ದೇವೇಗೌಡರ ಎದುರು ನನ್ನನ್ನು ಚುನಾವಣೆಗೆ ನಿಲ್ಲಿಸಿದ್ದು ಕೆ.ಎಚ್.ಪಾಟೀಲರು: ಡಿ.ಕೆ.ಶಿವಕುಮಾರ್‌

ವಿದ್ಯಾರ್ಥಿ ಕಾಂಗ್ರೆಸ್‌ನಲ್ಲಿ ಯುವಕನಾಗಿದ್ದ ನನಗೆ ಕರೆದು ದೇವೇಗೌಡ್ರ ಅಂತಾ ನಾಯಕರ ಎದುರು ಸ್ಪರ್ಧಿಸುವಂತೆ ಟಿಕೆಟ್ ನೀಡಿದ್ದು ಕೆ.ಎಚ್. ಪಾಟೀಲ ಅವರು. ಅವರಂಥ ಹಿರಿಯರ ಆಶೀರ್ವಾದವೇ ನಾನು ಬೆಳೆಯಲು ಕಾರಣವಾಯಿತು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

It was KH Patil who fielded me against HD DeveGowda Says DK Shivakumar gvd

ಗದಗ (ಮಾ.17): ಮಣ್ಣ ಬಿಟ್ಟು ಮಡಕೆ ಇಲ್ಲ, ಹಿರಿಯರ ಬಿಟ್ಟು ದೇವರಿಲ್ಲ (ಯಶಸ್ಸು) ಇಲ್ಲ. ಇದೊಂದು ಅತ್ಯಂತ ಪ್ರಚಲಿತದಲ್ಲಿರುವ ಗಾದೆ ಮಾತು. ಈ ಗಾದೆ ನನ್ನ ಜೀವನದಲ್ಲಿ ಅಕ್ಷರಶಃ ಸತ್ಯವಾಗಿದೆ. ವಿದ್ಯಾರ್ಥಿ ಕಾಂಗ್ರೆಸ್‌ನಲ್ಲಿ ಯುವಕನಾಗಿದ್ದ ನನಗೆ ಕರೆದು ದೇವೇಗೌಡ್ರ ಅಂತಾ ನಾಯಕರ ಎದುರು ಸ್ಪರ್ಧಿಸುವಂತೆ ಟಿಕೆಟ್ ನೀಡಿದ್ದು ಕೆ.ಎಚ್. ಪಾಟೀಲ ಅವರು. ಅವರಂಥ ಹಿರಿಯರ ಆಶೀರ್ವಾದವೇ ನಾನು ಬೆಳೆಯಲು ಕಾರಣವಾಯಿತು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಭಾನುವಾರ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಕೆ.ಎಚ್. ಪಾಟೀಲ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 1985ರಲ್ಲಿ ನನಗೆ ವಿಧಾನಸಭೆ ಚುನಾವಣೆ ಟಿಕೆಟ್ ನೀಡಿ ದೇವೇಗೌಡರ ವಿರುದ್ಧ ಸ್ಪರ್ಧಿಸುವಂತೆ ಹೇಳಿದರು. ಅಲ್ಲಿಂದ ಇಲ್ಲಿಯವರೆಗೂ ಸತತವಾಗಿ 9 ಬಾರಿ ಬಿ ಫಾರಂ ತೆಗೆದುಕೊಂಡು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಸ್ಮರಿಸಿದ ಅವರು, ಅಂದು ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಇಂದು ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ, ಅವರ ಜನ್ಮ ಶತಮಾನೋತ್ಸವದಲ್ಲಿ ಭಾಗಿಯಾಗಿದ್ದೇನೆ, ಇದು ನನ್ನ ಪುಣ್ಯ. ಇದಕ್ಕೆ ಹೇಳಿದ್ದು ಮಣ್ಣ ಬಿಟ್ಟು ಮಡಕೆ ಇಲ್ಲ, ಹಿರಿಯರ ಬಿಟ್ಟು ಯಶಸ್ಸು ಇಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

