ರಾಜ್ಯಸಭೆ ಚುನಾವಣೆ ಕ್ಲೈಮ್ಯಾಕ್ಸ್: ಮೈತ್ರಿಗೆ 'ನೋ' ಎಂದ ಸಿದ್ದರಾಮಯ್ಯ, ಜೆಡಿಎಸ್‌ ಶಾಸಕರಿಗೆ ಪತ್ರ!

Published : Jun 09, 2022, 01:08 PM ISTUpdated : Jun 09, 2022, 01:29 PM IST
ರಾಜ್ಯಸಭೆ ಚುನಾವಣೆ ಕ್ಲೈಮ್ಯಾಕ್ಸ್: ಮೈತ್ರಿಗೆ 'ನೋ' ಎಂದ ಸಿದ್ದರಾಮಯ್ಯ, ಜೆಡಿಎಸ್‌ ಶಾಸಕರಿಗೆ ಪತ್ರ!

ಸಾರಾಂಶ

* ಜೆಡಿಎಸ್ ಶಾಸಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ * ಆತ್ಮಸಾಕ್ಷಿಯ ಮತ ನೀಡುವಂತೆ ಜೆಡಿಎಸ್ ಶಾಸಕರಿಗೆ ಪತ್ರ * ‘ಈ ಚುನಾವಣೆ ಜಾತ್ಯತೀತತೆಯ ಸಾವು-ಬದುಕಿನ ಪ್ರಶ್ನೆ’  

ಬೆಂಗಳೂರು(ಜೂ.09): ರಾಜ್ಯಸಭಾ ಚುನಾವಣೆಯ ನಾಲ್ಕನೇ ಸ್ಥಾನದ ಗೆಲುವಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳಾದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಹಗ್ಗ ಜಗ್ಗಾಟ ಆರಂಭವಾಗಿದ್ದು, ಉಭಯ ಪಕ್ಷಗಳ ನಡುವೆ ಭರ್ಜರಿ ವಾಕ್ಸಮರಕ್ಕೂ ಕಾರಣವಾಗಿದೆ. ಹೀಗಿರುವಾಗಲೇ ಸಿದ್ದರಾಮಯ್ಯ ಜೆಡಿಎಸ್‌ ನಾಯಕರಿಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ. ಈ ಪತ್ರದಲ್ಲಿ ಮನ್ಸೂರ್‌ ಅಲಿಖಾನ್‌ಗೆ ಮತ ಹಾಕುವಂತೆ ಜೆಡಿಎಸ್‌ ಶಾಸಕರಿಗೆ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಆತ್ಮಸಾಕ್ಷಿಯ ಮತ ನೀಡುವಂತೆಯೂ ಅವರು ಪತ್ರದಲ್ಲಿ ಕೇಳಿಕೊಂಡಿದ್ದಾರೆ.

ಜೆಡಿಎಸ್‌ಗೇ ಮತ ಹಾಕ್ಬೇಕು ಅಂತ ಅಂದ್ಕೊಂಡಿದ್ದೇನೆ, ಕೊನೆ ಕ್ಷಣದಲ್ಲಿ ಏನ್‌ ಬೇಕಾದ್ರೂ ಆಗಬಹುದು: ಗುಬ್ಬಿ ಶಾಸಕ

ಆತ್ಮಸಾಕ್ಷಿಯ ಮತ ನೀಡುವಂತೆ ಜೆಡಿಎಸ್ ಶಾಸಕರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಈ ಚುನಾವಣೆ ಜಾತ್ಯತೀತತೆಯ ಸಾವು-ಬದುಕಿನ ಪ್ರಶ್ನೆ. ಈ ಚುನಾವಣೆ ಜಾತ್ಯತೀತ - ಕೋಮುವಾದ ಸಿದ್ಧಾಂತಗಳ ಸಮರ. ಮನ್ಸೂರು ಗೆಲುವು ಯಾವುದೇ ಒಂದು ಪಕ್ಷದ ಗೆಲುವಾಗಲ್ಲ. ಜಾತ್ಯತೀತ ಸಿದ್ಧಾತ ನಂಬಿರುವ ಕಾಂಗ್ರೆಸ್- ಜೆಡಿಎಸ್  ಸೈದ್ದಾಂತಿಕ ಗೆಲುವಾಗುತ್ತದೆ. ರಾಜ್ಯಸಭೆ ಚುನಾವಣೆಯ ಅವಕಾಶ ಬಳಸಿಕೊಳ್ಳಿ ಕೋಮುವಾದಿ, ಜಾತಿವಾದಿ ಬಿಜೆಪಿಗೆ ಉತ್ತರ ನೀಡಿ ಎಂದಿದ್ದಾರೆ. 

