
ಹುಬ್ಬಳ್ಳಿ (ಆ.10): ದೇಶದಲ್ಲಿ ತನ್ನದೇ ಆದ ಕಾನೂನು ಇದೆ. ಚುನಾವಣೆ ಜರುಗಿದ 14 ತಿಂಗಳ ಬಳಿಕ ಯಾವುದೇ ಆಧಾರವಿಲ್ಲದೆ ಕಾಂಗ್ರೆಸ್‌ನವರು ಮತಗಳ್ಳತನ ಆರೋಪ ಮಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದ ಮಾತು. ಸಾಕ್ಷ್ಯಾಧಾರಗಳಿಲ್ಲದೇ ಆರೋಪ ಮಾಡುತ್ತಿರುವುದು ಬೋಗಸ್ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಗಳ್ಳತನ ಕುರಿತ ಕಾಂಗ್ರೆಸ್ ಆರೋಪ ನಿರಾಧಾರ. ರಾಹುಲ್ ಗಾಂಧಿ ಅಪ್ರಬುದ್ಧ ಮತ್ತು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಕಳೆದ ವರ್ಷ ಕೇರಳದ ವಯನಾಡಿನಲ್ಲಿ ಭೂಕುಸಿತ ಮತ್ತು ಆನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ಕರ್ನಾಟಕ ಸರ್ಕಾರ ಪರಿಹಾರ ನೀಡಿರುವ ಕುರಿತಂತೆ ಪ್ರತಿಕ್ರಿಯಿಸಿ, ಅದು ಪ್ರಿಯಾಂಕಾ ಗಾಂಧಿ ಲೋಕಸಭಾ ಕ್ಷೇತ್ರ. ಈ ಹಿಂದೆ ರಾಹುಲ್ ಗಾಂಧಿ ಕ್ಷೇತ್ರವಾಗಿತ್ತು. ಇದೀಗ ಅವರನ್ನು ಮೆಚ್ಚಿಸಲು ಕುರ್ಚಿ ಉಳಿಸಿಕೊಳ್ಳಲು ಸಿಎಂ-ಡಿಸಿಎಂ ಇಲ್ಲಿನ ಅನುದಾನವನ್ನು ಅಲ್ಲಿಗೆ ಕೊಡುತ್ತಿದ್ದಾರೆ. ಇಲ್ಲಿನ ಬಡವರಿಗೆ ಸಲ್ಲಬೇಕಾದ ಅನುದಾನವನ್ನು ಅಲ್ಲಿಗೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಆನೆ ದಾಳಿಯಾದರೆ ₹5 ಲಕ್ಷ ಪರಿಹಾರ ನೀಡುವ ರಾಜ್ಯ ಸರ್ಕಾರ, ಕೇರಳ ರಾಜ್ಯದಲ್ಲಿ ಕುಟುಂಬದ ಮೇಲೆ ದಾಳಿ ಮಾಡಿದ ಆನೆ ಕರ್ನಾಟಕದ್ದು ಎಂದು ಹೇಳಿ ₹15 ಲಕ್ಷ ಪರಿಹಾರ ನೀಡಿದ್ದಾರೆ. ರಾಜ್ಯ ಸರ್ಕಾರಕ್ಕೆ ದಾಳಿ ಮಾಡಿದ ಆನೆ ಕರ್ನಾಟಕಕ್ಕೆ ಸೇರಿದ್ದು ಎಂದು ಹೇಗೆ ಗೊತ್ತಾಯಿತು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಕಾಂಗ್ರೆಸ್ ದೇಶದ ಹಿತವನ್ನು ಮರೆತು ಪಾಕಿಸ್ತಾನದ ಬಗ್ಗೆ ಮೃದುಧೋರಣೆ ತಾಳುತ್ತಿದೆ. ಭಯೋತ್ಪಾದನೆ ಆರೋಪಗಳಿಂದ ಮುಕ್ತಗೊಳಿಸುವ ಪ್ರಯತ್ನ ಮಾಡುತ್ತಿದೆ. ಮಾಲೇಗಾಂವ್ ಪ್ರಕರಣದ ನಂತರದ ಘಟನೆಗಳಲ್ಲಿ ಕಾಂಗ್ರೆಸ್ ನಡೆದುಕೊಂಡದ್ದು ಎಲ್ಲರಿಗೂ ಗೊತ್ತಿದೆ ಎಂದು ಆರೋಪಿಸಿದರು. ಆಗ ಅಧಿಕಾರದಲ್ಲಿದ್ದ ಶರದ್ ಪವಾರರ ಪಕ್ಷ ಹಿಂದೂ ಟೆರರ್ ಎಂದು ಹೇಳುವ ಪ್ರಯತ್ನವನ್ನು ಮಾಡಿತ್ತು. ಜತೆಗೆ ತನಿಖೆಯನ್ನೂ ಬಂದ್ ಮಾಡಿತ್ತು. ಸಂಜೋತಾ ಹಾಗೂ ಮಾಲೇಗಾಂವ್ ಲಿಂಕ್ ಮಾಡಿದ್ದರು. ಮಾಲೇಗಾಂವ್‌ನಲ್ಲಿ ಮುಸ್ಲಿಮರು ಯಾಕೆ ಬಾಂಬ್ ಸ್ಫೋಟ ಮಾಡುತ್ತಾರೆ ಎಂದಿದ್ದರು. ಅಲ್ಲದೆ, ಹಿಂದೂ ಟೆರರ್ ಎಂದು ಹೇಳಿ ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿದರು ಎಂದು ಆರೋಪಿಸಿದರು.
