Brijesh Kalappa steps out of congress: ಕಾಂಗ್ರೆಸ್‌ನ ವಕ್ತಾರ ಬ್ರಿಜೇಶ್ ಕಾಳಪ್ಪ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೊರ ನಡೆದಿದ್ದಾರೆ. ಸೋನಿಯಾ ಗಾಂಧಿಯವರಿಗೆ ಬಹಿರಂಗ ಪತ್ರ ಬರೆದಿರುವ ಅವರು, ಪಕ್ಷದ ಕಾರ್ಯದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವ ಹುಮ್ಮಸ್ಸು ಉಳಿದಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರು: ಬ್ರಿಜೇಶ್ ಕಾಳಪ್ಪ ಕಳೆದೊಂದು ದಶಕದಿಂದ ಕಾಂಗ್ರೆಸ್‌ನ ವಕ್ತಾರರಾಗಿ ಕೆಲಸ ಮಾಡಿದವರು. ದಿನವೊಂದು ವಾಹಿನಿಯಲ್ಲಿ ಪಕ್ಷದ ಪರವಾಗಿ ಮಾತನಾಡುತ್ತಿದ್ದವರು. ಪಕ್ಷದ ನಿಷ್ಟ ಎಂದೇ ಕರೆಸಿಕೊಂಡಿದ್ದ ಬ್ರಿಜೇಶ್ ಕಾಳಪ್ಪ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಕಾಳಪ್ಪ ಪಕ್ಷದ ಕೆಲಸದಲ್ಲಿ ತೊಡಗಿಕೊಳ್ಳುವ ಹುಮ್ಮಸ್ಸು ಇಲ್ಲವಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್‌ನಲ್ಲಿನ ರಾಜೀನಾಮೆ ಪರ್ವ ಮುಂದುವರೆದಿದೆ. ಹಿರಿಯ ನಾಯಕರಾದ ಕಪಿಲ್ ಸಿಬಲ್, ಯುವ ನಾಯಕ ಹಾರ್ದಿಕ್ ಪಟೇಲ್, ಆರ್ ಪಿ ಎನ್ ಸಿಂಗ್, ಅಶ್ವಿನಿ ಕುಮಾರ್, ಸಿಎಂ ಇಬ್ರಾಹಿಂ, ಪ್ರಮೋದ್ ಮಧ್ವರಾಜ್, ಮುಖ್ಯಮಂತ್ರಿ ಚಂದ್ರು ನಂತರ ಬ್ರಿಜೇಶ್ ಕಾಳಪ್ಪ ಕೂಡ ಪಕ್ಷದಿಂದ ಹೊರನಡೆದಿದ್ದಾರೆ. ಇದಕ್ಕೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, "ನಿಮ್ಮದು ಜೋಡೊ ಇಂಡಿಯಾ ಅಭಿಯಾನವೋ ಅಥವಾ ಕಾಂಗ್ರೆಸ್ ಚೋಡೊ ಅಭಿಯಾನವೋ" ಎಂದು ಗೇಲಿಮಾಡಿದೆ.
ಈ ಬಗ್ಗೆ ಏಷಿಯಾನೆಟ್ ನ್ಯೂಸ್ ಜೊತೆ ಮಾತನಾಡಿದ ಬ್ರಿಜೇಶ್ ಕಾಳಪ್ಪ, "ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿ ಅವರಿಗೆ ಕಳಿಸಿದ್ದೇನೆ. ಪಕ್ಷದ ಕೆಲಸದಲ್ಲಿ ನನಗೆ ಸಂತೃಪ್ತಿ ಇರಲಿಲ್ಲ. ನಾನು ಮಾಡುತ್ತಿರುವ ಕೆಲಸದಲ್ಲಿ ನನ್ನೊಳಗೇ ತೃಪ್ತಿ ಇರಲಿಲ್ಲ, ಹೀಗಾಕಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ," ಎಂದಿದ್ದಾರೆ.
