ಮುಂದಿನ ನಾಲ್ಕೈದು ತಿಂಗಳಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಗೆ ಒಂದೆಡೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಬಿರುಸುಗೊಂಡಿದ್ದರೆ, ಮತ್ತೊಂದೆಡೆ ಜಿಲ್ಲಾಡಳಿತವೂ ಚುನಾವಣೆಗೆ ಬೇಕಾದ ಪೂರ್ವ ತಯಾರಿ ಆರಂಭಿಸಿದೆ.
ಎಂ.ಅಫ್ರೋಜ್ ಖಾನ್
ರಾಮನಗರ (ಡಿ.02): ಮುಂದಿನ ನಾಲ್ಕೈದು ತಿಂಗಳಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಗೆ ಒಂದೆಡೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಬಿರುಸುಗೊಂಡಿದ್ದರೆ, ಮತ್ತೊಂದೆಡೆ ಜಿಲ್ಲಾಡಳಿತವೂ ಚುನಾವಣೆಗೆ ಬೇಕಾದ ಪೂರ್ವ ತಯಾರಿ ಆರಂಭಿಸಿದೆ. ರಾಜಕೀಯ ಪಕ್ಷಗಳ ಆಕಾಂಕ್ಷಿಗಳು ಟಿಕೆಟ್ ಕೋರಿ ಅರ್ಜಿ ಸಲ್ಲಿಸುವುದು, ವರಿಷ್ಠರ ಮನವೊಲಿಕೆ ಮಾಡುತ್ತಿದ್ದಾರೆ. ಜೊತೆಗೆ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಮತದಾರರ ಪ್ರೀತಿ ಗಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈ ನಡುವೆ ಚುನಾವಣೆಗೆ ಅಗತ್ಯವಾದ ಸಿದ್ಧತೆಗಳಲ್ಲಿ ಜಿಲ್ಲಾಡಳಿತ ತೊಡಗಿದೆ.
ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿರುವ ಜಿಲ್ಲಾಡಳಿತ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಕಾಂಗ್ರೆಸ್ , ಬಿಜೆಪಿ, ಜೆಡಿಎಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಸಭೆ ಕೂಡ ನಡೆಸಿದೆ. ಈಗಾಗಲೇ ಚುನಾವಣೆಗೆ ಅಗತ್ಯವಾಗಿರುವ ವಿದ್ಯಾನ್ಮಾನ ಮತಯಂತ್ರ (ಇವಿಎಂ)ಗಳಿಗಾಗಿ ಬೇಡಿಕೆ ಸಲ್ಲಿಸಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 1139 ಬ್ಯಾಲೆಟ್ ಯುನಿಟ್‌ಗಳು ಹಾಗೂ 1139 ಕಂಟ್ರೋಲ್ ಯುನಿಟ್ ಗಳ ಅಗತ್ಯವಿದ್ದು, ಅವುಗಳು ಶೀಘ್ರದಲ್ಲಿಯೇ ಪೂರೈಕೆಯಾಗಲಿವೆ.
Ramanagara: ಶೇ.68ರಷ್ಟು ಇ-ಖಾತೆ ಪೂರ್ಣ: ಶಾಸಕಿ ಅನಿತಾ ಕುಮಾರಸ್ವಾಮಿ
ಲೋಕಾರ್ಪಣೆಗೆ ವಿದ್ಯುನ್ಮಾನ ಮತಯಂತ್ರಗಳ ಉಗ್ರಾಣ ಸಜ್ಜು: ವಿದ್ಯುನ್ಮಾನ ಮತ ಯಂತ್ರ (ಇವಿಎಂ)ಗಳನ್ನು ವ್ಯವಸ್ಥಿತ ಹಾಗೂ ಸುರಕ್ಷಿತವಾಗಿ ಸಂಗ್ರಹಿಸುವುದಕ್ಕಾಗಿ ಜಿಲ್ಲಾ ಕಚೇರಿಗಳ ಸಂಕೀರ್ಣದ ಪಕ್ಕದಲ್ಲಿಯೇ ಚುನಾವಣಾ ಆಯೋಗದ ನಿರ್ದೇಶನದನ್ವಯ ನೂತನವಾಗಿ ವಿದ್ಯುನ್ಮಾನ ಮತಯಂತ್ರಗಳ ಉಗ್ರಾಣವನ್ನು ನಿರ್ಮಿಸಲಾಗಿದೆ. ಇಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಇವಿಎಂಗಳನ್ನು ಸಂಗ್ರಹಿಸಿಡಲು ವ್ಯವಸ್ಥೆ ಇದೆ. ಈ ಉಗ್ರಾಣದಲ್ಲಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕ್ಷೇತ್ರವಾರು ವಿದ್ಯುನ್ಮಾನ ಮತಯಂತ್ರಗಳನ್ನು ಇರಿಸಲು ಪ್ರತ್ಯೇಕವಾದ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಪೂರೈಕೆಯಾಗುವ ಇವಿಎಂಗಳನ್ನು ಮೊದಲ ಹಂತದಲ್ಲಿ ತಪಾಸಣೆಗೆ ಒಳಪಡಿಸಲು ಪ್ರತ್ಯೇಕವಾದ ಜಾಗವಿದೆ.
