
ಜಮಖಂಡಿ(ಏ.27): ರಾಹುಲ್ ಗಾಂಧಿ ಮಾಡುವ ಕುಚೇಷ್ಟೆಗಳು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗುತ್ತವೆ. ಕುಚೇಷ್ಠೆಯಿಂದಲೇ ರಾಹುಲ್ ಗಾಂಧಿ ಸಂಸದ ಸ್ಥಾನ ಕಳೆದುಕೊಂಡಿದ್ದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಇಲ್ಲಿನ ಕುಂಚನೂರು ರಸ್ತೆಯಲ್ಲಿನ ಮೈದಾನದಲ್ಲಿ ಬುಧವಾರ ಬಿಜೆಪಿಯ ಬಹಿರಂಗ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕಚ್ಚಾಟ ನಡೆದಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಆಗುವ ಹಗಲು ಕನಸು ಕಾಣುತ್ತಿದೆ. ಈಗಾಗಲೇ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಮಧ್ಯೆ ಕುರ್ಚಿಗೆ ಲಡಾಯಿ (ಹೋರಾಟ) ನಡೆಯುತ್ತಿರುವುದು ಹಾಸ್ಯಾಸ್ಪದ ಸಂಗತಿ. ಭಾರತದ ಸುಸ್ಥಿತಿಯನ್ನು ನೋಡಿ ಅಕ್ಕಪಕ್ಕದ ಪಾಕಿಸ್ತಾನಗಳಂತಹ ದೇಶಗಳು ಹೊಟ್ಟೆ ಕಿಚ್ಚು ಪಡುತ್ತಿವೆ ಎಂದು ಹೇಳಿದರು.
ಸರ್ಕಾರ ಮಾಡುವಷ್ಟು ನಂಬರ್ ಕಾಂಗ್ರೆಸ್‌ಗೆ ಬರೋದೇ ಇಲ್ಲ: ಅಮಿತ್ ಶಾ ಲೇವಡಿ
ಬಿಜೆಪಿ ಇದೊಂದು ತತ್ವ-ಸಿದ್ಧಾಂತ-ರಾಜಕೀಯ ನಿಯತ್ತಿನ ಹಾಗೂ ವಿಚಾರ ಚಿಂತನ-ಮಂಥನ ಮಾಡುವ ಪಕ್ಷ. ಈ ಪಕ್ಷ ಬಗ್ಗೆ ಬಹಳಷ್ಟುಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಹೀಗಾಗಿ ರಾಜ್ಯದಲ್ಲಿ ಕನಿಷ್ಠ 130 ಶಾಸಕರ ಆಯ್ಕೆ ಮಾಡಲು ಮತದಾರ ಮನಸು ಮಾಡಿದ್ದಾನೆ ಎಂದರು.
ಭಾರತ ಶಕ್ತಿಶಾಲಿ ರಾಷ್ಟ್ರ:
ಕಳೆದ 9 ವರ್ಷಗಳಲ್ಲಿ ಪ್ರತಿದಿನ 3.9 ಕಿಮೀ ರಸ್ತೆ ನಿರ್ಮಾಣವಾಗುತ್ತಿದ್ದು, ಸದ್ಯ 18 ಸಾವಿರ ಕಿಮೀ ಹೈವೇ ರಸ್ತೆ ನಿರ್ಮಣಗೊಂಡಿದೆ. ಅದು ಪ್ರತಿದಿನ 38 ಕಿಮಿ ಹೈವೇ ಹೆದ್ದಾರಿ ನಿರ್ಮಾಣ ಕೈಗೆತ್ತಿಕೊಳ್ಳುತ್ತಿದೆ.ಚೇನೈ,ಹೈದ್ರಾಬಾದ, ಬೆಂಗಳೂರು,ಮುಂಬೈ, ದೆಹಲಿ ನಗರಗಳಲ್ಲಿ ಜೌದ್ಯೋಗಿಕ ಕಾರಿಡಾರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಇದ ರಿಂದ ದೊಡ್ಡ-ದೊಡ್ಡ ಉದ್ಯಮಿಗಳು ರಾಜ್ಯಕ್ಕೆ ಬಂದರೆ ನಿರುದ್ಯೋಗಿ ಯುವಕರಿಗೆ ಉದ್ಯೊಗ ಸಿಗುತ್ತದೆ ಎಂದು ಹೇಳಿದರು.