ಸಿದ್ದು ಪತ್ರಕ್ಕೆ ಕುಮಾರಸ್ವಾಮಿ ಕಿಡಿ

ಇನ್ನು ಸಿದ್ದರಾಮಯ್ಯ ತಮ್ಮ ಪಕ್ಷದ ಶಾಸಕರನ್ನುದ್ದೇಶಿಸಿ ಪತ್ರ ಬರೆದ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದು, ಯಾವ ನೈತಿಕತೆ ಇಟ್ಟುಕೊಂಡು ಪತ್ರ ಬರೆದಿದ್ದಾರೆ’? ಸಿದ್ದರಾಮಯ್ಯಗೆ  ನಾಚಿಕೆ ಆಗಬೇಕು. ಆತ್ಮಸಾಕ್ಷಿ ಅಂದ್ರೆ ಏನು?’ಎಂದು ಪ್ರಶ್ನಿಸಿದ್ದಾರೆ. 7 ಶಾಸಕರಿಂದ ಅಡ್ಡಮತ ಮಾಡಿಸಿದಾಗ ಆತ್ಮಸಾಕ್ಷಿ ಎಲ್ಲಿ ಹೋಗಿತ್ತು? ಅಂದು ನಮ್ಮನ್ನು ಬಿಜೆಪಿ ಬಿ ಟೀಂ ಅಂದಿರಿ, ‘ಈಗ ನಾವು ಜಾತ್ಯತೀತರೆಂದು ಮತ ಕೇಳುತ್ತಿದ್ದೀರಿ ಎಂದು ಸಿದ್ದರಾಮಯ್ಯರಿಗೆ ಹಳೇ ವಿಚಾರವನ್ನು ನೆನಪಿಸಿ ಪೆಟ್ಟು ಕೊಟ್ಟಿದ್ದಾರೆ. 

ಕಣದಲ್ಲಿ ಯಾರೆಲ್ಲಾ ಇದ್ದಾರೆ?

ನಾಲ್ಕನೇ ಸ್ಥಾನಕ್ಕಾಗಿ ಬಿಜೆಪಿಯಿಂದ ಲೆಹರ್‌ ಸಿಂಗ್‌, ಕಾಂಗ್ರೆಸ್‌ನಿಂದ ಮನ್ಸೂರ್‌ ಅಲಿ ಖಾನ್‌ ಹಾಗೂ ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ಅವರು ಕಣದಲ್ಲಿದ್ದಾರೆ. ಒಂದು ವೇಳೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಹೊಂದಾಣಿಕೆ ನಡೆದರೆ ಬಿಜೆಪಿ ಅಭ್ಯರ್ಥಿಗೆ ಗೆಲುವು ಗಗನ ಕುಸುಮವಾಗಲಿದೆ. ಉಭಯ ಪಕ್ಷಗಳ ಅಭ್ಯರ್ಥಿಗಳ ಪೈಕಿ ಒಬ್ಬರು ನಿರಾಯಾಸವಾಗಿ ಗೆಲ್ಲಬಹುದಾಗಿದೆ. ಹೀಗಾಗಿ, ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವ ಕೊನೆಯ ಹೊತ್ತಿನಲ್ಲಿ ಯಾವ ಪಕ್ಷದ ಅಭ್ಯರ್ಥಿ ವಾಪಸ್‌ ಪಡೆಯಬೇಕು ಎಂಬ ವಾದ-ಪ್ರತಿವಾದ ನಾಯಕರ ನಡುವೆ ಜೋರಾಗಿಯೇ ನಡೆದಿದೆ.

MLC Election; 4 ಮಾಜಿ ಸಿಎಂಗಳಿಂದ ಭರ್ಜರಿ ಪ್ರಚಾರ

ಆದರೀಗ ಅಂತಿಮ ಕ್ಷಣದ ಈ ಬೆಳವಣಿಗೆಗಳನ್ನು ಗಮನಿಸಿದರೆ ಕಾಂಗ್ರೆಸ್ ಹಾಗೂ ಜೆಡಿಎಸ್‌ ನಡುವೆ ಹೊಂದಾಣಿಕೆಯಾಗುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. 

