ಚುನಾವಣೆ ಪೂರ್ವದಲ್ಲಿ ನೀಡಿದ್ದ ಗ್ಯಾರಂಟಿ ಭರವಸೆಯಂತೆ 10 ಕೆಜಿ ಅಕ್ಕಿ ನೀಡಲು ತಮ್ಮ ಸರ್ಕಾರ ಬದ್ಧವಾಗಿದ್ದರೂ, ಕೇಂದ್ರ ಸರ್ಕಾರದ ಅಸಹಕಾರದಿಂದಾಗಿ ಅಕ್ಕಿ ನೀಡಲು ಆಗುತ್ತಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಸ್ಪಷ್ಟಪಡಿಸಿದರು.
ದಾವಣಗೆರೆ (ಜೂ.23): ಚುನಾವಣೆ ಪೂರ್ವದಲ್ಲಿ ನೀಡಿದ್ದ ಗ್ಯಾರಂಟಿ ಭರವಸೆಯಂತೆ 10 ಕೆಜಿ ಅಕ್ಕಿ ನೀಡಲು ತಮ್ಮ ಸರ್ಕಾರ ಬದ್ಧವಾಗಿದ್ದರೂ, ಕೇಂದ್ರ ಸರ್ಕಾರದ ಅಸಹಕಾರದಿಂದಾಗಿ ಅಕ್ಕಿ ನೀಡಲು ಆಗುತ್ತಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಸ್ಪಷ್ಟಪಡಿಸಿದರು. ನಗರದಲ್ಲಿ ಖಾಸಗಿ ಕಾರ್ಯಕ್ರಮಕ್ಕೆಂದು ಗುರುವಾರ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಹಿರಿಯ ಸಚಿವ ಕೆ.ಎಚ್.ಮುನಿಯಪ್ಪ ಕೇಂದ್ರ ಆಹಾರ ಸಚಿವರ ಭೇಟಿಗೆ ತೆರಳಿದ್ದರೂ, ಅವಕಾಶ ನೀಡದಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಅಪಾರ ಪ್ರಮಾಣದಲ್ಲಿ ಅಕ್ಕಿ ದಾಸ್ತಾನಿದ್ದರೂ ನೀಡುತ್ತಿಲ್ಲ.
ಇದರಿಂದ ರಾಜ್ಯಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿದರು. ಅಕ್ಕಿಯನ್ನು ನಾವೇನೂ ಪುಕ್ಕಟೆಯಾಗಿ ಕೇಳುತ್ತಿಲ್ಲ. ದುಡ್ಡು ಕೊಡುತ್ತೇವೆಂದರೂ ಕೇಂದ್ರ ಸ್ಪಂದಿಸುತ್ತಿಲ್ಲ. ಬಡವರ ಅನ್ನದ ಜೊತೆ ಆಟವಾಡುವ ಇಂತಹ ಪ್ರವೃತ್ತಿಯನ್ನು ಖಂಡಿಸುತ್ತೇನೆ. ಕೇಂದ್ರದ ಅಸಹಕಾರದ ಮಧ್ಯೆಯೂ ಸರ್ಕಾರವನ್ನು ಹೇಗೆ ಮುನ್ನಡೆಸಬೇಕೆಂಬುದು ನಮಗೆ ಗೊತ್ತಿದೆ ಎಂದು ಹೇಳಿದರು. ಕೇಂದ್ರವು ಈಗ ನೀಡುತ್ತಿರುವ ಅಕ್ಕಿ ನಮ್ಮ ರಾಜ್ಯದ ಪಾಲಿನದ್ದಾಗಿದೆ. ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿಗೆ ನಾವು 10 ಕೆಜಿ ಸೇರಿಸಿ, ಒಟ್ಟು 15 ಕೆಜಿ ಅಕ್ಕಿ ನೀಡುತ್ತೇವೆ. ಕೇಂದ್ರದವರು ಪುಕ್ಕಟೆಯಾಗಿ ಅಕ್ಕಿ ನೀಡುವಂತೆ ವರ್ತಿಸುತ್ತಿರುವುದು ಸರಿಯಲ್ಲ. ಅದಾನಿ ಅಂಬಾನಿಯಂತಹ ಬಂಡವಾಳ ಶಾಹಿಗಳ ಜೊತೆಗೆ ಬೆಳೆದವರಿಗೆ ಬಡವರ ಕಷ್ಟಗೊತ್ತಾಗುತ್ತಿಲ್ಲ ಎಂದು ಕಿಡಿಕಾರಿದರು.