Latest Videos

ಮುಸ್ಲಿಮರಿಗಷ್ಟೇ ಗುತ್ತಿಗೆ ಮೀಸಲಾತಿ ಕೊಟ್ಟಿಲ್ಲ: ಡಿ.ಕೆ.ಶಿವಕುಮಾರ್‌

ಮಾನವತಾವಾದಿ ನಾಯಕ: ಕೆ.ಎಚ್. ಪಾಟೀಲ್ ಅವರು ಮಹಾ ಮಾನವತಾವಾದಿಯಾಗಿದ್ದರು. ಜಾತಿ, ಧರ್ಮದ ತಾರತಮ್ಯವಿಲ್ಲದೆ ಸಹಕಾರಿ ಕ್ಷೇತ್ರದಲ್ಲಿ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಮುನ್ನಡೆಸಿದವರು. ಪಾಟೀಲರ ಬದುಕು, ಚಿಂತನೆ, ಆದರ್ಶ ಬೇರೆಯವರ ಬದುಕಿಗೆ ದಾರಿದೀಪವಾಗಿದೆ. ಮಹಾಭಾರತದಲ್ಲಿ ಭೀಷ್ಮ, ಧರ್ಮರಾಯನಿಗೆ ಒಂದು ಮಾತು ಹೇಳಿದ್ದರು. ಮನುಷ್ಯ ಹುಟ್ಟುವಾಗ ತಂದೆ-ತಾಯಿ, ಗುರು, ದೇವರು ಹಾಗೂ ಸಮಾಜ ಈ ನಾಲ್ಕು ಋಣದಲ್ಲಿ ಹುಟ್ಟುತ್ತಾನೆ. ಈ ನಾಲ್ಕು ಋಣಗಳನ್ನು ಧರ್ಮದಿಂದ ತೀರಿಸಬೇಕು ಎಂದು ಹೇಳಿದ್ದಾನೆ. ಅದೇ ರೀತಿ ಎಚ್.ಕೆ ಪಾಟೀಲ್, ಅವರ ಸ್ನೇಹಿತರು, ಅಭಿಮಾನಿಗಳು ಈ ಕಾರ್ಯಕ್ರಮ ನಡೆಸಿ ಧರ್ಮದ ಮೂಲಕ ಋಣ ತೀರಿಸುವ ಕೆಲಸ ಮಾಡಿದ್ದೀರಿ. ಕೆ.ಎಚ್. ಪಾಟೀಲ ಅವರು ಸೋಲು, ಗೆಲುವು, ಯಶಸ್ಸು ಎಲ್ಲವನ್ನು ಕಂಡಿರುವ ಮಾನವತಾವಾದಿ. 

ಅವರ ಜತೆ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ಇದೇ ಸಹಕಾರ ಕ್ಷೇತ್ರದ ಮೂಲ ಮಂತ್ರ. ಹೀಗೆ ಕೆ.ಎಚ್. ಪಾಟೀಲ್ ಅವರು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಮುನ್ನಡೆಸಿದ್ದಾರೆ. ಪಂಚಾಯ್ತಿ ಅಧ್ಯಕ್ಷ ಸ್ಥಾನದಿಂದ ಮಂತ್ರಿ ಸ್ಥಾನದವರೆಗೆ ಅವರು ಅನೇಕ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಈ ಕಾರಣಕ್ಕೆ ನಾವಿಂದು ಅವರನ್ನು ಸ್ಮರಿಸುತ್ತಿದ್ದೇವೆ. ಅವರ ಮಾರ್ಗದರ್ಶನದಲ್ಲಿ ಎಚ್.ಕೆ ಪಾಟೀಲ್, ಡಿ.ಆರ್. ಪಾಟೀಲ್ ಗದಗ ಜಿಲ್ಲೆಗೆ ಹೊಸ ರೂಪ ನೀಡಿದ್ದಾರೆ ಎಂದರು.

