Karnataka Assembly Elections 2023: ಸಿದ್ದು ಮನೆಗೆ ಆಕಾಂಕ್ಷಿಗಳ ದಂಡು, ಟಿಕೆಟ್‌ಗೆ ಲಾಬಿ

Published : Apr 08, 2023, 12:00 AM IST
Karnataka Assembly Elections 2023: ಸಿದ್ದು ಮನೆಗೆ ಆಕಾಂಕ್ಷಿಗಳ ದಂಡು, ಟಿಕೆಟ್‌ಗೆ ಲಾಬಿ

ಸಾರಾಂಶ

ಹೂಲಗೇರಿ, ಅಖಂಡ, ರಾಮಪ್ಪ, ನಟಿ ಭಾವನಾರಿಂದ ಭೇಟಿ, ಬೋವಿ ಗುರುಪೀಠದ ಸ್ವಾಮೀಜಿಗಳಿಂದಲೂ ಸಿದ್ದು ಜತೆ ಚರ್ಚೆ.   

ಬೆಂಗಳೂರು(ಏ.08):  ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದೆಹಲಿಯಿಂದ ಹಿಂತಿರುಗಿದ ಬೆನ್ನಲ್ಲೇ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ದಂಡೇ ಅವರನ್ನು ಭೇಟಿಯಾಗಿ ತಮಗೆ ಟಿಕೆಟ್‌ ನೀಡುವಂತೆ ಖುದ್ದು ಹಾಗೂ ತಮ್ಮ ಸಮುದಾಯದ ಸ್ವಾಮೀಜಿಗಳು, ಬೆಂಬಲಿತ ಮುಖಂಡರ ಮೂಲಕ ಒತ್ತಡ ಹಾಕುತ್ತಿದ್ದಾರೆ.

ಕಾಂಗ್ರೆಸ್‌ ಈಗಾಗಲೇ ಎರಡು ಹಂತದಲ್ಲಿ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರು ಪ್ರಕಟವಾಗದ ಹಾಲಿ ಶಾಸಕರು ಆತಂಕಗೊಂಡಿದ್ದಾರೆ. ಈ ಪೈಕಿ ಲಿಂಗಸುಗೂರು ಹಾಲಿ ಶಾಸಕ ಡಿ.ಎಸ್‌.ಹೂಲಗೇರಿ, ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಹರಿಹರ ಶಾಸಕ ರಾಮಪ್ಪ ಅವರು ಶುಕ್ರವಾರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮಗೆ ಟಿಕೆಟ್‌ ಖಚಿತವಾಗದಿರುವ ಬಗ್ಗೆ ಚರ್ಚಿಸಿ ಮೂರನೇ ಪಟ್ಟಿಯಲ್ಲಾದರೂ ತಮ್ಮ ಹೆಸರು ಪ್ರಕಟಿಸಲು ಮನವಿ ಮಾಡಿದರು. ಈ ಮಧ್ಯೆ, ಹೂಲಗೇರಿ ಹಾಗೂ ಅಖಂಡ ಶ್ರೀನಿವಾಸ ಮೂರ್ತಿ ಪರವಾಗಿ ಅವರ ಸಮುದಾಯದ ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಕೂಡ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಸಮುದಾಯದ ಹಾಲಿ ಶಾಸಕರು ಹಾಗೂ ಕೆಲ ಹೊಸ ಮುಖಗಳಿಗೆ ಸೇರಿ 7 ಕ್ಷೇತ್ರಗಳ ಟಿಕೆಟ್‌ ನೀಡುವಂತೆ ಮನವಿ ಮಾಡಿದರು.

ಬಾದಾಮಿ: ಚಿಮ್ಮನಕಟ್ಟಿಗೆ ಟಿಕೆಟ್‌, ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ

ಎಂಬಿಪಾ ಮೂಲಕ ಗಂಗಾಂಬಿಕೆ ಮನವಿ:

ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದ ಪ್ರಬಲ ಟಿಕೆಟ್‌ ಆಕಾಂಕ್ಷಿ ಗಂಗಾಬಿಕೆ ಮಲ್ಲಿಕಾರ್ಜುನ್‌ ಅವರ ಪರವಾಗಿ ಲಿಂಗಾಯತ ಸಮುದಾಯದ ಕಾಂಗ್ರೆಸ್‌ನ ಪ್ರಭಾವಿ ನಾಯಕ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು. ಕ್ಷೇತ್ರದಲ್ಲಿ ನಡೆಸಿದ ಬಹುತೇಕ ಸರ್ವೆಗಳಲ್ಲಿ ಗಂಗಾಂಬಿಕೆ ಅವರಿಗೆ ಟಿಕೆಟ್‌ ನೀಡಿದರೆ ಪಕ್ಷ ಗೆಲ್ಲುವ ವರದಿ ಬಂದಿದೆ. ಜತೆಗೆ ಅವರಿಗೆ ಟಿಕೆಟ್‌ ನೀಡುವ ಮೂಲಕ ಬೆಂಗಳೂರಿನಲ್ಲಿ ಲಿಂಗಾಯತ ಸಮುದಾಯ ಹಾಗೂ ಮಹಿಳಾ ಪ್ರಾತಿನಿಧ್ಯವನ್ನೂ ನೀಡಿದಂತಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಸಿದ್ದರಾಮಯ್ಯ ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇನ್ನು, ಯಶವಂತಪುರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ನಟಿ ಭಾವನಾ ಕೂಡ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮಗೆ ಟಿಕೆಟ್‌ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರು ನಿಮಗೆ ಬೇರೆ ಅವಕಾಶಗಳನ್ನು ನೀಡೋಣ ಎಂದು ಹೇಳಿ ಸಮಾಧಾನಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಶಿಕಾರಿಪುರದಲ್ಲಿ ವಿಜಯೇಂದ್ರ ವಿರುದ್ಧ ನಾಗರಾಜಗೆ ಕೈ ಟಿಕೆಟ್‌ ನೀಡಲು ಆಗ್ರಹ

