
ಬೆಂಗಳೂರು (ಜೂ.02): ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಬೆಂಬಲ ನೀಡುವಂತೆ ಟಿ.ಎ.ಶರವಣ ನೇತೃತ್ವದ ಜೆಡಿಎಸ್ ನಿಯೋಗವು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಸಿದ್ದರಾಮಯ್ಯ ಅವರು ಬೆಂಬಲದ ಭರವಸೆ ನೀಡದೆ ವಾಪಸು ಜೆಡಿಎಸ್ ಬೆಂಬಲವನ್ನೇ ಕೋರಿದ್ದಾರೆ ಎಂದು ತಿಳಿದುಬಂದಿದೆ.
ಬುಧವಾರ ವಿಧಾನಪರಿಷತ್ ಮಾಜಿ ಸದಸ್ಯ ಟಿ.ಎ. ಶರವಣ ನೇತೃತ್ವದ ನಿಯೋಗದಲ್ಲಿ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಮತ್ತಿತರು ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಬೆಂಬಲದ ಕುರಿತು ಚರ್ಚೆ ನಡೆಸಿದ್ದಾರೆ. ಚೋದ್ಯ ಎಂದರೆ, ಖುದ್ದು ಜೆಡಿಎಸ್‌ನ ಅಭ್ಯರ್ಥಿಯಾಗಿರುವ ಕುಪೇಂದ್ರ ರೆಡ್ಡಿ ಅವರೇ ಜೆಡಿಎಸ್ ನಿಯೋಗದಲ್ಲಿ ಇರಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರೂ ಸಹ ಯಾವುದೇ ಸ್ಪಷ್ಟಭರವಸೆ ನೀಡದೆ ವಾಪಸು ಕಳುಹಿಸಿದ್ದು, ಕಾಂಗ್ರೆಸ್ ಬೆಂಬಲದ ನಿರೀಕ್ಷೆಯಲ್ಲಿದ್ದ ಜೆಡಿಎಸ್ ಪಕ್ಷಕ್ಕೆ ಮತ್ತಷ್ಟುಆತಂಕ ಎದುರಾಗಿದೆ.
ರಾಜ್ಯಸಭೆ ಚುನಾವಣೆ ರೋಚಕ ಘಟ್ಟಕ್ಕೆ, ಎಲ್ಲ ಪಕ್ಷಗಳಿಗೂ ಅಡ್ಡಮತ ಭೀತಿ!
ರಾಜ್ಯಸಭೆ ಸ್ಥಾನ ಗೆಲ್ಲಲು ಜೆಡಿಎಸ್‌ಗೆ ಕನಿಷ್ಠ 45 ಮತಗಳ ಅನಿವಾರ್ಯತೆಯಿದ್ದು ತನ್ನ ಬಳಿ 32 ಮತ ಮಾತ್ರ ಹೊಂದಿದೆ. ಕಾಂಗ್ರೆಸ್ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್ ಬಳಿ ಹೆಚ್ಚುವರಿಯಾಗಿ 25 ಮತಗಳು ಉಳಿಯಲಿವೆ. ಹೀಗಾಗಿ ಕಾಂಗ್ರೆಸ್ ಪಕ್ಷವು ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವ ಮನ್ಸೂರ್ ಅಲಿ ಖಾನ್ ಅವರ ನಾಮಪತ್ರವನ್ನು ನಾಮಪತ್ರ ವಾಪಸು ಪಡೆಯಲು ಅಂತಿಮ ದಿನವಾಗಿರುವ ಶುಕ್ರವಾರದ ಒಳಗಾಗಿ ಹಿಂಪಡೆದು ಜೆಡಿಎಸ್‌ಗೆ ಬೆಂಬಲ ನೀಡುವಂತೆ ಜೆಡಿಎಸ್ ನಿಯೋಗ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಆದರೆ, ಸಿದ್ದರಾಮಯ್ಯ ಅವರು ಜೆಡಿಎಸ್ ನಿಯೋಗದ ಸದಸ್ಯರಿಗೆ ನೀವೇ (ಜೆಡಿಎಸ್) ನಮ್ಮ ಅಭ್ಯರ್ಥಿಗೆ ಬೆಂಬಲ ನೀಡಿ ಎಂದು ಕೇಳಿದ್ದಾರೆ. ಹೀಗಾಗಿ ನಿಯೋಗದ ಸಿದ್ದರಾಮಯ್ಯ ಭೇಟಿ ಫಲ ನೀಡಿಲ್ಲ. ಬಿಜೆಪಿಯೂ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ತನ್ನ ಗೆಲುವಿಗೆ ಕಾಂಗ್ರೆಸ್ ಪಕ್ಷದ ಮೇಲೆಯೇ ಬಹುವಾಗಿ ಅವಲಂಬಿಸಿರುವ ಜೆಡಿಎಸ್ ಪಕ್ಷದ ಆತಂಕ ಮತ್ತಷ್ಟುಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