ವಿದ್ಯುತ್ ದರ ಏರಿಕೆ ವಿರುದ್ಧ ಧರಣಿ: ಅರ್ಧ ರಾಜ್ಯದಲ್ಲಿ ವಾಣಿಜ್ಯೋದ್ಯಮ ಬಂದ್
ಅಬಕಾರಿ ಶುಲ್ಕ ನಾವು ಹೆಚ್ಚಳ ಮಾಡಿಲ್ಲ: ಸರ್ಕಾರವೆಂದರೆ ಕೆಲವೊಂದು ವಿಚಾರವಾಗಿ ತೆರಿಗೆ ಕಡಿಮೆ ಮಾಡುವುದು, ಹೆಚ್ಚಿಸುವುದು ಇದ್ದೇ ಇರುತ್ತದೆ. ಅದೆಲ್ಲಾ ಸಹಜವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಸರ್ಕಾರವು ಸಹಜವಾಗಿಯೇ ತೆರಿಗೆ ಪಡೆಯಬೇಕಾಗುತ್ತದೆ. ಮದ್ಯದ ದರವನ್ನು ನಾವು ಹೆಚ್ಚಿಸಿಲ್ಲ? ಬರೀ ಬಿಯರ್‌ನವರು ಮಾತ್ರ ಬೆಲೆ ಏರಿಕೆ ಮಾಡಿದ್ದಾರೆ. ನಾವು ಅಬಕಾರಿ ಶುಲ್ಕವನ್ನು ಹೆಚ್ಚಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಾರೆಂದು ವಿಪಕ್ಷದವರು ತಮ್ಮ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ನಾವಂತೂ ಮದ್ಯದ ದರ ಹೆಚ್ಚಿಸಿಲ್ಲ ಎಂದು ಪುನರುಚ್ಛರಿಸಿದರು.
ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನಿಂದಾಗಿ ಬಿಜೆಪಿಯವರು ಗೊಂದಲದಲ್ಲಿದ್ದು, ಹತಾಶರಾಗಿ ಮಾತನಾಡುತ್ತಿದ್ದಾರೆ. ವಿಧಾನಸಭೆಗೆ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗದಷ್ಟುಗೊಂದಲಕ್ಕೆ ಬಿಜೆಪಿ ಸಿಲುಕಿದೆ. ಗೆಲುವಿಗೆ ಯಾರಾದರೂ ಹೆಗಲು ಕೊಡುತ್ತಾರೆ. ಸೋಲಿನ ಹೊಣೆ ಹೊತ್ತುಕೊಳ್ಳಲು ಯಾರು ಎಂಬುದಾಗಿ ಆಲೋಚನೆ ಮಾಡುತ್ತಿದ್ದಾರೆ. ಹಾಗಾಗಿ ಸೋಲು ಅರಗಿಸಿಕೊಳ್ಳಲಾಗದೇ, ಸರ್ಕಾರವನ್ನು ಟೀಕಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಒತ್ತಡದಲ್ಲಿ ಬಿಜೆಪಿ ನಾಯಕ ಯಡಿಯೂರಪ್ಪ: ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಸದ್ಯ ಒತ್ತಡದಲ್ಲಿದ್ದಾರೆ. ಆದರೆ, ಅದು ಯಾವ ಒತ್ತಡ ಎಂಬುದಂತೂ ಗೊತ್ತಿಲ್ಲ. ಇಳಿ ವಯಸ್ಸಿನಲ್ಲಿ ಬಿಎಸ್‌ವೈ ಹತ್ತಿಕ್ಕುವ ಕೆಲಸ ಬಿಜೆಪಿಯಲ್ಲಿ ಆಗುತ್ತಿದೆ. ಈಗಾಗಲೇ ಬಿಜೆಪಿಯಲ್ಲಿ ಅನೇಕ ಹಿರಿಯ ನಾಯಕರನ್ನು ಹತ್ತಿಕ್ಕುವ ಕೆಲಸವೂ ಆಗುತ್ತಿದೆ ಎಂದು ಟೀಕಿಸಿದರು. ಯಡಿಯೂರಪ್ಪನವರಿಗೆ ಅಧಿಕಾರ ನಡೆಸುತ್ತಿದ್ದಾಗಲೇ ಯಾಕೆ ಇಳಿಸಿದರು? ಈಗ ಚುನಾವಣೆಯಲ್ಲಿ ಸೋತ ನಂತರ ರಾಜ್ಯ ಪ್ರವಾಸ ಮಾಡು ಅಂತಾ ಯಾಕೆ ಬಿಜೆಪಿ ನಾಯಕರು ಹೇಳುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಒಟ್ಟಾರೆ, ಬಿಎಸ್‌ವೈಯವರನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸವಂತೂ ವಿಪಕ್ಷದಲ್ಲಿ ನಡೆಯುತ್ತಿದೆ.
ಅದನ್ನೇ ಬಳಸಿಕೊಂಡು, ಬ್ಲಾಕ್‌ಮೇಲ್ ನಡೆಯುತ್ತಿದೆಯೆಂಬ ಅನುಮಾನ ನನಗಿದೆ ಎಂದು ಹೇಳಿದರು. ಹಿರಿಯ ನಾಯಕ ಜಗದೀಶ ಶೆಟ್ಟರ್ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸೂಕ್ತ ತೀರ್ಮಾನ ಮಾಡುತ್ತದೆ. ಈಗಷ್ಟೇ ನಾವು ಅಧಿಕಾರಕ್ಕೆ ಬಂದಿದ್ದೇವೆ. ಬಿಜೆಪಿಯವರು ನೀಡಿದ್ದ 600 ಭರವಸೆಗಳ ಪೈಕಿ 50 ಭರವಸೆಯನ್ನೂ ಈಡೇರಿಸಿಲ್ಲ. ಯೋಗ್ಯತೆ ಇಲ್ಲದವರು ಈಗ ನಮ್ಮ ಐದೂ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ಕಡೆ ಬೊಟ್ಟು ಮಾಡುವ ಬಿಜೆಪಿಯವರು ಎಷ್ಟುಭರವಸೆ ಈಡೇರಿಸಿದ್ದಾರೆ ಎಂದು ಹರಿಹಾಯ್ದರು.
ಗ್ಯಾರಂಟಿ ಸ್ಕೀಮ್ ಜಾರಿಗೆ ಕಾಂಗ್ರೆಸ್‌ನಿಂದ ವಿದ್ಯುತ್ ದರ ಏರಿಕೆ, ತಕ್ಷಣ ಇಳಿಸಿ: ಎಚ್‌ಡಿಕೆ
ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವ ವಿಚಾರಕ್ಕೆ ಶಾಸಕಾಂಗ ಸಭೆ ಇದೆ, ಕಾಂಗ್ರೆಸ್ ಹೈಕಮಾಂಡ್ ಇದೆ. ಅಲ್ಲಿ ನಿರ್ಧಾರವಾಗುತ್ತದೆ. ಈಗ ಏನೇ ಹೇಳಿದರೂ ಅದು ಆಯಾ ಮುಖಂಡರ ವೈಯಕ್ತಿಕ ಅಭಿಪ್ರಾಯ. ನಾನೂ ಸಹ ನನ್ನ ವೈಯಕ್ತಿಕ ಅಭಿಪ್ರಾಯವನ್ನು ಹೇಳುವುದಿಲ್ಲ.
-ಆರ್.ಬಿ.ತಿಮ್ಮಾಪುರ, ಅಬಕಾರಿ ಸಚಿವ.