಂಸದೆ ಸಾಗರಿಕಾ ಘೋಷ್ ಹೇಳಿದ್ದಾರೆ.
ಸಿಎಂ ಮಮತಾ ಬ್ಯಾನರ್ಜಿ ಆರೋಪಕ್ಕೆ ಚುನಾವಣಾ ಆಯೋಗದಿಂದ ಸ್ಪಷ್ಟನೆ!