
ತುಮಕೂರು (ಜೂ.23): ಪೊಲೀಸ್ ಇಲಾಖೆಗೆ ನೇಮಕ ಪ್ರಕ್ರಿಯೆ ಆರಂಭವಾಗಿದ್ದು ಇನ್ನು ಒಂದು ವಾರದೊಳಗೆ 3500 ಜನರಿಗೆ ಆದೇಶ ಹೋಗುತ್ತದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ 15 ಸಾವಿರ ಹುದ್ದೆ ಖಾಲಿಯಿದ್ದು ಈಗ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಾಗಿದೆ ಎಂದರು. ರಾಜ್ಯದಲ್ಲಿ ಸೈಬರ್ ಕ್ರೈಂ ಪ್ರಕರಣಗಳ ಹಿನ್ನೆಲೆಯಲ್ಲಿ ಪ್ರಮುಖ ಗಮನ ಕೊಟ್ಟಿದ್ದೇವೆ. ಯಾರೋ ಒಂದು ಪೋಸ್ಟ್ ಮಾಡಿದರೆ ಆ ಪೋಸ್ಟ್ ಒಂದು ಸಮುದಾಯವನ್ನು ಕೆರಳಿಸುವ ರೀತಿ ಇದ್ದರೆ ಅಂತಹ ಪೋಸ್ಟ್‌ಗಳನ್ನು ನಿಯಂತ್ರಣ ಮಾಡುವುದಕ್ಕೆ ಕ್ರಮ ಕೈಗೊಳ್ಳಲು ಸೂಚನೆ ಕೊಟ್ಟಿದ್ದೇನೆ ಎಂದರು.
ಸ್ಮಾರ್ಟ್ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಿ: ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಸ್ಮಾರ್ಟ್ ಬಸ್ ನಿಲ್ದಾಣದ ಕಾಮಗಾರಿ ಮುಂದಿನ ನವೆಂಬರ್ ಮಾಹೆಯೊಳಗಾಗಿ ಪೂರ್ಣಗೊಳ್ಳಬೇಕು ಎಂದು ಕೆಎಸ್‌ಆರ್‌ಟಿಸಿ ಮತ್ತು ಸ್ಮಾರ್ಟ್ ಸಿಟಿ ಎಂಡಿ ಅವರಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೂಚಿಸಿದರು. ತುಮಕೂರಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಸ್ಮಾರ್ಟ್ ಸಿಟಿ, ಟೂಡಾ ಮತ್ತು ಪಿಡಬ್ಲ್ಯೂಡಿ ಇಲಾಖೆಗಳಿಂದ ಕೈಗೊಳ್ಳಲಾದ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಜನರಿಗೆ ಅನುಕೂಲವಾಗುವಂತೆ ವೈಫೈ ಸಂಪರ್ಕ ಸೇರಿದಂತೆ ವಿನೂತನ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಬಸ್ ನಿಲ್ದಾಣದಲ್ಲಿ ಅಳವಡಿಸುವಂತೆ ಸೂಚಿಸಿದರು.
ಶೌಚಾಲಯವಿಲ್ಲದ ಶಾಲೆಗಳಿಗೆ ಪೋಷಕರು ಮಕ್ಕಳನ್ನು ಕಳುಹಿಸ್ತಾರಾ?: ಸರ್ಕಾರಕ್ಕೆ ಹೈಕೋರ್ಟ್ ತೀವ್ರ ತರಾಟೆ
ಸರ್ಕಾರದ ಯಾವುದೇ ಯೋಜನೆಗಳ ಅನುಷ್ಠಾನವನ್ನು ಮುಂದಿನ 50 ವರ್ಷಗಳ ಜನಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಬೇಕು ಮತ್ತು ಯೋಜನೆಗಳು ಜನರಿಗೆ ಸಂಪೂರ್ಣವಾಗಿ ಉಪಯೋಗವಾಗಬೇಕು. ಸ್ಮಾರ್ಟ್ ಸಿಟಿಯಿಂದ ನಗರದಲ್ಲಿ ನಿರ್ಮಾಣವಾಗಿರುವ ’ಸೆಂಟ್ರಲೈಸ್ಡ್ ಸೆಂಟರ್’ಅನ್ನು ಕಾಮಗಾರಿ ಪೂರ್ಣಗೊಂಡ ನಂತರ ಪೊಲೀಸ್ ಇಲಾಖೆಗೆ ಹಸ್ತಾಂತರಿಸುವಂತೆ ಸೂಚಿಸಿದರು.