ಬೆಂಗಳೂರು: ಶಿಕಾರಿಪುರ ಕ್ಷೇತ್ರದಲ್ಲಿ ಬಿ.ವೈ. ವಿಜಯೇಂದ್ರ ವಿರುದ್ಧ ಕಾಂಗ್ರೆಸ್‌ನಿಂದ ಪ್ರಬಲ ಸ್ಪರ್ಧೆ ನೀಡಬಲ್ಲ ನಾಗರಾಜ್‌ ಗೌಡ ಅವರಿಗೆ ಪಕ್ಷದ ಟಿಕೆಟ್‌ ನೀಡಬೇಕೆಂದು ಕ್ಷೇತ್ರದ ಹಲವು ಕಾರ್ಯಕರ್ತರು ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಆಗ್ರಹಿಸಿದ ಘಟನೆ ನಡೆಯಿತು.

ವಿಜಯೇಂದ್ರ ವಿರುದ್ಧ ಪ್ರಬಲ ಸ್ಪರ್ಧಿ ಹಾಕದೆ ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ನಿವಾಸದ ಮುಂದೆ ಜಮಾಯಿಸಿದ ನಾಗರಾಜ್‌ ಗೌಡ ಬೆಂಬಲಿಗರು. ಯಾವುದೇ ಕಾರಣಕ್ಕೂ ಗೋಣಿ ಮಹಾಂತೇಶ್‌ ಅವರಿಗೆ ಟಿಕೆಟ್‌ ನೀಡಬಾರದು. ಅವರನ್ನು ಅಭ್ಯರ್ಥಿಯಾಗಿಸಿ ವಿಜಯೇಂದ್ರ ಅವರನ್ನು ಗೆಲ್ಲಿಸಲು ಪಕ್ಷವೇ ದಾರಿ ಮಾಡಿಕೊಡಬಾರದು. ಅವರು ವಿಜಯೇಂದ್ರ ವಿರುದ್ಧ ಪ್ರಬಲ ಸ್ಪರ್ದಿಯಲ್ಲ. ಇನ್ನು ಎಷ್ಟುವರ್ಷ ಶಿಕಾರಿಪುರವನ್ನು ಯಡಿಯೂರಪ್ಪ ಅವರ ಕುಟುಂಬಕ್ಕೆ ಅಡ ಇಡುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿ ನಾಗರಾಜ್‌ಗೌಡ ಅವರಿಗೆ ಟಿಕೆಟ್‌ ನೀಡಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್‌ನ ಎರಡೂ ಪಟ್ಟಿಗಳಲ್ಲಿ ಬೋವಿ ಸಮುದಾಯದ ಆಕಾಂಕ್ಷಿಗಳಿಗೆ ಟಿಕೆಟ್‌ ಖಾತರಿಯಾಗದಿರುವುದು ಆತಂಕ ತಂದಿದೆ. ಹಾಗಾಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಳೆದ ಬಾರಿ ಕೊಟ್ಟಂತೆ ಈ ಬಾರಿಯು ಹಾಲಿ ಶಾಸಕರನ್ನೂ ಒಳಗೊಂಡು ನಮ್ಮ ಸಮುದಾಯದ 7 ಮಂದಿಗೆ ಟಿಕೆಟ್‌ ನೀಡುವಂತೆ ಮನವಿ ಮಾಡಿದ್ದೇವೆ. ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ. ಸಾಮಾಜಿಕ ನ್ಯಾಯದ ಪಾಲನೆ ಆಗುವ ಭರವಸೆ ಇನ್ನೂ ಇದೆ ಅಂತ ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ. 

ಯಶವಂತಪುರ ಟಿಕೆಟ್ ಕೈತಪ್ಪಿದ ಹಿನ್ನಲೆ: ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ ನಟಿ ಭಾವನಾ

ಸಿದ್ದರಾಮಯ್ಯ ಅವರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಶಾಸಕ ಜಮೀರ್‌ ಅಹಮದ್‌ ಅವರು ನನ್ನ ಬೆನ್ನಿಗಿದ್ದಾರೆ. ಮೂರನೇ ಪಟ್ಟಿಯಲ್ಲಿ ನನ್ನ ಹೆಸರು ಪ್ರಕಟವಾಗುವ ಮೂಲಕ ಟಿಕೆಟ್‌ ಖಚಿತವಾಗುವ ಭರವಸೆ ಇದೆ. ನಾನು ಯಾವುದೇ ಪಕ್ಷಾಂತರ ಮಾಡಲು ಯೋಚನೆ ಮಾಡಿಲ್ಲ. ಅವಕಾಶ ಸಿಗದಿದ್ದರೆ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡುತ್ತೇನೆ ಅಂತ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದಾರೆ. 

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಧ್ಯೆ ಖುರ್ಚಿ ಕಾದಾಟ ಇಲ್ಲ: ಬಸವರಾಜ ರಾಯರೆಡ್ಡಿ
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್