ಸೂತ್ರ ಪ್ರಕಾರ ಬಿಜೆಪಿಗೆ ಮೇಲುಗೈ:

ಸದ್ಯದ ಲೆಕ್ಕಾಚಾರವನ್ನು ಗಮನಿಸಿದರೆ ಮತಗಳ ಮೌಲ್ಯ ಫಾರ್ಮುಲಾ ಪ್ರಕಾರ ನಾಲ್ಕನೇ ಸ್ಥಾನಕ್ಕೆ ಬಿಜೆಪಿಗೆ ಹೆಚ್ಚಿನ ಮತಮೌಲ್ಯ ಸಿಗಲಿದ್ದು, ಲೆಹರ್‌ಸಿಂಗ್‌ಗೆ ಅನುಕೂಲವಾಗುವ ನಿರೀಕ್ಷೆಯಿದೆ.

ಬಿಜೆಪಿಯ 122 ಮತಗಳ ಪೈಕಿ ತಲಾ 45ರಂತೆ 90 ಮತಗಳು ಇಬ್ಬರು ಅಭ್ಯರ್ಥಿಗಳಿಗೆ ಲಭಿಸಲಿವೆ. ಇನ್ನುಳಿದ 32 ಮತಗಳು ಲೆಹರ್‌ಸಿಂಗ್‌ಗೆ ಹಂಚಿಕೆಯಾಗಲಿವೆ. ಒಂದು ವೇಳೆ ಬಿಜೆಪಿಯು ತನ್ನ ಮೊದಲ ಇಬ್ಬರು ಅಭ್ಯರ್ಥಿಗಳಿಗೆ ತಲಾ 46 ಮತಗಳನ್ನು ನಿಗದಿಪಡಿಸಿದಲ್ಲಿ ಆಗ ಲೆಹರ್‌ ಸಿಂಗ್‌ ಅವರಿಗೆ 30 ಮತಗಳು ಹಂಚಿಕೆಯಾಗಲಿವೆ.

ಕಾಂಗ್ರೆಸ್‌ನ 70 ಮತಗಳಲ್ಲಿ 45 ಮತಗಳು ಜೈರಾಮ್‌ ರಮೇಶ್‌ಗೆ ಲಭಿಸಲಿದ್ದು, ಉಳಿದ 25 ಮತಗಳು ಮನ್ಸೂರ್‌ ಅಲಿಖಾನ್‌ಗೆ ಸಿಗಲಿವೆ. ಜೆಡಿಎಸ್‌ನ ಕುಪೇಂದ್ರರೆಡ್ಡಿಗೆ ಜೆಡಿಎಸ್‌ನ 32 ಮತಗಳು ಸಿಗಲಿವೆ.

ಬಿಜೆಪಿ ಮತ್ತು ಜೆಡಿಎಸ್‌ ಅಭ್ಯರ್ಥಿಗಳ ಪರ ತಲಾ 32 ಮೊದಲ ಪ್ರಾಶಸ್ತ್ಯ ಮತಗಳು ಸಿಗಲಿವೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಸದ್ಯಕ್ಕೆ ಲೆಹರ್‌ಸಿಂಗ್‌ ಗೆಲುವಿನ ಮುಂಚೂಣಿಯಲ್ಲಿದ್ದರೂ, ಕೊನೆಯ ಕ್ಷಣದಲ್ಲಿ ಏನಾದರೂ ರಾಜಕೀಯ ಮೇಲಾಟ ನಡೆದರೆ ಜೆಡಿಎಸ್‌ ಗೆಲುವು ಅಸಾಧ್ಯ ಎನ್ನಲಾಗದು. ಆದರೆ ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿ ಗೆಲುವು ಅಸಾಧ್ಯ ಎಂಬುದು ರಾಜಕೀಯ ಲೆಕ್ಕಾಚಾರ ಆಗಿದೆ ಎಂದು ಮೂಲಗಳು ಹೇಳಿವೆ.

