ಶಿರಸಿ ಕ್ಷೇತ್ರ: ಕಾಂಗ್ರೆಸ್ ಪಾಳಯದಲ್ಲಿ ಬಂಡಾಯ..!

By Girish Goudar  |  First Published Apr 8, 2023, 2:00 AM IST

ಶಿರಸಿಯಲ್ಲಂತೂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವೇ ಬಂಡಾಯವೆದ್ದ ಕಾಂಗ್ರೆಸ್ ಮುಖಂಡರೋರ್ವರು, ಪಕ್ಷದ ಅಭ್ಯರ್ಥಿಯ ವಿರುದ್ಧ ನಿಂತು ತೊಡೆ ತಟ್ಟಲು ಸಿದ್ಧರಾಗಿದ್ದಾರೆ. 


ಭರತ್‌ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರಕನ್ನಡ(ಏ.08): ಉತ್ತರಕನ್ನಡ ಜಿಲ್ಲೆಯ ಕಾಂಗ್ರೆಸ್ ಪಾಳಯದಲ್ಲಿ ಇದೀಗ ಅಸಮಾಧಾನದ ಹೊಗೆ ಆಡಲಾರಂಭಿಸಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಹೆಸರು ಘೋಷಣೆ ಆಗುತ್ತಿದ್ದಂತೇ ಅಲ್ಲಲ್ಲಿ  ಅಸಮಾಧಾನ ಕಾಣಿಸಿಕೊಂಡಿದ್ದು, ಪಕ್ಷದ ಮುಖಂಡರೇ ಬಂಡಾಯವೇಳಲು ಆರಂಭಿಸಿದ್ದಾರೆ. ಶಿರಸಿಯಲ್ಲಂತೂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವೇ ಬಂಡಾಯವೆದ್ದ ಕಾಂಗ್ರೆಸ್ ಮುಖಂಡರೋರ್ವರು, ಪಕ್ಷದ ಅಭ್ಯರ್ಥಿಯ ವಿರುದ್ಧ ನಿಂತು ತೊಡೆ ತಟ್ಟಲು ಸಿದ್ಧರಾಗಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ...

Latest Videos

undefined

ಹೌದು, ರಾಜ್ಯ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದಂತೇ ರಾಜ್ಯದ ಹಲವು ವಿಧಾನ ಸಭಾ ಕ್ಷೇತ್ರಗಳಲ್ಲಿ ಬಂಡಾಯದ ಬಿಸಿಯೇರಲಾಂಭಿಸಿದೆ. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದವರು ಟಿಕೆಟ್ ಕೈ ತಪ್ಪುತ್ತಿದ್ದಂತೆ, ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಉತ್ತರಕನ್ನಡ ಜಿಲ್ಲೆ ಶಿರಸಿ - ಸಿದ್ದಾಪುರ ವಿಧಾನ ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯದ ಬಿಸಿ ಜೋರಾಗಿಯೇ ಹೊಗೆಯಾಡಲಾರಂಭಿಸಿದೆ. 
ಸತತ ನಾಲ್ಕು ಬಾರಿ ಸೋಲನ್ನು ಎದುರಿಸಿದ ಅಭ್ಯರ್ಥಿಗೆ ಮತ್ತೆ ಮಣೆ ಹಾಕಿರುವ ಕಾಂಗ್ರೆಸ್ ವಿರುದ್ಧ ಪಕ್ಷದ ಮುಖಂಡರೇ ಆಕ್ರೋಶ ಹೊರಹಾಕಿದ್ದಾರೆ. ಶಿರಸಿಯಲ್ಲಿ ಭೀಮಣ್ಣ ನಾಯ್ಕ್ ಸೇರಿದಂತೆ ಹಲವರು ಪಕ್ಷದ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ವೆಂಕಟೇಶ ಹೆಗಡೆ ಹೊಸಬಾಳೆ ಕೂಡ ಒಬ್ಬರು. ಈ ಬಾರಿ ತನಗೇ ಟಿಕೆಟ್ ದೊರೆಯುತ್ತೆ ಅನ್ನೋ ವಿಶ್ವಾಸದಲ್ಲಿ ವೆಂಕಟೇಶ್ ಹೆಗಡೆ ಇದ್ದರಾದ್ರೂ ಪಕ್ಷ ಭೀಮಣ್ಣ ನಾಯ್ಕ್‌ಗೆ ಮಣೆ ಹಾಕಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ತೀವ್ರ ಅಸಮಧಾನಕ್ಕೆ ಒಳಗಾಗಿರುವ ವೆಂಕಟೇಶ ಹೆಗಡೆ ಹೊಸಬಾಳೆ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಚುನಾವಣೆ ಸ್ಪರ್ಧಿಸಲು ನಿರ್ಧಾರ ಮಾಡಿದ್ದಾರೆ. 

