ಸಿಡಿ ಬಿಡುಗಡೆ ಹಿಂದೆ ಬಿವೈವಿ, ಡಿಕೆಶಿ ಇದ್ದಾರೆ, ಅದಕ್ಕೆ ರಮೇಶ ಜಾರಕಿಹೊಳಿಗೆ ಸಿಟ್ಟು: ಯತ್ನಾಳ

By Kannadaprabha News  |  First Published Sep 22, 2024, 12:46 PM IST

ದೇಶದಲ್ಲಿ ಕಾಂಗ್ರೆಸ್ ಹಾಗೂ ಅನೇಕ ವಿರೋಧ ಪಕ್ಷಗಳಲ್ಲಿ ಕ್ರಿಶ್ಚಿಯನ್‌ಗೆ ಕನ್ವರ್ಟ್ (ಮತಾಂತರ) ಆದ ಕುಟುಂಬಗಳಿವೆ. ವೈಎಸ್‌ಆರ್, ಜಗನ್ ಕುಟುಂಬ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿ ಹಿಂದೂ ಹೆಸರು ಇಟ್ಟುಕೊಂಡಿದ್ದಾರೆ. ವ್ಯವಸ್ಥಿತವಾಗಿ ಸನಾತನ ಧರ್ಮ ನಿರ್ಮೂಲನೆ ನಾಶ ಮಾಡಲು ಸಂಚು ರೂಪಿಸಲಾಗಿದೆ. ತಿರುಪತಿ ವೆಂಕಟರಮಣನ ಸನ್ನಿಧಿಯಲ್ಲಿ ಇಂತಹ ಘಟನೆ ನಡೆದಿದ್ದು ಬಹಳ ಆಘಾತ ಅಗಿದೆ ಎಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ


ವಿಜಯಪುರ(ಸೆ.22):  ತಿರುಪತಿ ಲಡ್ಡುನಲ್ಲಿ ಮೀನಿನ ಎಣ್ಣೆ, ಹಂದಿ, ಗೋವಿನ ಚರ್ಬಿ (ಕೊಬ್ಬು) ಮಿಶ್ರಣ ಮಾಡಿದ್ದಾರೆಂಬ ವಿಚಾರಕ್ಕೆ ಸಿಡಿದೆದ್ದಿರುವ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು, ತಪ್ಪಿತಸ್ಥರನ್ನು ಗಲ್ಲಿಗೆ ಹಾಕುವಂತೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೆಲ್ಲ ಯಾರ ಅವಧಿಯಲ್ಲಿ ಆಗಿದೆ? ಹಿಂದೂಗಳಿಗೆ ಯಾವಾಗ ಅಪಚಾರ ಆಗಿದೆ ಎಂದು ತನಿಖೆ ಆಗಲಿ. ಹಿಂದೂಗಳಿಗೆ ಗೋವಿನ ಕೊಬ್ಬು ತಿನ್ನಿಸಿದವರಿಗೆ ಗಲ್ಲು ಶಿಕ್ಷೆಯೇ ಆಗಬೇಕು ಎಂದು ಒತ್ತಾಯಿಸಿದ್ದಾರೆ.

Tap to resize

Latest Videos

undefined

ನಾನು ಮುಖ್ಯಮಂತ್ರಿ ಆಗೋದು ನಿಶ್ಚಿತ: ಯತ್ನಾಳ್‌

ದೇಶದಲ್ಲಿ ಕಾಂಗ್ರೆಸ್ ಹಾಗೂ ಅನೇಕ ವಿರೋಧ ಪಕ್ಷಗಳಲ್ಲಿ ಕ್ರಿಶ್ಚಿಯನ್‌ಗೆ ಕನ್ವರ್ಟ್ (ಮತಾಂತರ) ಆದ ಕುಟುಂಬಗಳಿವೆ. ವೈಎಸ್‌ಆರ್, ಜಗನ್ ಕುಟುಂಬ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿ ಹಿಂದೂ ಹೆಸರು ಇಟ್ಟುಕೊಂಡಿದ್ದಾರೆ. ವ್ಯವಸ್ಥಿತವಾಗಿ ಸನಾತನ ಧರ್ಮ ನಿರ್ಮೂಲನೆ ನಾಶ ಮಾಡಲು ಸಂಚು ರೂಪಿಸಲಾಗಿದೆ. ತಿರುಪತಿ ವೆಂಕಟರಮಣನ ಸನ್ನಿಧಿಯಲ್ಲಿ ಇಂತಹ ಘಟನೆ ನಡೆದಿದ್ದು ಬಹಳ ಆಘಾತ ಅಗಿದೆ ಎಂದರು. 

