* ಮಾಜಿ ಸಿಎಂಗಳಿಬ್ಬರು ಬೆಳಿಗ್ಗೆಯೊಂದು, ಸಂಜೆಯೊಂದು ಹೇಳಿಕೆ ನೀಡುತ್ತಾರೆ
* ನಿತ್ಯ ಯಾರು ಜಾತಿ ರಾಜಕಾರಣ ಮಾಡುತ್ತಾರೆ ಅವರು ಸೆಕ್ಯುಲರ್ ಬಗ್ಗೆ ಮಾತನಾಡುತ್ತಾರೆ
* ಜಿ. ಪರಮೇಶ್ವರ ಅವರನ್ನು ಯಾಕೆ ಮುಖ್ಯಮಂತ್ರಿ ಮಾಡಲಿಲ್ಲ?
ಹುಬ್ಬಳ್ಳಿ(ಜೂ.09): ಸಿದ್ದರಾಮಯ್ಯ ಅವರಿಗೆ ದಲಿತರ ಮೇಲೆ ಪ್ರೀತಿ ಇದ್ದರೆ ಜಿ. ಪರಮೇಶ್ವರ ಅವರನ್ನು ಯಾಕೆ ಮುಖ್ಯಮಂತ್ರಿ ಮಾಡಲಿಲ್ಲ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಸೇರಿಕೊಂಡು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಜಿ. ಪರಮೇಶ್ವರ ಎಂದು ಘೋಷಣೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸವಾಲು ಹಾಕಿದರು. ಈ ಮೂಲಕ ಆರ್‌ಎಸ್‌ಎಸ್‌ಗೆ ದಲಿತ ಅಧ್ಯಕ್ಷರನ್ನು ಮಾಡಿಲ್ಲ ಎಂಬ ಹೇಳಿಕೆಗೆ ತಿರುಗೇಟು ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಗಟ್ಸ್ ಇದ್ದರೆ ಮೊದಲು ದಲಿತ ಸಿಎಂ ಘೋಷಣೆ ಮಾಡಲಿ. ಅಂಬೇಡ್ಕರ್‌ರನ್ನು ಸೋಲಿಸಿದವರು ಯಾರು? ಕಾಂಗ್ರೆಸ್‌ನವರೇ ಅಲ್ವಾ? ಬೆಳಿಗ್ಗೆಯಿಂದ ಸಂಜೆವರೆಗೂ ದಲಿತರನ್ನು ಶೋಷಣೆ ಮಾಡಿ ಈ ರೀತಿ ಹೇಳಿಕೆ ನೀಡುತ್ತಾರಷ್ಟೇ ಎಂದು ಕಿಡಿಕಾರಿದರು.
ರಾಜ್ಯಸಭೆ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ ಸೋಲಿಸಲು ಕಾಂಗ್ರೆಸ್- ಜೆಡಿಎಸ್ ಒಂದಾಗೋಣ ಎಂಬ ಕುಮಾರಸ್ವಾಮಿ ಹೇಳಿಕೆಗೆ, ಮಾಜಿ ಮುಖ್ಯಮಂತ್ರಿಗಳಿಬ್ಬರು ಬೆಳಿಗ್ಗೆಯೊಂದು, ಸಂಜೆಯೊಂದು ಹೇಳಿಕೆ ನೀಡುತ್ತಾರೆ. ಅವರ ಅನುಕೂಲಕ್ಕೆ ತಕ್ಕಂತೆ ಸೆಕ್ಯುಲರ್ ಪದ ಬಳಕೆ ಮಾಡುತ್ತಾರೆ. ನಿತ್ಯ ಯಾರು ಜಾತಿ ರಾಜಕಾರಣ ಮಾಡುತ್ತಾರೆ ಅವರು ಸೆಕ್ಯುಲರ್ ಬಗ್ಗೆ ಮಾತನಾಡುತ್ತಾರೆ. ಇವರು ಸೆಕ್ಯುಲರ್ ಪದ ಬಳಕೆ ಮಾಡಿ ಅದಕ್ಕೆ ಅರ್ಥವಿಲ್ಲದಂತೆ ಮಾಡಿದ್ದಾರೆ ಎಂದರು.
ಒಂದು ಕಡೆ ಆರ್‌ಎಸ್‌ಎಸ್ ಬಗ್ಗೆ ಮಾತನಾಡಿ ಮತ್ತೊಂದು ಕಡೆ ಸೆಕ್ಯುಲರ್ ವಿಚಾರ ಮಾತನಾಡುತ್ತಾರೆ. ರಾಜ್ಯಸಭೆ ಚುನಾವಣೆಯಲ್ಲಿ ನಾವು ಸ್ವತಂತ್ರವಾಗಿ 3ನೇ ಅಭ್ಯರ್ಥಿ ಕಣಕ್ಕಿಳಿಸಿದ್ದೇವೆ. ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದರು.