ಕಾವೇರಿ ನದಿ ನೀರಿನ ವಿಚಾರವಾಗಿ ನೀರು ನಿರ್ವಹಣ ಪ್ರಾಧಿಕಾರ ಪದೇಪದೇ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ರಾಜ್ಯದಲ್ಲಿನ ಕುಡಿಯುವ ನೀರಿನ ಸ್ಥಿತಿ ಅರ್ಥವಾಗುತ್ತಿಲ್ಲ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಿಡಿಕಾರಿದರು.
ಪಾಂಡವಪುರ (ಅ.01): ಕಾವೇರಿ ನದಿ ನೀರಿನ ವಿಚಾರವಾಗಿ ನೀರು ನಿರ್ವಹಣ ಪ್ರಾಧಿಕಾರ ಪದೇಪದೇ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ರಾಜ್ಯದಲ್ಲಿನ ಕುಡಿಯುವ ನೀರಿನ ಸ್ಥಿತಿ ಅರ್ಥವಾಗುತ್ತಿಲ್ಲ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಿಡಿಕಾರಿದರು. ತಾಲೂಕಿನಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಕಾವೇರಿ ಹೋರಾಟದ ಮುಂದಿನ ರೂಪುರೇಷಗಳನ್ನು ನಿರ್ಧರಿಸುವ ಸಂಬಂಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಸಭೆ ಕರೆಯಲಾಗಿದೆ. ಜಿಲ್ಲೆಯ ಎಲ್ಲಾ ಮುಖಂಡರು ಕುಳಿತು ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಕಾವೇರಿ ನೀರು ನಿರ್ವಹಣಾ ಸಮಿತಿ ಹಾಗೂ ಪ್ರಾಧಿಕಾರ ಪ್ರತಿಬಾರಿಯೂ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಪ್ರಾಧಿಕಾರದ ಅಧಿಕಾರಿಗಳಿಗೆ ರಾಜ್ಯದ ಕುಡಿಯುವ ನೀರಿನ ವಸ್ತುಸ್ಥಿತಿಯನ್ನೇ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅಣೆಕಟ್ಟೆಯಲ್ಲಿ ನೀರು ಖಾಲಿಯಾಗಿದೆ. ಕುಡಿಯುವ ನೀರಿನ ಹಾಹಾಕಾರ ಎದುರಾಗಿದೆ. ಕೆಲವೆಡೆ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಸಹ ತಮಿಳುನಾಡಿಗೆ 3 ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಆದೇಶ ನೀಡುವುದು ಆತಂಕ ತಂದಿದೆ ಎಂದರು.
ದೊಡ್ಡ ಕಾನೂನು ಹೋರಾಟ ಅಗತ್ಯ: ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಗಲು ದೊಡ್ಡಮಟ್ಟದ ಕಾನೂನು ಹೋರಾಟ ನಡೆಸುವ ಅಗತ್ಯವಿದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ನಗರದ ಸರ್ ಎಂ.ವಿ.ಪ್ರತಿಮೆ ಬಳಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು. ಪ್ರಾಧಿಕಾರ ಯಾವ ಮಾನದಂಡ ಆಧರಿಸಿ ನೀರು ಬಿಡುಗಡೆಗೆ ಆದೇಶ ಮಾಡುತ್ತಿದೆಯೋ ಗೊತ್ತಾಗುತ್ತಿಲ್ಲ. ಪ್ರಾಧಿಕಾರಕ್ಕೆ ವಾಸ್ತವ ಸ್ಥಿತಿ ಏಕೆ ಅರ್ಥವಾಗುತ್ತಿಲ್ಲ? ನೀರಿನ ಪರಿಸ್ಥಿತಿ ಅವಲೋಕನ ನಡೆಸುತ್ತಿಲ್ಲವೇಕೆ ಎಂಬುದೇ ತಿಳಿಯದಾಗಿದೆ. ವಸ್ತುಸ್ಥಿತಿ ಮನವರಿಕೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆಯೇ ಎನ್ನುವುದೂ ತಿಳಿಯುತ್ತಿಲ್ಲ ಎಂದು ಹೇಳಿದರು.
ಪ್ರಧಾನಿ ಮೋದಿ ಜಗತ್ತೇ ಮೆಚ್ಚುವಂತಹ ನಾಯಕ: ಸಂಸದ ರಮೇಶ ಜಿಗಜಿಣಗಿ
ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವ ಅಗತ್ಯವಿದೆ. ಹೋರಾಟದ ಮೂಲಕವೇ ಕೇಂದ್ರ ಸರ್ಕಾರ, ಪ್ರಾಧಿಕಾರ, ಸುಪ್ರೀಂಕೋರ್ಟ್ ಮತ್ತು ತಮಿಳುನಾಡಿಗೆ ವಾಸ್ತವ ಸ್ಥಿತಿ ಅರ್ಥ ಮಾಡಿಸಬೇಕಿದೆ ಎಂದು ಪ್ರತಿಪಾದಿಸಿದ ಅವರು, ಈ ನಿಟ್ಟಿನಲ್ಲಿ ಹಿರಿಯರು, ತಜ್ಞರು, ರೈತ ಮುಖಂಡರ ನಿರ್ದೇಶನದಂತೆ ಹೋರಾಟ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ ಅವರು, ಸೆ.26 ಮತ್ತು 29ರ ಬಂದ್‌ಗೆ ನಮ್ಮ ಬೆಂಬಲ ಇದೆ ಎಂದ ಅವರು, ಅದರಲ್ಲಿ ನಾವೂ ಭಾಗಿಯಾಗುತ್ತೇವೆ ಎಂದರು.