ತಿರುಪತಿ ದೇಗುಲದ ಪಾವಿತ್ರ್ಯತೆ ಹಾಳು ಮಾಡಿದ್ದಾರೆ. ಟಿಟಿಡಿಯ ಟ್ರಸ್ಟ್ ಅಧ್ಯಕ್ಷ ಕ್ರಿಶ್ಚಿಯನ್ ಆಗಿದ್ದಾರೆ. ಹಿಂದು ದೇಗುಲಗಳ ಅಧ್ಯಕ್ಷರು ಹಿಂದೂಗಳಾಗಿದ್ದರೆ ಪಾವಿತ್ರ್ಯತೆ ಉಳಿಯುತ್ತೆ. ಹಿಂದೂಗಳ ಭಾವನೆಗಳಿಗೆ ಧಕ್ಕೆ ಆದರೆ ಕೇಳೋಕೆ ಯಾರೂ ಇಲ್ಲ. ಹಿಂದೂಗಳ ಮೇಲೆ ಟ್ಯಾಕ್ಸ್ ಹಾಕಿ ಅದನ್ನು ಕ್ರಿಶ್ಚಿಯನ್ ಮಿಶಿನರಿ, ವಕ್ಫ್ ಆಸ್ತಿ ರಕ್ಷಣೆಗೆ ಬಳಸುತ್ತಾರೆ. ಧಾರ್ಮಿಕ ದತ್ತಿ ಇಲಾಖೆಯಲ್ಲಿ ಹಿಂದೂಯೇತರರು ಇರಬಾರದು. ದೇಗುಲ ವ್ಯವಸ್ಥಾಪಕ ಮಂಡಳಿಗಳಲ್ಲಿ ಸಂಪೂರ್ಣ ಹಿಂದೂಗಳಿರಬೇಕು ಎಂದು ಆಗ್ರಹಿಸಿದ್ದಾರೆ.

ರಸ್ತೆ ಮೇಲೆ ಅಡ್ಡಾಡೋ ಹಕ್ಕು ನಮಗೂ ಇದೆ:

ಕಲ್ಲು ತೂರಾಟ ಉದ್ದೇಶಪೂರ್ವಕವಾಗಿಯೇ ನಡೆಯುತ್ತಿವೆ. ದೇಶದಲ್ಲಿ ಈದ್ ಮಿಲಾದ್ ಮೇಲೆ ಕಲ್ಲು ಬಿದ್ದಿದೆಯಾ? ಮುಸ್ಲಿಮರಿಗೆ ಶಾಂತಿಯಿಂದ ದೇಶದಲ್ಲಿರಬೇಕು ಎನ್ನುವ ಭಾವನೆ ಇಲ್ಲ. ಹಿಂದೂಗಳನ್ನು ಕೆಣಕುತ್ತಿದ್ದಾರೆ. ಮಸೀದಿಗಳ ಮುಂದೆ ಬರಬೇಡಿ ಎನ್ನುತ್ತಾರೆ. ಮಸೀದಿ ರಸ್ತೆಗಳು ಇವರಪ್ಪನ ಆಸ್ತಿಯಾ? ಸಾರ್ವಜನಿಕ ರಸ್ತೆ ಮೇಲೆ ಅಡ್ಡಾಡೋ ಹಕ್ಕು ಹಿಂದೂಗಳಿಗಿದೆ ಎಂದು ಪ್ರತಿಪಾದಿಸಿದರು.

ಸರ್ಕಾರದ ತುಷ್ಟೀಕರಣದಿಂದ ಅವರು ಬೆಳೆದು ನಿಂತಿದ್ದಾರೆ. ನಾಗಮಂಗಲದಲ್ಲಿ ನಡೆದ ಗಲಾಟೆಯಲ್ಲಿ ಹಿಂದೂಗಳು ಎ1 ಆಗಿದ್ದಾರೆ. ಅವರು ಕಲ್ಲು ಎಸೆದಿಲ್ಲ, ಪೆಟ್ರೋಲ್ ಬಾಂಬ್ ಹಾಕಿಲ್ಲ. ಇದನ್ನು ಅಲ್ಲಿನ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹಾಗೂ ಗೃಹಸಚಿವ ಜಿ.ಪರಮೇಶ್ವರ ಆಕಸ್ಮಿಕ ಗಲಾಟೆ ಎಂದಿದ್ದಾರೆ. ಕಾಂಗ್ರೆಸ್ ಆಕಸ್ಮಿಕ ಕಂಪನಿ, ಕೆಲವೇ ದಿನಗಳಲ್ಲೇ ಕಾಂಗ್ರೆಸ್ ಸರ್ಕಾರ ಆಕಸ್ಮಿಕವಾಗಿ ಉರುಳಿ ಹೋಗುತ್ತದೆ ಎಂದು ಯತ್ನಾಳ ಭವಿಷ್ಯ ನುಡಿದರು.

ರಮೇಶಗೆ ಸಿಡಿ ಬಿಡುಗಡೆಯ ಸಿಟ್ಟು: 

ವಿಜಯೆಂದ್ರರನ್ನ ನಾನು ಒಪ್ಪಲ್ಲ ಎಂಬ ರಮೇಶ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಮೇಶ ಜಾರಕಿಹೊಳಿ ಮೇಲೆ ದೊಡ್ಡ ಷಡ್ಯಂತ್ರ ನಡೆದಿದೆ. ರಮೇಶ ಜಾರಕಿಹೊಳಿ ಅತ್ಯಾಚಾರ ಮಾಡಿದ್ದಾರೆ ಎಂದು ಪ್ರೂವ್ ಮಾಡಲು ಹೋದರು. ದೆಹಲಿಯಲ್ಲಿದ್ದ ರಮೇಶ ಜಾರಕಿಹೊಳಿಗೆ ನನ್ನ ಬಿಟ್ಟು ಹೋಗಿದ್ಯಲ್ಲ ಎಂದು ಆಕೆ ಕರೆ ಮಾಡಿದ್ದಾಳೆ. ಹೀಗೆಲ್ಲ ಮಾತನಾಡಿದ್ದರೂ ಇದೇನು ಅತ್ಯಾಚಾರವಾ?, ಇದು ಸಮ್ಮತಿಯಿಂದಲೇ ಆಗಿದ್ದು. ರಮೇಶ ಜಾರಕಿಹೊಳಿ ಸಿಡಿ ಬಿಡುಗಡೆ ಮಾಡಿದ್ದು ವಿಜಯೇಂದ್ರ ಹಾಗೂ ಡಿ.ಕೆ.ಶಿವಕುಮಾರ ಇದ್ದಾರೆ ಎಂಬ ಸಿಟ್ಟು ರಮೇಶ ಜಾರಕಿಹೊಳಿಗೆ ಇದೆ. ರಮೇಶ ಜಾರಕಿಹೊಳಿ ಅವರು ತೆಗೆದುಕೊಂಡ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ. ವಿಜಯೇಂದ್ರ ಜೊತೆ ನಮ್ಮ ಎಂ.ಬಿ.ಪಾಟೀಲರು ಆತ್ಮೀಯರಿದ್ದಾರೆ. ಅವರವರು ಮಾತನಾಡುತ್ತಿರಬಹುದು. ಯಾಕಂದ್ರೆ ಅಲೈನ್ಸ್ ಪಾರ್ಟಿಗಳು ಬಿಜೆಪಿ ಕಾಂಗ್ರೆಸ್‌ನಲ್ಲಿವೆ ಎಂದು ಶಂಕೆ ವ್ಯಕ್ತಪಡಿಸಿದರು.

ಮೋದಿ, ಯೋಗಿ ಇರೋವರೆಗೂ ಬಾಲ ಬಿಚ್ಚಂಗಿಲ್ಲ: ಶಾಸಕ ಬಸನಗೌಡ ಯತ್ನಾಳ

ನಾನು ವಿಷಾದ ವ್ಯಕ್ತಪಡಿಸಲ್ಲ: 

