
ಮೈಸೂರು (ಆ.09): ಸೋತು ಕಂಗೆಟ್ಟಿರುವ ಕಾಂಗ್ರೆಸ್ ತರಾವರಿ ಸುಳ್ಳು ಆರೋಪ ಮಾಡುತ್ತಿದ್ದು, ಇವಿಎಂ ಹಠಾವೋ ಚಳವಳಿ ಶುರು ಮಾಡಿದೆ. ರಾಹುಲ್ ಗಾಂಧಿ ಮಾಡುವ ಆರೋಪಕ್ಕೆ ಸಾಕ್ಷಿ ಏನಿದೆ? ಹೆಸರನ್ನೆ ಫ್ರಾಡ್ ಮಾಡಿದ ವಂಶ ನಿಮ್ಮದು. ಫಿರೋಜ್ ಗಾಂಡಿ ಅನ್ನೋ ಹೆಸರನ್ನು ಫಿರೋಜ್ ಗಾಂಧಿ ಅಂತಾ ಬದಲಾಯಿಸಿದ ವಂಶ ನಿಮ್ಮದು ಎಂದು ರಾಹುಲ್ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ನೀವು ಗೆದ್ದ ಕಡೆಯಲೆಲ್ಲಾ ಮತಗಳ್ಳತನ ಆಗಿಲ್ವಾ? ಜನಕ್ಕಿಂತ ಜಾಸ್ತಿ ಮತದಾರರು ಇದ್ದಾರೆ ಅಂತ ಹೇಳುವ ನಿಮ್ಮ ಆರೋಪಕ್ಕೆ ಸಾಕ್ಷಿಯೆ ಇಲ್ಲ. ವಿಧಾನಸಭೆಗೆ ಒಂದು ರೀತಿ ಮತ ಹಾಕುತ್ತಾರೆ. ಲೋಕಸಭೆಗೆ ಒಂದು ರೀತಿ ಮತ ಹಾಕುತ್ತಾರೆ ಎಂದರು. ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸತ್ತವರು ಬಂದು ನನಗೆ ಮತ ಹಾಕಿದ್ದಾರೆ ಎಂದು ಈ ಹಿಂದೆ ಸಿದ್ದರಾಮಯ್ಯ ಹೇಳಿದ್ದರು. ಚಾಮುಂಡೇಶ್ವರಿ ಉಪ ಚುನಾವಣೆಗೆ ಪೀಟರ್ ಅಂತಾ ಚುನಾವಣಾಧಿಕಾರಿ ಹಾಕಿಸಿಕೊಂಡು ಬಂದು ನೀವು ಹೇಗೆ ಗೆದ್ದಿರಿ ಗೊತ್ತಿದೆ. ಟಿ. ನರಸೀಪುರದಲ್ಲಿ ಡಿಕ್ಲೇರ್ ಆದ ಫಲಿತಾಂಶ ಉಲ್ಟಾ ಮಾಡಿ ಗೆದ್ದಿದ್ದು ಮಹದೇವಪ್ಪ. ಅಕ್ರಮ ಎನ್ನುವುದು ಕಾಂಗ್ರೆಸ್ ಗೆ ಜನ್ಮತಾ ಬಂದಿದೆ ಎಂದು ಅವರು ಟೀಕಿಸಿದರು.
ರಾಗಾ ವಿರುದ್ಧ ಮೋಹನ್ ಕಿಡಿ: ‘ನಾನು ಪ್ರತಿನಿಧಿಸುವ ಬೆಂಗಳೂರಿನ ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಒಂದಾದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನದಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಸಂಸದ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ಅಕ್ರಮ ನಡೆದಿದ್ದೇ ಆದರೆ ಅವರು ಇಷ್ಟು ದಿನ ಏಕೆ ಸುಮ್ಮನಿದ್ದರು?’ ಎಂದು ಸಂಸದ ಪಿ.ಸಿ.ಮೋಹನ್ ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿ ಅವರು ಸುಮಾರು ದಿನಗಳಿಂದ ಆಟಂ ಬಾಂಬ್ ಹಾಕುತ್ತೇವೆ ಎಂದು ಹೇಳುತ್ತಿದ್ದರು. ಈಗ ಮತದಾರರ ಪಟ್ಟಿಯಲ್ಲಿ ಅಕ್ರಮ ಆಗಿದೆ ಎಂದು ಹೇಳಿದ್ದಾರೆ. ನಾವು ಮೊದಲ ದಿನದಿಂದಲೂ ಕೂಡ ಇದೇ ಹೇಳುತ್ತಿದ್ದೇವೆ.
