Asianet Suvarna News Asianet Suvarna News

ಅಳಿವಿನಂಚಿನಲ್ಲಿ ಬೊಂಬೆಯಾಟ: ಇತಿ​ಹಾ​ಸದ ಪುಟ ಸೇರುವ ಆತಂಕ

ಬೊಂಬೆಯಾಟ ಜನರಿಗೆ ಮನರಂಜನೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿತ್ತು. ಈ ಹಿಂದೆ ಭಾರತದಲ್ಲಿ 4 ಸಾವಿರಕ್ಕೂ ಹೆಚ್ಚು ಬಗೆಯ ಬೊಂಬೆಯಾಟಗಳಿದ್ದವು. ಇದು ಕೇವಲ ಮನರಂಜನೆ ಮಾತ್ರವಲ್ಲದೆ ಜನಜಾಗೃತಿಯನ್ನು ಮೂಡಿಸುತ್ತಿತ್ತು. 

Puppetry under extinction Fear of joining the history page gvd
Author
First Published Nov 28, 2022, 10:55 PM IST

ಗಂ.ದಯಾನಂದ ಕುದೂರು

ಕುದೂರು (ನ.28): ಬೊಂಬೆಯಾಟ ಜನರಿಗೆ ಮನರಂಜನೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿತ್ತು. ಈ ಹಿಂದೆ ಭಾರತದಲ್ಲಿ 4 ಸಾವಿರಕ್ಕೂ ಹೆಚ್ಚು ಬಗೆಯ ಬೊಂಬೆಯಾಟಗಳಿದ್ದವು. ಇದು ಕೇವಲ ಮನರಂಜನೆ ಮಾತ್ರವಲ್ಲದೆ ಜನಜಾಗೃತಿಯನ್ನು ಮೂಡಿಸುತ್ತಿತ್ತು. ಇಂತಹ ಅದ್ಭುತ ಕಲೆ ಎನಿಸಿದ ತೊಗಲು ಬೊಂಬೆ ಹಾಗೂ ಸೂತ್ರದ ಬೊಂಬೆಯಾಟ ಮರೆಯಾಗಿ ಇತಿಹಾಸದ ಪುಟ ಸೇರುತ್ತದೆಯೇನೋ ಎಂಬ ಆತಂಕ ಕಾಡುತ್ತದೆ. 

ಜಾನಪದ ಕಲೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಆಧುನಿಕತೆಯ ಸ್ಪರ್ಶ ಕೊಟ್ಟು ಇತ್ತ ಜನಪದವೂ ಅಲ್ಲದೆ, ಅತ್ತ ಆಧುನಿಕ ಕಲೆಯೂ ಅಲ್ಲದೆ ಉಳಿದುಕೊಂಡಿರುವ ಕಲೆಗಳ ಗುಂಪು ಒಂದೆಡೆಯಾದರೆ, ಮತ್ತೊಂದೆಡೆ ಬದಲಾವಣೆಯಾಗುತ್ತಿರುವ ತಾಂತ್ರಿಕ ಶಕ್ತಿಯನ್ನು ಬಳಸಿಕೊಂಡು ಜನಪದ ಕಲೆಯನ್ನು ಸಾಂಪ್ರದಾಯಿಕ ಶೈಲಿಯನ್ನು ಉಳಿಸಿಕೊಂಡು ಬಂದಿರುವ ಜನಪದ ಕಲೆಗಳ ಸಾಲಿನಲ್ಲಿ ಸೂತ್ರದ ಸಲಾಕೆ ಬೊಂಬೆಯಾಟವೂ ಒಂದು. 

ರಾಜ್ಯದಲ್ಲಿ ಕೇವಲ ಎರಡು ಕಡೆ ಮಾತ್ರ: ಕರ್ನಾಟಕ ರಾಜ್ಯದಲ್ಲಿ ಸೂತ್ರದ ಸಲಾಕೆ ಬೊಂಬೆಯಾಟದ ಕಲೆಯನ್ನು ಕೇವಲ ಎರಡು ತಂಡಗಳು ಮಾತ್ರ ಪ್ರದರ್ಶನ ಮಾಡುತ್ತಿವೆ ಎಂಬುದು ಆಶ್ಚರ್ಯವಾದರೂ ಸತ್ಯ. ಅದರಲ್ಲಿ ಒಂದು ಮಾಗಡಿ ತಾಲೂಕಿನ ದೊಡ್ಡಮುದಿಗೆರೆ ಗ್ರಾಮದಲ್ಲಿ ಜನಿಸಿ, ಬೆಂಗಳೂರಿನಲ್ಲಿ ನೆಲೆಸಿರುವ ಎಂ.ಆರ್‌.ರಂಗನಾಥ ರಾವ್‌ ರಂಗ ಪುತ್ಥಳಿ ತಂಡ.