ದೇಶದ ಒಂದಿಂಚೂ ಜಾಗ ಕೂಡ ಬಿಡಲ್ಲ:
ಭಾರತದ ಒಂದಿಂಚೂ ಜಾಗವನ್ನು ಸುತ್ತಲಿನ ಯಾವುದೇ ದೇಶ ಕಬ್ಜಾ ಮಾಡಲು ಸಾಧ್ಯವಿಲ್ಲ. ಇಂದು ಅಕ್ಕಪಕ್ಕದ ದೇಶಗಳಿಗೆ ಭಾರತ ತನ್ನ ತಾಕತ್ತನ್ನು ತೋರಿಸಲು ಸನ್ನದ್ಧವಾಗಿದೆ. ಪ್ರಧಾನಿ ನರೇಂದ್ರ ಅವರ ಘೋಷಣೆಯಂತೆ ನಿವಾಸಿಗಳಿಗೆ ನೀರು, ನೀರಾವರಿಗೆ ನೀರು ಎಂಬ ಕಾರ್ಯ ಸದ್ಯ ಜಾರಿಯಲ್ಲಿದೆ. ರಸ್ತೆ ಸಂಪರ್ಕ, ವಾಯು, ರೈಲ್ವೆ ಸಂಪರ್ಕ ಅಲ್ಲದೇ ಇಂದು 5ಜಿ ಅಷ್ಟೇ ಅಲ್ಲ, 6ಜಿ ನಿರ್ಮಾಣಕ್ಕೂ ಭಾರತ ಸಜ್ಜಾಗಿದೆ. ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ಸಚಿವರಿಗೆ ಯಾವುದೇ ಭ್ರಷ್ಟಾಚಾರದ ಕಪ್ಪು ಚುಕ್ಕೆ ಇಲ್ಲ ಎಂದರು.
ಸ್ಮರಣೆ:
ಈ ನಾಡಿನ ಶ್ರೇಷ್ಠ ತತ್ವಜ್ಞಾನಿ ಗುರುದೇವ ರಾನಡೆ ಅವರು ಜನ್ಮವಿತ್ತ ಈ ನಾಡು ತುಂಬಾ ಪವಿತ್ರವಾದ ನಾಡಾಗಿದೆ. ಇಲ್ಲಿ ಪ್ರಾಮಾಣಿಕರಿಗೆ ಮಾತ್ರ ಅವಕಾಶವಿದೆ. ಹೀಗಾಗಿ ಪ್ರಾಮಾಣಿಕ ರಾಜಕಾರಣಿಗಳನ್ನು ವಿಧಾನಸಭೆಗೆ ಕಳಿಸುವುದು ಪ್ರತಿಯೊಬ್ಬ ಮತದಾರನ ಕರ್ತವ್ಯವಾಗಿದೆಂದು ಹೇಳಿ ಗುರುದೇವ ರಾನಡೆ ಅವರನ್ನು ಸ್ಮರಿಸಿದರು.
ಸತ್ಯಮಾರ್ಗದಲ್ಲಿ ಸಾಗಲು ಬಸವಣ್ಣ ಹೇಳಿಕೊಟ್ಟಿದ್ದಾರೆ: ರಾಹುಲ್ ಗಾಂಧಿ
ಬಿಜೆಪಿ ಅಭ್ಯರ್ಥಿ ಜಗದೀಶ ಗುಡಗುಂಟಿ ಮಾತನಾಡಿದರು. ಸಂಸದ ಪಿ.ಸಿ.ಗದ್ದಿಗೌಡರ, ತೇರದಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ವಿಪ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ, ಉಮೇಶ ಮಹಾಬಳಶೆಟ್ಟಿ, ಗ್ರಾಮೀಣ ಮಂಡಲ ಅಧ್ಯಕ್ಷ ಮಹಾದೇವ ನ್ಯಾಮಗೌಡ, ಯೋಗಪ್ಪ ಸವದಿ, ಡಾ.ರಂಗನಾಥ ಸೋನವಾಲ್ಕರ, ಬಸವರಾಜ ಕಲೂತಿ,ಬಸವರಾಜ ಬಿರಾದಾರ,ನಾರಾಯನಸಾ ಬಾಂಡಗೆ,ಡಾ.ರಾಕೇಶ ಲಾಡ ಇದ್ದರು.ನಗರಮಂಡಲ ಅಧ್ಯಕ್ಷ ಅಜಯ ಕಡಪಟ್ಟಿಸ್ವಾಗತಿಸಿದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಟಿ.ಉಪಾಧ್ಯೆ ನಿರೂಪಿಸಿದರು.ಗ್ರಾಮೀಣ ಮಂಡಲ ಮಲ್ಲು ದಾನಗೊಂಡ ವಂದಿಸಿದರು.
ಇಂದು ಭಾರತ ತಾಕತ್ತಿನಿಂದ ಕೂಡಿದೆ. ಇಡೀ ಜಗತ್ತಿನಲ್ಲಿ ಭಾರತದಂತಹ ಸರ್ಕಾರ ಸಿಗುವುದಿಲ್ಲ. ಈ ದೇಶದ .80 ಕೋಟಿ ಜನತೆಗೆ ಕೋವಿಡ್ ಸಂದರ್ಭದಲ್ಲಿ ರೇಷನ್ ನೀಡಿ ಕಾಪಾಡಿದ್ದು ಕೇಂದ್ರ ಸರ್ಕಾರ. ಕರ್ನಾಟಕದ ವಿಕಾಸದ ಬಗ್ಗೆ ಪ್ರಧಾನಿ ಸತತ ಚಿಂತನೆ ಮಾಡುತ್ತಿದ್ದಾರೆ ಅಂತ ಕೇಂದ್ರ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.