ರಾಜಕಾರಣ ಅಂದ್ರೆ ಫುಟ್ಬಾಲ್ ಅಲ್ಲ, ಚೆಸ್ ಗೇಮ್, ಬಿಜೆಪಿ ಪಟ್ಟಿ ಬರಲಿ ಬಳಿಕ ಮಾತಾಡ್ತೇನೆ: ಡಿಕೆಶಿ

ಅಂದಹಾಗೆ, ಕಾಂಗ್ರೆಸ್‌ನಿಂದ ಟಿಕೆಟ್ ಪಡೆದುಕೊಂಡಿರುವ ಭೀಮಣ್ಣ ನಾಯ್ಕ್ ಉತ್ತಮ ರಾಜಕೀಯ ಸಂಪರ್ಕ ಹೊಂದಿದ್ದು, ಈ ಬಾರಿ ಸೇರಿದಂತೆ ಸತತ ನಾಲ್ಕು ಬಾರಿ ಪಕ್ಷದಿಂದ ಟಿಕೆಟ್ ಪಡೆದಿದ್ದಾರೆ. ಇದರಲ್ಲಿ ಕಳೆದ ಬಾರಿ ನೀಡಿದ್ದ ಎಂ ಎಲ್ ಸಿ ಟಿಕೆಟ್ ಕೂಡಾ ಸೇರಿಕೊಂಡಿದೆ. ಆದರೆ, ಪ್ರತೀ ಬಾರಿಯೂ ಭೀಮಣ್ಣ ನಾಯ್ಕ್ ಸೋಲನ್ನೇ ಅನುಭವಿಸಿದ್ದರು. ಅಲ್ಲದೇ, ಕಳೆದ ಒಂದೂವರೆ ದಶಕದಿಂದ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಕಳೆದ ವರ್ಷವಷ್ಟೇ ರಾಜೀನಾಮೆ ನೀಡಿದ್ದರು. 

ಜಿಲ್ಲೆಯಲ್ಲಿ ಟಿಕೆಟ್‌ಗಾಗಿ ನಾಮಧಾರಿ v/s ಹವ್ಯಕ ಬ್ರಾಹ್ಮಣ ಫೈಟ್ ನಡೆಯುತ್ತಿದ್ದದ್ದರಿಂದ ಶಿರಸಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಕಾಂಗ್ರೆಸ್‌ನಿಂದ ಬ್ರಾಹ್ಮಣ ಅಭ್ಯರ್ಥಿಯನ್ನೇ ಇಳಿಸುವ ಯೋಚನೆಯಿತ್ತು. ನಾಮಧಾರಿ ಸಮುದಾಯದ ಮುಖಂಡ ಭೀಮಣ್ಣ ನಾಯ್ಕ್ ಕುಮಟಾ ಕ್ಷೇತ್ರದಿಂದ ಟಿಕೆಟ್ ಪಡೆಯಲು ತೆರೆಮರೆ ಕಸರತ್ತು ನಡೆಸಿದ್ದರು. ಆದರೆ, ಅಲ್ಲಿ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾ ಹೆಸರು ಕೇಳಿಬರುತ್ತಿದ್ದಂತೆ ಆ ಕಸರತ್ತನ್ನು ನಿಲ್ಲಿಸಿದ್ದರು. ಪಕ್ಷದ ಚಟುವಟಿಕೆಗಳಿಂದ ಕೊಂಚ ದೂರ ಉಳಿದಿದ್ದ ಭೀಮಣ್ಣ ಈ ಬಾರಿ ಚುನಾವಣೆ ಅಖಾಡಕ್ಕೆ ಇಳಿಯಲ್ಲ ಎಂದು ಕೆಲವು ಕಾರ್ಯಕರ್ತರು ತಿಳಿದಿದ್ರು. 