ಇನ್ನು ಕಾಂಗ್ರೆಸ್‌ನ ನಾಯಕರು ಒಬ್ಬರಾದ ಮೇಲೆ ಒಬ್ಬರು ರಾಜೀನಾಮೆ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಕೇಂದ್ರ ನಾಯಕತ್ವ ಈ ಬಗ್ಗೆ ಚಿಂತನೆ ನಡೆಸಬೇಕು ಎಂದಿದ್ದಾರೆ. "ನಾನು ಕಾಂಗ್ರೆಸ್‌ನಲ್ಲಿ ಇಲ್ಲ. ಪಕ್ಷದಿಂದ ಒಬ್ಬೊಬ್ಬರೇ ರಾಜೀನಾಮೆ ನೀಡುತ್ತಿರುವ ಬಗ್ಗೆ ಹೈಕಮಾಂಡ್ ಯೋಚಿಸಬೇಕು. ವಿಧಾನ ಪರಿಷತ್ ಅಥವಾ ರಾಜ್ಯಸಭೆಯ ಆಕಾಂಕ್ಷಿ ನಾನಲ್ಲ. ನಾನು 25 ವರ್ಷ ಕಾಂಗ್ರೆಸ್ ನೋಡಿದ್ದೇನೆ. ಸಕ್ರಿಯ ರಾಜಕಾರಣದಿಂದ ದೂರ ಹೋಗಲ್ಲ, ಒಂದಲ್ಲಾ ಒಂದು ರೀತಿಯಲ್ಲಿ ರಾಜಕಾರಣದಲ್ಲಿ ಮುಂದುವರೆಯುತ್ತೇನೆ. ಮುಂದಿನ ರಾಜಕೀಯ ನಡೆ ಬಗ್ಗೆ ಇನ್ನೂ ಏನೂ ತೀರ್ಮಾನ ಮಾಡಿಲ್ಲ," ಎಂದಿದ್ದಾರೆ ಕಾಳಪ್ಪ.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆ ರೋಚಕ ಘಟ್ಟಕ್ಕೆ, ಎಲ್ಲ ಪಕ್ಷಗಳಿಗೂ ಅಡ್ಡಮತ ಭೀತಿ!
ಆಮ್ ಆದ್ಮಿ ಪಕ್ಷಕ್ಕೆ ಕಾಳಪ್ಪ?:
ಮೂಲಗಳ ಪ್ರಕಾರ ಬ್ರಿಜೇಶ್ ಕಾಳಪ್ಪ ಆಮ್ ಆದ್ಮಿ ಪಕ್ಷವನ್ನು ಸೇರುವ ಸಾಧ್ಯತೆಯಿದೆ. ದೇಶಾದ್ಯಂತ ಕಾಂಗ್ರೆಸ್ ದುರ್ಬಲವಾಗುತ್ತಿರುವ ದಿನಗಳಲ್ಲಿ ಆಮ್ ಆದ್ಮಿ ಪಕ್ಷ ದೆಹಲಿ ಪಂಜಾಬ್ ನಂತರ ಬೇರೆ ರಾಜ್ಯಗಳಿಗೂ ಕಾಲಿಡಲು ಯತ್ನಿಸುತ್ತಿದೆ. ಈ ಕಾರಣಕ್ಕಾಗಿ ಎರಡನೇ ಸರಣಿಯ ನಾಯಕರನ್ನು ಬೇರೆ ಬೇರೆ ಪಕ್ಷಗಳಿಂದ ತಮ್ಮತ್ತ ಎಎಪಿ ಸೆಳೆಯುತ್ತಿದೆ. ಬ್ರಿಜೇಶ್ ಕಾಳಪ್ಪ ಕೂಡ ಎಎಪಿ ಸೇರುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: MLC Election: 'ಸಿದ್ದರಾಮಯ್ಯ, ಡಿಕೆಶಿಗೆ ಮುಜುಗರ ತಪ್ಪಿಸಲು ರಾಜೀನಾಮೆ'
ಬಿಜೆಪಿಯಿಂದ ಲೇವಡಿ:
ಕಾಂಗ್ರೆಸ್‌ನ ರಾಜೀನಾಮೆ ಪರ್ವಕ್ಕೆ ಲೇವಡಿ ಮಾಡಿರುವ ಬಿಜೆಪಿ ಸರಣಿ ಟ್ವೀಟ್‌ಗಳನ್ನು ಮಾಡಿದೆ. ಕಪಿಲ್ ಸಿಬಲ್, ಹಾರ್ದಿಕ್ ಪಟೇಲ್, ಆರ್ ಪಿ ಎನ್ ಸಿಂಗ್, ಅಶ್ವಿನಿ ಕುಮಾರ್, ಸಿಎಂ ಇಬ್ರಾಹಿಂ, ಪ್ರಮೋದ್ ಮಧ್ವರಾಜ್, ಮುಖ್ಯಮಂತ್ರಿ ಚಂದ್ರು ನಂತರ ಬ್ರಿಜೇಶ್ ಕಾಳಪ್ಪ ಬಿಟ್ಟಿದ್ದಾರೆ. ಕಾಂಗ್ರೆಸ್ಸಿಗರೇ ನಿಮ್ಮದು ಭಾರತ ಜೋಡೊ ಅಭಿಯಾನವಾ ಅಥವಾ ಕಾಂಗ್ರೆಸ್ ಚೋಡೊ ಅಭಿಯಾನವಾ ಎಂದು ಪ್ರಶ್ನಿಸಿದ್ದಾರೆ.
