
ಮೈಸೂರು/ಪಾಂಡವಪುರ (ಅ.04): ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ 40 ಪರ್ಸೆಂಟ್ ಸರ್ಕಾರವೆಂಬ ಸತ್ಯ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ, ಆರೋಪಕ್ಕೆ ಉತ್ತರಿಸದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೌನಿಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಭಾರತ ಐಕ್ಯತಾ ಯಾತ್ರೆಯ 4ನೇ ದಿನವಾದ ಸೋಮವಾರ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರೈತರು, ಕಾರ್ಮಿಕರು, ಸಣ್ಣಪುಟ್ಟವ್ಯಾಪಾರಸ್ಥರು, ಉದ್ಯಮಿಗಳು ಸೇರಿದಂತೆ ಎಲ್ಲರಿಂದಲೂ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದೆ.
ಈ ಸರ್ಕಾರಕ್ಕೆ ಜನಪರವಾದ ಕಾಳಜಿ ಇಲ್ಲ, ಜನರ ಅಭಿವೃದ್ಧಿಯೂ ಬೇಕಿಲ್ಲ. ಬಿಜೆಪಿ ಸರ್ಕಾರ 40 ಪರ್ಸೆಂಟ್ ಸರ್ಕಾರ ಎಂಬುದನ್ನು ನಾವು ಹೇಳುತ್ತಿಲ್ಲ. ಗುತ್ತಿಗೆದಾರರೇ ಸರ್ಕಾರದ ವಿರುದ್ಧ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಆದರೆ, ಇದರ ವಿರುದ್ಧ ಮೋದಿಯವರು ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನು ನೋಡಿದಾಗ ಪ್ರಧಾನಮಂತ್ರಿಗಳು ಬಿಜೆಪಿ ಭ್ರಷ್ಟಾಚಾರವನ್ನು ಸಮರ್ಥಿಸಿಕೊಂಡಿದ್ದಾರೆ ಎಂದೆನಿಸುತ್ತದೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಡುವುದಕ್ಕಾಗಿ ಮತ್ತು ಜನರ ಸಮಸ್ಯೆಗಳಿಗೆ ಧ್ವನಿಯಾಗಬೇಕೆಂಬ ಉದ್ದೇಶದಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಹೇಳಿದರು.
Bharat Jodo Yatra, ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ನಡುವೆ ಸೋನಿಯಾ ಕೊಡಗಿನಲ್ಲಿ ವಿಶ್ರಾಂತಿ
ಸಕ್ಕರೆ ನಾಡಿಗೆ ಯಾತ್ರೆ ಆಗಮನ: ರಾಜ್ಯದಲ್ಲಿ 4ನೇ ದಿನವಾದ ಸೋಮವಾರ ಭಾರತ ಐಕ್ಯತಾ ಯಾತ್ರೆ, ಮೈಸೂರು ಹಾಗೂ ಮಂಡ್ಯ ಜಿಲ್ಲೆಯಲ್ಲಿ ಸಂಚರಿಸಿತು. ಮುಂಜಾನೆಯ ಚಳಿಯ ನಡುವೆಯೇ ಬೆಳಗ್ಗೆ 6.30ಕ್ಕೆ ಮೈಸೂರಿನ ಹಾರ್ಡಿಂಜ್ ವೃತ್ತಕ್ಕೆ ಆಗಮಿಸಿದ ರಾಹುಲ್, ಪಾದಯಾತ್ರೆ ಆರಂಭಿಸಿದರು. ಲಷ್ಕರ್ ಮೊಹಲ್ಲಾ ಗರಡಿ ಕೇರಿಯಲ್ಲಿನ ಮಲೆ ಮಹದೇಶ್ವರ ದೇವಸ್ಥಾನ, ಮಿಲಾದ್ ಬಾಗ್ ಎದುರಿನಲ್ಲಿರುವ ಅಜಮ್ ಮಸೀದಿ, ಸಂತ ಫಿಲೋಮಿನಾ ಚಚ್‌ರ್‍ಗೆ ಭೇಟಿ ನೀಡಿ, ಪಾದಯಾತ್ರೆ ಮುಂದುವರಿಸಿದರು.
ಅಲ್ಲಿಂದ ಶ್ರೀರಂಗಪಟ್ಟಣದ ಲಕ್ಷ್ಮೇಪುರ ಗೇಟ್ ಮೂಲಕ ಯಾತ್ರೆ ಮಂಡ್ಯ ಜಿಲ್ಲೆಯನ್ನು ಪ್ರವೇಶಿಸಿತು. ಅಲ್ಲಿ ಕುರಿಕಂಬಳಿ ಹೊದಿಸಿ ಅವರಿಗೆ ಸ್ವಾಗತ ಕೋರಲಾಯಿತು. ಈ ವೇಳೆ, ಸಿದ್ದರಾಮಯ್ಯ ಹಾಗೂ ಡಿಕೆಶಿ ಗೈರುಹಾಜರಾಗಿದ್ದರು. ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಕೃಷ್ಣ ಭೈರೇಗೌಡ ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕರು ಪಾದಯಾತ್ರೆಗೆ ಸಾಥ್ ನೀಡಿದರು.
ಅಲ್ಲಿಂದ, 6 ಕಿ.ಮೀ. ದೂರ ಪಾದಯಾತ್ರೆ ನಡೆಸಿ, ಶ್ರೀರಂಗಪಟ್ಟಣದ ಪರಿವರ್ತನ ಶಾಲೆಗೆ ಆಗಮಿಸಿದರು. ಅಲ್ಲಿಗೆ ಆಗಮಿಸುತ್ತಿದ್ದಂತೆ ಸೋನಿಯಾಗಾಂಧಿ ಬರುವ ವಿಷಯ ತಿಳಿದು, ಪಾದಯಾತ್ರೆ ಮೊಟಕುಗೊಳಿಸಿ, ಮೈಸೂರಿಗೆ ತೆರಳಿದರು. ಚಾಮುಂಡಿಬೆಟ್ಟಕ್ಕೆ ತೆರಳಿ ನಾಡದೇವತೆಗೆ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ಮತ್ತೆ ಪರಿವರ್ತನಾ ಶಾಲೆಗೆ ಆಗಮಿಸಿ, ಮಾಜಿ ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು.
Bharat Jodo Yatra: ಕರ್ನಾಟಕದ್ದು ದೇಶದಲ್ಲೇ ಭ್ರಷ್ಟ ಸರ್ಕಾರ: ರಾಹುಲ್ ಗಾಂಧಿ
ಸಂಜೆ 4 ಗಂಟೆಗೆ ಪಾಂಡವಪುರ ತಾಲೂಕಿನ ಹರಳಹಳ್ಳಿಗೆ ರಾಹುಲ್ ಆಗಮಿಸುತ್ತಿದ್ದಂತೆ ದಲಿತ ಮಹಿಳೆಯರು ಬೆಲ್ಲದಾರತಿ ಮಾಡಿ ತಿಲಕವಿಟ್ಟರು. ಆ ಮಹಿಳೆಯರೊಂದಿಗೆ ಸಂವಹನ ನಡೆಸಿ, ಪಾಂಡವಪುರಕ್ಕೆ ತೆರಳಿದರು. ಪಾಂಡವಪುರದ ಐದು ದೀಪಗಳ ವೃತ್ತದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ಬಳಿಕ, ಪಾದಯಾತ್ರೆಯನ್ನು ಅಂತ್ಯಗೊಳಿಸಿ, ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಬಳಿಯ ರೆಸಾರ್ಟ್‌ಗೆ ತೆರಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.