ನಾವು ಪಾಕಿಸ್ತಾನವನ್ನು ಜಗತ್ತಿನಲ್ಲಿ ಬೆತ್ತಲೆ ಮಾಡಬೇಕು ಎಂಬ ಪ್ರಯತ್ನದಲ್ಲಿದ್ದೆವು. ಮಾಲೇಗಾಂವ್‌ದಲ್ಲಿ ಆರಂಭಿಕ ಆರೋಪಿಗಳನ್ನು ಬಿಡಿಸುವ ಕೆಲಸ ಮಾಡಿದರು. ದಿಗ್ವಿಜಯ ಸಿಂಗ್ ಮುಂಬೈನಲ್ಲಿ ಆರ್‌ಎಸ್‌ಎಸ್‌ನವರು ಬ್ಲಾಸ್ಟ್ ಮಾಡಿದ್ದಾರೆ ಎಂದಿದ್ದರು. ಇವರೆಲ್ಲ ದೇಶದಲ್ಲಿ ಹೀರೋ ಆಗುವುದನ್ನು ಬಿಟ್ಟು ಪಾಕಿಸ್ತಾನದಲ್ಲಿ ಹೀರೋ ಆಗುವುದಕ್ಕೆ ಹೊರಟಿದ್ದಾರೆ ಎಂದರು. ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ದೇಶಕ್ಕೆ ದ್ರೋಹ ಮಾಡಿದ್ದಾರೆ. 3 ಜನ ಪಾಕಿಸ್ತಾನದವರು ಎನ್ನುವುದಕ್ಕೆ ಸಾಕ್ಷಿ ಏನು ಎಂದು ಚಿದಂಬರಂ ಕೇಳಿದ್ದರು. ಕಾಂಗ್ರೆಸ್ಸಿನ ಮನಸ್ಥಿತಿ ದೇಶದಲ್ಲಿ ಯಾವ ಮಟ್ಟಕ್ಕೆ ಹೋಗುತ್ತಿದೆ? ದೇಶದ ಹಿತಕ್ಕೆ ಕಾಂಗ್ರೆಸ್ ವರ್ತನೆ ದುರ್ದೈವದ ಸಂಗತಿ ಎಂದರು.
ಮಹದಾಯಿ ವಾಸ್ತವ ಸ್ಥಿತಿ: ಮಹದಾಯಿ ವಿಚಾರದಲ್ಲಿ ಈ ವರೆಗೆ ಆಗಿರುವ ಪ್ರಗತಿ ಬಿಜೆಪಿ ಕಾಲದಲ್ಲಿ ಆಗಿದೆ. ಮಹದಾಯಿ ಕುರಿತು ಸಭೆಯಲ್ಲಿ ರೈತ ಮುಖಂಡರಿಗೆ ವಾಸ್ತವ ಸ್ಥಿತಿ ಹೇಳಿದ್ದೇನೆ. ಗೋವಾ ಆರ್ಡರ್ ಬಗ್ಗೆ ಕರ್ನಾಟಕ ಸುಪ್ರೀಂ ಕೋರ್ಟಿಗೆ ಹೋಗಿದೆ. ರೈತ ಮುಖಂಡರೇ ದೆಹಲಿಗೆ ಬರುತ್ತೇವೆ ಎಂದು ಹೇಳಿದ್ದಾರೆ ಎಂದರು. ರಾಹುಲ್ ಗಾಂಧಿ ದೇಶದಲ್ಲಿ ಆರ್ಥಿಕತೆ ಸತ್ತಿದೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿ, ಅವರ ಆಡಳಿತದಲ್ಲಿ ಭಾರತ ದುರ್ಬಲ ಆರ್ಥಿಕತೆಯ ಜಗತ್ತಿನ ಐದನೆಯ ದೇಶವಾಗಿತ್ತು. ಇದೀಗ ಜಗತ್ತಿನಲ್ಲಿ 4ನೇ ಅತಿದೊಡ್ಡ ಆರ್ಥಿಕತೆ ಹೊಂದಿದ ದೇಶ ನಮ್ಮದಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.