ಹಸಿರೀಕರಣಕ್ಕೆ ಆದ್ಯತೆ ನೀಡಿ: ತುಮಕೂರು ನಗರವನ್ನು ಪ್ರವೇಶಿಸುವ ಜನರಿಗೆ ನಗರದ ಸೌಂದರ್ಯ ಎದ್ದು ಕಾಣಬೇಕು. ಎಲ್ಲೆಡೆ ಸ್ಮಾರ್ಟ್‌ನೆಸ್ ಇರಬೇಕು. ರಸ್ತೆಯ ಅಕ್ಕ-ಪಕ್ಕ ಮತ್ತು ಮಧ್ಯ ಭಾಗಗಳಲ್ಲಿ ಹಸಿರೀಕರಣವಾಗಬೇಕು. ರಸ್ತೆಯ ಉಭಯ ಬದಿಗಳಲ್ಲಿ ಬೋಗನ್ ವಿಲ್ಲಾ ಗಿಡಗಳನ್ನು ನೆಡುವ ಮೂಲಕ ಹಾಗೂ ಹೂ ಗಿಡಗಳನ್ನು ಬೆಳೆಸುವ ಮೂಲಕ ನಗರದ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು.
ತುಮಕೂರು ನಗರ ಪ್ರವೇಶಿಸುವ ಎಲ್ಲಾ ಮುಖ್ಯ ದ್ವಾರಗಳಲ್ಲಿ ಕಲ್ಪತರು ನಾಡಿಗೆ ಪ್ರವೇಶ ಎಂಬ ನಾಮಫಲಕವಿರಬೇಕು ಎಂದು ಸೂಚಿಸಿದರು. ನಗರದ ಎಲ್ಲಾ ಪ್ರಮುಖ ಜಂಕ್ಷನ್‌ಗಳಲ್ಲಿ ಮತ್ತು ಪ್ರಮುಖ ರಸ್ತೆಗಳಲ್ಲಿ ಜನರಿಗೆ ಅನುಕೂಲವಾಗುವ ರೀತಿ ವೈಫೈ ಸಂಪರ್ಕಗಳು ಇರಬೇಕು. ಈಗ ಸ್ಮಾರ್ಟ್ ಸಿಟಿ ವತಿಯಿಂದ 6 ಪ್ರಮುಖ ಕೇಂದ್ರಗಳಲ್ಲಿ ಮಾತ್ರ ವೈಫೈ ಸಂಪರ್ಕ ಇದ್ದು, ಇದನ್ನು ಹೆಚ್ಚಿಸುವಂತೆ ಸ್ಮಾರ್ಟ್ ಸಿಟಿ ಎಂಡಿ ರಂಗಸ್ವಾಮಿ ಅವರಿಗೆ ಸೂಚಿಸಿದರು.
4 ದಿಕ್ಕಿನಲ್ಲಿ ಆಂಬ್ಯುಲನ್ಸ್ ಇರಲಿ: ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಿಸಲಾದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಗುಣಮಟ್ಟವುಳ್ಳ ಜಿಮ್‌ವೊಂದನ್ನು ನಿರ್ಮಿಸಬೇಕು. ನಗರದ 4 ದಿಕ್ಕಿನಲ್ಲಿ ಸುಸಜ್ಜಿತವಾದ ಎಲ್ಲಾ ವೈದ್ಯಕೀಯ ಉಪಕರಣಗಳನ್ನೊಳಗೊಂಡ ಆಂಬುಲೆನ್ಸ್‌ಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಿಂಂದ ನೀಡಬೇಕು. ನಗರದ ಧೋಬಿಘಾಟ್‌ನಲ್ಲಿ ಅತ್ಯಾಧುನಿಕ ಬಟ್ಟೆತೊಳೆಯುವ ಯಂತ್ರ ಹಾಗೂ ಡ್ರೈಯರ್‌ಗಳನ್ನು ಇರಿಸಬೇಕು ಎಂದರು.
ಗ್ಯಾರಂಟಿ ಸ್ಕೀಮ್ ಜಾರಿಗೆ ಕಾಂಗ್ರೆಸ್‌ನಿಂದ ವಿದ್ಯುತ್ ದರ ಏರಿಕೆ, ತಕ್ಷಣ ಇಳಿಸಿ: ಎಚ್‌ಡಿಕೆ
ಕೊಳಚೆ ನೀರು ಕಾಮಗಾರಿಯನ್ನು ಪೂರ್ಣಗೊಳಿಸದ ಹೊರತು ಅಮಾನಿಕೆರೆಯಿಂದ ಕುಡಿಯುವ ನೀರನ್ನು ಪೂರೈಸಲು ಸಾಧ್ಯವಿಲ್ಲ. ಅಮಾನಿಕೆರೆ ಮುಂಭಾಗದ ಗ್ಲಾಸ್ ಹೌಸ್ ಸುತ್ತ ಸ್ವಚ್ಛತೆಗೆ ಆದ್ಯತೆ ನೀಡಬೇಕು ಮತ್ತು ಸ್ಮಾರ್ಟ್ ಸಿಟಿಯಿಂದ ನಿರ್ಮಿಸಲಾದ ಎಲ್ಲಾ ಕಾಮಗಾರಿಗಳ ನಿರ್ವಹಣೆಗೆ ಪ್ರಾಯೋಜನೆ ಮಾಡಿಕೊಳ್ಳಬೇಕು. ಸದ್ಯ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಉಳಿಕೆಯಾಗಿರುವ 8 ಕೋಟಿ ರು. ಅನುದಾನವನ್ನು ಉಪಯುಕ್ತ ಕೆಲಸಗಳಿಗೆ ಬಳಸುವಂತೆ ಸೂಚಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.