ಪಾಟೀಲ ಕುಟಂಬದ ಕೊಡುಗೆ: ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಬಹಳ ಮುಖ್ಯ. ದೇವರು ನಮಗೆ ಕೇವಲ ಎರಡು ಆಯ್ಕೆ ಕೊಟ್ಟಿದ್ದಾನೆ. ಒಂದು ಕೊಟ್ಟು ಹೋಗುವುದು, ಮತ್ತೊಂದು ಬಿಟ್ಟು ಹೋಗುವುದು. ಅದೇ ರೀತಿ ಈ ಜಿಲ್ಲೆಯ ಜಿಲ್ಲಾ ಕಚೇರಿ, ಮೆಡಿಕಲ್ ಕಾಲೇಜು, ಗಾಂಧೀಜಿ ಅವರ ಹೆಸರಲ್ಲಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ, ಗಾಂಧೀಜಿ ಅವರ ಸಬರಮತಿ ಆಶ್ರಮ ಮಾದರಿಯನ್ನು ಇದೇ ಜಿಲ್ಲೆಯಲ್ಲಿ ಮಾಡಿದ್ದಾರೆ. ನಾನು 15 ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದಾಗ ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ನೋಡಿದ್ದೆ. ನನ್ನ ಸಹೋದರ ಲೋಕಸಭಾ ಸದಸ್ಯನಾಗಿದ್ದಾಗ ಆತನ ಕ್ಷೇತ್ರದಲ್ಲಿ 300-400 ಘಟಕ ಸ್ಥಾಪಿಸಿದ್ದೆವು. ನಂತರ ಅದನ್ನು ಸರ್ಕಾರದ ಕಾರ್ಯಕ್ರಮವಾಗಿ ಘೋಷಣೆ ಮಾಡಿದೆವು ಎಂದರು.

ಮುಸ್ಲಿಂ ಮೀಸಲಾತಿ ಕದನ, ಕಾಂಗ್ರೆಸ್‌ ಸರ್ಕಾರದ ನಡೆ ದೇಶಕ್ಕೇ ಅಪಾಯ: ಬಿಜೆಪಿ

ಜೀವನದಲ್ಲಿ ನಂಬಿಕೆ ಹಾಗೂ ಸಂಬಂಧ ಬಹಳ ಪ್ರಮುಖ ವಿಚಾರ. ನಂಬಿಕೆ ಇಲ್ಲದೆ ಯಾವುದೇ ಸಂಬಂಧ ಉಳಿಯಲು ಸಾಧ್ಯವಿಲ್ಲ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ನಾನು ಕಂಡಂತೆ ಕೆ.ಎಚ್. ಪಾಟೀಲ್ ಅವರ ಜತೆಗೆ ಅವರ ಕುಟುಂಬದವರು ಮಾತ್ರ ಇರಲಿಲ್ಲ. ರಾಜ್ಯದ ಉದ್ದಗಲ ತಮ್ಮದೇ ಆದ ಪರಿವಾರ ಬೆಳೆಸಿಕೊಂಡಿದ್ದಾರೆ ಎಂದರು. ಅವರು ನಮ್ಮನ್ನು ಆಗಲಿ 33 ವರ್ಷಗಳಾಗಿರಬಹುದು. ಅವರ ಆದರ್ಶ, ಬದುಕು ಇಡೀ ಕರ್ನಾಟಕಕ್ಕೆ ಮಾದರಿಯಾಗಿದೆ. ಇತಿಹಾಸ ಮರೆತವ ಇತಿಹಾಸ ಸೃಷ್ಟಿಸಲಾರ. ಕೆ.ಎಚ್. ಪಾಟೀಲ್ ಅವರ ಕುಟುಂಬದವರು ನಿಮ್ಮೆಲ್ಲರ ಬದುಕಿನಲ್ಲಿ ಬದಲಾವಣೆ ತಂದಿದ್ದಾರೆ. ಈ ಜಿಲ್ಲೆ ಹಾಗೂ ಇಲ್ಲಿನ ಜನರ ಋಣ ತೀರಿಸಲು ದಿಟ್ಟವಾದ ತೀರ್ಮಾನ ಮಾಡಿದ್ದಾರೆ ಎಂದರು.

click me!