ಈ ಮೊದಲು ಮತದಾನಕ್ಕು ಮುನ್ನ ಹಾಗೂ ಮತ ಎಣಿಕೆ ತರುವಾಯ ಇವಿಎಂಗಳನ್ನು ಜಿಲ್ಲಾಧಿಕಾರಿ, ಮಿನಿ ವಿಧಾನಸೌಧ ಹಾಗೂ ಖಾಲಿಯಿದ್ದ ಸರ್ಕಾರಿ ಕಟ್ಟಡಗಳ ಕೊಠಡಿಯಲ್ಲಿ ಇಡಲಾಗುತ್ತಿತ್ತು. ಚುನಾವಣೆ ಸಂದರ್ಭದಲ್ಲೂ ಹೆಚ್ಚುವರಿ ಯಂತ್ರಗಳ ಆಮದು ಮಾಡಿಕೊಳ್ಳಲು ಸ್ಥಳಾವಕಾಶ ಕೊರತೆ ಎದುರಾಗುತ್ತಿತ್ತು. ಜಿಲ್ಲಾಧಿಕಾರಿಗಳ ಕಚೇರಿ ಅಥವಾ ತಾಲೂಕು ಕಚೇರಿಗಳ ಆವರಣದಲ್ಲಿ ಇವಿಎಂಗಳ ತಪಾಸಣೆ ಕಾರ್ಯ ನಡೆಯುತ್ತಿತ್ತು. ಇನ್ನು ಮುಂದೆ ಅವೆಲ್ಲವೂ ಉಗ್ರಾಣದಲ್ಲಿಯೇ ನಡೆಯಲಿದೆ.
ಮತಯಂತ್ರಗಳ ಸಂರಕ್ಷಣೆ ದೃಷ್ಟಿಯ ಜತೆಗೆ ಒಂದೇ ಕಡೆ ದಾಸ್ತಾನು ಮಾಡಲು ಉಗ್ರಾಣ ಸಹಕಾರಿಯಾಗಲಿದೆ. ಮೂರು ಅಂತಸತ್ತಿನ ಈ ಉಗ್ರಾಣದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರವಾರು ವಿದ್ಯುನ್ಮಾನ ಮತಯಂತ್ರಗಳನ್ನು ಸಂಗ್ರಹಿಸಿಡಲು ಪ್ರತ್ಯೇಕ ಕೊಠಡಿಗಳಿವೆ. ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಉಳಿದುಕೊಳ್ಳಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗಿದೆ.
ಸಾಲು ಸಾಲು ಚುನಾವಣೆ: ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆ, ನಗರಸಭೆ ಚುನಾವಣೆ ಮುಗಿದಿದ್ದು, ಮುಂದೆ ಸಾಲು ಸಾಲು ಚುನಾವಣೆಗಳು ಎದುರಾಗಲಿವೆ. ತಾಪಂ, ಜಿಪಂ, ವಿಧಾನಸಭೆ, ಲೋಕಸಭೆ ಸೇರಿದಂತೆ ಸಾಲು ಸಾಲು ಚುನಾವಣೆಗಳ ಪಟ್ಟಿಯೇ ಇದೆ. ಏನಿಲ್ಲವೆಂದರೂ ಒಂದು ಅಥವಾ ಎರಡು ವರ್ಷದೊಳಗೆ ಯಾವುದಾದರೂ ಒಂದು ಚುನಾವಣೆಯಲ್ಲಿ ಈ ಯಂತ್ರಗಳ ಬಳಕೆ ಆಗುತ್ತಲೇ ಬಂದಿದೆ. ಹೀಗಾಗಿ ಬೇರೆ ಕಡೆ ದಾಸ್ತಾನು ಆಗಿರುವ ಮತಯಂತ್ರಗಳನ್ನು ಒಂದೇ ಕಡೆ ದಾಸ್ತಾನು ಮಾಡಲು ಹಾಗೂ ಸಾಲು ಸಾಲು ಚುನಾವಣೆಗಳು ನಡೆಯಲಿರುವ ಕಾರಣ ಆದಷ್ಟುಬೇಗ ಉಗ್ರಾಣ ಉದ್ಘಾಟನೆಗೊಳ್ಳಲಿದೆ ಎನ್ನುತ್ತಾರೆ ಅಧಿಕಾರಿಗಳು.