ಮತದಾರರ ಪಟ್ಟಿಯಲ್ಲಿ ಅಕ್ರಮ ಆಗಿದ್ದರೆ ಚುನಾವಣೆ ನಡೆದು ಒಂದೂವರೆ ವರ್ಷ ಅವರು ಏಕೆ ಸುಮ್ಮನಿದ್ದರು. ಇವರ ನಡೆಯ ಹಿನ್ನೆಲೆಯನ್ನು ಗಮನಿಸಿದರೆ ರಾಹುಲ್ ಗಾಂಧಿ ಅವರ ಆರೋಪ ಸಂಪೂರ್ಣ ಸುಳ್ಳು ಎಂದು ಗೊತ್ತಾಗುತ್ತದೆ ಎಂದು ಹೇಳಿದ ಪಿ.ಸಿ.ಮೋಹನ್, ಅವರ ಆರೋಪದಲ್ಲಿ ಹುರುಳಿಲ್ಲ. ಇದೊಂದು ಆಧಾರವಿಲ್ಲದ ಆರೋಪ ಎಂದು ಪ್ರತಿಪಾದಿಸಿದರು. ರಾಹುಲ್ ಗಾಂಧಿ ಅವರು ಬೆಂಗಳೂರು ಮತದಾರರನ್ನು ಅವಮಾನ ಮಾಡುತ್ತಿದ್ದಾರೆ. ಅದರಲ್ಲೂ ಬಿಜೆಪಿಗೆ ಮತದಾನ ಮಾಡಿದ ಹಿಂದೂಗಳನ್ನು ಸಂಶಯಿಸುತ್ತಿದ್ದಾರೆ ಎಂದು ದೂರಿದರು.
ಮಹಾದೇವಪುರದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಿದೆ. ಶಿವಾಜಿನಗರದಲ್ಲಿ ಅಲ್ಪಸಂಖ್ಯಾತರು ಹೆಚ್ಚಿದ್ದಾರೆ. ಮಹದೇವಪುರದಲ್ಲಿ ಹೆಚ್ಚಿನ ಓಟುಗಳು ಬಿಜೆಪಿಗೆ ಬಂದರೆ ಅದನ್ನು ಕಳ್ಳಮತದಾನ ಎನ್ನುತ್ತಾರೆ. ಅದೇ ಶಿವಾಜಿನಗರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತದಾನ ಆದರೆ ಅದು ಜಾತ್ಯತೀತ ಆಗುತ್ತದೆ. ಇದು ಕಾಂಗ್ರೆಸ್ ನಿಲುವು ಎಂದು ಹರಿಹಾಯ್ದರು. ವಂಶ ಪಾರಂಪರ್ಯ ರಾಜಕೀಯದ ಬಗೆಗಿನ ಮತದಾರರ ನಿಲುವನ್ನು ಬಿಜೆಪಿಯು ಪ್ರಶ್ನಿಸುವುದಿಲ್ಲ. ಇದು ಮೋಸದ ಪ್ರಶ್ನೆ ಅಲ್ಲ. ಮತದಾರರ ತೀರ್ಪು ಅಂತಿಮ. ಮತದಾರರೇ ಸುಪ್ರೀಂ. ಇದನ್ನು ರಾಹುಲ್ ಗಾಂಧಿ ಒಪ್ಪಿಕೊಳ್ಳಲೇಬೇಕು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.