Ramanagara: ತಾತ್ಕಾ​ಲಿಕ ಸೇತುವೆ ನಿರ್ಮಾ​ಣದಲ್ಲೂ ರಾಜಕೀಯ!

ನಾಲ್ಕು ಬಗೆ: ಬೊಂಬೆಯಾಟದಲ್ಲಿ ನಾಲ್ಕು ಬಗೆಯ ಆಟಗಳಿವೆ. ಸೂತ್ರದ ಬೊಂಬೆ, ಸೂತ್ರದ ಸಲಾಕೆ ಬೊಂಬೆ, ತೊಗಲು ಬೊಂಬೆ, ಹಾಗೂ ಕೈಗವಸು ಬೊಂಬೆಯಾಟ ಎಂಬ ನಾಲ್ಕು ಬಗೆಗಳಿವೆ. ಅದರಲ್ಲಿ ಮಾಗಡಿ ನೆಲದ ನರಸಿಂಗರಾಯರು ಸೂತ್ರದ ಬೊಂಬೆಯಾಟಕ್ಕೆ ಕಬ್ಬಿಣದ ಸರಳುಗಳನ್ನು ಬಳಕೆ ಮಾಡಿ ಈ ಆಟಕ್ಕೆ ಹೊಸ ಸ್ವರೂಪ ನೀಡಿದರು.

ಒಂದು ಬೊಂಬೆ 12 ಕೆಜಿ: ಇತರೆ ಬೊಂಬೆಯಾಟಕ್ಕೂ ಸಲಾಕೆ ಸೂತ್ರದ ಬೊಂಬೆಯಾಟಕ್ಕೂ ಇರುವ ವ್ಯತ್ಯಾಸವೆಂದರೆ, ಮಾಗಡಿ ನೆಲದ ರಂಗಪುತ್ಥಳಿ ತಂಡದವರು ಪರಿಚಯ ಮಾಡಿರುವ ಬೊಂಬೆಯಾಟದಲ್ಲಿ ಸೂತ್ರದ ಜೊತೆಗೆ ಕಬ್ಬಿಣದ ಸಲಾಕೆಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇತರೆ ಪ್ರಕಾರಗಳಲ್ಲಿ ಬೊಂಬೆಗಳು ಚಿಕ್ಕದಾಗಿ ಹಗುರವಾಗಿದೆ. ಆದರೆ ಈ ಸಲಾಕೆ ಬೊಂಬೆಯಾಟದಲ್ಲಿ ಒಂದೊಂದು ಬೊಂಬೆಯೂ ಹನ್ನೆರೆಡು ಕೇಜಿಗಿಂತಲೂ ಹೆಚ್ಚು ತೂಗುತ್ತವೆ. ಇವುಗಳನ್ನು ಮರದಿಂದ ತಯಾರು ಮಾಡಲಾಗಿದೆ.

7000ಕ್ಕೂ ಹೆಚ್ಚು ಪ್ರದರ್ಶನ: ಇಂತಹ ಕಲೆಯನ್ನು ದೊಡ್ಡಮುದಿಗೆರೆಯ ಎಂ.ಆರ್‌.ರಂಗನಾಥರಾವ್‌ ಹಾಗೂ ಅವರ ಮಕ್ಕಳಾದ ವಿಜಯ್‌ ಹಾಗೂ ಶ್ರೀನಿವಾಸ್‌ ಮುಂದುವರೆಸಿಕೊಂಡು ಬಂದಿದ್ದಾರೆ. ಮಾಗಡಿ ನೆಲದ ಜನಪದ ಕಲೆಯನ್ನು ಜಪಾನ್‌, ಲಾಸ್‌ ಏಂಜಲೀಸ್‌, ಆಸ್ಪ್ರೇಲಿಯಾ, ಸ್ವಿಡ್ಜಲ್ರ್ಯಾಂಡ್‌, ಪೋಲೇಂಡ್‌ ದೇಶಗಳಲ್ಲಿ ಪರಿಚಯಿಸಿದ ಕೀರ್ತಿ ಎಂ.ಆರ್‌.ರಂಗನಾಥರಾವ್‌ ಅವರಿಗೆ ಸಲ್ಲುತ್ತದೆ. ಇದಲ್ಲದೆ ದೇಶಾದ್ಯಂತ 7000ಕ್ಕೂ ಹೆಚ್ಚು ಸೂತ್ರದ ಸಲಾಕೆ ಬೊಂಬೆಯಾಟದ ಪ್ರದರ್ಶನ ಮಾಡಿದ್ದಾರೆ. ಸೂತ್ರದ ಜೊತೆಗೆ ಕಬ್ಬಿಣದ ಸಲಾಕೆ ಹಾಕಿಕೊಂಡು ಪ್ರದರ್ಶನ ಮಾಡುವ ಈ ಆಟವನ್ನು ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ಮೈಸೂರು ಪ್ರಾಂತ್ಯದಲ್ಲಿ ಮಾಗಡಿ ರಂಗಪುತ್ಥಳಿ ಶೈಲಿಯ ಬೊಂಬೆಯಾಟ ಎಂದು ಕರೆಯುತ್ತಾರೆ.