ವಿಧಾನಸಭಾ ಕ್ಷೇತ್ರವಾರು ವ್ಯವಸ್ಥೆ: ಉಗ್ರಾಣದಲ್ಲಿ ವಿಧಾನಸಭಾ ಕ್ಷೇತ್ರವಾರು ವಿದ್ಯುನ್ಮಾನ ಮತಯಂತ್ರಗಳನ್ನು ಒಂದೇ ಕಡೆ ದಾಸ್ತಾನು ಮಾಡಲು ಪ್ರತ್ಯೇಕ ಕೊಠಡಿಗಳಿವೆ. ಜಿಲ್ಲೆಯ 4 ವಿಧಾನಸಭಾ ಕ್ಷೇತ್ರವಾರು 4 ಕೊಠಡಿಗಳ ಜತೆಗೆ ಹೆಚ್ಚುವರಿ ಕೊಠಡಿಗಳು ಲಭ್ಯವಿವೆ. ಇದರಿಂದ ಕ್ಷೇತ್ರವಾರು ಯಂತ್ರಗಳ ಗುರುತಿಸುವಿಕೆ, ರವಾನಿಸಲು ಸಹಕಾರಿ ಆಗಲಿದೆ. ಇನ್ನು ಯಂತ್ರಗಳನ್ನು ಪರಿಶೀಲಿಸಲು ಭದ್ರತಾ ಕೊಠಡಿ, ಸುತ್ತಮುತ್ತ ಸಿಸಿ ಕ್ಯಾಮರಾ ಹಾಗೂ ಒಳ್ಳೆಯ ಲಾಕಿಂಗ್ ವ್ಯವಸ್ಥೆ ಅಳವಡಿಸಲಾಗಿದೆ. ಇದಲ್ಲದೇ ಉಗ್ರಾಣದ ಎದುರಿಗೆ ಸುಸಜ್ಜಿತ ಆವರಣ ಹಾಗೂ ಸುತ್ತಲೂ ತಂತಿ ಬೇಲಿ ಸೇರಿದಂತೆ ಭದ್ರತೆಗೆ ಆದ್ಯತೆ ಕೊಡಲಾಗಿದೆ.
ಅಳಿವಿನಂಚಿನಲ್ಲಿ ಬೊಂಬೆಯಾಟ: ಇತಿಹಾಸದ ಪುಟ ಸೇರುವ ಆತಂಕ
ಲೋಕಾರ್ಪಣೆಗೆ ಸಜ್ಜಾದ ಉಗ್ರಾಣ: ಮತಪತ್ರ ಮತ್ತು ಅದರಲ್ಲಿ ಠಸ್ಸೆ ಹೊಡೆದು ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಆಯ್ಕೆ ಮಾಡುವ ವಿಧಾನ ತೆರೆಗೆ ಸರಿದು ದಶಕಗಳೇ ಕಳೆದು ಹೋಗಿದೆ. ವಿಧಾನ ಪರಿಷತ್ ಚುನಾವಣೆ ಹೊರತುಪಡಿಸಿ ಗ್ರಾಪಂನಿಂದ ಹಿಡಿದು ತಾಪಂ, ಜಿಪಂ, ವಿಧಾನಸಭೆ, ಸಂಸತ್ ಚುನಾವಣೆಗಳಲ್ಲಿ ಈಗಂತೂ ವಿದ್ಯುನ್ಮಾನ ಮತಯಂತ್ರಗಳೇ ಖಾಯಂ ಆಗಿಬಿಟ್ಟಿವೆ. ಹೀಗಾಗಿ ಈ ವಿದ್ಯುನ್ಮಾನ ಮತಯಂತ್ರಗಳ ಪಾರದರ್ಶಕತೆ ಹಾಗೂ ಸುರಕ್ಷತೆಗಾಗಿ ಸುಸಜ್ಜಿತ ಉಗ್ರಾಣವೊಂದು ನಗರದಲ್ಲಿ (ಇವಿಎಂ ವೇರ್‌ಹೌಸ್) ನಿರ್ಮಾಣಗೊಂಡು ಲೋಕಾರ್ಪಣೆಗೆ ಸಜ್ಜಾಗಿದೆ.