ರಾಜಸ್ಥಾನದ ಸಿಕಾರ್‌ನಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಪ್ರೀತಿಯ ಅಂಗಡಿ ಘೋಷಣೆಯನ್ನು ಲೇವಡಿ ಮಾಡಿದರು.
ಜೈಪುರ (ಜುಲೈ 27, 2023): ರಾಜಸ್ಥಾನದ ರಾಜಕೀಯ ಕಾರಿಡಾರ್‌ನಲ್ಲಿ ಇತ್ತೀಚೆಗೆ ‘’ರೆಡ್ ಡೈರಿ’’ ಅಥವಾ ಕೆಂಪು ಡೈರಿ ಭಾರಿ ಸದ್ದು ಮಾಡಿತು. ಆದರೂ, ಆ ಡೈರಿಯಲ್ಲಿರೋದೇನು ಎಂಬುದು ಮಾತ್ರ ಇನ್ನೂ ಸಸ್ಪೆನ್ಸ್ ಆಗಿಯೇ ಉಳಿದಿದೆ. ಈ ಬಗ್ಗೆ ರಾಜಸ್ಥಾನ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ರೆಡ್ ಡೈರಿ ಬಗ್ಗೆ ಮೋದಿ ಮೊದಲ ಮಾತನಾಡಿದ್ದು, ಡೈರಿಯಲ್ಲಿರುವ ರಹಸ್ಯಗಳು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಅನ್ನು ಹಾಳು ಮಾಡಲಿದೆ ಎಂದು ಟೀಕೆ ಮಾಡಿದ್ದಾರೆ.
ರಾಜಸ್ಥಾನದ ಸಿಕಾರ್‌ನಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮೊಹಬ್ಬತ್ ಕಿ ದುಕಾನ್ (ಪ್ರೀತಿಯ ಅಂಗಡಿ) ಘೋಷಣೆಯನ್ನು ಲೇವಡಿ ಮಾಡಿದರು. ಕಾಂಗ್ರೆಸ್‌ನ 'ಲೂಟಿ ಕಿ ದುಕಾನ್, ಜೂಟ್ ಕಿ ದುಕಾನ್' (ಲೂಟಿ ಮತ್ತು ಸುಳ್ಳಿನ ಅಂಗಡಿ)ಯ ಇತ್ತೀಚಿನ ಉತ್ಪನ್ನ ಕೆಂಪು ಡೈರಿಯಾಗಿದೆ. ಇದು ಕಾಂಗ್ರೆಸ್‌ನ ಭ್ರಷ್ಟಾಚಾರದ ರಹಸ್ಯಗಳನ್ನು ಒಳಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ಕೆಂಪು ಡೈರಿಯು ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ನಾಶ ಮಾಡುತ್ತದೆ ಎಂದೂ ಪ್ರಧಾನಿ ಮೋದಿ ಟೀಕೆ ಮಾಡಿದ್ದಾರೆ.
ಇದನ್ನು ಓದಿ: ನಾನಿಲ್ಲದಿದ್ರೆ ರಾಜಸ್ಥಾನ ಸಿಎಂ ಜೈಲಲ್ಲಿರ್ತಿದ್ರು; ಇಡಿ, ಐಟಿ ರೇಡ್ ವೇಳೆ ಬಚಾವ್ ಮಾಡಿದ್ದೆ: ಕಾಂಗ್ರೆಸ್ ಶಾಸಕ
ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ಪೇಪರ್ ಲೀಕ್ ಆಗಿರುವ ಕುರಿತು ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಪ್ರಧಾನಿ ಟಾರ್ಗೆಟ್ ಮಾಡಿದ್ದಾರೆ. ಈ ಮಧ್ಯೆ ರಾಜಸ್ಥಾನ ಮುಖ್ಯಮಂತ್ರಿ ಭಾಷಣವನ್ನು ಕಾರ್ಯಕ್ರಮವೊಂದರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಗೆಹ್ಲೋಟ್ ಆರೋಪಿಸಿದ ನಂತರ ಪ್ರಧಾನಿ ಕಚೇರಿ ಮತ್ತು ಅಶೋಕ್ ಗೆಹ್ಲೋಟ್ ನಡುವೆ ಸಾರ್ವಜನಿಕ ವಾಗ್ವಾದದ ಹಿನ್ನೆಲೆಯಲ್ಲಿ ಪ್ರಧಾನಿಯವರ ರ‍್ಯಾಲಿ ನಡೆದಿದೆ.
ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ, ಅಶೋಕ್ ಗೆಹ್ಲೋಟ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡಿದ ಭಾಷಣವನ್ನು ರದ್ದುಗೊಳಿಸಿರುವುದರಿಂದ ಪ್ರಧಾನಿಯನ್ನು ಟ್ವಿಟ್ಟರ್‌ನಲ್ಲಿ ಮಾತ್ರ ಸ್ವಾಗತಿಸಬಹುದು ಎಂದು ಹೇಳಿದರು. "ಇಂದು ನೀವು ರಾಜಸ್ಥಾನಕ್ಕೆ ಭೇಟಿ ನೀಡುತ್ತಿದ್ದೀರಿ. ನಿಮ್ಮ ಕಚೇರಿ ಪಿಎಂಒ ಕಾರ್ಯಕ್ರಮದಿಂದ ನನ್ನ ಪೂರ್ವ ನಿಗದಿತ 3 ನಿಮಿಷಗಳ ಭಾಷಣವನ್ನು ತೆಗೆದುಹಾಕಿದೆ, ಆದ್ದರಿಂದ ನಾನು ನಿಮ್ಮನ್ನು ಭಾಷಣದ ಮೂಲಕ ಸ್ವಾಗತಿಸಲು ಸಾಧ್ಯವಾಗುವುದಿಲ್ಲ, ಆದ್ದರಿಂದ ನಾನು ಈ ಟ್ವೀಟ್ ಮೂಲಕ ರಾಜಸ್ಥಾನಕ್ಕೆ ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ" ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Manipur Violence: ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಕಾಂಗ್ರೆಸ್, ಕೆಸಿಆರ್ ಪಕ್ಷ
ಆದರೆ, ಇದಕ್ಕೆ ತಿರುಗೇಟು ನೀಡಿದ ಪ್ರಧಾನಿ ಕಚೇರಿ ಕಾಲಿಗೆ ಪೆಟ್ಟಾಗಿರುವ ಕಾರಣ ಕಾರ್ಯಕ್ರಮದಿಂದ ಹೊರಗುಳಿಯುವುದಾಗಿ ಮುಖ್ಯಮಂತ್ರಿಗಳ ಕಚೇರಿಯೇ ಹೇಳಿದೆ ಎಂದು ಪ್ರತಿಕ್ರಿಯಿಸಿದೆ. "ಪ್ರೋಟೋಕಾಲ್ ಪ್ರಕಾರ, ನಿಮ್ಮನ್ನು ಸರಿಯಾಗಿ ಆಹ್ವಾನಿಸಲಾಗಿದೆ ಮತ್ತು ನಿಮ್ಮ ಭಾಷಣವನ್ನು ಸಹ ಸ್ಲಾಟ್ ಮಾಡಲಾಗಿದೆ. ಆದರೆ, ನೀವು ಸೇರಲು ಸಾಧ್ಯವಾಗುವುದಿಲ್ಲ ಎಂದು ನಿಮ್ಮ ಕಚೇರಿ ಹೇಳಿದೆ. ಪ್ರಧಾನಿ ನರೇಂದ್ರ ಮೋದಿಯವರ ಹಿಂದಿನ ಭೇಟಿಗಳ ಸಮಯದಲ್ಲಿಯೂ ನಿಮ್ಮನ್ನು ಯಾವಾಗಲೂ ಆಹ್ವಾನಿಸಲಾಗಿದೆ ಮತ್ತು ನೀವು ನಿಮ್ಮ ಉಪಸ್ಥಿತಿಯೊಂದಿಗೆ ಅವರನ್ನು ಗೌರವಿಸಿದ್ದೀರಿ. ಇಂದಿನ ಕಾರ್ಯಕ್ರಮಕ್ಕೆ ಸೇರಲು ನಿಮಗೆ ಈಗಲೂ ಸ್ವಾಗತವಿದೆ. ಅಭಿವೃದ್ಧಿ ಕಾರ್ಯಗಳ ಫಲಕದಲ್ಲಿ ನಿಮ್ಮ ಹೆಸರು ಇದೆ. ನಿಮ್ಮ ಇತ್ತೀಚಿನ ಗಾಯದಿಂದಾಗಿ ನಿಮಗೆ ಯಾವುದೇ ದೈಹಿಕ ಅಸ್ವಸ್ಥತೆ ಇಲ್ಲದಿದ್ದರೆ, ನಿಮ್ಮ ಉಪಸ್ಥಿತಿಯು ಆಳವಾಗಿ ಮೌಲ್ಯಯುತವಾಗಿರುತ್ತದೆ’’ ಎಂದು ಪಿಎಂಒ ಟ್ವೀಟ್ ಮಾಡಿದೆ.
ನಂತರ, ಸಿಕಾರ್‌ನಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಅಶೋಕ್ ಗೆಹ್ಲೋಟ್ ಅವರು ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ ಅನಾರೋಗ್ಯದ ಕಾರಣ ಸಾಧ್ಯವಾಗಲಿಲ್ಲ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ನಾನು ಪ್ರಾರ್ಥಿಸುತ್ತೇನೆ" ಎಂದು ಹೇಳಿದರು.
ಇದನ್ನೂ ಓದಿ: ಆಕ್ಸಿಜನ್ ಮಾಸ್ಕ್ ಧರಿಸಿದ್ದ ಸೋನಿಯಾ ಗಾಂಧಿ: ಕಾಂಗ್ರೆಸ್ ನಾಯಕಿ ಬಳಿ ತೆರಳಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