ಅಹಿಂದ ನಾಯಕರು ವಾಗ್ದಾಳಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಅಹಿಂದ ನಾಯಕರು, ಹಿಂದ ನಾಯಕರ ಕೆಲಸ ಏನಿದೆ? ಅಂಬೇಡ್ಕರ್ ಬಗ್ಗೆ ಸರಿಯಾಗಿ ಓದಿದ್ದರೆ ಇವರು ಟಿಪ್ಪು ಹಾಗೂ ಅವರ ಬೆನ್ನು ಹತ್ತಲ್ಲ. ಇವರಿಗೆ ಸ್ವಾಭಿಮಾನ, ಅಂಬೇಡ್ಕರ್ ಬಗ್ಗೆ ಗೌರವ ಇದ್ದರೆ ಟಿಪ್ಪು ಸುಲ್ತಾನ್, ಔರಂಗಜೇಬ್‌ಗಾಗಲಿ ಎಷ್ಟು ಬೈಯ್ದರೂ ಕ್ಷಮೆ ಕೇಳಲ್ಲ. ನಾನು ವಿಷಾದ ವ್ಯಕ್ತಪಡಿಸಲ್ಲ. ಮುಧೋಳದಲ್ಲಿ ಹೇಳಿದ ಹೇಳಿಕೆಗೆ ನಾನು ಬದ್ಧ. ಪೊಲೀಸರ ಮೇಲೆ ಒತ್ತಡ ಇರೋ ಕಾರಣ ನನ್ನ ಮೇಲೆ ಸುಮೋಟೊ ಕೇಸ್ ಹಾಕಿದ್ದಾರೆ. ತಪ್ಪೇನಿದ್ದರು ಅಲ್ಲಿಯ ಸಚಿವರದ್ದು. ಇಲ್ಲೊಬ್ಬ ಸಚಿವ ಕಳೆದ ಲೋಕಸಭಾ ಚುನಾವಣೆಯಲ್ಲಿ ತನ್ನ ಮಗಳನ್ನು ಅಲ್ಲಿ ನಿಲ್ಲಿಸಿದ್ದ. ಅಲ್ಲಿ ಅವಮಾನಕಾರಿಯಾಗಿ ಸೋಲುಂಡ ಕಾರಣ ಒತ್ತಡದಿಂದ ನನ್ನ ಮೇಲೆ ಪೊಲೀಸರ ಮೂಲಕ ಕೇಸ್ ಹಾಕಿಸಿದ್ದಾರೆ. ನನ್ನ ವಿರುದ್ಧ ಅವಾಚ್ಯ ಶಬ್ದಗಳಿಂದ ಮಾತನಾಡಿರುವವರು ಹರಾಂ ಕೋರ್‌ಗಳು ಎಂದು ಯತ್ನಾಳ ಕಿಡಿಕಾರಿದರು.

ಮುನಿರತ್ನ ಆಡಿಯೋ ದೃಢಪಟ್ಟರೆ ಕ್ರಮವಾಗಲಿ

ಮುನಿರತ್ನ ಆಡಿಯೋಗಳ ಬಗ್ಗೆ ತನಿಖೆಯಾಗಲಿ. ಆಡಿಯೋ ಅವರದ್ದೇ ಎಂದು ದೃಢಪಟ್ಟರೆ ಕ್ರಮವಾಗಲಿ. ಮುನಿರತ್ನ ಅವರ ವಿರುದ್ಧದ ಆಘಾತಕಾರಿ ಮಾಹಿತಿಗಳ ಬಗ್ಗೆಯೂ ತನಿಖೆಯಾಗಲಿ. ನಿಷ್ಪಕ್ಷಪಾತವಾಗಿ ನಾವು ಬೆಂಬಲ ಕೊಡುತ್ತೇವೆ. ಎಚ್‌ಐವಿ ಸೋಂಕಿತೆಯನ್ನು ಬಳಸಿ ಹನಿಟ್ರಾಪ್ ಆರೋಪ ವಿಚಾರ ಬಹಳ ಅಕ್ಷಮ್ಯ ಅಪರಾಧ. ಈ ವಿಚಾರದಲ್ಲಿ ಸಿಂಪತಿಯೂ ಇಲ್ಲ, ಬೆಂಬಲವೂ ಇಲ್ಲ. ಮುನಿರತ್ನ ಮಾಡಿದ್ದು ಪ್ರೂವ್ ಆದರೆ ಕಾನೂನಿನಡಿ ಕಠಿಣ ಶಿಕ್ಷೆ ನೀಡಲಿ. ನಾವು ಇಂತಹ ಹೇಯ ಕೆಲಸ ಒಪ್ಪುವುದಿಲ್ಲ. ಮುನಿರತ್ನ ಕೇಸ್ ಹಿಂದೆಯೂ ಮಹಾನಾಯಕ ಇದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಡಿಕೆಶಿ ಕಡೆಗೆ ಬೊಟ್ಟು ಮಾಡಿದರು. ನಿಶ್ಚಿತವಾಗಿ ಮಹಾನಾಯಕ ಇದ್ದಾರೆ. ಮುನಿರತ್ನ ಮೇಲಿನ ಆರೋಪಗಳು ಕ್ಷಮೆ ಮಾಡುವಂತ ಆರೋಪಗಳಲ್ಲ. ಇದು ಸುಳ್ಳು ಅಂತ ಆದರೆ ಯಾರು ಇದೆಲ್ಲ ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಲಿ ಎಂದು ಯತ್ನಾಳ ಒತ್ತಾಯಿಸಿದರು.

click me!