ಒಂದೆಡೆ ಟೀಕೆ, ಮತ್ತೊಂದೆಡೆ ಮೈತ್ರಿ ರಾಜಿ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬುಧವಾರ ಬೆಳಗ್ಗೆ ಸಿದ್ದರಾಮಯ್ಯ ಅವರ ವಿರುದ್ಧ ಸರಣಿ ಟ್ವೀಟ್ ಮೂಲಕ, ‘ಬಿಜೆಪಿ ಬಿ ಟೀಮಿನ ಕ್ಯಾಪ್ಟನ್’, ‘ಆಪರೇಷನ್ ಕಮಲಯ್ಯ’ ಎಂದು ಟೀಕಿಸಿದ್ದರು. ಅದರ ಬೆನ್ನಲ್ಲೇ ಎಚ್.ಡಿ. ಕುಮಾರಸ್ವಾಮಿ ಹಾಗೂ ಎಚ್.ಡಿ. ದೇವೇಗೌಡ ಅವರ ಸೂಚನೆ ಮೇರೆಗೆ ಆಗಮಿಸಿರುವುದಾಗಿ ಹೇಳಿ ಟಿ.ಎ. ಶರವಣ ನಿಯೋಗ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿರುವುದು ಕುತೂಹಲ ಕೆರಳಿಸಿದೆ.
Rajya Sabha Election ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಆಸ್ತಿ 817 ಕೋಟಿ!
ಸಿದ್ದರಾಮಯ್ಯ ಭರವಸೆ ನೀಡಿಲ್ಲ: ಸಿದ್ದರಾಮಯ್ಯ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಟಿ.ಎ.ಶರವಣ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸೂಚನೆಯ ಮೇರೆಗೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಾಗಿದೆ. ಜಾತ್ಯತೀತತೆಯನ್ನು ಉಳಿಸಲು ಎಲ್ಲರೂ ಒಂದೇ ಧ್ವನಿಯಲ್ಲಿ ಹೋರಾಟ ಮಾಡಬೇಕು. ಹೀಗಾಗಿ ಜೆಡಿಎಸ್‌ಗೆ ಬೆಂಬಲಿಸುವಂತೆ ಮನವಿ ಮಾಡಿದ್ದೇವೆ. ಆದರೆ ನೀವೇ ನಮ್ಮ ಅಭ್ಯರ್ಥಿಗೆ ಏಕೆ ಬೆಂಬಲಿಸಬಾರದು ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ನಾವು ಅದಕ್ಕೆ ವಿವರಣೆ ನೀಡಿದ್ದೇವೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ನಮ್ಮನ್ನೇ ಬೆಂಬಲ ಕೇಳಿದರು. ಆದರೆ ನಮಗೆ 32 ಸಂಖ್ಯಾಬಲ ಇರುವುದರಿಂದ ನಮಗೆ ಬೆಂಬಲ ಕೊಡಿ ಎಂದು ಕೋರಿದ್ದೇವೆ. ಸಿದ್ದರಾಮಯ್ಯ ಅವರು ಭರವಸೆ ನೀಡಿಲ್ಲ, ನೋಡೋಣ ಎಂದಿದ್ದಾರೆ ಎಂದು ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.