√ ಕಪಿಲ್ ಸಿಬಲ್
√ ಆರ್ ಪಿಎನ್ ಸಿಂಗ್
√ ಅಶ್ವಿನಿ ಕುಮಾರ್
√ ಹಾರ್ದಿಕ್ ಪಟೇಲ್
√ ಸಿಎಂ ಇಬ್ರಾಹಿಂ
√ ಪ್ರಮೋದ್ ಮಧ್ವರಾಜ್
√ಮುಖ್ಯಮಂತ್ರಿ ಚಂದ್ರು...
ಈಗ ಬ್ರಿಜೇಶ್ ಕಾಳಪ್ಪ!
ಕಾಂಗ್ರೆಸ್ಸಿಗರೇ, ನಿಮ್ಮದು ಭಾರತ್ ಜೋಡೋ ಅಭಿಯಾನವೋ, ವೋ?
ಇದಾದ ನಂತರ ಸಿದ್ದರಾಮಯ್ಯ ಅವರ ಮೇಲೂ ಬಿಜೆಪಿ ಅಟ್ಯಾಕ್ ಮಾಡಿದೆ. ಎಂಎಲ್‌ಸಿ ಟಿಕೆಟ್, ರಾಜ್ಯಸಭಾ ಟಿಕೆಟ್, ಪದಾಧಿಕಾರಿಗಳ ಪಟ್ಟಿ ಎಲ್ಲದರಲ್ಲೂ ಸಿದ್ದರಾಮಯ್ಯ ಛಾಪು ಕಾಣುತ್ತಿದೆ. ಸಿದ್ದರಾಮಯ್ಯ ಬಣದ ನಿರ್ಲಕ್ಷಕ್ಕೆ ಒಳಗಾಗಿ ಮುಂದೆ ಡಿಕೆ ಶಿವಕುಮಾರ್ ಅವರೇ ಪಕ್ಷ ಬಿಡಬೇಕಾದ ದಿನವೂ ದೂರವಿಲ್ಲ, ಎಂದು ಬಿಜೆಪಿ ಸಿದ್ದರಾಮಯ್ಯ ಕಾಲೆಳೆದಿದೆ.
ಪರಿಷತ್ ಟಿಕೆಟ್, ರಾಜ್ಯಸಭಾ ಟಿಕೆಟ್, ಪದಾಧಿಕಾರಿಗಳ ಪಟ್ಟಿ ಹೀಗೆ ಪಕ್ಷದ ವಿಚಾರದಲ್ಲಿ ಸಿದ್ದರಾಮಯ್ಯ ಛಾಪು ಎದ್ದು ಕಾಣುತ್ತಿದೆ.
ಕೆಪಿಸಿಸಿ ಅಧ್ಯಕ್ಷರು ಸಿದ್ದರಾಮಯ್ಯ ಬಣದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಮುಂದೊಂದು ದಿನ ಕಾಂಗ್ರೆಸ್ ತ್ಯಜಿಸಬಹುದಾದ ದಿನ ದೂರವೇನು ಇಲ್ಲ.
ಎಚ್ಚರ ಡಿಕೆಶಿ ಎಚ್ಚರ!