ಒಂದು ಮತದ ಮೌಲ್ಯ 100:

ಅಧಿಕಾರಿಗಳ ಲೆಕ್ಕಾಚಾರವೂ ಬಿಜೆಪಿಯ ಜಯದ ಬಗ್ಗೆಯೇ ಹೇಳುತ್ತಿದ್ದು, ಶಾಸಕರು ಚಲಾಯಿಸುವ ಒಂದು ಮತದ ಮೌಲ್ಯ 100 ಇದೆ. ಫಾರ್ಮುಲಾ ಪ್ರಕಾರ ಒಬ್ಬ ಅಭ್ಯರ್ಥಿ ಜಯ ಗಳಿಸಬೇಕಾದರೆ 4481 ಮತ ಮೌಲ್ಯದ ಅಗತ್ಯ ಇದೆ. ಅಂದರೆ ಒಬ್ಬ ಅಭ್ಯರ್ಥಿಯ ಗೆಲುವಿಗೆ 45 ಮತಗಳ ಅಗತ್ಯ ಇದೆ. ಒಂದು ಮತದ ಮೌಲ್ಯ 100ರಂತೆ 45 ಮತಗಳ ಮೌಲ್ಯವು 4500 ಆಗಿದೆ. ಆದರೆ ಚುನಾವಣೆಯ ಮತ ಫಾರ್ಮುಲಾದಂತೆ ಬೇಕಾಗಿರುವುದು 4481 ಮತ ಮೌಲ್ಯ ಆಗಿದ್ದು, 19 ಮತಗಳ ಮೌಲ್ಯ ಹೆಚ್ಚುವರಿಯಾಗಿ ಗೆಲುವಿನ ಅಭ್ಯರ್ಥಿಗೆ ಬಿದ್ದಂತಾಗುತ್ತದೆ. ಹೆಚ್ಚುವರಿ 19 ಮತಮೌಲ್ಯವನ್ನು ನಾಲ್ಕನೇ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಯ ಮತಕ್ಕೆ ಸೇರಿಸಲಾಗುತ್ತದೆ. ಹೀಗಾಗಿ ಮತದ ಮೌಲ್ಯ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

ಅಡ್ಡಮತದ ಭೀತಿ:

ಸದ್ಯದ ಮತಗಳ ಲೆಕ್ಕಾಚಾರದ ಪ್ರಕಾರ ನಡೆದರೆ ಬಿಜೆಪಿಯ ನಾಲ್ಕನೇ ಅಭ್ಯರ್ಥಿ ಗೆಲುವಿಗೆ ಸಮಸ್ಯೆಯಾಗುವುದಿಲ್ಲ. ಒಂದು ವೇಳೆ ಅಡ್ಡ ಮತದಾನವಾದರೆ ಲೆಕ್ಕಾಚಾರಗಳು ಉಲ್ಪಾಪಲ್ಟಾಆಗಲಿದೆ.

ಜೆಡಿಎಸ್‌ ಅಭ್ಯರ್ಥಿ ಪರ ಅಡ್ಡ ಮತದಾನವಾದರೆ ಬಿಜೆಪಿ ಗೆಲುವಿಗೆ ಕಷ್ಟಕರವಾಗಲಿದೆ. ಬಿಜೆಪಿ ಅಭ್ಯರ್ಥಿ ಪರ ಅಡ್ಡಮತವಾದರೆ ಜೆಡಿಎಸ್‌ಗೆ ಗೆಲುವು ಅಸಾಧ್ಯವಾಗಲಿದ್ದು, ಬಿಜೆಪಿ ಗೆಲುವು ಮತ್ತಷ್ಟುಸುಲಭವಾಗಲಿದೆ. ಬಿಜೆಪಿ ಮತ್ತು ಜೆಡಿಎಸ್‌ನ ಪ್ರಥಮ ಪ್ರಾಶಸ್ತ್ಯ ಮತ ತಲಾ 32 ಇರುವುದರಿಂದ ಅಡ್ಡಮತದಾನವಾದರೆ ಎರಡೂ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರ ಕಷ್ಟಕರವಾಗಲಿದೆ. ಈ ಹಿನ್ನೆಲೆಯಲ್ಲಿ ಅಡ್ಡಮತದಾನವಾಗದಂತೆ ಮೂರು ಪಕ್ಷಗಳು ಎಚ್ಚರವಹಿಸಬೇಕಾದ ಅನಿವಾರ್ಯತೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ಧರಾಮಯ್ಯ ಮಾತು ಎತ್ತಿದ್ರೆ ಸಾಬ್ರು ಸಾಬ್ರು ಅಂತ ಜಪ ಮಾಡ್ತಾರೆ: ಶಾಸಕ ಯತ್ನಾಳ್ ವ್ಯಂಗ್ಯ!
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