ಆದರೆ,  ಕಾರ್ಯಕರ್ತರ ಪೈಕಿ ಕೆಲವರಿಗೆ ಶಾಕ್ ಎಂಬಂತೆ ಮತ್ತೆ ಭೀಮಣ್ಣ ನಾಯ್ಕ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ನಿರಂತರವಾಗಿ ಸೋಲು ಕಂಡಿರುವ ಭೀಮಣ್ಣ ನಾಯ್ಕ್ ರಾಜ್ಯ ಕಾಂಗ್ರೆಸ್‌ನಲ್ಲಿ ಉತ್ತಮ ಸಂಪರ್ಕ ಹೊಂದಿರುವುದರಿಂದ ಮತ್ತೆ ಟಿಕೆಟ್ ತನ್ನದಾಗಿಸಿದ್ದಾರಾದ್ರೂ ಟಿಕೆಟ್ ತನಗೇ ದೊರೆಯುತ್ತದೆ ಅನ್ನೋ ಯೋಚನೆಯಲ್ಲಿದ್ದ ವೆಂಕಟೇಶ ಹೆಗಡೆ ಹೊಸಬಾಳೆ ಪಕ್ಷದ ವಿರುದ್ಧವಾಗಿಯೇ ನಿಂತು ಚುನಾವಣೆ ಸ್ಪರ್ಧೆಗೆ ತಯಾರಿ ನಡೆಸಿದ್ದಾರೆ. 

ಕೊಡಗಿನ ಎರಡು ಕ್ಷೇತ್ರಕ್ಕೆ ಅಳೆದು ತೂಗಿ ಟಿಕೆಟ್ ನೀಡಿದ ಕಾಂಗ್ರೆಸ್‌ ಗೆ ಬಂಡಾಯದ ಬಿಸಿ!

ಒಟ್ಟಿನಲ್ಲಿ ಕಾಂಗ್ರೆಸ್ ತನ್ನ ಎರಡನೇ ಪಟ್ಟಿಯಲ್ಲಿ ಶಿರಸಿ - ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಭೀಮಣ್ಣ ನಾಯ್ಕ್ ಹೆಸರನ್ನು ಅಂತಿಮ ಮಾಡುತ್ತಿದ್ದಂತೇ ಬಂಡಾಯದ ಬಿಸಿ ಕಾಣಿಸಿದ್ದು, ಇದು ಮುಂದಿನ ಚುನಾವಣೆಯ ಮೇಲೆ‌ ಭಾರೀ ಪರಿಣಾಮ ಬೀರುವ ಸಾಧ್ಯತೆಗಳಿವೆ. ಈ ಕಾರಣದಿಂದ ಪಕ್ಷದ ರಾಜ್ಯ ನಾಯಕರು ಶೀಘ್ರದಲ್ಲಿ ಮಧ್ಯಪ್ರವೇಶಿಸಿ ಬಂಡಾಯವನ್ನು ಶಮನ ಮಾಡುತ್ತಾರಾ ಎಂಬುದು ಕಾದು ನೋಡಬೇಕಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!