ಮರೆಯಾಗುತ್ತಿರುವ ಬೊಂಬೆಯಾಟ: ಇಷ್ಟೆಲ್ಲಾ ಹೆಗ್ಗಳಿಕೆಗಳಿರುವ ಬೊಂಬೆಯಾಟಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳಿಂದ ಪ್ರೋತ್ಸಾಹ ಸಿಗದಿರುವುದು ದುರಂತ. ಆಯಾ ಜಿಲ್ಲೆಗಳಲ್ಲಿ ಆಚರಿಸುವ ಸಾಂಸ್ಕೃತಿಕ ಕಾರ‍್ಯಕ್ರಮಗಳಲ್ಲಿ ಬೊಂಬೆಯಾಟದಂತಹ ಕಲೆಯನ್ನೂ ಬಳಸಿಕೊಳ್ಳಬೇಕು ಎಂದು ತಾಕೀತು ಮಾಡಿದರೆ ಕಲಾವಿದ ಮತ್ತು ಕಲೆ ಎರಡಕ್ಕೂ ಜೀವ ಕೊಟ್ಟಂತಾಗುತ್ತದೆ. ಸಲಾಕೆ ಸೂತ್ರದ ಬೊಂಬೆಯಾಟದಲ್ಲಿ ಶ್ರೀ ಕೃಷ್ಣಪಾರಿಜಾತ, ನರಕಾಸುವ ವಧೆ, ಭಕ್ತ ಮಾರ್ಕಾಂಡೇಯ, ಭಕ್ತ ಪ್ರಹ್ಲಾದ, ರಾಮಾಯಣ, ಪುರಂದರ ಕೃಷ್ಣ ಎಂಬ ಪ್ರಸಂಗಗಳಲ್ಲಿ ಬೊಂಬೆಗಳ ಆಟ ತೋರಿಸುತ್ತಾರೆ. ಇತ್ತೀಚೆಗೆ ಸ್ವಾಮಿ ವಿವೇಕಾನಂದರ ಜೀವನವನ್ನು ಬೊಂಬೆಯಾಟಕ್ಕೆ ಅಳವಡಿಸಿಕೊಂಡಿದ್ದಾರೆ.

Ramanagara: ಪಶುಪಾಲನಾ ಸೇವಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

ಸೂತ್ರದ ಸಲಾಕೆ ಬೊಂಬೆಯಾಟ ಸಾಂಪ್ರದಾಯಿಕ ಕಲೆ. ಇದನ್ನು ಕರ್ನಾಟಕ ಸರ್ಕಾರ ಬಯಲಾಟ ಅಕಾಡೆಮಿಗೆ ಸೇರಿಸಿದೆ. ಆದರೆ ಈ ಕಲೆಯಲ್ಲಿ ಸಂಗೀತ ಮತ್ತು ಸಾಹಿತ್ಯ ಎರಡಕ್ಕೂ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟು ನಾಟಕ ಸ್ವರೂಪದಲ್ಲೇ ಇರುವ ಕಾರಣ ಬೊಂಬೆಯಾಟ ನಾಟಕ ಅಕಾಡೆಮಿಗೆ ಸೇರಿಸಿದರೆ ಈ ಕಲೆ ಇನ್ನಷ್ಟು ಜನರಿಗೆ ಮತ್ತು ಪ್ರದೇಶಗಳಿಗೆ ತಲುಪಲು ಅನುಕೂಲವಾಗುತ್ತದೆ.
-ಎಂ.ಆರ್‌.ಶ್ರೀನಿವಾಸ್‌, ರಂಗಪುತ್ಥಳಿ ನಿರ್ದೇಶಕರು

Follow Us:
Download App:
  • android
  • ios